ಬರಗಾಲದ ಆತಂಕ; ಮುನ್ನೆಚ್ಚರಿಕೆ ಅಗತ್ಯ

Update: 2023-08-30 04:19 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮುಂಗಾರು ಮುಗಿಯುತ್ತ ಬಂತು. ಆದರೆ ರಾಜ್ಯದಲ್ಲಿ ಈ ಕಾಲಾವಧಿಯಲ್ಲಿ ಆಗಬೇಕಾದಷ್ಟು ಮಳೆಯಾಗಿಲ್ಲ. ಸೆಪ್ಟಂಬರ್ ತಿಂಗಳಿನಲ್ಲೂ ನಿರೀಕ್ಷಿಸಿದಷ್ಟು ಮಳೆಯಾಗುವ ಸಾಧ್ಯತೆ ಕಂಡು ಬರುತ್ತಿಲ್ಲ. ಕರ್ನಾಟಕದ 120 ತಾಲೂಕುಗಳು ಮಳೆಯ ಕೊರತೆಯಿಂದಾಗಿ ಬರಗಾಲದ ಭೀತಿಯನ್ನು ಎದುರಿಸುತ್ತಿವೆ. ಮಳೆಯಾಗದೇ ಇರುವುದರಿಂದ ಮೊಳಕೆಯೊಡೆದ ಬೀಜಗಳು ಅಲ್ಲೇ ಕಮರಿ ಹೋಗುತ್ತಿವೆ. ಇದರಿಂದ ಆತಂಕಗೊಂಡಿರುವ ರೈತರು ಕೆಲವೆಡೆ ಟ್ಯಾಂಕರ್ ಮೂಲಕ ನೀರು ತರಿಸಿ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಭತ್ತ ಮತ್ತು ಗೋಧಿಯನ್ನು ಬಿಟ್ಟರೆ ಕರ್ನಾಟಕದ ಏಕದಳ ಮತ್ತು ದ್ವಿದಳ ಧಾನ್ಯದ ಬೆಳೆಗಳು ಮಳೆಯನ್ನೇ ಅವಲಂಬಿಸಿವೆ. ಸಮಯಕ್ಕೆ ಸರಿಯಾಗಿ ಒಂದೆರಡು ಹನಿ ಮಳೆ ಬಿದ್ದರೂ ಸಾಕು ಬೀಜಗಳು ಮೊಳಕೆಯೊಡೆಯುತ್ತವೆ.ಇಲ್ಲವಾದರೆ ಬಿಸಿಲಿನ ಝಳಕ್ಕೆ ಅಲ್ಲೇ ಮುರುಟಿ ಹೋಗುತ್ತವೆ.

ರಾಜ್ಯದಲ್ಲಿ ಮಳೆಯ ಕೊರತೆಯಾಗಿರುವುದು ಸರಕಾರದ ಗಮನಕ್ಕೆ ಬಂದಿದೆ.ಈಗಾಗಲೇ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.ಮಳೆ, ಬೆಳೆ ಪರಿಸ್ಥಿತಿಯ ಬಗ್ಗೆ ಅವಲೋಕನ ಮಾಡಿ ಸರಕಾರಕ್ಕೆ ಶಿಫಾರಸು ಮಾಡಲು ರಚಿಸಲಾದ ಮಂತ್ರಿ ಮಂಡಲದ ಉಪಸಮಿತಿ ಈಗಾಗಲೇ ಸಭೆ ನಡೆಸಿ ಚರ್ಚಿಸಿದೆ. ತೀವ್ರ ಮಳೆಯ ಅಭಾವವನ್ನು ಎದುರಿಸುತ್ತಿರುವ 120 ತಾಲೂಕುಗಳ ಪ್ರತೀ ಐದು ಹಳ್ಳಿಗಳಲ್ಲಿ ಐದು ಪ್ರಮುಖ ಬೆಳೆಗಳ ಪರಿಸ್ಥಿತಿ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ ಹತ್ತು ದಿನಗಳೊಳಗೆ ವರದಿಯನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಮಂತ್ರಿ ಕೃಷ್ಣ ಭೈರೇಗೌಡರು ಹೇಳಿದ್ದಾರೆ.

ಕರ್ನಾಟಕದಲ್ಲಿ ಮುಂದೆ ಮಳೆ ಕೊರತೆಯಿಂದ ಎದುರಾಗಬಹುದಾದ ಗಂಭೀರ ಪರಿಸ್ಥಿತಿಯ ಬಗ್ಗೆ ಮಂತ್ರಿ ಕೃಷ್ಣ ಭೈರೇಗೌಡರು ಸುಳಿವು ನೀಡಿದ್ದಾರೆ.ಮಳೆಯ ಕೊರತೆಯಿಂದ ಉಂಟಾಗಬಹುದಾದ ತೊಂದರೆಯ ಬಗ್ಗೆ ಸರಕಾರ ಅಂದಾಜು ಮಾಡಿದರೆ ಸಾಲದು, ಎರಗಬಹುದಾದ ಬರಗಾಲದ ಬಗ್ಗೆ, ಅದರಿಂದ ಉಂಟಾಗಬಹುದಾದ ಆಹಾರ ಸಮಸ್ಯೆ ಹಾಗೂ ಇತರ ಸಂಕಷ್ಟಗಳನ್ನು ನಿಭಾಯಿಸುವ ಕಾರ್ಯಯೋಜನೆಯನ್ನು ಸರಕಾರ ತುರ್ತಾಗಿ ರೂಪಿಸಬೇಕಾಗಿದೆ.

ಈ ವರೆಗೆ ನಿರೀಕ್ಷಿಸಿದಷ್ಟು ಮಳೆಯಾಗದ 120 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕಾದರೆ ಸೆಪ್ಟಂಬರ್ ಕೊನೆಯ ವರೆಗಿನ ಮಳೆಯ ಪ್ರಮಾಣ, ಮಳೆಯ ಕೊರತೆ, ತೇವಾಂಶದ ಪರಿಸ್ಥಿತಿ, ಬೆಳೆ ನಷ್ಟದ ಸಮೀಕ್ಷೆಯನ್ನು ಮಾಡಿ ಕೇಂದ್ರ ಸರಕಾರಕ್ಕೆ ವರದಿಯನ್ನು ಸಲ್ಲಿಸಬೇಕಾಗುತ್ತದೆ. ಕೇಂದ್ರ ಸರಕಾರದ ಮಾರ್ಗ ಸೂಚಿಯ ಪ್ರಕಾರ ಪರಿಹಾರದ ಮೊತ್ತ ಬಿಡುಗಡೆಯಾಗಬೇಕಾದರೆ ಆ ತನಕ ಕಾಯಬೇಕಾಗುತ್ತದೆ. ಆದರೆ ಅದಕ್ಕೆ ಮೊದಲೇ ಬರಗಾಲದ ಘೋಷಣೆ ಮಾಡಿದರೆ ರಾಜ್ಯ ಸರಕಾರವೇ ಬರ ನಿರ್ವಹಣೆಯ ಪರಿಹಾರ ಮೊತ್ತದ ಹೊಣೆಯನ್ನು ಹೊರಬೇಕಾಗುತ್ತದೆ. ಹಾಗಾಗಿಯೇ ಕರ್ನಾಟಕ ಸರಕಾರ ಕಳೆದ ಹತ್ತು ವರ್ಷಗಳಿಂದ ಬರಗಾಲದ ಕುರಿತು ಕೇಂದ್ರದ ಮಾರ್ಗಸೂಚಿಯನ್ನು ಬದಲಾವಣೆ ಮಾಡುವಂತೆ ಒತ್ತಾಯಿಸುತ್ತಲೇ ಇದೆ. ಆದರೆ ರಾಜ್ಯ ಸರಕಾರದ ಮನವಿಗೆ ಕೇಂದ್ರ ಸರಕಾರ ಸಹಾನುಭೂತಿಯ ಸ್ಪಂದನ ತೋರಿಸಿಲ್ಲ. ಹೀಗಾಗಿ ರೈತಾಪಿ ಸಮುದಾಯದ ಹಿತರಕ್ಷಣೆಗೆ ಕರ್ನಾಟಕದ ರಾಜ್ಯ ಸರಕಾರವೇ ಹೆಣಗಾಡಬೇಕಾಗಿದೆ.

ಬರಗಾಲದ ಪರಿಸ್ಥಿತಿ ಉಂಟಾಗಬಹುದಾದ ಪ್ರದೇಶಗಳ ಬಗ್ಗೆ ಸರಕಾರದ ಬಳಿ ಈಗಾಗಲೇ ಮಾಹಿತಿ ಇದೆ. ತಡಮಾಡದೆ ಜಿಲ್ಲಾಡಳಿತವನ್ನು ಎಚ್ಚರಿಸಿ ಜನರಿಗೆ ಮತ್ತು ದನ ಕರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕಾಗಿದೆ. ಅಣೆಕಟ್ಟುಗಳಲ್ಲಿ ಲಭ್ಯವಿರುವ ನೀರು, ಕೆರೆ, ಕೊಳವೆ ಬಾವಿ ಮುಂತಾದ ಜಲ ಮೂಲಗಳ ಮೇಲೆ ನಿಗಾ ವಹಿಸಿ ನೀರಿನ ಮಿತಬಳಕೆಯ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ವಿವಿಧ ಇಲಾಖೆಗಳ ಜೊತೆ ಸಮಾಲೋಚನೆ ನಡೆಸಿ ಸಂಕಷ್ಟ ಪರಿಹಾರ ಸೂತ್ರವನ್ನು ಸರಕಾರ ಸಿದ್ಧಪಡಿಸಬೇಕಾಗಿದೆ.

ಸಚಿವರು ಹೇಳಿದ ಪ್ರಕಾರ ಮಳೆಯ ಕೊರತೆಯಾದರೂ ಕುಡಿಯುವ ನೀರಿಗೆ ಅಂಥ ಸಮಸ್ಯೆ ಉಂಟಾಗದು. 114 ತಾಲೂಕುಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ 25 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.ಕೆಲವು ತಾಲೂಕುಗಳಲ್ಲಿ 15 ವಾರಗಳಿಗೆ ಸಾಕಾಗುವಷ್ಟು ಹಾಗೂ ಇನ್ನು ಕೆಲವು ತಾಲೂಕುಗಳಿಗೆ 30 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ.ಮುಂದಿನ ದಿನಗಳಲ್ಲಿ ಮೇವಿನ ಕೊರತೆಯಾಗದಂತೆ ಕಂದಾಯ ಇಲಾಖೆಯ ಮೂಲಕ ರೈತರಿಗೆ ಮೇವಿನ ಬೀಜ ವಿತರಿಸಿ ಮೇವು ಬೆಳೆಯಲು ಕ್ರಮ ಕೈಗೊಳ್ಳಲಾಗುವುದು ಎಂಬ ಸಚಿವರ ಹೇಳಿಕೆ ಸರಕಾರ ಈ ಬಗ್ಗೆ ಸುಮ್ಮನೆ ಕುಳಿತಿಲ್ಲ ಎಂಬುದಕ್ಕೆ ಉದಾಹರಣೆಯಾಗಿದೆ.

ಆದರೆ ಸರಕಾರ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಕುಡಿಯುವ ನೀರಿನ ಸಮಸ್ಯೆ ಇಲ್ಲವೆಂದು ಸಚಿವರು ಹೇಳಿದ್ದರೂ ಯಾವುದೇ ತೊಂದರೆಯಾಗದಂತೆ ನೀರಿನ ವ್ಯವಸ್ಥೆಗೆ ಜಿಲ್ಲಾ ಪಂಚಾಯತ್ಗಳಿಗೆ ಅನುದಾನ ಬಿಡುಗಡೆ ಮಾಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ರೈತರು ಬಿತ್ತಿದ ಬೀಜ ಮೊಳಕೆಯೊಡೆಯದೆ ಭೂಮಿಗೆ ಹಾಕಿದ ಗೊಬ್ಬರವೂ ವ್ಯರ್ಥವಾಗಿ ಪರಿಸ್ಥಿತಿ ಬಿಗಡಾಯಿಸುವ ಆತಂಕವನ್ನು ತಳ್ಳಿ ಹಾಕಲಾಗುವುದಿಲ್ಲ.ಹಾಗಾಗಿ ಬಿತ್ತನೆ ಬೀಜ ಮೊಳಕೆಯೊಡೆಯದೆ ಕಂಗೆಟ್ಟ ರೈತರು ಮತ್ತೊಮ್ಮೆ ಬಿತ್ತನೆ ಮಾಡಲು ಮುಂದಾದರೆ ಅವರಿಗೆ ರಿಯಾಯಿತಿ ದರದಲ್ಲಿ ಬೀಜ ಮತ್ತು ಗೊಬ್ಬರವನ್ನು ಪೂರೈಸಲು ಸರಕಾರ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಇಂಥ ಪರಿಸ್ಥಿತಿಯಲ್ಲಿ ರೈತರು ಅನಿವಾರ್ಯವಾಗಿ ಸಾಲ ಮಾಡಬೇಕಾಗುತ್ತದೆ, ಒಂದು ವೇಳೆ ಹಾಗಾದರೆ ಸರಕಾರ ಅವರ ಆತಂಕವನ್ನು ನಿವಾರಿಸಬೇಕು. ಈ ರಾಜ್ಯದಲ್ಲಿ ಹಿಂದೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವಿದ್ದಾಗ ಕೃಷಿ ಮಂತ್ರಿಯಾಗಿದ್ದ ಕೃಷ್ಣ ಭೈರೇಗೌಡರು ಸಂಕಷ್ಟಕ್ಕೊಳಗಾದ ರೈತರ ಜೊತೆ ಆಪ್ತ ಸಮಾಲೋಚನೆ ನಡೆಸಿ ಧೈರ್ಯ ತುಂಬುವ ಕೆಲಸ ಮಾಡಿದ್ದರು.ರೈತರೊಂದಿಗಿನ ಈ ಆಪ್ತ ಸಮಾಲೋಚನೆಯ ಸೌಲಭ್ಯಕ್ಕೆ ಮತ್ತೆ ಚಾಲನೆ ನೀಡಬೇಕು. ಬರಗಾಲದಿಂದ ಎದುರಾಗಬಹುದಾದ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸರಕಾರ ತಯಾರಾಗಬೇಕಾಗಿದೆ.

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News