ವಾಪಸ್ ತೆಗೆದುಕೊಳ್ಳಬೇಕಾದುದು ಶಾಲೆಗಳ ಬಹಿಷ್ಕಾರವನ್ನು!

Update: 2023-12-25 03:36 GMT

ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಕೆಲ ಹಿಜಾಬ್ ಧಾರಿ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಪ್ರವೇಶ ನಿರಾಕರಿಸಿರುವುದು (ಫೈಲ್ ಚಿತ್ರ)

‘‘ಶಾಲೆ, ಕಾಲೇಜುಗಳಲ್ಲಿ ಹಿಜಾಬ್ ನಿಷೇಧವನ್ನು ವಾಪಸ್ ತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ’’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯನ್ನು ಮುಂದಿಟ್ಟುಕೊಂಡು, ರಾಜ್ಯದ ಅಭಿವೃದ್ಧಿ ಕೇಂದ್ರಿತ ರಾಜಕಾರಣವನ್ನು ದಿಕ್ಕು ತಪ್ಪಿಸಲು ಬಿಜೆಪಿ ಯತ್ನಿಸುತ್ತಿದೆ. ಸರಕಾರದ ಗ್ಯಾರಂಟಿಗಳಾಗಿರುವ ಗೃಹ ಲಕ್ಷಿ, ಶಕ್ತಿ ಯೋಜನೆ, ಗೃಹ ಜ್ಯೋತಿ ಮೊದಲಾದ ಕಾರ್ಯಕ್ರಮಗಳ ಸಾಧಕಬಾಧಕಗಳನ್ನು ಮುಂದಿಟ್ಟುಕೊಂಡು ಚರ್ಚೆ ನಡೆಸಬೇಕಾಗಿದ್ದ ವಿರೋಧ ಪಕ್ಷ ಎಲ್ಲ ಬಿಟ್ಟು ಮತ್ತೆ ವಿದ್ಯಾರ್ಥಿನಿಯ ಹಿಜಾಬ್‌ಗೆ ಜೋತು ಬಿದ್ದಿದೆ. ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನಿಂದ ಬಿಜೆಪಿ ಪಾಠ ಕಲಿತಂತಿಲ್ಲ. ಹಿಜಾಬ್‌ನ ಹೆಸರಿನಲ್ಲಿ ಸಾವಿರಾರು ವಿದ್ಯಾರ್ಥಿನಿಯರ ಶೈಕ್ಷಣಿಕ ಬದುಕನ್ನು ಹಾಳುಗೆಡಹಿದ್ದಕ್ಕಾಗಿ ನಾಡಿನ ಜನತೆಯ ಶಾಪಕ್ಕೀಡಾಗಿರುವ ಬಿಜೆಪಿ, ಇದೀಗ ಮತ್ತೆ ಅದೇ ಹಿಜಾಬ್‌ಗೆ ನೇಣು ಹಾಕಿಕೊಳ್ಳಲು ಮುಂದಾಗಿರುವುದು, ಅದರ ರಾಜಕೀಯ ದಿವಾಳಿತನವನ್ನು ಎತ್ತಿ ತೋರಿಸುತ್ತಿದೆ.

ಇಷ್ಟಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಯಲ್ಲೇ ದೋಷವಿದೆ. ಅವರು ವಾಪಸ್ ತೆಗೆಯಬೇಕಾಗಿರುವುದು ಹಿಜಾಬ್ ಮೇಲಿನ ನಿಷೇಧವನ್ನಲ್ಲ. ಸರಕಾರಿ ಶಾಲಾ ಕಾಲೇಜುಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಹಾಕಿರುವ ಬಹಿಷ್ಕಾರವನ್ನು ವಾಪಸ್ ತೆಗೆದುಕೊಳ್ಳಲಿದ್ದೇನೆ ಎಂದು ಅವರು ಹೇಳಿಕೆ ನೀಡಬೇಕಾಗಿತ್ತು. ಹಿಜಾಬ್ ಇಲ್ಲಿ ನೆಪ ಮಾತ್ರ. ಬಿಜೆಪಿ ಸರಕಾರ ತನ್ನ ಅಧಿಕಾರಾವಧಿಯಲ್ಲಿ ಶಾಲಾ ಕಾಲೇಜುಗಳಲ್ಲಿ ನಿಷೇಧಿಸಿದ್ದು ಹಿಜಾಬನ್ನು ಅಲ್ಲ, ಬದಲಿಗೆ ಮುಸ್ಲಿಮ್ ವಿದ್ಯಾರ್ಥಿನಿಯರ ಕಲಿಕೆಯ ಹಕ್ಕುಗಳನ್ನು. ಕೊರೋನ, ಲಾಕ್‌ಡೌನ್‌ನಿಂದಾಗಿ ಇಡೀ ಶಿಕ್ಷಣ ಕ್ಷೇತ್ರವೇ ಬುಡಮೇಲಾಗಿ ಬಿದ್ದಿತ್ತು. ಆಗ ಬಿಜೆಪಿ ನೇತೃತ್ವದ ಸರಕಾರ ಮಾಡಬೇಕಾಗಿದ್ದ ಮೊತ್ತ ಮೊದಲ ಕೆಲಸ, ಶಾಲೆಗಳನ್ನು ತೊರೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಮರಳಿ ಶಾಲೆಗೆ ಕರೆ ತರುವ ಕೆಲಸ. ಅದಕ್ಕಾಗಿ ಸರಕಾರ ತಕ್ಷಣ ಯೋಜನೆಗಳನ್ನು ರೂಪಿಸಬೇಕಾಗಿತ್ತು. ಈ ಸಂಬಂಧ ರಾಜ್ಯ ಹೈಕೋರ್ಟ್ ಕೂಡ ಅಂದಿನ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ವಿಪರ್ಯಾಸವೆಂದರೆ, ಸರಕಾರ ಶಾಲೆ ತೊರೆದ ವಿದ್ಯಾರ್ಥಿಗಳನ್ನು ಮರಳಿ ತರುವುದರ ಬದಲು, ಶಾಲೆಗೆ ಬಂದ ವಿದ್ಯಾರ್ಥಿನಿಯರನ್ನು ಧಿರಿಸಿನ ಆಧಾರದಲ್ಲಿ ವಿಭಜಿಸಿ, ಒಂದು ಧರ್ಮದ ವಿದ್ಯಾರ್ಥಿನಿಯರನ್ನು ಶಾಲೆಯಿಂದ ಹೊರ ಹಾಕಿತು. ಇಲ್ಲಿ ಸಮವಸ್ತ್ರ ನೆಪ ಮಾತ್ರವಾಗಿತ್ತು. ಸರಕಾರಿ ಶಾಲೆಗಳಿಂದ ನಿರ್ದಿಷ್ಟ ಸಮುದಾಯದ ವಿದ್ಯಾರ್ಥಿನಿಯರಿಗೆ ಬಹಿಷ್ಕಾರ ಹಾಕುವ ಏಕೈಕ ಉದ್ದೇಶವನ್ನು ಸರಕಾರ ಹೊಂದಿತ್ತು ಮತ್ತು ಸರಕಾರದ ಈ ದುರುದ್ದೇಶಕ್ಕೆ ಶಾಲೆ ಕಾಲೇಜುಗಳಲ್ಲಿರುವ ಕೋಮು ವಿಷ ಉಂಡು ಬೆಳೆದಿದ್ದ ಉಪನ್ಯಾಸಕರೂ ಅತ್ಯುತ್ಸಾಹದಿಂದ ಕೈಜೋಡಿಸಿ ಪ್ರಧಾನಿ ಮೋದಿಯವರ ‘ಭೇಟಿ ಪಢಾವೋ’ ಘೋಷಣೆಯನ್ನು ‘ಅರ್ಥಪೂರ್ಣ’ಗೊಳಿಸಿದರು. ಕಳೆದ ಐದು ದಶಕಗಳಿಂದ ಶೋಷಿತ ಸಮುದಾಯದ ವಿದ್ಯಾರ್ಥಿನಿಯರನ್ನು ಶಾಲೆಗೆ ಸೇರಿಸುವುದಕ್ಕಾಗಿ ಕೋಟ್ಯಂತರ ರೂಪಾಯಿಯನ್ನು ಸರಕಾರ ವಿವಿಧ ಆಂದೋಲನಗಳಿಗಾಗಿ ವ್ಯಯ ಮಾಡಿದೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸರಕಾರ, ವಿದ್ಯಾರ್ಥಿನಿಯರನ್ನು ಶಾಲೆಯಿಂದ ಹೊರ ಹಾಕುವುದಕ್ಕೊಂದು ಯೋಜನೆಯನ್ನು ರೂಪಿಸಿತು. ಅದಕ್ಕೆ ಸಮವಸ್ತ್ರವನ್ನು ನೆಪವನ್ನಾಗಿಸಿತು.

ಇಷ್ಟಕ್ಕೂ ‘ಸಮವಸ್ತ್ರ’ ಎಂದರೆ ಏನು? ಅದಕ್ಕೊಂದು ಸ್ಪಷ್ಟ ವ್ಯಾಖ್ಯಾನ ಸರಕಾರಿ ಶಾಲೆಗಳಲ್ಲಿ ಇವೆಯೆ? ಒಂದೇ ಬಣ್ಣದ ಬಟ್ಟೆಯನ್ನು ಧರಿಸುವುದು ಸಮವಸ್ತ್ರ ಎಂದಾದರೆ ಹಿಜಾಬ್‌ನಿಂದ ಸಮವಸ್ತ್ರಕ್ಕೆ ಯಾವ ರೀತಿಯಲ್ಲಿ ಧಕ್ಕೆಯಾಯಿತು? ನಿರ್ದಿಷ್ಟ ಬಣ್ಣದ ಬಟ್ಟೆಗಳನ್ನು ಕೆಲವರು ಚೂಡಿದಾರ್, ಸ್ಕರ್ಟ್ ಮೊದಲಾದ ಬಗೆಯಲ್ಲಿ ತಮಗೆ ಬೇಕಾದಂತೆ ಹೊಲಿಸಿ ಧರಿಸಿಕೊಂಡು ಬರುತ್ತಾರೆ. ಇದೇ ಸಂದರ್ಭದಲ್ಲಿ ಸಮವಸ್ತ್ರದ ಜೊತೆಗೆ ಶಾಲನ್ನೂ ವಿದ್ಯಾರ್ಥಿನಿಯರಿಗೆ ನೀಡುತ್ತಾರೆ. ಅವುಗಳನ್ನು ಕೆಲವರು ಎದೆಗೆ ಹೊದ್ದುಕೊಂಡರೆ, ಕೆಲವರು ಹೆಗಲಿಗೆ ಹಾಕಿಕೊಳ್ಳುತ್ತಾರೆ. ಹಲವರು ತಲೆಯನ್ನು ಮುಚ್ಚಲು ಬಳಸುತ್ತಾರೆ. ಎದೆ ಭಾಗಕ್ಕೆ, ಹೆಗಲಿಗೆ ಹೊದಿಸಿದ ಸಮವಸ್ತ್ರದ ಬಣ್ಣದ ಶಾಲನ್ನು ತಲೆಗೆ ಹೊದ್ದಾಗ ಮಾತ್ರ, ಬಣ್ಣ ಗೆಡುವುದು ಹೇಗೆ? ಒಂದು ಕಾಲವಿತ್ತು. ಉಡುವುದಕ್ಕೆ ಸರಿಯಾದ ಬಟ್ಟೆಯೇ ಇಲ್ಲ ಎಂದು ಶಾಲೆಗೆ ಕಾಲಿಡದ ಲಕ್ಷಾಂತರ ಹೆಣ್ಣು ಮಕ್ಕಳು ನಮ್ಮ ನಾಡಿನಲ್ಲಿದ್ದರು.ಅವರನ್ನೆಲ್ಲ ಶಾಲೆಗೆ ಕರೆತರುವ ಉದ್ದೇಶದಿಂದ, ಸರಕಾರವೇ ಉಚಿತವಾಗಿ ಸಮವಸ್ತ್ರವನ್ನು ಹಂಚಿತು. ಆದರೆ ಇಂದು ಮೈತುಂಬಾ ಬಟ್ಟೆ ತೊಟ್ಟುಕೊಂಡು ಬಂದಿದ್ದಾರೆ ಎನ್ನುವ ಕಾರಣಕ್ಕಾಗಿಯೇ ವಿದ್ಯಾರ್ಥಿನಿಯರನ್ನು ಶಾಲೆಯಿಂದ ಹೊರ ಹಾಕಲಾಗುತ್ತಿದೆ. ಈ ಮೂಲಕ ಒಂದು ರಾಜ್ಯದ ಶೈಕ್ಷಣಿಕ ಪ್ರಗತಿಯನ್ನು ಮುಂದಕ್ಕೆ ಕೊಂಡೊಯ್ಯುವ ಬದಲು ಹಿಂದಕ್ಕೆ ಎಳೆಯಲು ಮುಂದಾಗಿದೆ. ಹಾಗೆ ಹಿಂದಕ್ಕೆ ಎಳೆದ ಶಿಕ್ಷಣದ ರಥವನ್ನು ಮತ್ತೆ ಮುಂದಕ್ಕೆ ಎಳೆಯಲು ಸಿದ್ದರಾಮಯ್ಯ ಸರಕಾರ ಮುಂದಾಗಿದ್ದರೆ ಅದಕ್ಕೆ ಈ ನಾಡಿನ ಜನರೆಲ್ಲ ಕೈ ಜೋಡಿಸುವುದು ಅತ್ಯಗತ್ಯವಾಗಿದೆ.

ಸಮವಸ್ತ್ರವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳುವ ಒಂದೇ ಒಂದು ಕ್ಷೇತ್ರ ಸೇನೆ. ಇಂದು ಭಾರತದ ಸೇನೆಯಲ್ಲಿ ಸಿಖ್ಖರಿಗೆ ತಲೆವಸ್ತ್ರವನ್ನು ಧರಿಸುವ ಅಧಿಕಾರವಿದೆ. ಸಿಖ್ಖರು ತಲೆವಸ್ತ್ರ ಧರಿಸುವುದರಿಂದ ಸೇನೆಯ ಸಮವಸ್ತ್ರಕ್ಕೆ ಯಾವ ಧಕ್ಕೆಯೂ ಆಗುವುದಿಲ್ಲ ಎಂದಾದರೆ, ಶಾಲೆಗಳಲ್ಲಿ ವಿದ್ಯಾರ್ಥಿನಿಯರು ಧರಿಸುವ ಶಿರವಸ್ತ್ರದಿಂದಾಗಿ ಶಾಲೆಯ ಸಮವಸ್ತ್ರಕ್ಕೆ ಧಕ್ಕೆಯಾಗುವುದು ಹೇಗೆ ಸಾಧ್ಯ? ಇಂದು ಸರಕಾರಿ ಶಾಲೆ, ಕಾಲೇಜುಗಳು ಉಪನ್ಯಾಸಕರ ಕೊರತೆ, ಮೂಲಭೂತ ಸೌಕರ್ಯಗಳ ಕೊರತೆಗಳಿಂದ ನರಳುತ್ತಿವೆ. ಈ ಕಾರಣದಿಂದ ಸರಕಾರಿ ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆಯೇ ಇಳಿಮುಖವಾಗುತ್ತಿದೆ. ಇಂತಹ ಹೊತ್ತಿನಲ್ಲಿ ಸರಕಾರಿ ಶಾಲೆ, ಕಾಲೇಜುಗಳಲ್ಲಿ ಸೇನೆಗಿಂತಲೂ ಕಠಿಣತರವಾದ ಸಮವಸ್ತ್ರವನ್ನು ಜಾರಿಗೊಳಿಸಲು ಹೊರಡುವುದೆಂದರೆ ‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ’ ಧರಿಸಿದಂತೆ. ಸರಕಾರಿ ಶಾಲೆ, ಕಾಲೇಜುಗಳಲ್ಲಿರುವ ಶೌಚಾಲಯ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಗಳಂತಹ ಮೂಲಭೂತ ಸಮಸ್ಯೆಗಳನ್ನು ಬದಿಗಿಟ್ಟು ಸಮವಸ್ತ್ರವನ್ನೇ ಸಮಸ್ಯೆಯಾಗಿಸಲು ಹೊರಟಿರುವುದು ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಅವರ ಧರ್ಮದ ಕಾರಣಕ್ಕಾಗಿ ಶಾಲೆಗಳಿಂದ ಬಹಿಷ್ಕರಿಸಲು. ಸಾರ್ವಜನಿಕ ಸ್ಥಳಗಳಲ್ಲಿ, ಜಾತ್ರೆಗಳಲ್ಲಿ, ದೇವಸ್ಥಾನಗಳಲ್ಲಿ, ಶಾಲೆಗಳಲ್ಲಿ ಜಾತಿಯ ಕಾರಣಕ್ಕಾಗಿ ಬಹಿಷ್ಕಾರವನ್ನು ವಿಧಿಸಿದರೆ ಅದು ಸಾರ್ವಜನಿಕ ಚರ್ಚೆಯ ವಿಷಯವಾಗುತ್ತದೆ. ಇದೇ ಸಂದರ್ಭದಲ್ಲಿ ಶಾಲೆಗಳಲ್ಲಿ ಕಲಿಯಲು ಬಂದ ಹೆಣ್ಣು ಮಕ್ಕಳಿಗೆ ಅವರ ಧರ್ಮವನ್ನು ನೆಪಮಾಡಿಕೊಂಡು ಬಹಿಷ್ಕಾರ ಹೇರುವುದು ಅಮಾನವೀಯವಲ್ಲವೆ? ಇದು ಮಹಿಳೆಯರನ್ನು ಸಬಲೀಕರಣಗೊಳಿಸಲು ರೂಪಿಸಿರುವ ಯೋಜನೆಗಳಿಗೆ ಬಗೆಯುತ್ತಿರುವ ದ್ರೋಹವಲ್ಲವೆ? ಸಿದ್ದರಾಮಯ್ಯ ವಾಪಸ್ ತೆಗೆಯಬೇಕಾಗಿರುವುದು ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಸಮವಸ್ತ್ರದ ನೆಪದಲ್ಲಿ ಹಾಕಿರುವ ಬಹಿಷ್ಕಾರವನ್ನು. ಈ ಬಹಿಷ್ಕಾರವನ್ನು ಹಿಂದೆಗೆದು, ‘ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ’ ಎನ್ನುವ ಮಾತನ್ನು ಸಿದ್ದರಾಮಯ್ಯ ಸರಕಾರ ನಿಜ ಮಾಡಿ ತೋರಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News