ಧ್ಯಾನ ಪ್ರಧಾನಿಯ ಮಾನಸಿಕ ಸ್ಥಿಮಿತವನ್ನು ಮರಳಿಸೀತೆ?

Update: 2024-05-31 04:38 GMT

photo: X/Narendramodi

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಳೆದ ಬಾರಿಯಂತೆಯೇ ಈ ಬಾರಿಯೂ ಮೋದಿ ಚುನಾವಣಾ ಪ್ರಚಾರದ ಕೊನೆಯಲ್ಲಿ ಧ್ಯಾನಸ್ಥರಾಗಲು ಮುಂದಾಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯ ಪ್ರಚಾರ ಮುಗಿದದ್ದೇ ಕೇದಾರನಾಥ ಗುಹೆಯಲ್ಲಿ ತಮ್ಮ ಕ್ಯಾಮರಾಮೆನ್‌ಗಳ ಜೊತೆಗೆ ತೆರಳಿದ್ದರು. ಈ ಬಾರಿ ತಮ್ಮ ಕ್ಯಾಮರಾಮೆನ್‌ಗಳು ಮತ್ತು ಮಾಧ್ಯಮ ಮಿತ್ರರ ಜೊತೆಗೆ ಕನ್ಯಾಕುಮಾರಿಗೆ ತೆರಳಿದ್ದಾರೆ. ಚುನಾವಣೆ ಘೋಷಣೆಗೆ ಮುಂಚೆ ದ್ವಾರಕೆಯಲ್ಲಿ ನೀರಲ್ಲಿ ಮುಳುಗಿ ಧ್ಯಾನದ ಪ್ರಹಸನ ನಡೆಸಿದ್ದರು. ಇದೀಗ ಕನ್ಯಾಕುಮಾರಿಯಲ್ಲಿ ಅದರ ಸಮಾರೋಪವನ್ನು ಹಮ್ಮಿಕೊಂಡಂತಿದೆ. ಒಟ್ಟಿನಲ್ಲಿ ಇದು ‘ಚುನಾವಣಾ ಧ್ಯಾನ’ ಎನ್ನುವುದರ ಕುರಿತಂತೆ ಯಾರಿಗೂ ಅನುಮಾನವಿದ್ದಂತಿಲ್ಲ. ಇಷ್ಟಕ್ಕೂ, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹಿಂದೂ-ಮುಸ್ಲಿಮ್ ಎಂದು ತನ್ನ ಭಾಷಣದುದ್ದಕ್ಕೂ ದ್ವೇಷ, ಅಸೂಯೆಯನ್ನೇ ಹಂಚಿದ್ದ ಪ್ರಧಾನಿ ಮೋದಿಗೆ ಧ್ಯಾನದ ಅವಶ್ಯಕತೆಯಂತೂ ಇದೆ. ಚುನಾವಣೆಯ ಕೊನೆಯ ಹಂತದಲ್ಲಿ ಅವರ ಮಾತುಗಳು ಭಾರೀ ಟೀಕೆ, ವ್ಯಂಗ್ಯ ತಮಾಷೆಗಳಿಗೆ ಗುರಿಯಾಗಿದ್ದವು. ತನ್ನನ್ನು ತಾನೇ ‘ದೇವರ ಅಂಶ’ವೆಂದು ಅವರು ಘೋಷಿಸಿಕೊಂಡರು. ಮಹಾತ್ಮಾಗಾಂಧಿಯ ಬಗ್ಗೆ ಹಗುರವಾಗಿ ಮಾತನಾಡಿದರು. ಪ್ರಧಾನಿ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ ಎಂದು ವಿರೋಧ ಪಕ್ಷಗಳ ನಾಯಕರು ಟೀಕಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶಗಳು ದೊರಕುವುದಿಲ್ಲ ಎನ್ನುವುದು ಮನವರಿಕೆಯಾದಂತೆಯೇ ಪ್ರಧಾನಿ ಮೋದಿ ಮಾನಸಿಕವಾಗಿ ಕುಗ್ಗಿ ಹೋಗಿರುವುದು ಎದ್ದು ಕಾಣುತ್ತಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿಯ ಧ್ಯಾನದಿಂದ ಅವರ ಮನಸ್ಸು ಮತ್ತೆ ಸ್ಥಿಮಿತಕ್ಕೆ ಬರಲಿ ಎನ್ನುವುದು ದೇಶದ ಜನತೆಯ ನಿರೀಕ್ಷೆಯಾಗಿದೆ.

ಅಧ್ಯಾತ್ಮ, ಧ್ಯಾನ ಪ್ರಾಚೀನ ಭಾರತದ ಹಿರಿಮೆ. ಧ್ಯಾನದ ಮೂಲಕ ಬುದ್ಧನಿಂದ ವಿವೇಕಾನಂದರವರೆಗೆ ಹಲವು ಮಹನೀಯರು ಮಹತ್ತಾದುದನ್ನು ಸಾಧಿಸಿದ್ದಾರೆ. ಹಲವು ಸಾಧು ಸಂತರು ಧ್ಯಾನದ ವಿವಿಧ ಪ್ರಕಾರಗಳನ್ನು ಭಾರತಕ್ಕಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಪಸರಿಸಿದ್ದಾರೆ. ಧ್ಯಾನದ ಮುಂದುವರಿದ ಪ್ರಕಾರವಾಗಿ ಯೋಗವನ್ನು ಗುರುತಿಸಲಾಗುತ್ತದೆ. ಮನಸ್ಸು ಮತ್ತು ದೇಹದ ನಡುವೆ ಸಮನ್ವಯವನ್ನು ಸಾಧಿಸಲು ಇದನ್ನು ಬಳಸಲಾಗುತ್ತದೆ. ಇಂದು ವಿಶ್ವವೇ ಯೋಗದಂತಹ ಧ್ಯಾನದ ಕುರಿತು ಆಸಕ್ತವಾಗಿದೆ. ವಿಪರ್ಯಾಸವೆಂದರೆ, ಧ್ಯಾನದ ಮಹತ್ವವನ್ನು ವಿಶ್ವಕ್ಕೆ ತಿಳಿಸಿಕೊಟ್ಟ ಮಹಾತ್ಮರಿಗೆ ಅವಮಾನಿಸುವಂತೆ ವರ್ತಮಾನದಲ್ಲಿ ಧ್ಯಾನದ ವಿಡಂಬನೆ ಭಾರತದಲ್ಲೇ ನಡೆಯುತ್ತಿದೆ. ಇಂದು ಧ್ಯಾನದ ಹೆಸರಿನಲ್ಲಿ ಸ್ವಯಂಘೋಷಿತ ಬಾಬಾಗಳು, ಸ್ವಾಮೀಜಿಗಳು, ಸತ್ಸಂಗಿಗಳು ಹುಟ್ಟಿದ್ದಾರೆ. ಧ್ಯಾನ ಯಾವುದೇ ಬಂಡವಾಳವಿಲ್ಲದ ಬೃಹತ್ ಉದ್ಯಮವಾಗಿ ಭಾರತದಲ್ಲಿ ಬೆಳೆದಿದೆ. ಸ್ವಯಂಘೋಷಿತ ಬಾಬಾಗಳು ಧ್ಯಾನವನ್ನು ಒಂದು ಉತ್ಪನ್ನವಾಗಿ ಮಾರುಕಟ್ಟೆಗೆ ಬಿಟ್ಟು ಅದರಿಂದ ಕೋಟ್ಯಂತರ ರೂಪಾಯಿಯನ್ನು ಸಂಪಾದಿಸಿದ್ದಾರೆ. ಇದೇ ಸಂದರ್ಭದಲ್ಲಿ ಈ ಧ್ಯಾನ ಕನಿಷ್ಠ ಅವರ ವೈಯಕ್ತಿಕ ಬದುಕಿನಲ್ಲಾದರೂ ಮಾರ್ಪಾಡನ್ನು ತಂದಿದೆಯೇ ಎಂದು ಅವಲೋಕಿಸಿದರೆ ನಿರಾಸೆಯಾಗುತ್ತದೆ. ಯಾಕೆಂದರೆ ಈ ಧ್ಯಾನದ ನೇತೃತ್ವ ವಹಿಸಿದ ಬಹುತೇಕರು ಬೇರೆ ಬೇರೆ ಕಾರಣಗಳಿಗಾಗಿ ಜೈಲು ಪಾಲಾಗುತ್ತಿದ್ದಾರೆ.ನ್ಯಾಯಾಲಯದ ಕಟಕಟೆಯಲ್ಲಿ ಆರೋಪಿಗಳಾಗಿ ನಿಂತಿದ್ದಾರೆ. ಒಂದು ಕಾಲದಲ್ಲಿ ಬುದ್ಧ, ವಿವೇಕಾನಂದರಂಥವರು ಧ್ಯಾನದ ಪ್ರತಿನಿಧಿಗಳಾಗಿದ್ದರೆ ಇಂದು ಈ ಕಪಟ ಬಾಬಾಗಳು ಧ್ಯಾನವನ್ನು ಮಾರುಕಟ್ಟೆಯ ವಸ್ತುವಾಗಿಸಿ ತಮಾಷೆಗೀಡು ಮಾಡಿದ್ದಾರೆ. ಆ ಮೂಲಕ ಭಾರತದ ಪ್ರಾಚೀನ ಸಂತರಿಗೆ, ಋಷಿ ಮುನಿಗಳಿಗೆ ಅವಮಾನ ಮಾಡುತ್ತಿದ್ದಾರೆ.

ಯೋಗ, ಧ್ಯಾನದ ಹೆಸರಿನಲ್ಲಿ ಸ್ವಯಂಘೋಷಿತ ಬಾಬಾ ರಾಮ್‌ದೇವ್ ಕೋಟ್ಯಂತರ ರೂಪಾಯಿಯನ್ನು ಸಂಪಾದಿಸಿದರು. ಯೋಗದಿಂದ ಸರ್ವರೋಗಗಳು ನಿವಾರಣೆಯಾಗುತ್ತದೆ ಎಂದು ಹೇಳುತ್ತಾ ಜನಸಾಮಾನ್ಯರನ್ನು ಅವರು ಹಲವು ವರ್ಷಗಳಿಂದ ದೋಚುತ್ತಾ ಬಂದಿದ್ದಾರೆ. ಸರಕಾರದಿಂದಲೂ ಅಪಾರ ಸವಲತ್ತುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಅವರ ಯೋಗದ ಅಸಲಿಯತ್ತು ಏನು ಎನ್ನುವುದು ಇದೀಗ ಬಹಿರಂಗವಾಗುತ್ತಿದೆ. ಆಯುರ್ವೇದದ ಹೆಸರಿನಲ್ಲಿ ಅವರು ಹರಡಿದ ಸುಳ್ಳುಗಳು, ಜನರಿಗೆ ಮಾಡಿದ ವಂಚನೆಗಳ ಕಾರಣದಿಂದಾಗಿ ಸುಪ್ರೀಂಕೋರ್ಟ್‌ನಿಂದ ಅವರು ಪದೇ ಪದೇ ಛೀಮಾರಿಯನ್ನು ಎದುರಿಸಬೇಕಾಯಿತು. ಸ್ವತಃ ನ್ಯಾಯಾಲಯಕ್ಕೆ ಹಾಜರಾಗಿ ಕ್ಷಮೆಯನ್ನು ಯಾಚಿಸಬೇಕಾಯಿತು. ಇಂದು ಅವರ ಸ್ವದೇಶಿ ಉತ್ಪನ್ನಗಳೆಲ್ಲ ಕಳಪೆ ಗುಣಮಟ್ಟದ್ದು ಎನ್ನುವ ಕಾರಣಕ್ಕಾಗಿ ನ್ಯಾಯಾಲಯದಿಂದ ತರಾಟೆಗೊಳಗಾಗುತ್ತಿವೆ. ಪತಂಜಲಿಯ ಸಿಬ್ಬಂದಿ ಜೈಲು ಪಾಲಾಗುತ್ತಿದ್ದಾರೆ. ಇವರ ಯೋಗ ನಿಜಕ್ಕೂ ಅಸಲಿಯೇ ನಕಲಿಯೇ ಎನ್ನುವುದನ್ನು ಅಧಿಕೃತವಾಗಿ ನಿರ್ಧರಿಸಲು ಸಾಧ್ಯವಾಗದೇ ಇರುವುದರಿಂದ, ಆ ಬಗ್ಗೆ ನ್ಯಾಯಾಲಯ ಅಸಹಾಯಕವಾಗಿದೆ. ಆದರೆ ಯೋಗದಿಂದ ಸ್ವಯಂ ಉದ್ಧಾರವಾಗಲು ಸಾಧ್ಯವಾಗದವರು ಇತರರನ್ನು ಉದ್ಧರಿಸಲು ಸಾಧ್ಯವೆ?

ಉದ್ಯಮವಾಗಿದ್ದ ಧ್ಯಾನಕ್ಕೆ ಪ್ರಧಾನಿ ಮೋದಿಯವರು ರಾಜಕೀಯ ಬಣ್ಣವನ್ನು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಧ್ಯಾನದಿಂದ ಹಣವನ್ನು ಮಾತ್ರವಲ್ಲ, ಮತಗಳನ್ನೂ ಸಂಪಾದಿಸಲು ಸಾಧ್ಯ ಎನ್ನುವುದು ಅವರಿಗೆ ಕಳೆದ ಚುನಾವಣೆಯಲ್ಲಿ ಗೊತ್ತಾಗಿರುವುದರಿಂದ, ಈ ಬಾರಿ ಮತ್ತೆ ಧ್ಯಾನಕ್ಕೆ ಕೂತಿದ್ದಾರೆ. ಮಣಿಪುರದ ಆಕ್ರಂದನ, ರೈತರ ಆಕ್ರೋಶ, ದಲಿತರ ಕಣ್ಣೀರು, ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಇವೆಲ್ಲವು ಪ್ರಧಾನಿ ಮೋದಿಯವರ ಧ್ಯಾನಕ್ಕೆ ಭಂಗ ತರುವುದಿಲ್ಲವೆ? ಎನ್ನುವ ಪ್ರಶ್ನೆಯನ್ನು ಯಾರೂ ಕೇಳುವಂತಿಲ್ಲ. ಈ ಎಲ್ಲ ಗದ್ದಲಗಳಿಂದ ಪಾರಾಗುವ ಮಾರ್ಗವಾಗಿ ಅವರು ಧ್ಯಾನವನ್ನು ಆರಿಸಿಕೊಂಡಿದ್ದಾರೆ. ಇದೊಂದು ರೀತಿಯಲ್ಲಿ ಮಾರ್ಜಾಲಧ್ಯಾನ ಎಂದೂ ಹಲವರು ಟೀಕಿಸುತ್ತಿದ್ದಾರೆ. ಇಲಿಗಳನ್ನು ಹಿಡಿಯಲು ಬೆಕ್ಕು ಸನ್ಯಾಸಿ ವೇಷ ಧರಿಸಿ ಧ್ಯಾನ ನಡೆಸಿದಂತೆಯೇ ಪ್ರಧಾನಿ ಮೋದಿಯವರೂ ಧ್ಯಾನಕ್ಕೆ ಕೂತಿದ್ದಾರೆ. ಅವರಿಗೆ ಮತದಾರರೆಂಬ ಇಲಿಗಳನ್ನು ಹಿಡಿಯುವುದಕ್ಕೆ ಇದು ಸುಲಭ ದಾರಿಯಾಗಿ ಕಂಡಿದೆ. ಆದರೆ ಅವರು ತಮ್ಮ ರಾಜಕೀಯ ಧ್ಯಾನಕ್ಕಾಗಿ ಸ್ವಾಮಿ ವಿವೇಕಾನಂದರಂತಹ ಮಹಾತ್ಮರು ಧ್ಯಾನಕ್ಕೆ ಕೂತ ಸ್ಥಳವನ್ನು ಕಳಂಕಗೊಳಿಸುತ್ತಿರುವುದು ಎಷ್ಟು ಸರಿ? ಎನ್ನುವ ಪ್ರಶ್ನೆಯನ್ನು ಹಲವರು ಕೇಳುತ್ತಿದ್ದಾರೆ. ಸ್ವಾಮಿ ವಿವೇಕಾನಂದರ ಹಿಂದುತ್ವಕ್ಕೂ, ಪ್ರಧಾನಿ ಮೋದಿಯವರ ಹಿಂದುತ್ವಕ್ಕ್ಕೂ ಅಜಗಜಾಂತರವಿದೆ. ಹಿಂದುತ್ವದ ಹೆಸರಿನಲ್ಲಿ ನಡೆಯುವ ಪುರೋಹಿತ ಶಾಹಿ ವ್ಯವಸ್ಥೆಯ ಶೋಷಣೆಯನ್ನು ಅವರು ಕಟುವಾಗಿ ವಿರೋಧಿಸಿದ್ದಾರೆ. ಹಸಿದವರನ್ನು ಮರೆತು ಗೋರಕ್ಷಣೆಯ ಬಗ್ಗೆ ಮಾತನಾಡಿದವರನ್ನು ಖಂಡಿಸಿದ್ದಾರೆ. ಅಸ್ಪಶ್ಯತೆ ಆಚರಣೆಯ ವಿರುದ್ಧ ದಾಳಿ ನಡೆಸಿದ್ದಾರೆ. ಆದರೆ ಪ್ರಧಾನಿ ಮೋದಿಯವರು ಹಿಂದುತ್ವದ ಹೆಸರಿನಲ್ಲಿ ಇವೆಲ್ಲವನ್ನೂ ಪ್ರೋತ್ಸಾಹಿಸುತ್ತಿದ್ದಾರೆ. ಗುಜರಾತ್, ಮಣಿಪುರದ ಮಹಿಳೆಯರ ಮೇಲೆ ನಡೆದ ಅತ್ಯಾಚಾರ, ಕೊಲೆಗಳ ಕಳಂಕ ಹೊತ್ತು ಕನ್ಯಾಕುಮಾರಿಯಲ್ಲಿ ಧ್ಯಾನಸ್ಥರಾಗಲು ಮುಂದಾಗಿದ್ದಾರೆ.

ರಾಮಕೃಷ್ಣ ಪರಮಹಂಸರ ದೃಷ್ಟಾಂತ ಕತೆಯೊಂದಿದೆ.ಊರಿನ ಜನರು ಕಳ್ಳನೊಬ್ಬನನ್ನು ಬೆಂಬತ್ತುತ್ತಿದ್ದರಂತೆ. ಆತ ಪರಾರಿಯಾಗಿ ಜನರಿಂದ ತಪ್ಪಿಸಿಕೊಳ್ಳಲು ಸನ್ಯಾಸಿಯ ವೇಷ ಹಾಕಿ ಒಂದು ಮರದ ಕೆಳಗೆ ಧ್ಯಾನಸ್ಥನಾದನಂತೆ. ದಾರಿ ಹೋಕರು ಈ ಧ್ಯಾನಸ್ಥ ಸನ್ಯಾಸಿ ವೇಷಧಾರಿಯನ್ನು ಕಂಡು ಭಯ ಭಕ್ತಿಯಿಂದ ಕಾಲಿಗೆ ಬೀಳತೊಡಗಿದರಂತೆ. ಹಣ್ಣು ಹಂಪಲುಗಳನ್ನು ತಂದು ಸುರಿಯ ತೊಡಗಿದರಂತೆ. ನಿಧಾನಕ್ಕೆ ಕಳ್ಳನಿಗೆ ತನಗೆ ಸಿಗುತ್ತಿರುವ ಗೌರವ ಕಂಡು ಆಶ್ಚರ್ಯವಾಗತೊಡಗಿತಂತೆ. ನಟಿಸಿದ್ದಕ್ಕೆ ಇಷ್ಟೊಂದು ಗೌರವ ಸಿಗುತ್ತಿದೆ. ನಿಜಕ್ಕೂ ಸನ್ಯಾಸಿಯಾದರೆ ಇನ್ನಷ್ಟು ಗೌರವ ಸಿಗಬಹುದು? ಹೀಗೆ ನಟಿಸುತ್ತಾ ನಟಿಸುತ್ತಾ ಆತ ನಿಜವಾದ ಸನ್ಯಾಸಿಯಾಗಿ ಬದಲಾದನಂತೆ. ಚುನಾವಣೆಯ ಕಾರಣಕ್ಕಾಗಿ ಪದೇ ಪದೇ ಧ್ಯಾನಸ್ಥರಾಗುತ್ತಿರುವ ನರೇಂದ್ರ ಮೋದಿಯ ಮೇಲೆಯೂ ಇದೇ ರೀತಿಯ ಪರಿಣಾಮವಾಗಲಿ. ಈ ಧ್ಯಾನ ಅವರನ್ನು ಬದಲಿಸಲಿ, ಈ ದೇಶದ ಜನತೆಯ ನೋವು, ದುಮ್ಮಾನಗಳನ್ನು ನಿಜವಾಗಿಯೂ ಅರ್ಥೈಸಿಕೊಳ್ಳಲು ಅವರಿಗೆ ಸಹಾಯ ಮಾಡಲಿ ಎನ್ನುವುದು ದೇಶದ ಜನತೆಯ ಹಾರೈಕೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News