ಜೈಲಿನೊಳಗೂ ಜಾತಿ ‘ಗೋಡೆ’ಗಳು!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಜಾತೀಯತೆ, ಜಾತಿ ಅಸ್ಪಶ್ಯತೆಗಳ ವಿರುದ್ಧ ಬಿಗಿ ಕಾನೂನುಗಳಿವೆ ಎಂದು ಸರಕಾರ ಹೇಳುತ್ತಿದೆ. ಜಾತಿಯ ಹೆಸರಿನಲ್ಲಿ ನಿಂದನೆ, ಹಲ್ಲೆಗಳು ನಡೆದರೆ ಅವರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಜೈಲಿಗೆ ತಳ್ಳಲಾಗುತ್ತದೆ. ಆದರೆ ದುರದೃಷ್ಟವಶಾತ್ ಜೈಲುಗಳೇ ಜಾತಿ ತಾರತಮ್ಯಕ್ಕಾಗಿ ಗುರುತಿಸಲ್ಪಟ್ಟರೆ? ರಾಜ್ಯಗಳ ಕಾರಾಗೃಹಗಳ ಕೈ ಪಿಡಿಗಳಲ್ಲಿನ ನಿಯಮಾವಳಿಗಳು ಜಾತಿ ತಾರತಮ್ಯಗಳನ್ನು ಉತ್ತೇಜಿಸುತ್ತಿವೆ ಎಂದು ಸ್ವತಃ ಸುಪ್ರೀಂಕೋರ್ಟ್ ಗುರುವಾರ ಕಳವಳ ವ್ಯಕ್ತಪಡಿಸಿದೆ. ಪತ್ರಕರ್ತೆ ಸುಕನ್ಯಾ ಶಾಂತಾ ಅವರು ಸಲ್ಲಿಸಿದ ಅರ್ಜಿಯ ಮೇಲಿನ ತನ್ನ ತೀರ್ಪನ್ನು ಕಾದಿರಿಸಿದ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಈ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಪತ್ರಕರ್ತೆ ಶಾಂತಾ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಲಿಖಿತ ಹೇಳಿಕೆಯೊಂದರಲ್ಲಿ, ಭಾರತೀಯ ಜೈಲುಗಳ ಒಳಗೆ ಜಾತಿ ಆಧಾರದಲ್ಲಿ ಶ್ರಮದ ಕೆಲಸಗಳನ್ನು ವಿಭಜಿಸಲಾಗುತ್ತದೆ. ದಲಿತರು, ಬುಡಕಟ್ಟು ಪಂಗಡಗಳ ಜನರನ್ನು ಪತ್ರ್ಯೇಕಿಸಿ ಅವರ ಮೇಲೆ ತಾರತಮ್ಯಗಳನ್ನು ಎಸಗಲಾತ್ತದೆ ಎಂದು ಆರೋಪಿಸಿದ್ದಾರೆ. ಕಾರಾಗೃಹದ ಕೈ ಪಿಡಿಗಳಲ್ಲಿ ಕೆಲವು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಜನರನ್ನು ಕ್ರಿಮಿನಲ್‌ಗಳು ಎಂದು ಉಲ್ಲೇಖಿಸಲಾಗಿದೆ. ಅವರಿಗೆ ಜೈಲಿನಲ್ಲಿ ಕಠಿಣ ಮತ್ತು ಜಾತಿ ಆಧಾರಿತ ಕೆಲಸಗಳನ್ನೇ ನೀಡಲಾಗುತ್ತದೆ ಎಂದು ಅವರು ದೂರಿದ್ದಾರೆ. ಉತ್ತರ ಪ್ರದೇಶ, ಪಶ್ಚಿಮಬಂಗಾಳ, ಮಧ್ಯಪ್ರದೇಶ, ಆಂಧ್ರ ಪ್ರದೇಶ, ತೆಲಂಗಾಣ, ಪಂಜಾಬ್, ಒಡಿಶಾ, ಜಾರ್ಖಂಡ್, ಕೇರಳ, ತಮಿಳು ನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳ ಜೈಲು ಕೈಪಿಡಿಗಳಲ್ಲಿ ಜಾತಿ ತಾರತಮ್ಯ ನಿಯಮಗಳಿರುವುದನ್ನು ಅವರು ಎತ್ತಿ ತೋರಿಸಿದ್ದಾರೆ ಮತ್ತು ಅವುಗಳನ್ನು ರದ್ದು ಪಡಿಸಲು ಕೋರಿದ್ದಾರೆ.
ಜೈಲುಗಳು ಕೆಲವೊಮ್ಮೆ ಕೃತ್ಯಗಳನ್ನು ಆಧರಿಸಿ ಕೈದಿಗಳನ್ನು ಉಪಚರಿಸುವುದಿದೆ. ಸಾಧಾರಣವಾಗಿ ಅತ್ಯಂತ ಕ್ರೂರವಾದ ಅಪರಾಧಗಳನ್ನು ಎಸಗಿದ ವ್ಯಕ್ತಿಗಳನ್ನು ಅಷ್ಟೇ ಕಠಿಣವಾಗಿ ಶಿಕ್ಷಿಸಿದರೆ ಅದನ್ನು ಒಪ್ಪಿಕೊಳ್ಳಬಹುದೇನೋ. ಸಾಮೂಹಿಕ ಹತ್ಯೆ, ಕೊಲೆ, ಅತ್ಯಾಚಾರ, ಮಾರಣ ಹೋಮ, ಸ್ಫೋಟ ಕೃತ್ಯಗಳು ಇತ್ಯಾದಿಗಳನ್ನು ಎಸಗಿದ ಕೈದಿಗಳಿಗೆ ಅತ್ಯಂತ ಕಠಿಣ ಕೆಲಸಗಳನ್ನು ಜೈಲಿನಲ್ಲಿ ನೀಡಬೇಕು. ಆದರೆ ಈ ದೇಶದ ದುರಂತವೆಂದರೆ, ಇಲ್ಲಿ ಜಾತಿಯೇ ಒಂದು ಶಿಕ್ಷೆಯಾಗಿದೆ. ತನ್ನ ಜಾತಿಯ ಕಾರಣಕ್ಕಾಗಿ ಆತ ಸಮಾಜದಲ್ಲಿ ಅನುಭವಿಸಬೇಕಾದ ಕೀಳರಿಮೆ, ಶೋಷಣೆ ಯಾವುದೇ ಜೈಲಿನಲ್ಲಿ ಅನುಭವಿಸುವ ಶಿಕ್ಷೆಗಿಂತ ಕಡಿಮೆಯಿಲ್ಲ. ಇಲ್ಲಿ ಯಾವುದೇತಪ್ಪು ಕೃತ್ಯಗಳು ಸಂಭವಿಸಿದಾಗ ಮೊದಲು ಅನುಮಾನಿಸುವುದು ಕೆಳ ಜಾತಿಗಳಿಗೆ ಸೇರಿದ ಜನರನ್ನು. ಕಳ್ಳತನ ಸಂಭವಿಸಿದರೆ ಪೊಲೀಸರು ಮೊದಲು ನುಗ್ಗುವುದು ಕೆಳಜಾತಿಗಳ ಮನೆಗೆ. ಕೆಳಜಾತಿಯ ತರುಣರನ್ನು ಜೈಲಿಗೆ ತಂದು ವಿಚಾರಣೆ ನಡೆಸಲಾಗುತ್ತದೆ. ಬಂಧಿತರು ಕೆಳಜಾತಿಗೆ ಸೇರಿದವರಾದರೆ, ದಲಿತ ಅಥವಾ ಮುಸ್ಲಿಮ್ ಸಮುದಾಯಕ್ಕೆ ಸೇರಿದರೆ ವಿಚಾರಣೆಗೆ ಮುನ್ನವೇ ಅವರನ್ನು ಅಪರಾಧಿಗಳೆಂದು ಘೋಷಿಸಿ ಶಿಕ್ಷೆ ವಿಧಿಸಲಾಗುತ್ತದೆ. ನ್ಯಾಯಾಲಯದಲ್ಲಿ ವಿಚಾರಣೆಯ ಅಣಕವಷ್ಟೇ ನಡೆಯುತ್ತದೆ. ಯಾವುದೇ ಸ್ಫೋಟಗಳು ನಡೆದಾಕ್ಷಣ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುತ್ತಾರೆ. ಮಾಧ್ಯಮಗಳು ಅಪರಾಧಿಗಳು ಯಾರು ಎನ್ನುವುದನ್ನು ಘೋಷಿಸಿಯೂ ಬಿಡುತ್ತವೆ. ಅಪರಾಧಿಗಳು ಸಿಗಲಿಲ್ಲವೆಂದರೆ, ಈ ಅಮಾಯಕರೇ ತಮ್ಮ ಧರ್ಮ, ಜಾತಿ ಕಾರಣಕ್ಕಾಗಿ ಜೈಲಿನಲ್ಲಿ ಕೊಳೆಯಬೇಕಾಗುತ್ತದೆ. ಇಂದಿಗೂ ತಮ್ಮ ಧರ್ಮ, ಜಾತಿಯ ಕಾರಣಕ್ಕಾಗಿ ವಿಚಾರಣಾಧೀನ ಕೈದಿಗಳಾಗಿ ಕೊಳೆಯುತ್ತಿರುವವರಲ್ಲಿ ಕೆಳ ಜಾತಿಯ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಜನರೇ ಅಧಿಕ.
ಈ ದೇಶದಲ್ಲಿರುವ 5 ಲಕ್ಷಕ್ಕೂ ಅಧಿಕ ಕೈದಿಗಳಲ್ಲಿ ಶೇ. 65.90 ಜನರು ದಲಿತ ಮತ್ತು ಒಬಿಸಿ ಸಮುದಾಯಕ್ಕೆ ಸೇರಿದ ಜನರಾಗಿದ್ದಾರೆ ಎನ್ನುವುದನ್ನು ಸರಕಾರಿ ಅಂಕಿಅಂಶಗಳು ಹೇಳುತ್ತವೆ. 2021ರ ಅಂಕಿಅಂಶಗಳ ಪ್ರಕಾರ, ದೇಶದ ಜೈಲುಗಳಲ್ಲಿ 4,78,600 ಕೈದಿಗಳಿದ್ದು, ಅವರಲ್ಲಿ 3,15,409 ಮಂದಿ ದಲಿತರು ಮತ್ತು ಒಬಿಸಿಗಳಾಗಿದ್ದಾರೆ. ಶೇ. 34.01ರಷ್ಟು ಒಬಿಸಿಗಳಾದರೆ, ಶೇ. 20.74ರಷ್ಟು ಎಸ್‌ಸಿ, 11.14ರಷ್ಟು ಎಸ್.ಟಿ. ಕೈದಿಗಳಿದ್ದಾರೆ. ಬಂಧಿತ ಮಹಿಳಾ ಕೈದಿಗಳಲ್ಲಿಯೂ ದಲಿತರು ಮತ್ತು ಒಬಿಸಿಗಳೇ ಅಧಿಕ. ಇವರನ್ನು ಹೊರತು ಪಡಿಸಿದರೆ ಇತ್ತೀಚಿನ ದಿನಗಳಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಕೈದಿಗಳು ಅತ್ಯಧಿಕವಿದ್ದಾರೆ. ಜೀವಾವಧಿ ಮತ್ತು ಮರಣದಂಡನೆಗೆ ಒಳಗಾಗುತ್ತಿರುವ ಕೈದಿಗಳಲ್ಲಿ ಮೇಲ್‌ಜಾತಿಗೆ ಸೇರಿದ ಕೈದಿಗಳದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಸಂಖ್ಯೆ. ಅವರಲ್ಲೂ ಬಹುಸಂಖ್ಯಾತರು ದಲಿತರು ಮತ್ತು ಒಬಿಸಿಗಳೇ ಆಗಿದ್ದಾರೆ. ಈ ದೇಶದಲ್ಲಿ ವೃತ್ತಿಗೆ ಅನುಗುಣವಾಗಿ ಜಾತಿಯನ್ನು ನಿರ್ಮಿಸಲಾಗಿದೆ. ವಿಪರ್ಯಾಸವೆಂದರೆ, ಇಲ್ಲಿ ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಜಾತಿಗಳಿವೆ. ಆದುದರಿಂದಲೇ, ಪೊಲೀಸರು ಕಳ್ಳತನ ನಡೆದಾಗಲೆಲ್ಲ ಮೊದಲು ಅನುಮಾನಿಸುವುದು ಕೆಳಜಾತಿಗಳನ್ನು. ಮೇಲ್‌ಜಾತಿಗೆ ಸೇರಿದ ಆರೋಪಿಗಳ ಬಂಧನ ತೀರಾ ತಡವಾಗಿ ನಡೆಯುತ್ತದೆ. ಹಾಗೆಯೇ ಅವರು ಅತ್ಯಂತ ಸುಲಭವಾಗಿ ಆರೋಪಗಳಿಂದ ಮುಕ್ತವಾಗುತ್ತಾರೆ. ಶೋಷಿತ ಸಮುದಾಯದಿಂದ ಬಂದ ವಿಚಾರಣಾಧೀನ ಕೈದಿಗಳಿಗೆ ಜಾಮೀನು ಸಿಗುವುದೇ ಕಷ್ಟ. ಸಿಕ್ಕಿದರೂ, ಬಹುತೇಕರು ಜಾಮೀನಿಗೆ ಕಟ್ಟಲು ಹಣವಿಲ್ಲ ಎನ್ನುವ ಕಾರಣಕ್ಕಾಗಿ ಜೈಲಿನಲ್ಲಿ ಕೊಳೆಯಬೇಕಾಗುತ್ತದೆ.
ವ್ಯವಸ್ಥೆ ಹೀಗಿರುವಾಗ, ದಲಿತ, ಬುಡಕಟ್ಟು ಸಮುದಾಯದ ಜನರು ಆರೋಪ ಸಾಬೀತಾಗಿ ಅಧಿಕೃತವಾಗಿ ಕೈದಿಗಳಾಗಿ ಗುರುತಿಸಲ್ಪಟ್ಟ ಮೇಲೆ ಅವರ ವಿರುದ್ಧ ಜೈಲುಗಳು ಹೇಗೆ ನಡೆದುಕೊಳ್ಳಬಹುದು ಎನ್ನುವುದು ಊಹಿಸುವುದು ಕಷ್ಟವಿಲ್ಲ. ಕಾರಾಗೃಹ ಕೈಪಿಡಿಗಳಲ್ಲಿ ನಿಯಮಗಳು ಇರಲಿ, ಇಲ್ಲದಿರಲಿ ಜೈಲುಗಳಲ್ಲಿ ಯಾರು ಯಾವ ಕೆಲಸ ಮಾಡಬೇಕು ಎನ್ನುವುದು ಅಲಿಖಿತವಾಗಿ ಮೊದಲೇ ತೀರ್ಮಾನವಾಗಿ ಬಿಡುತ್ತದೆ. ಶೌಚಾಲಯ ಶುಚಿತ್ವದ ಕೆಲಸವನ್ನು ಮೇಲ್‌ಜಾತಿಯ ಕೈದಿಗಳ ಕೈಯಲ್ಲಿ ಮಾಡಿಸುವುದನ್ನು ಇಲ್ಲಿ ಕನಸಿನಲ್ಲೂ ಊಹಿಸುವುದು ಸಾಧ್ಯವಿಲ್ಲ. ಅದು ದಲಿತ ಸಮುದಾಯದ ಕೈದಿಗಳಿಗೆ ಕಟ್ಟಿಟ್ಟ ಕೆಲಸ. ಅಡುಗೆ ಕೆಲಸವನ್ನು ದಲಿತ ಕೈದಿಗಳ ಕೈಯಲ್ಲಿ ಮಾಡಿಸುವುದು ಕೂಡ ದೂರದ ಮಾತು. ಜಾತಿಯ ಹೆಸರಿನಲ್ಲಿ ದೌರ್ಜನ್ಯ ಎಸಗಿದವರನ್ನು ಕಾನೂನು ಜೈಲಿಗೆ ಹಾಕುತ್ತದೆ. ಆದರೆ ಜೈಲಿನಲ್ಲೇ ಜಾತಿಯ ಹೆಸರಿನಲ್ಲಿ ಪೊಲೀಸರು ದೌರ್ಜನ್ಯ ಎಸಗಿದರೆ ಅವರನ್ನು ಶಿಕ್ಷಿಸುವ ಬಗೆಯಾದರೂ ಹೇಗೆ?