ಅರಣ್ಯ ಭೂಮಿ ಒತ್ತುವರಿ ತೆರವಿಗೆ ದಿಟ್ಟ ಕ್ರಮ ಅಗತ್ಯ

Update: 2024-08-13 05:12 GMT

ಸಾಂದರ್ಭಿಕ ಚಿತ್ರ ( PC: shutterstock.com)

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೇರಳದ ವಯನಾಡ್ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಬೆಳಗಾವಿ ಮತ್ತಿತರ ಕಡೆ ಗುಡ್ಡ ಕುಸಿತದ ಘಟನೆಗಳಿಂದಾಗಿ ಎಚ್ಚೆತ್ತುಕೊಂಡ ಸರಕಾರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅರಣ್ಯ ಭೂಮಿಯ ಒತ್ತುವರಿ ತೆರವುಗೊಳಿಸಲು ಮುಂದಾಗಿರುವುದು ಸೂಕ್ತವಾದ ಕ್ರಮವಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರು ಯಾವುದೇ ಒತ್ತಡ ಬಂದರೂ ಮಣಿಯದೆ ತೆರವು ಮಾಡಿಸುವುದಾಗಿ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಹತ್ತು ಜಿಲ್ಲೆಗಳಲ್ಲಿ ಪಶ್ಚಿಮ ಘಟ್ಟ ಪ್ರದೇಶ ವ್ಯಾಪಿಸಿದೆ. ಈ ಪ್ರದೇಶದ ಎರಡು ಲಕ್ಷಕ್ಕೂ ಅಧಿಕ ಅರಣ್ಯ ಒತ್ತುವರಿಯಾಗಿದೆ ಎಂದು ಅಧಿಕೃತ ದಾಖಲೆಗಳಿಂದ ತಿಳಿದು ಬಂದಿದೆ

ಅರಣ್ಯವನ್ನು ಒತ್ತುವರಿ ಮಾಡಿಕೊಂಡವರು ಬಡ ರೈತರಲ್ಲ. ಶ್ರೀಮಂತರೇ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ತೋಟಗಳನ್ನು, ಅನಧಿಕೃತ ರೆಸಾರ್ಟ್‌ಗಳನ್ನು ಮಾಡಿಕೊಂಡಿದ್ದಾರೆ. ಹಿಂದೆ ಕೊಡಗಿನಲ್ಲಿ ಇಂಥ ಅಕ್ರಮ ಒತ್ತುವರಿಯಿಂದಾಗಿ ಉಂಟಾದ ಅನಾಹುತದ ನಂತರವೂ ಹಿಂದಿನ ಸರಕಾರಗಳು ಅಕ್ರಮ ಭೂಮಿ ಒತ್ತುವರಿಗೆ ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ. ನ್ಯಾಯಾಲಯಗಳಲ್ಲಿರುವ ಪ್ರಕರಣಗಳನ್ನು ನೆಪ ಮಾಡಿಕೊಂಡು ವ್ಯರ್ಥ ಕಾಲ ಹರಣ ಮಾಡಿದ್ದವು. ಈಗ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಇತ್ಯರ್ಥವಾಗದೆ ಇರುವ ಪ್ರಕರಣಗಳ ತ್ವರಿತ ವಿಲೇವಾರಿಗೆ ಅಡ್ವೊಕೇಟ್ ಜನರಲ್ ಅವರ ನೆರವು ಪಡೆದು ಅಕ್ರಮ ಒತ್ತುವರಿ ತೆರವಿಗೆ ಮುಂದಾಗಿರುವುದು ಶ್ಲಾಘನೀಯ ಕ್ರಮವಾಗಿದೆ.

ಸರಕಾರ ಯಾವುದೇ ಒತ್ತಡಕ್ಕೆ ಮಣಿಯದೆ ಅಕ್ರಮ ಒತ್ತುವರಿ ತೆರವು ಗೊಳಿಸಲು ಮುಂದಾಗಬೇಕಾಗಿದೆ. ಇತ್ತೀಚೆಗೆ ನಡೆಸಿರುವ ಸಮೀಕ್ಷೆಯ ಪ್ರಕಾರ ಶಿವಮೊಗ್ಗ ಜಿಲ್ಲೆಯಲ್ಲಿ 80,775 ಎಕರೆ, ಕಾರವಾರ ಜಿಲ್ಲೆಯಲ್ಲಿ 28,308 ಎಕರೆ, ಚಿಕ್ಕ ಮಗಳೂರು ಜಿಲ್ಲೆಯಲ್ಲಿ 25,968 ಎಕರೆ ಹಾಗೂ ಕೊಡಗು ಜಿಲ್ಲೆಯಲ್ಲಿ 6,287 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಭೂಕುಸಿತದಂಥ ದುರಂತ ಸಂಭವಿಸಿದಾಗ ನಿದ್ರೆಯಿಂದ ಎದ್ದೇಳುವ ಅರಣ್ಯ ಇಲಾಖೆ ಮತ್ತೆ ಗಾಢ ನಿದ್ರೆಗೆ ಜಾರುತ್ತದೆ. ಈಗ ವಯನಾಡ್ ಮತ್ತು ಶಿರೂರು ಗುಡ್ಡ ಕುಸಿತದಂಥ ಘಟನೆಗಳು ಸಂಭವಿಸಿದ ನಂತರ ಮತ್ತೆ ಎಚ್ಚೆತ್ತಿದೆ.

ಪಶ್ಚಿಮ ಘಟ್ಟಗಳ ನಿತ್ಯ ಹರಿದ್ವರ್ಣದ ಕಾಡು ಮತ್ತು ಪರಿಸರ ಭಾರತದ ಮಾತ್ರವಲ್ಲ ಇಡೀ ಜಗತ್ತಿನ ಅಮೂಲ್ಯ ಸಂಪತ್ತಾಗಿದೆ. ಇಲ್ಲಿನ ದಟ್ಟ ಅರಣ್ಯ ಹಾಗೂ ಗುಡ್ಡ, ಕಣಿವೆಗಳು ಭಾರತದ ದಕ್ಷಿಣ ಭಾಗದ ಜಲ ಮತ್ತು ವಾಯು ಸಮತೋಲನವನ್ನು ಕಾಪಾಡಿಕೊಂಡು ಬಂದಿವೆ. ಇಂಥ ಅಮೂಲ್ಯ ಪರಿಸರವನ್ನು ಕಾಪಾಡಿಕೊಳ್ಳುವುದು ತುರ್ತು ಅಗತ್ಯವಾಗಿದೆ. ಮನುಷ್ಯರ ದುರಾಸೆಯಿಂದಾಗಿ ಅರಣ್ಯದ ಅತಿಕ್ರಮಣ, ಹೆದ್ದಾರಿ ನಿರ್ಮಾಣ, ಕಲ್ಲು ಮತ್ತು ಮರಳು ಗಣಿಗಾರಿಕೆ, ನದಿ ತಿರುವು ಕಾಮಗಾರಿ ಅವ್ಯಾಹತವಾಗಿ ನಡೆದಿವೆೆ. ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ಶತಮಾನಗಳಿಂದ ಕಾಪಾಡಿಕೊಂಡು ಬಂದ ಅಮೂಲ್ಯ ಕಾಡುಗಳು ನಾಶವಾಗುತ್ತಿವೆ.

ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಯೋಜನೆಗಳಿಂದಾಗಿ ಅತಿವೃಷ್ಟಿ, ಭೂ ಕುಸಿತ ವ್ಯಾಪಕವಾಗಿ ಮರುಕಳಿಸುತ್ತಲೇ ಇವೆ. ಈ ನಿಟ್ಟಿನಲ್ಲಿ ದಿಟ್ಟ ಕ್ರಮಕ್ಕೆ ಮುಂದಾಗಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಪಶ್ಚಿಮ ಘಟ್ಟಗಳನ್ನು ನಾವು ಕಾಪಾಡದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ. ಅವರ ಈ ಕಳಕಳಿ ಶೀಘ್ರವಾಗಿ ಕಾರ್ಯಗತಗೊಳ್ಳಬೇಕಾಗಿದೆ.

ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೊಡಗು ಜಿಲ್ಲೆಯನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಅಲ್ಲಿನ ಜನಸಂಖ್ಯೆ 5.60 ಲಕ್ಷದಷ್ಟಿದೆ.ಆದರೆ ಈ ಜಿಲ್ಲೆಗೆ ಪ್ರವಾಸಕ್ಕೆ ಬರುವವರ ಸಂಖ್ಯೆ ಕಳೆದ ವರ್ಷ 43 ಲಕ್ಷದಷ್ಟಿತ್ತು. ಪರಿಸರದ ದೃಷ್ಟಿಯಿಂದ ಸೂಕ್ಷ್ಮವಾಗಿರುವ ಈ ಪ್ರದೇಶದಲ್ಲಿ ನೂರಾರು ರೆಸಾರ್ಟ್‌ಗಳು, ಹೊಟೇಲ್‌ಗಳು ತಲೆ ಎತ್ತಿವೆ. ಸರಕಾರದ ಪರವಾನಿಗೆ ಇಲ್ಲದೆ ಇವು ತಲೆಯೆತ್ತಲು ಸಾಧ್ಯವಿಲ್ಲ. ಈ ಬಗ್ಗೆ ಸಚಿವ ಖಂಡ್ರೆಯವರು ಗಮನಿಸಬೇಕಾಗಿದೆ. ಸರಕಾರದ ಆದ್ಯತೆ ಬರೀ ಪ್ರವಾಸೋದ್ಯಮವಾಗಿರಬಾರದು. ಪಶ್ಚಿಮ ಘಟ್ಟಗಳ ಸೂಕ್ಷ್ಮ ಪ್ರದೇಶವನ್ನು ಕಾಪಾಡುವುದು ಸರಕಾರದ ಹೊಣೆಗಾರಿಕೆಯಾಗಿದೆ. ಪಶ್ಚಿಮ ಘಟ್ಟಗಳ ಸೂಕ್ಷ್ಮ ಪ್ರದೇಶದ ರಕ್ಷಣೆಗೆ ಮಾಧವ ಗಾಡ್ಗೀಳ್ ಮತ್ತು ಕೆ. ಕಸ್ತೂರಿ ರಂಗನ್ ಸಮಿತಿಗಳು ನೀಡಿರುವ ವರದಿಗಳನ್ನು ಸರಕಾರ ಗಮನಿಸಬೇಕಾಗಿದೆ.

ಆದರೆ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಯ ಶಿಫಾರಸುಗಳಿಗೆ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ರಾಜ್ಯ ಸರಕಾರಗಳೇ ಅಡ್ಡಗಾಲು ಹಾಕುತ್ತ ಬಂದಿವೆ. ಗಣಿಗಾರಿಕೆ ಹಿತಾಸಕ್ತಿಯ ಪರವಾಗಿರುವ ಪ್ರಭಾವಿ ರಾಜಕಾರಣಿಗಳ ಒತ್ತಡದಿಂದಾಗಿ ಈ ವರೆಗೆ ಗಣಿಗಾರಿಕೆಯನ್ನು ನಿರ್ಬಂಧಿಸಲು ಸಾಧ್ಯವಾಗಿಲ್ಲ.ತಜ್ಞರ ಸಲಹೆಗಳನ್ನು ಸರಕಾರಗಳು ಕಡೆಗಣಿಸುತ್ತ ಬಂದಿರುವುದರಿಂದಾಗಿ ಭಾರೀ ಬೆಲೆ ತೆರುವ ಅಪಾಯ ಎದುರಾಗಿದೆ.

ನಿಜ. ಈ ವರದಿಗಳಿಂದ ಶತಮಾನಗಳಿಂದ ಇಲ್ಲಿ ನೆಲೆಸಿರುವ ಮೂಲ ನಿವಾಸಿಗಳಿಗೆ, ಸ್ಥಳೀಯರಿಗೆ ತೊಂದರೆಯಾಗಬಹುದು. ಆದರೆ ಅವರ ಬೇಡಿಕೆಯನ್ನು ಪರಿಶೀಲಿಸಿ ಸರಕಾರ ಈ ಸೂಕ್ಷ್ಮ ಪರಿಸರವನ್ನು ಉಳಿಸಿಕೊಳ್ಳಬೇಕಾಗಿದೆ. ಇಲ್ಲಿ ಮುಂಚಿನಿಂದ ನೆಲೆಸಿರುವ ಜನರೇ ಪಶ್ಚಿಮ ಘಟ್ಟಗಳ ಅರಣ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಆದರೆ ಪರಿಸರಕ್ಕೆ ಅಪಾಯ ಎದುರಾಗಿರುವುದು ಇವರಿಂದಲ್ಲ. ದುಡ್ಡು ಮಾಡುವ ದಂಧೆಯಾಗಿರುವ ರೆಸಾರ್ಟ್‌ಗಳು, ರೆಸ್ಟೋರೆಂಟ್‌ಗಳೇ ಇಲ್ಲಿನ ಪರಿಸರ ನಾಶಕ್ಕೆ ಕಾರಣ ಎಂದರೆ ತಪ್ಪಿಲ್ಲ.

ಪಶ್ಚಿಮ ಘಟ್ಟಗಳ ಸ್ಥಳೀಯ ಮೂಲನಿವಾಸಿಗಳ ರಕ್ಷಣೆ ಮತ್ತು ಪರಿಸರದ ಹಿತವನ್ನು ಕಾಪಾಡುವ ಹೊಸ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಒತ್ತುವರಿ ತೆರವುಗೊಳಿಸುವ ಸರಕಾರದ ತೀರ್ಮಾನ ಸಕಾರಾತ್ಮಕ ದಿಟ್ಟ ಹೆಜ್ಜೆಯಾಗಿದೆ. ಅಧಿಕಾರದಲ್ಲಿದ್ದವರು ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸಿದರೆ ಮಾತ್ರ ಪಶ್ಚಿಮ ಘಟ್ಟಗಳ ಪರಿಸರ ಉಳಿಸಲು ಸಾಧ್ಯವಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News