ಭಾರತ ರತ್ನದ ಮೇಲೆ ರಥಯಾತ್ರೆಯ ರಕ್ತದ ಕಲೆ

Update: 2024-02-05 05:26 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಅವರಿಗೆ ಮರಣೋತ್ತರ ಭಾರತ ರತ್ನ ಘೋಷಣೆಯಾದ ಕೆಲವೇ ದಿನಗಳಲ್ಲಿ ಮಾಜಿ ಉಪ ಪ್ರಧಾನಿ ಎಲ್. ಕೆ. ಅಡ್ವಾಣಿಯವರೂ ಭಾರತ ರತ್ನ ಗೌರವಕ್ಕೆ ಪಾತ್ರರಾಗಿದ್ದಾರೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ನೀಡಿ ಅವರನ್ನು ಅಭಿವೃದ್ಧಿಯ ಕಡೆಗೆ ಮುನ್ನಡೆಸಿದ ಹೆಗ್ಗಳಿಕೆ ಕರ್ಪೂರಿಯದ್ದಾಗಿದ್ದರೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಜಾರಿಗೊಳಿಸುವ ಉದ್ದೇಶ ಹೊಂದಿದ್ದ ಮಂಡಲ್ ಆಯೋಗದ ವರದಿಯನ್ನು ವಿರೋಧಿಸುವುದಕ್ಕಾಗಿಯೇ ದೇಶಾದ್ಯಂತ ಕಮಂಡಲ ಯಾತ್ರೆಯನ್ನು ಹಮ್ಮಿಕೊಂಡ ಹೆಗ್ಗಳಿಕೆ ಎಲ್. ಕೆ. ಅಡ್ವಾಣಿಯವರದು. ಅಭಿವೃದ್ಧಿ ರಾಜಕಾರಣದಿಂದ ದೇಶವನ್ನು ಧರ್ಮ ರಾಜಕಾರಣದ ಕಡೆಗೆ ಮುನ್ನಡೆಸಿದ ಹೆಗ್ಗಳಿಕೆಗಾಗಿಯೇ ಅಡ್ವಾಣಿಯವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪರಸ್ಪರ ವಿರೋಧಾಭಾಸ ರಾಜಕೀಯ ನಿಲುವುಗಳ ನಡುವೆಯೂ ಕರ್ಪೂರಿ ಮತ್ತು ಅಡ್ವಾಣಿಯವರನ್ನು ಬೆಸೆದ ‘ನೂಲಿನ ಎಳೆ’ ಜನಸಂಘ. ಬಿಹಾರದಲ್ಲಿ ಕರ್ಪೂರಿ ಜನಸಂಘದ ಬೆಂಬಲದಿಂದ ಅಧಿಕಾರ ಏರಿದರು. ಮುಂದೆ, ಕರ್ಪೂರಿಯವರು ಜಾರಿಗೆ ತರಲು ಯತ್ನಿಸಿದ ಮೀಸಲಾತಿಯನ್ನು ವಿರೋಧಿಸಿ ಜನಸಂಘ ಅವರನ್ನು ಅಧಿಕಾರದಿಂದ ಕೆಳಗಿಳಿಸಿತು. ಅದೇ ಜನಸಂಘದ ರೂಪಾಂತರವಾಗಿರುವ ಬಿಜೆಪಿಯನ್ನು ರಥಯಾತ್ರೆಯ ಮೂಲಕ ಅಧಿಕಾರಕ್ಕೆ ತಂದ ಹೆಗ್ಗಳಿಕೆ ಅಡ್ವಾಣಿಯವರದು. ಆದರೆ ಕೊನೆಗೂ ಪ್ರಧಾನಿಯಾಗುವ ಅವರ ಕನಸು ಈಡೇರಲಿಲ್ಲ. ರಾಮಮಂದಿರದ ಹೆಸರಿನಲ್ಲಿ ಅವರು ನಡೆಸಿದ ಎಲ್ಲ ರಾಜಕೀಯಗಳ ಫಲವನ್ನು ಬಿಜೆಪಿಯೊಳಗೆ ಯಾರ್ಯಾರೋ ಉಂಡರು. ಕಟ್ಟ ಕಡೆಗೆ ಅಡ್ವಾಣಿ ಅವರಿಗೆ ಕೊಡುವುದಕ್ಕೆ ಬಿಜೆಪಿಯ ಬಳಿ ಉಳಿದದ್ದು ಭಾರತ ರತ್ನ ಪ್ರಶಸ್ತಿ ಒಂದೇ. ರಾಷ್ಟ್ರಪತಿ ಸ್ಥಾನವನ್ನು ನೀಡುವ ಅವಕಾಶವಿತ್ತಾದರೂ, ಅದಕ್ಕೆ ಸ್ವತಃ ಪ್ರಧಾನಿ ಮೋದಿಯವರೇ ಅಡ್ಡಗಾಲಾದರು. ರಾಮಮಂದಿರ ನಿರ್ಮಾಣ ಪೂರ್ತಿಗೊಂಡ ಸಂದರ್ಭದಲ್ಲಿ ಅಡ್ವಾಣಿಯ ಅನುಪಸ್ಥಿತಿ ಬಿಜೆಪಿಯೊಳಗೆ ಚರ್ಚೆಗೆ ಕಾರಣವಾದುದರಿಂದ, ಭಾರತ ರತ್ನ ನೀಡುವ ಮೂಲಕ ಅದನ್ನು ಸರಿಪಡಿಸುವ ಪ್ರಯತ್ನ ಮಾಡಿದ್ದಾರೆ ಪ್ರಧಾನಿ ಮೋದಿಯವರು.

ಡಾ. ಅಂಬೇಡ್ಕರ್‌ರಂತಹ ಮಹಾನ್ ನಾಯಕರಿಗೆ ಸಂದ ಭಾರತ ರತ್ನವನ್ನು, ರಥಯಾತ್ರೆಯ ರಾಜಕಾರಣದ ಮೂಲಕ ಅಪಾರ ಸಾವು ನೋವುಗಳಿಗೆ ಕಾರಣರಾದ ಅಡ್ವಾಣಿಗೆ ಕೊಡುವುದು ಎಷ್ಟು ಸರಿ ಎನ್ನುವ ಚರ್ಚೆ ಎಂದೋ ಅರ್ಥಕಳೆದುಕೊಂಡಿದೆ. ಮೊದಲು ಸೌಮ್ಯವಾದಿ ಬಲಪಂಥೀಯರಿಗೆ ಭಾರತ ರತ್ನವನ್ನು ನೀಡಿದ್ದ ಮೋದಿ ನೇತೃತ್ವದ ಸರಕಾರ 2019ರಲ್ಲಿ ಆ ಗೌರವವನ್ನು ಆರೆಸ್ಸೆಸ್‌ನ ಸಕ್ರಿಯ ಕಾರ್ಯಕರ್ತ ನಾನಾಜಿ ದೇಶಮುಖ್ ಅವರಿಗೆ ನೀಡಿತ್ತು. ಈ ಬಾರಿ ತುಸು ಉಗ್ರ ಹಿಂದುತ್ವ ಪ್ರತಿಪಾದಕರಾಗಿದ್ದ ಅಡ್ವಾಣಿಯವರಿಗೆ ನೀಡಿದೆ. ಮುಂದಿನ ದಿನಗಳಲ್ಲಿ ಸಾವರ್ಕರ್ ಕೂಡ ಭಾರತ ರತ್ನಕ್ಕೆ ಪಾತ್ರರಾದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಅಡ್ವಾಣಿಯವರು ಗೃಹ ಸಚಿವರಾಗಿ ಅಥವಾ ಉಪ ಪ್ರಧಾನಿಯಾಗಿ ಈ ದೇಶಕ್ಕೆ ನೀಡಿದ ಕೊಡುಗೆಯ ಬಗ್ಗೆ ಯಾರಿಗೂ ಯಾವ ಸ್ಪಷ್ಟತೆಯೂ ಇಲ್ಲ. ಅಡ್ವಾಣಿಯೆಂದಾಗ ಬಿಜೆಪಿಯ ನಾಯಕರೂ ಸ್ಮರಿಸುವುದು ರಥಯಾತ್ರೆಯನ್ನೇ. ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಬೆನ್ನಿಗೇ ರಾಮಮಂದಿರ ನಿರ್ಮಾಣದ ಹಿಂದಿದ್ದ ಅವರ ಪಾತ್ರವನ್ನು ಬಿಜೆಪಿಯ ಹಿರಿಯ ನಾಯಕರು ಹಾಡಿ ಹೊಗಳಿದ್ದಾರೆ. ಅವರಿಂದ ಪ್ರಧಾನಿ ಹುದ್ದೆಯನ್ನು ಅಕ್ಷರಶಃ ಕಿತ್ತುಕೊಳ್ಳಲಾಗಿತ್ತು. ರಾಷ್ಟ್ರಪತಿ ಹುದ್ದೆಯನ್ನು ನೀಡುವ ಸಂದರ್ಭದಲ್ಲಿ, ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನೇ ಅವರ ವಿರುದ್ಧ ಬಳಸುವಲ್ಲಿ ಪ್ರಧಾನಿ ಮೋದಿಯವರು ಯಶಸ್ವಿಯಾದರು. ಅಡ್ವಾಣಿಗೆ ಬಿಜೆಪಿಯೊಳಗೆ ನಡೆದ ಈ ಅನ್ಯಾಯಗಳ ಬಗ್ಗೆ ಎಲ್ಲ ಹಿರಿಯರಿಗೂ ಅಸಮಾಧಾನಗಳಿವೆ. ಅಡ್ವಾಣಿಯ ಜೊಗೇ ಮೂಲೆಗುಂಪಾದ ಇನ್ನಷ್ಟು ಹಿರಿಯರು ಬಿಜೆಪಿಯೊಳಗಿದ್ದಾರೆ. ಅವರೆಲ್ಲರಿಗೂ ಮುಂದಿನ ದಿನಗಳಲ್ಲಿ ಭಾರತ ರತ್ನ ಎನ್ನುವ ಈ ಸಮಾಧಾನಕರ ಬಹುಮಾನಗಳು ಸಂದಾಯವಾಗುವ ಸಾಧ್ಯತೆಗಳಿವೆ.

ತನ್ನ ರಾಜಕೀಯ ಬದುಕಿನ ಕೊನೆಯ ದಿನಗಳಲ್ಲಿ ಅಡ್ವಾಣಿಯವರು ಭಿನ್ನವಾಗಿ ಮಾತನಾಡತೊಡಗಿದ್ದರು. ಇಂದು ನಾವು ಯಾವ ವಿಷಯವನ್ನು ಗಂಭೀರವಾಗಿ ಚರ್ಚಿಸುತ್ತಿದ್ದೇವೆಯೋ ಅವುಗಳ ಬಗ್ಗೆ ಮೊದಲು ಆತಂಕ ವ್ಯಕ್ತಪಡಿಸಿದವರು ಅಡ್ವಾಣಿಯವರು. ಮೊತ್ತ ಮೊದಲು ಇವಿಎಂ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸಿದ್ದು ಅಡ್ವಾಣಿಯವರು. ಇಂದು ಪ್ರಧಾನಿ ಮೋದಿ ನೇತೃತ್ವದ ‘ಅಚ್ಛೇದಿನ್’ಗೆ ಸ್ಫೂರ್ತಿ ನೀಡಿರುವುದೇ ಅಡ್ವಾಣಿ ನೇತೃತ್ವದ ‘ಭಾರತ ಪ್ರಕಾಶಿಸುತ್ತಿದೆ’ ಎನ್ನುವ ಘೋಷಣೆ. ಇದನ್ನು ನಂಬಿಸುವಲ್ಲಿ ಅಡ್ವಾಣಿ ವಿಫಲರಾದರು, ಮೋದಿಯವರು ಯಶಸ್ವಿಯಾದರು. ಇಷ್ಟೇ ವ್ಯತ್ಯಾಸ. ‘ಭಾರತ ಪ್ರಕಾಶಿಸುತ್ತಿದೆ’ ಮತ್ತು ಅದಕ್ಕೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದ ಆಡಳಿತ ಕಾರಣ ಎಂದು ಪ್ರತಿಪಾದಿಸಿ 2004ರ ಲೋಕಸಭಾ ಚುನಾವಣೆಯನ್ನು ಎದುರಿಸಿ ಅದರಲ್ಲಿ ಅಡ್ವಾಣಿ ವಿಫಲವಾದರು. ಒಂದು ವೇಳೆ 2004ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಗೆದ್ದಿದ್ದರೆ ಅಡ್ವಾಣಿಗೆ ಈ ದೇಶದ ಪ್ರಧಾನಿಯಾಗುವ ಭಾಗ್ಯ ಲಭಿಸುತ್ತಿತ್ತು. ಆದರೆ ಯುಪಿಎ ಅಧಿಕಾರಕ್ಕೇರಿತು. ಅಡ್ವಾಣಿಯ ರಾಜಕೀಯ ಬದುಕು ಅದರೊಂದಿಗೆ ಅವಸಾನವಾಯಿತು. 2004ರ ಲೋಕಸಭಾ ಚುನಾವಣೆಯ ವಿಶೇಷತೆಯೆಂದರೆ ಈ ಸಂದರ್ಭದಲ್ಲಿ ಪೂರ್ಣ ಪ್ರಮಾಣದಲ್ಲಿ ಇವಿಎಂನ್ನು ಬಳಸಿ ಚುನಾವಣೆಯನ್ನು ನಡೆಸಲಾಗಿತ್ತು. ಫಲಿತಾಂಶ ಹೊರ ಬಿದ್ದ ಬೆನ್ನಿಗೇ ಎಲ್. ಕೆ. ಅಡ್ವಾಣಿಯವರು ಪತ್ರಿಕಾ ಗೋಷ್ಠಿಯೊಂದರಲ್ಲಿ ‘‘ಇವಿಎಂನ್ನು ದುರ್ಬಳಕೆ ಮಾಡಿ ಯುಪಿಎ ಅಧಿಕಾರಕ್ಕೇರಿದೆ’’ ಎಂದು ಆರೋಪಿಸಿದ್ದರು. ಇವಿಎಂನ್ನು ತಿರುಚಲು ಸಾಧ್ಯ ಎನ್ನುವ ಶಂಕೆಯನ್ನು ಮೊತ್ತ ಮೊದಲು ವ್ಯಕ್ತಪಡಿಸಿರುವುದು ಬಿಜೆಪಿಯ ನಾಯಕ ಎಲ್. ಕೆ. ಅಡ್ವಾಣಿ. ಇದೀಗ ಕಾಂಗ್ರೆಸ್ ನಾಯಕರು ಕೂಡಾ ಚುನಾವಣಾ ಆಯೋಗದ ಮುಂದೆ ಇವಿಎಂ ವಿರುದ್ಧ ಇದೇ ಆರೋಪವನ್ನು ಮಾಡುತ್ತಿದ್ದಾರೆ.

ಮೋದಿಯವರು ಪ್ರಧಾನಿಯಾಗಿ ಅಧಿಕಾರಕ್ಕೇರಿದ ಕೆಲವೇ ದಿನಗಳಲ್ಲಿ, ‘ಸರ್ವಾಧಿಕಾರ’ದ ಅಪಾಯವನ್ನು ಮನಗಂಡವರು ಅಡ್ವಾಣಿ. ಈ ದೇಶದಲ್ಲಿ ಮತ್ತೊಮ್ಮೆ ತುರ್ತು ಪರಿಸ್ಥಿತಿ ಮರುಕಳಿಸಿದರೆ ಅಚ್ಚರಿಯಿಲ್ಲ ಎಂಬ ಹೇಳಿಕೆಯನ್ನು ಆಂಗ್ಲ ಪತ್ರಿಕೆಯ ಸಂದರ್ಶನದಲ್ಲಿ ನೀಡಿ, ಪ್ರಧಾನಿ ಮೋದಿಯವರಿಗೆ ತೀವ್ರ ಇರಿಸು ಮುರಿಸು ಮಾಡಿದ್ದರು. ಒಂದು ಬಾರಿಯಲ್ಲ, ಎರಡು ಬಾರಿ ಈ ಹೇಳಿಕೆಯನ್ನು ಅವರು ಬೇರೆ ಬೇರೆ ಪತ್ರಿಕೆಗಳಿಗೆ ನೀಡಿದ್ದರು. 2015ರಲ್ಲಿ ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನವೊಂದರಲ್ಲಿ, ಅಟಲ್ ಬಿಹಾರಿ ವಾಜಪೇಯಿಯವರನ್ನು ಕೊಂಡಾಡುತ್ತಾ, ಪ್ರಧಾನಿ ಮೋದಿಯವರನ್ನು ಪರೋಕ್ಷವಾಗಿ ಟೀಕಿಸಿದ್ದರು. ‘‘ನೀವು ವಿನೀತರಾಗಿದ್ದರಷ್ಟೇ ದೇಶವನ್ನು ಆಳಬಹುದು. ಅಹಂಕಾರ ಮತ್ತು ದರ್ಪದಿಂದ ದೇಶವನ್ನು ಆಳಲು ಸಾಧ್ಯವಿಲ್ಲ’’ ಎನ್ನುವ ಹೇಳಿಕೆ ತನ್ನನ್ನು ಮೂಲೆಗುಂಪು ಮಾಡಿದ ಪ್ರಧಾನಿ ಮೋದಿಗೆ ಮಾಡಿದ ತಪರಾಕಿಯಾಗಿತ್ತು. ‘‘ಪಕ್ಷದೊಳಗಿನ ಸರ್ವಾಧಿಕಾರವನ್ನು ನಾನು ವಿರೋಧಿಸುತ್ತೇನೆ. ಸಂಸದೀಯ ಪ್ರಜಾಪ್ರಭುತ್ವ ಜಾರಿ ಮಾಡಿರುವುದು ನೆಹರೂ ಅವರ ಅತಿ ದೊಡ್ಡ ಸಾಧನೆ’’ ಎಂದೂ ಅವರು ಈ ಸಂದರ್ಶನದಲ್ಲಿ ಹೇಳಿದ್ದರು. ಪ್ರಧಾನಿ ಮೋದಿಯವರು ಅಧಿಕಾರಕ್ಕೇರಿದ ಆರಂಭದಲ್ಲಿ ಅಡ್ವಾಣಿ ವಿರೋಧ ಪಕ್ಷದ ನಾಯಕನಂತೆಯೇ ಹೇಳಿಕೆಯನ್ನು ನೀಡಿದ್ದರು. ಆದರೆ ಅವರ ಬಾಯಿಯನ್ನು ಬಳಿಕ ಮುಚ್ಚಿಸಲಾಯಿತು. ರಾಷ್ಟ್ರಪತಿಯಾಗಿ ಅವರನ್ನು ಆಯ್ಕೆ ಮಾಡಿದ್ದೇ ಆದರೆ, ಮೋದಿಯ ಪಾಲಿಗೆ ಮಗ್ಗುಲ ಮುಳ್ಳಾಗಿ ಬಿಡುತ್ತಿದ್ದರು. ಬಾಬರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಯೆನ್ನುವ ನೆಪವನ್ನು ಒಡ್ಡಿ ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯಾಗುವುದರಿಂದ ಅವರನ್ನು ಹೊರಗಿಡಲಾಯಿತು.

2003ರಲ್ಲಿ ಎನ್‌ಡಿಎ ಅಧಿಕಾರಾವಧಿಯಲ್ಲಿ, ಪ್ರಧಾನಿಯಾಗುವ ತನ್ನ ಕನಸು ನನಸಾಗುವುದು ಸಾಧ್ಯವೇ ಇಲ್ಲ ಎನ್ನುವುದು ಮನವರಿಕೆಯಾದಾಗ ರಚ್ಚೆ ಹಿಡಿದು ಉಪಪ್ರಧಾನಿ ಹುದ್ದೆಯನ್ನು ತನ್ನದಾಗಿಸಿಕೊಂಡವರು ಅಡ್ವಾಣಿ. ಪಾಕಿಸ್ತಾನಕ್ಕೆ ಹೋಗಿ ‘‘ಜಿನ್ನಾ ಅವರು ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿ ಮಹಾನ್ ನಾಯಕರಾಗಿದ್ದರು’’ ಎನ್ನುವ ಹೇಳಿಕೆ ನೀಡಿ, ಭಾರತದ ತನ್ನ ಸಹವರ್ತಿಗಳಿಗೆ ಮುಜುಗರವನ್ನು ಉಂಟು ಮಾಡಿದ್ದರು. ಪಕ್ಷದಲ್ಲಿ ಮೋದಿ ತನ್ನ ಸ್ಥಾನವನ್ನು ಯಶಸ್ವಿಯಾಗಿ ಕೈವಶ ಮಾಡಿಕೊಳ್ಳುತ್ತಿರುವುದನ್ನು ಕಂಡ ಅವರು ನಿಧಾನಕ್ಕೆ ಪಕ್ಷದ ಎರಡನೆಯ ಅಟಲ್ ಆಗುವ ವಿಫಲ ಪ್ರಯತ್ನ ನಡೆಸಿದರು. ಇದೀಗ ಅವರಿಗೆ ನೀಡಿದ ಭಾರತ ರತ್ನದಲ್ಲೂ ರಥಯಾತ್ರೆಯ ರಕ್ತದ ಕಲೆಯನ್ನಲ್ಲದೆ, ಇನ್ನೇನನ್ನೂ ಗುರುತಿಸಲು ಭಾರತದ ಜನರಿಗೆ ಸಾಧ್ಯವಾಗುತ್ತಿಲ್ಲ. ಇದು ಅವರ ರಾಜಕೀಯ ಬದುಕಿನ ನಿಜವಾದ ದುರಂತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News