ರಾಜ್ಯಪಾಲರನ್ನು ಮುಂದಿಟ್ಟು ಬಿಜೆಪಿ ವರಿಷ್ಠರು ಬಿಟ್ಟ ಬಾಣ

Update: 2024-08-19 09:49 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಾಂಗ್ರೆಸ್‌ನ ಬಣಗಳ ನಡುವಿನ ತಿಕ್ಕಾಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಯಲ್ಲಿ ಮುಕ್ತಾಯವಾಗಬಹುದು ಎಂಬ ನಿರೀಕ್ಷೆ ಹುಸಿಯಾಗುತ್ತಿದ್ದಂತೆಯೇ, ರಾಜ್ಯಪಾಲರನ್ನು ಮುಂದಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನಕ್ಕೆ ಬಿಜೆಪಿ ಮುಂದಾಗಿದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿಯ ಪಾತ್ರ ನೇರವಾಗಿ ಅಥವಾ ಪರೋಕ್ಷವಾಗಿ ಇರಬಹುದಾಗಿದ್ದರೂ, ಈ ಹಿಂದೆ ಗಣಿ ಹಗರಣದಲ್ಲಿ ಯಡಿಯೂರಪ್ಪರನ್ನು ಕಟಕಟೆಯಲ್ಲಿ ನಿಲ್ಲಿಸಿದಂತೆ ಯಾವುದೇ ತನಿಖಾ ತಂಡ ಮುಖ್ಯಮಂತ್ರಿಯನ್ನು ಅಧಿಕೃತವಾಗಿ ದೋಷಿಯೆಂದು ಗುರುತಿಸಿಲ್ಲ. ನೀಡಿದ ದೂರೊಂದರ ಆಧಾರದಲ್ಲಿ ರಾಜ್ಯಪಾಲರು ಮುಖ್ಯಮಂತ್ರಿಯ ಪ್ರಾಸಿಕ್ಯೂಶನ್‌ಗೆ ಅನುಮತಿಸಿರುವುದರ ಹಿಂದೆ, ಕೇಂದ್ರದ ಕೈವಾಡವಿದೆ ಎನ್ನುವುದು ಸ್ಪಷ್ಟವಾಗಿದೆ. ದಕ್ಷಿಣ ಭಾರತದ ಹಲವು ರಾಜ್ಯಗಳು ರಾಜ್ಯಪಾಲರ ಹಸ್ತಕ್ಷೇಪಗಳ ಬಗ್ಗೆ ದೊಡ್ಡ ಧ್ವನಿಯಲ್ಲಿ ಪ್ರತಿಭಟಿಸುತ್ತಿವೆ. ಸರಕಾರದ ನಿರ್ಧಾರಗಳಿಗೆ ಅಡ್ಡಗಾಲು ಹಾಕುವುದು, ಸ್ಥಳೀಯ ಅಸ್ಮಿತೆಗಳನ್ನು ಪ್ರಶ್ನೆ ಮಾಡುವುದು, ಆರೆಸ್ಸೆಸ್ ಸಿದ್ಧ್ದಾಂತಗಳನ್ನು ರಾಜ್ಯಗಳ ಮೇಲೆ ಹೇರುವುದು ಇವೆಲ್ಲ ಕಾರಣಗಳಿಗಾಗಿ ತಮಿಳುನಾಡು, ಕೇರಳ, ತೆಲಂಗಾಣ, ಪಶ್ಚಿಮಬಂಗಾಳ ಮೊದಲಾದ ರಾಜ್ಯಗಳು ರಾಜ್ಯಪಾಲರ ವಿರುದ್ಧ ತೀವ್ರ ಪ್ರತಿಭಟನೆಗಳನ್ನು ಮಾಡಿವೆ ಮಾತ್ರವಲ್ಲ, ಮಧ್ಯ ಪ್ರವೇಶಿಸಲು ರಾಷ್ಟ್ರಪತಿಗೆ ಪತ್ರವನ್ನೂ ಬರೆದಿವೆ. ಇದೀಗ ಆ ರಾಜ್ಯಗಳ ಸಾಲಿನಲ್ಲಿ ಕರ್ನಾಟಕವೂ ಸೇರಿಕೊಂಡಿದೆ. ಬಿಜೆಪಿಯ ಎಲ್ಲ ಆಪರೇಷನ್‌ಗಳು ವಿಫಲವಾಗಿರುವ ಹೊತ್ತಿಗೆ, ಆಪರೇಷನ್ ಥಿಯೇಟರ್‌ಗೆ ಕತ್ತರಿ ಕೊಟ್ಟು ರಾಜ್ಯಪಾಲರನ್ನೇ ಬಿಜೆಪಿ ಕಳುಹಿಸಿದೆ. ರಾಜ್ಯಪಾಲರು ಸರಕಾರವನ್ನು ಅಭದ್ರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದ್ದು, ರಾಜ್ಯಪಾಲರು ರಾಜೀನಾಮೆ ನೀಡಬೇಕು ಎಂದು ಸಂಪುಟ ಸಭೆ ಆಗ್ರಹಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯಪಾಲರು ಮತ್ತು ಸರಕಾರದ ನಡುವಿನ ಸಂಘರ್ಷ ಇನ್ನಷ್ಟು ತೀವ್ರವಾಗುವ ಸಾಧ್ಯತೆಗಳು ಕಾಣುತ್ತಿವೆ.

ರಾಜ್ಯದಲ್ಲಿ ಕಾಂಗ್ರೆಸ್‌ನ ಪ್ರಾಣ ಸಿದ್ದರಾಮಯ್ಯ ಅವರಲ್ಲಿದೆ ಎನ್ನುವುದು ಬಿಜೆಪಿಯ ಕೇಂದ್ರ ವರಿಷ್ಠರಿಗೆ ಸ್ಪಷ್ಟವಾಗಿರುವುದರಿಂದ, ರಾಜ್ಯಪಾಲರನ್ನು ಮುಂದಿಟ್ಟುಕೊಂಡು ದಿಲ್ಲಿಯಿಂದ ಸಿದ್ದರಾಮಯ್ಯ ಅವರ ಕಡೆಗೆ ಬಾಣ ಬಿಡಲಾಗಿದೆ. ಗ್ಯಾರಂಟಿ ಯೋಜನೆಗಳು ಸಿದ್ದರಾಮಯ್ಯ ಕುರ್ಚಿಯನ್ನು ಗಟ್ಟಿಗೊಳಿಸಿದೆ ಮಾತ್ರವಲ್ಲ, ಕಾಂಗ್ರೆಸ್‌ನ ಜನಪ್ರಿಯತೆಯನ್ನು ರಾಜ್ಯದಲ್ಲಿ ಹೆಚ್ಚಿಸಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಬರಿದಾಗಿದೆ ಎನ್ನುವ ಆರೋಪಗಳು ಫಲ ನೀಡುತ್ತಿಲ್ಲ ಮಾತ್ರವಲ್ಲ, ಹಾಗೂ ಹೀಗೂ ಗ್ಯಾರಂಟಿ ಯೋಜನೆಗಳನ್ನು ಐದು ವರ್ಷ ಯಶಸ್ವಿಯಾಗಿ ಮುನ್ನಡೆಸಿದ್ದೇ ಆದರೆ ಅದು ಕಾಂಗ್ರೆಸ್‌ನ ಬಹುದೊಡ್ಡ ಯಶಸ್ಸಾಗುತ್ತದೆ. ್ಲ ಕಾಂಗ್ರೆಸ್‌ಗೆ ಸಾಧ್ಯವಾಗಿದ್ದು ಬಿಜೆಪಿಗೆ ಯಾಕೆ ಸಾಧ್ಯವಾಗಲಿಲ್ಲ ಎನ್ನುವ ಪ್ರಶ್ನೆ ಏಳುತ್ತದೆ. ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸುವುದೆಂದರೆ ಪರೋಕ್ಷವಾಗಿ, ಜನರಿಗೆ ನೀಡಿರುವ ಗ್ಯಾರಂಟಿಗಳನ್ನು ಕಿತ್ತುಕೊಳ್ಳುವುದೇ ಆಗಿದೆ. ಸಿದ್ದರಾಮಯ್ಯ ಬದಲಿಗೆ ಯಾರೇ ಅಧಿಕಾರಕ್ಕೇರಿದರೂ ಅವರಿಗೆ ಗ್ಯಾರಂಟಿ ಎನ್ನುವ ಹುಲಿ ಸವಾರಿ ಮಾಡುವುದು ಸುಲಭವಿಲ್ಲ ಎನ್ನುವುದು ಬಿಜೆಪಿ ನಾಯಕರಿಗೆ ಗೊತ್ತಿದೆ. ಸಿದ್ದರಾಮಯ್ಯರ ಜೊತೆ ಜೊತೆಗೇ ಗ್ಯಾರಂಟಿಗಳೂ ಹಿಂದೆಗೆಯಲ್ಪಟ್ಟರೆ ‘ಕಾಂಗ್ರೆಸ್ ಜನರನ್ನು ವಂಚಿಸಿತು’ ಎಂದು ಬೀದಿಗಿಳಿಯುವ ಇನ್ನೊಂದು ಅವಕಾಶ ಬಿಜೆಪಿಗೆ ಸಿಗುತ್ತದೆ. ಸದ್ಯಕ್ಕೆ ಕಾಂಗ್ರೆಸ್‌ನೊಳಗಿನ ಭಿನ್ನಮತಗಳು ಸಿದ್ದರಾಮಯ್ಯರನ್ನು ಕೆಳಗಿಳಿಸುವಷ್ಟು ಶಕ್ತವಾಗಿಲ್ಲ ಎನ್ನುವುದು ಅರಿವಾಗಿ, ರಾಜ್ಯಪಾಲರನ್ನು ಮುಂದಿಟ್ಟು ಬಿಜೆಪಿ ವರಿಷ್ಠರು ಆಟವಾಡುತ್ತಿದ್ದಾರೆ.

ಇದರ ಅರ್ಥ ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರು ಅಮಾಯಕರು ಎನ್ನುವುದು ಖಂಡಿತ ಅಲ್ಲ. ಒಬ್ಬ ಮುಖ್ಯಮಂತ್ರಿಯ ವಿರುದ್ದ ಪ್ರಾಸಿಕ್ಯೂಶನ್‌ಗೆ ರಾಜ್ಯಪಾಲರು ಅನುಮತಿಸಬಾರದು ಎನ್ನುವುದೂ ಇದರ ಅರ್ಥವಲ್ಲ. ಈ ಹಿಂದೆ ಯಡಿಯೂರಪ್ಪ ವಿರುದ್ದ ರಾಜ್ಯಪಾಲರು ಕ್ರಮ ತೆಗೆದುಕೊಂಡಾಗ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಗಣಿಹಗರಣದಲ್ಲಿ ಯಡಿಯೂರಪ್ಪ ಪಾತ್ರವನ್ನು ಲೋಕಾಯುಕ್ತ ವರದಿ ಗುರುತಿಸಿತ್ತು ಮಾತ್ರವಲ್ಲ, ಎಲ್. ಕೆ. ಅಡ್ವಾಣಿಯಂತಹ ನಾಯಕರೇ ಲೋಕಾಯುಕ್ತ ವರದಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದರು. ಗಣಿ ಹಗರಣದಲ್ಲಿ ಯಡಿಯೂರಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳಲೇ ಬೇಕಾದಂತಹ ಅನಿವಾರ್ಯ ಸ್ಥಿತಿ ರಾಜ್ಯಪಾಲರದ್ದಾಗಿತ್ತು. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ತನ್ನ ಮುಖ್ಯಮಂತ್ರಿ ಹುದ್ದೆಯನ್ನು ದುರುಪಯೋಗ ಪಡಿಸಿರುವ ಯಾವ ಆರೋಪವೂ ಇಲ್ಲ. ಒಂದು ದೂರಿನ ಆಧಾರದಲ್ಲಿ ಅವಸರವಸರವಾಗಿ ಪ್ರಾಸಿಕ್ಯೂಶನ್‌ಗೆ ಅನುಮತಿಯನ್ನು ನೀಡುವ ಉದ್ದೇಶದ ಹಿಂದೆ ಕೇಂದ್ರದ ಒತ್ತಡ ಇದೆ. ಇದೀಗ ಸಿದ್ದರಾಮಯ್ಯ ಅವರ ಬೆನ್ನಿಗೆ ಸರಕಾರ ಬಲವಾಗಿ ನಿಂತಿದೆ. ಸಿದ್ದರಾಮಯ್ಯ ಇದರ ವಿರುದ್ಧ ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ. ನ್ಯಾಯಾಲಯಗಳು ಯಾವುದೇ ಪೂರ್ವಾಗ್ರಹ ಪೀಡಿತ ಅವಸರದ ನಿರ್ಧಾರಗಳನ್ನು ತೆಗೆದುಕೊಳ್ಳದೇ ಇದ್ದರೆ ಸಿದ್ದರಾಮಯ್ಯ ನಿರಾತಂಕವಾಗಿ ಅಧಿಕಾರದಲ್ಲಿ ಮುಂದುವರಿಯುವ ಸಾಧ್ಯತೆಗಳಿವೆ.

ಇದೇ ಸಂದರ್ಭದಲ್ಲಿ ರಾಜ್ಯಾದ್ಯಂತ ಸಿದ್ದರಾಮಯ್ಯ ಪರವಾಗಿ ಹಲವು ಸಂಘಟನೆಗಳು ಹೋರಾಟಗಳನ್ನು ನಡೆಸಲು ಮುಂದಾಗಿವೆ. ವಿವಿಧ ದಲಿತ ಸಂಘಟನೆಗಳು, ಸ್ವಾಮೀಜಿಗಳು, ಕುರುಬ ಸಮುದಾಯದ ಮುಖಂಡರು ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಶೋಷಿತ ಸಮುದಾಯವನ್ನು ಪ್ರತಿನಿಧಿಸುತ್ತಿರುವ ನಾಯಕ ಮುಖ್ಯಮಂತ್ರಿಯಾಗಿರುವುದು ಬಿಜೆಪಿಗೆ ಸಹಿಸಲಾಗುತ್ತಿಲ್ಲ, ಆದುದರಿಂದಲೇ ಅವರನ್ನು ಕೆಳಗಿಳಿಸುವ ಸಂಚು ನಡೆಸುತ್ತಿದೆ ಎನ್ನುವ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ದೊಡ್ಡದಾಗಿ ಎದ್ದಿದೆ. ಅಷ್ಟೇ ಅಲ್ಲ, ಇದು ಜನಸಾಮಾನ್ಯರಿಗೆ ನೀಡಲಾದ ಗ್ಯಾರಂಟಿಗಳ ವಿರುದ್ಧ ನಡೆಸಿರುವ ಸಂಚು ಎನ್ನುವ ಆರೋಪಗಳನ್ನು ಕೆಲವು ಸಂಘಟನೆ ಮಾಡಿವೆ. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಇಳಿಸುವ ಮೂಲಕ, ಯಾವ ಕಾರಣಕ್ಕೂ ಜಾತಿಗಣತಿ ಬಹಿರಂಗವಾಗದಂತೆ ತಡೆಯಲಾಗುತ್ತಿದೆ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ. ರಾಜ್ಯಪಾಲರ ಕಾರಣದಿಂದಾಗಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವಂತಹ ಸ್ಥಿತಿ ನಿರ್ಮಾಣವಾದರೆ ಅದರಿಂದ ಬಿಜೆಪಿಗೆ ಬಹಳಷ್ಟು ನಷ್ಟಗಳಿವೆ. ಮುಖ್ಯವಾಗಿ ಸಿದ್ದರಾಮಯ್ಯ ಅವರ ಜನಪರ ಕಾರ್ಯವನ್ನು ಮುಚ್ಚಿ ಹಾಕುವಷ್ಟು ದೊಡ್ಡದಾಗಿ ಮುಡಾ ಹಗರಣ ಗುರುತಿಸಿಕೊಂಡಿಲ್ಲ. ಬಿಜೆಪಿ, ಜೆಡಿಎಸ್‌ನೊಳಗಿರುವ ನಾಯಕರೇ ಈ ಹಗರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ನಾಳೆ ರಾಜ್ಯಪಾಲರ ಕಾರಣದಿಂದ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಅನುಕಂಪದ ಅಲೆಗಳು ಕಾಂಗ್ರೆಸ್‌ಗೆ ಪೂರಕವಾಗುತ್ತದೆ. ಸಿದ್ದರಾಮಯ್ಯ ಜನರ ಪಾಲಿಗೆ ಹುತಾತ್ಮರಾಗುತ್ತಾರೆ. ಇದು ಬಿಜೆಪಿಗೆ ತಿರುಗುಬಾಣವಾಗುವ ಸಾಧ್ಯತೆಗಳಿವೆ. ಸಿದ್ದರಾಮಯ್ಯ ರಾಜೀನಾಮೆಯ ಬೆನ್ನಿಗೇ ಗ್ಯಾರಂಟಿ ಯೋಜನೆಗಳನ್ನು ಜನರಿಂದ ಕಿತ್ತುಕೊಂಡದ್ದೇ ಆದರೆ ಅದರ ಹೊಣೆಯೂ ಬಿಜೆಪಿಯ ತಲೆಯ ಮೇಲೆ ಬೀಳುತ್ತದೆ.

ಎಲ್ಲಕಿಂತ ಮುಖ್ಯವಾಗಿ ಜನರ ಅಪಾರ ಬೆಂಬಲದಿಂದ ರಚನೆಯಾಗಿರುವ ಒಂದು ಸರಕಾರದೊಳಗೆ ರಾಜ್ಯಪಾಲರು ಹಸ್ತಕ್ಷೇಪ ನಡೆಸಿ ಅದನ್ನು ದುರ್ಬಲಗೊಳಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಮತ್ತೆ ಮುನ್ನೆಲೆಗೆ ಬರುತ್ತದೆ. ಈಗಾಗಲೇ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎನ್ನುವ ಕೂಗು ಇನ್ನಷ್ಟು ಬಲಪಡೆಯಬಹುದು. ಕೇಂದ್ರರಾಜ್ಯದ ನಡುವಿನ ಇನ್ನಷ್ಟು ಹದಗೆಡಬಹುದು. ತಮಿಳುನಾಡು, ಕೇರಳ, ತೆಲಂಗಾಣಗಳು ಕರ್ನಾಟಕದ ಜೊತೆ ನಿಂತರೆ ಹೋರಾಟ ಬೇರೆಯೇ ರೂಪ ಪಡೆಯಬಹುದು. ರಾಜ್ಯಪಾಲರು ತನ್ನ ಸ್ಥಾನದ ಘನತೆಯನ್ನು ಕಾಪಾಡಿಕೊಂಡು, ಒಕ್ಕೂಟ ವ್ಯವಸ್ಥೆಯ ಹಿರಿಮೆಯನ್ನು ಎತ್ತಿ ಹಿಡಿಯಬೇಕು. ತನ್ನ ಸ್ಥಾನದ ಹಿರಿಮೆ ಬಿಜೆಪಿಯ ಅಗ್ಗದ ‘ಆಪರೇಷನ್ ಕಮಲ’ದ ಕತ್ತರಿ ಕೆಲಸಕ್ಕೆ ಬಳಕೆಯಾಗದಂತೆ ನೋಡಿಕೊಳ್ಳುವುದು ಅವರ ಹೊಣೆಗಾರಿಕೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News