ಯೂನುಸ್ ನೇತೃತ್ವದ ಮಧ್ಯಂತರ ಸರಕಾರ: ಬಾಂಗ್ಲಾದ ಮುತ್ಸದ್ದಿ ನಡೆ

Update: 2024-08-10 06:16 GMT

PC: x.com/SwissAmbBD

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಒಂದು ದೇಶದಲ್ಲಿ ಸರ್ವಾಧಿಕಾರ ಮತ್ತು ಭ್ರಷ್ಟಾಚಾರದ ವಿರುದ್ಧ ನಡೆಯುವ ಜನಾಂದೋಲನದ ಹೊಣೆಗಾರಿಕೆ ಅಲ್ಲಿನ ಸರಕಾರವನ್ನು ಕೆಳಗಿಳಿಸುವುದರಿಂದ ಮುಗಿಯುವುದಿಲ್ಲ. ಆಂದೋಲನವು ಹೊಸದಾಗಿ ಯಾರ ಕೈಗೆ ದೇಶದ ಚುಕ್ಕಾಣಿಯನ್ನು ಒಪ್ಪಿಸುತ್ತದೆ ಎನ್ನುವುದರ ಮೇಲೆ ಜನಕ್ರಾಂತಿಯ ಯಶಸ್ಸು ನಿಂತಿದೆ. ಬಹುತೇಕ ಹೋರಾಟಗಳು ಸರ್ವಾಧಿಕಾರಿಯನ್ನು ಇಳಿಸುವವರೆಗೆ ಸರಿಯಾದ ದಾರಿಯಲ್ಲೇ ಮುನ್ನಡೆಯುತ್ತದೆ. ಆದರೆ ಹೊಸತನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಬೀದಿ ಆಂದೋಲನ ದಿಕ್ಕು ತಪ್ಪುತ್ತದೆ. ಅನೇಕ ದೇಶಗಳಲ್ಲಿ ಇಂತಹ ಬೀದಿ ಕ್ರಾಂತಿಗಳು ಒಬ್ಬ ಸರ್ವಾಧಿಕಾರಿಯನ್ನು ಕೆಳಗಿಳಿಸಿ ಇನ್ನೊಬ್ಬ ಸರ್ವಾಧಿಕಾರಿಯನ್ನು ಗದ್ದುಗೆಗೇರಿಸುವುದರಲ್ಲಿ ಮುಕ್ತಾಯವಾದದ್ದಿದೆ. ಇಂತಹ ಕ್ರಾಂತಿ ಅಂತಿಮವಾಗಿ ದೇಶವನ್ನು ಇನ್ನಷ್ಟು ಅರಾಜಕತೆಯ ಕಡೆಗೆ ಒಯ್ಯುತ್ತದೆ. ಸದ್ಯಕ್ಕೆ ನೆರೆಯ ಬಾಂಗ್ಲಾದಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಹಸೀನಾ ನಡೆಸಿದ ಸರ್ವಾಧಿಕಾರದ ವಿರುದ್ಧ ಜನರು ಬಂಡೆದ್ದು, ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ. ಅಳಿದುಳಿದ ಪ್ರಜಾಸತ್ತೆ ಪತನಗೊಂಡ ಬಳಿಕ ಬಾಂಗ್ಲಾ ಚುಕ್ಕಾಣಿಯನ್ನು ಸೇನೆ ಕೈಗೆತ್ತಿಕೊಳ್ಳುತ್ತದೆಯೇ ಎನ್ನುವ ಆತಂಕ ಎಲ್ಲರನ್ನೂ ಕಾಡಿತ್ತು. ಯಾಕೆಂದರೆ, ಹಸೀನಾ ಸರಕಾರದ ವಿರುದ್ಧದ ಪ್ರತಿಭಟನೆಯ ಯಶಸ್ಸಿನಲ್ಲಿ ಸೇನೆಯ ಪರೋಕ್ಷ ಪಾತ್ರವಿದೆ. ಆರಂಭದಲ್ಲಿ ಹಸೀನಾ ನಿರ್ದೇಶನದಂತೆ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಕೋವಿಗಳ ಮೂಲಕ ದಮನಿಸುವ ಪ್ರಯತ್ನ ನಡೆದಿತ್ತು. ನೂರಾರು ವಿದ್ಯಾರ್ಥಿಗಳು ಮೃತಪಟ್ಟರು. ಆದರೆ ಪ್ರತಿಭಟನಾಕಾರರು ಹಿಂದೆ ಸರಿಯದೇ ಮುನ್ನುಗ್ಗಿದಾಗ ತನ್ನದೇ ದೇಶದ ಯುವ ಶಕ್ತಿಯ ವಿರುದ್ಧ ಗುಂಡು ಹಾರಿಸಲು ಸೇನೆ ಹಿಂದೇಟು ಹಾಕಿತು. ಹಸೀನಾ ದೇಶವನ್ನೇ ತೊರೆಯುವ ಸ್ಥಿತಿ ನಿರ್ಮಾಣವಾಯಿತು. ಬಾಂಗ್ಲಾದ ರಾಜಕೀಯ ಅರಾಜಕತೆಯಲ್ಲಿ ಸೇನೆಯ ಕೈವಾಡವಿದೆ ಎನ್ನುವ ವದಂತಿ ಈಗಲೂ ಜೀವಂತವಿದೆ.

ಪ್ರತಿಭಟನಾ ನಿರತ ಜನರು ಬೀದಿಯಲ್ಲಿ ನಿಂತು ಸರಕಾರದ ವಿರುದ್ಧ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ನಡೆಯುವ ಹಿಂಸಾಚಾರಕ್ಕೂ, ಸರಕಾರ ಉರುಳಿದ ಬಳಿಕ ಅರಾಜಕತೆಯ ಸಂದರ್ಭವನ್ನು ಬಳಸಿಕೊಂಡು ದುಷ್ಕರ್ಮಿಗಳು ಬೀದಿಯಲ್ಲಿ ನಡೆಸುವ ಹಿಂಸಾಚಾರಕ್ಕೂ ವ್ಯತ್ಯಾಸವಿದೆ. ಪ್ರಭುತ್ವದ ವಿರುದ್ಧ ಜನತೆ ನಡೆಸುವ ಪ್ರತಿಭಟನೆಗೆ ಜಾಗತಿಕ ಅನುಕಂಪವಿರುತ್ತದೆ. ಆದರೆ ಸರಕಾರ ಉರುಳಿ ದೇಶದಲ್ಲಿ ಅರಾಜಕತೆ ತಾಂಡವವಾಡುವ ಹೊತ್ತಿಗೆ ಬೀದಿಯಲ್ಲಿನ ಪ್ರತಿಭಟನೆ ರೂಪಾಂತರವಾಗುತ್ತದೆ. ದುಷ್ಕರ್ಮಿಗಳು, ಗೂಂಡಾಗಳು, ಉಗ್ರವಾದಿಗಳು ಈ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಾರೆ. ದುರ್ಬಲರ ಮೇಲೆ, ಅಲ್ಪಸಂಖ್ಯಾತರ ಮೇಲೆ, ಮಹಿಳೆಯರ ಮೇಲೆ ದಾಳಿ ನಡೆಸಲು ಇದನ್ನು ಅವಕಾಶವಾಗಿ ಬಳಸಿಕೊಳ್ಳುವ ಸಂದರ್ಭಗಳಿರುತ್ತವೆ. ಬಾಂಗ್ಲಾದಲ್ಲಿ ಹಸೀನಾ ಸರಕಾರ ಉರುಳುತ್ತಿದ್ದಂತೆಯೇ ಇಡೀ ಪ್ರತಿಭಟನೆಗೆ ಬೇರೆಯದೇ ಬಣ್ಣವನ್ನು ನೀಡಲು ಹಲವು ಶಕ್ತಿಗಳು ಪ್ರಯತ್ನಿಸಿದ್ದವು. ವಿದ್ಯಾರ್ಥಿಗಳ ಪ್ರತಿಭಟನೆಗೆ, ಜನಾಂದೋಲನಕ್ಕೆ ಉಗ್ರವಾದದ ಬಣ್ಣವನ್ನು ಬಳಿಯುವ ಪ್ರಯತ್ನವನ್ನು ಹಸೀನಾ ಸರಕಾರ ಮಾಡಿತ್ತು. ಸೇನೆಯ ಬಂಡಾಯವಾಗಿಯೂ ಇದನ್ನು ಬಿಂಬಿಸುವ ಪ್ರಯತ್ನ ನಡೆಯಿತು. ವಿದ್ಯಾರ್ಥಿಗಳ ಜನಾಂದೋಲನಕ್ಕೆ ಜಾಗತಿಕ ಅನುಕಂಪ ಸಿಗದಂತೆ ಮಾಡುವ ಹುನ್ನಾರದ ಭಾಗ ಇದಾಗಿತ್ತು. ಇದೇ ಸಂದರ್ಭದಲ್ಲಿ ಪತನಗೊಂಡ ಪ್ರಜಾಸತ್ತೆಯನ್ನು ಪುನರ್ ಸ್ಥಾಪಿಸುವುದು ಸಣ್ಣ ವಿಷಯವೇನೂ ಆಗಿರಲಿಲ್ಲ. ಹಸೀನಾ ಸರಕಾರ ಪತನಗೊಂಡ ಬೆನ್ನಿಗೇ ಪ್ರತಿಭಟನಾಕಾರರು ‘‘ಪ್ರಜಾಸತ್ತೆ ಪುನರ್ ಸ್ಥಾಪನೆಯಾಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ’’ ಎಂದು ಘೋಷಿಸಿದ್ದು ಸೇನೆಗೆ ಒಂದು ದೊಡ್ಡ ಎಚ್ಚರಿಕೆಯಾಯಿತು. ಈ ಹಿನ್ನೆಲೆಯಲ್ಲಿ ಸೇನೆಯೂ ಬಹಳ ಮುತ್ಸದ್ದಿ ಹೆಜ್ಜೆಗಳನ್ನು ಇಟ್ಟಿದೆ.

ಚುನಾವಣೆ ನಡೆಯುವವರೆಗೆ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರರಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನುಸ್ ಅವರು ಪ್ರಮಾಣ ವಚನ ಮಾಡುವ ಮೂಲಕ, ಬಾಂಗ್ಲಾದ ರಾಜಕೀಯ ಬೆಳವಣಿಗೆ ಒಂದು ನಿರ್ಣಾಯಕ ಹಂತ ತಲುಪಿದೆ. ಪ್ರಮಾಣ ವಚನದ ಸಂದರ್ಭದಲ್ಲಿ ‘‘ಬಾಂಗ್ಲಾಕ್ಕೆ ಎರಡನೇ ಸ್ವಾತಂತ್ರ್ಯ ಸಿಕ್ಕಿದೆ’’ ಎಂದು ಅವರು ಘೋಷಿಸಿದ್ದಾರೆ. ಹಿಂಸಾತ್ಮ ಪ್ರತಿಭಟನೆ, ಘರ್ಷನೆಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮುಹಮ್ಮದ್ ಯೂನುಸ್ ಇವರ ತ್ಯಾಗದಿಂದ ರಾಷ್ಟ್ರಕ್ಕೆ ಎರಡನೇ ಸ್ವಾತಂತ್ರ್ಯ ಸಿಕ್ಕಿದೆ. ಬಾಂಗ್ಲಾದೇಶ ಹೊಸ ವಿಜಯದ ದಿನವನ್ನು ಸೃಷ್ಟಿಸಿದೆ. ಇದೀಗ ಶಾಂತಿ, ಕಾನೂನು ವ್ಯವಸ್ಥೆ ಸ್ಥಾಪನೆಗೆ ನಾವು ಮೊದಲ ಆದ್ಯತೆಯನ್ನು ನೀಡಬೇಕಾಗಿದೆ’’ ಎಂದು ಕರೆ ನೀಡಿದ್ದಾರೆ. ಯೂನುಸ್ ಅವರು ಬಾಂಗ್ಲಾದ ಜನ ಮಿಡಿತವನ್ನು ಅರಿತವರು. ಗ್ರಾಮೀಣ ಬದುಕನ್ನು ಹಸನು ಮಾಡಲು ಶ್ರಮಿಸಿದವರು. ಸೇನೆಯು ವಿಶ್ವದ ಮುಂದೆ ಶಾಂತಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಯೂನುಸ್ ಅವರನ್ನು ಗುರಾಣಿಯಾಗಿ ಬಳಸಿಕೊಂಡಿದೆ. ಇದೊಂದು ಮುತ್ಸದ್ದಿ ನಡೆಯೇ ಸರಿ. ವಿಶ್ವವು ಮಾನ್ಯ ಮಾಡಿ ಶಾಂತಿನೊಬೆಲ್ ನೀಡಿ ಗೌರವಿಸಿದ ಯೂನುಸ್ ಸದ್ಯದ ಹೊಸ ಬಾಂಗ್ಲಾವನ್ನು ಪ್ರತಿನಿಧಿಸುತ್ತಿರುವುದರಿಂದ, ಇತರ ದೇಶಗಳ ಬಾಯಿ ಕಟ್ಟಿದಂತಾಗಿದೆ. ಮುಖ್ಯವಾಗಿ ಹಸೀನಾ ಸರಕಾರದ ಪರವಾಗಿದ್ದ ಭಾರತ ಸರಕಾರ ಇಕ್ಕಟ್ಟಿನಲ್ಲಿ ಸಿಲುಕಿದೆ. ಅಮೆರಿಕ, ಇಂಗ್ಲೆಂಡ್‌ನಂತಹ ದೇಶಗಳು ಹಸೀನಾಗೆ ಆಶ್ರಯ ನೀಡಲು ನಿರಾಕರಿಸಿದಾಗ, ಭಾರತ ಹಸೀನಾ ಅವರಿಗೆ ಆಶ್ರಯ ನೀಡಲು ಮುಂದಾಯಿತು. ಆದರೆ ಈ ಉದಾರತನ ಭಾರತ ಮತ್ತು ಹೊಸ ಬಾಂಗ್ಲಾದ ನಡುವಿನ ಸಂಬಂಧವನ್ನು ಪೂರ್ಣ ಪ್ರಮಾಣದಲ್ಲಿ ಕೆಡಿಸದಂತೆ ನೋಡಿಕೊಳ್ಳಬೇಕಾದುದು ಅತ್ಯಗತ್ಯವಾಗಿದೆ.

ಹಸೀನಾ ಸರಕಾರ ಉರುಳಿದ ಬಳಿಕ ಬಾಂಗ್ಲಾದಲ್ಲಿ ವ್ಯಾಪಕ ಹಿಂಸಾಚಾರಗಳು ನಡೆಯುತ್ತಿವೆ ಎನ್ನುವ ವರದಿಗಳು ಬರುತ್ತಿವೆ. ಸರಕಾರ ಅಸ್ತಿತ್ವದಲ್ಲಿಲ್ಲದ ಹೊತ್ತಿನಲ್ಲಿ ಕಾನೂನು ಸುವ್ಯವಸ್ಥೆ ದುರ್ಬಲವಾಗಿರುವುದರ ಸಂದರ್ಭದ ಲಾಭಗಳನ್ನು ದುಷ್ಕರ್ಮಿಗಳು ತಮ್ಮದಾಗಿಸಿಕೊಳ್ಳುವುದು ಸಹಜ. ಯಾವುದೇ ರಾಜಕೀಯ ಅರಾಜಕತೆಯಿಲ್ಲದೆಯೂ ಕಳೆದ ಒಂದು ವರ್ಷದಿಂದ ಬಿಜೆಪಿ ಸರಕಾರದ ಅಡಿಯಲ್ಲಿರುವ ಭಾರತದ ಮಣಿಪುರದಲ್ಲಿ ನೂರಾರು ಮಹಿಳೆಯರು, ಮಕ್ಕಳು ಮೃತರಾಗಿದ್ದಾರೆ. ನೂರಾರು ಚರ್ಚುಗಳು ಧ್ವಂಸವಾಗಿವೆ. ಭಾರತ ಸರಕಾರಕ್ಕೆ ಈ ಹಿಂಸಾಚಾರವನ್ನು ತಡೆಯಲು ಸಾಧ್ಯವಾಗಿಲ್ಲ. ಹೀಗಿರುವಾಗ, ಬಾಂಗ್ಲಾದಲ್ಲಿ ನಡೆಯುತ್ತಿರುವ ತಕ್ಷಣದ ಹಿಂಸಾಚಾರಗಳನ್ನು ತಡೆಯುವುದು ಕಷ್ಟವಾದರೂ, ಅಲ್ಲಿನ ಅಲ್ಪಸಂಖ್ಯಾತ ಸಮುದಾಯಕ್ಕೆ ಪೂರ್ಣ ಪ್ರಮಾಣದ ಭದ್ರತೆಯನ್ನು ನೀಡುವುದು ಬಾಂಗ್ಲಾದ ಮಧ್ಯಂತರ ಸರಕಾರದ ಮೊದಲ ಆದ್ಯತೆಯಾಗಬೇಕು. ಈಗಾಗಲೇ ಹಿಂದೂಗಳ ಮೇಲೆ ಹಲ್ಲೆ ನಡೆಯುತ್ತಿದೆ ಎನ್ನುವ ವದಂತಿಗಳು ಭಾರತದಲ್ಲಿ ವದಂತಿಗಳು ಹರಿದಾಡುತ್ತಿವೆ. ನಕಲಿ ವೀಡಿಯೊಗಳನ್ನು ಹರಿಯಬಿಟ್ಟು, ಭಾರತದಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಬಾಂಗ್ಲಾದಲ್ಲಿರುವ ಹಿಂದೂಗಳ ರಕ್ಷಣೆಯ ಬಗ್ಗೆ ಅಲ್ಲಿನ ಸರಕಾರಕ್ಕೆ ಒತ್ತಡ ಹೇರುವುದರ ಜೊತೆ ಜೊತೆಗೇ, ಬಾಂಗ್ಲಾದ ಬಗ್ಗೆ ವದಂತಿಗಳನ್ನು ಹರಡುವ ಭಾರತದೊಳಗಿರುವ ದುಷ್ಕರ್ಮಿಗಳ ವಿರುದ್ಧವೂ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳುವುದು ಬಾಂಗ್ಲಾ-ಭಾರತದ ನಡುವಿನ ಭವಿಷ್ಯದ ಸಂಬಂಧದ ದೃಷ್ಟಿಯಿಂದ ಅತ್ಯಗತ್ಯವಾಗಿದೆ.

ಇಂದಿರಾಗಾಂಧಿಯ ಕಾಲದ ಬಾಂಗ್ಲಾ ವಿಮೋಚನೆಗೂ ಇಂದಿನ ರಾಜಕೀಯ ಬೆಳವಣಿಗೆಗೂ ಅಜಗಜಾಂತರವಿದೆ. ಆ ಹೋರಾಟ ಬಾಂಗ್ಲಾ ಮತ್ತು ಪಾಕಿಸ್ತಾನದ ನಡುವಿನದಾಗಿತ್ತು. ಪಾಕಿಸ್ತಾನದಿಂದ ಬಾಂಗ್ಲಾ ವಿಮೋಚನೆಗೆ ಅಂದು ಅಲ್ಲಿನ ಜನರ ಜೊತೆಗೆ ಕೈ ಜೋಡಿಸಲು ಮುಖ್ಯ ಕಾರಣ, ಪಾಕಿಸ್ತಾನದಿಂದ ಬಾಂಗ್ಲಾ ವಿಭಜನೆಯಾಗುವುದು ಭಾರತದ ಅಗತ್ಯ ಕೂಡ ಆಗಿತ್ತು. ಆದರೆ ಈಗ ಪ್ರಜಾಸತ್ತೆಯ ಹೆಸರಿನಲ್ಲಿ ಹಸೀನಾ ನಡೆಸಿದ ಸರ್ವಾಧಿಕಾರದ ವಿರುದ್ಧ ಅಲ್ಲಿ ನ ಜನ ದಂಗೆ ಎದ್ದಿದ್ದಾರೆ. ಹಸೀನಾ ಅವರನ್ನು ಅಲ್ಲಿನ ಜನರು ಈಗಾಗಲೇ ತಿರಸ್ಕರಿಸಿದ್ದಾರೆ. ಬಲವಂತವಾಗಿ ಹಸೀನಾರನ್ನು ಬಾಂಗ್ಲಾದ ಮೇಲೆ ಹೇರುವ ಪ್ರಯತ್ನವನ್ನು ಭಾರತ ಮಾಡಲು ಹೊರಟರೆ ಬಾಂಗ್ಲಾದ ಜೊತೆಗಿನ ಸಂಬಂಧ ಶಾಶ್ವತವಾಗಿ ಹಳಸಬಹುದು. ಬಾಂಗ್ಲಾ ನ್ಯಾಶನಲಿಸ್ಟ್ ಪಾರ್ಟಿಯ ಮುಖಂಡ ಗಯೇಶ್ವರ ರಾಯ್ ಈ ಸಂಬಂಧ ಈಗಾಗಲೇ ಭಾರತಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಮಾನವೀಯ ನೆಲೆಯಲ್ಲಿ ಹಸೀನಾಗೆ ಆಶ್ರಯ ನೀಡಿದ್ದರೂ, ಪ್ರಜಾಸತ್ತೆಯ ಪುನರ್ ಸ್ಥಾಪನೆಯ ಸಂದರ್ಭದಲ್ಲಿ ಭಾರತವು ಬಾಂಗ್ಲಾದ ಜನತೆಯ ಜೊತೆಗೆ ನಿಲ್ಲಬೇಕಾದದ್ದು ಅನಿವಾರ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News