ಮೋದಿ ‘ದ್ವೇಷ ರಾಜಕೀಯ’ಕ್ಕೆ ಬಲಿಯಾದ ಕ್ರಿಕೆಟ್

Update: 2024-05-10 05:55 GMT

Photo: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಹಸಿವು, ಉದ್ಯೋಗ, ಆಹಾರ, ಶಿಕ್ಷಣದ ಬಗ್ಗೆ ದೇಶ ಮಾತನಾಡುತ್ತಿದ್ದರೆ ಪ್ರಧಾನಿ ಮೋದಿಯವರು ಚುನಾವಣಾ ಪ್ರಚಾರದಲ್ಲಿ ‘ಕ್ರಿಕೆಟ್’ನ್ನು ಎಳೆದು ತಂದಿದ್ದಾರೆ. ಇತ್ತೀಚೆಗಷ್ಟೇ ‘ಸಂಪತ್ತನ್ನು ಕಾಂಗ್ರೆಸ್ ಮುಸ್ಲಿಮರಿಗೆ ಹಂಚಲು ಹೊರಟಿದೆ’ ಎಂದು ಹೇಳಿಕೆ ನೀಡಿದ್ದ ಮೋದಿಯವರು ಇದೀಗ ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಾರತದ ಕ್ರಿಕೆಟ್ ತಂಡದಲ್ಲಿ ಮುಸ್ಲಿಮರಿಗೆ ಆದ್ಯತೆ ನೀಡುತ್ತಾರೆ’ ಎಂದು ನಾಲಗೆ ಹರಿಬಿಟ್ಟಿದ್ದಾರೆ. ಈ ಮೂಲಕ ಅವರು ‘‘ನಾನು ಮತ್ತೆ ಅಧಿಕಾರಕ್ಕೆ ಬಂದರೆ, ಮುಸ್ಲಿಮರಿಲ್ಲದ ಭಾರತವನ್ನು ಕಟ್ಟುತ್ತೇನೆ’’ ಎನ್ನುವ ಭರವಸೆಯನ್ನು ದೇಶಕ್ಕೆ ನೀಡಲು ಮುಂದಾಗಿದ್ದಾರೆ. ಈ ದೇಶದ ದಲಿತರು, ಹಿಂದುಳಿದವರ್ಗ, ಅಲ್ಪಸಂಖ್ಯಾತರನ್ನು ಜೊತೆಯಾಗಿಸಿಕೊಂಡು ಭಾರತವನ್ನು ಅಭಿವೃದ್ಧಿ ಪಡಿಸುತ್ತೇನೆ ಎನ್ನಬೇಕಾಗಿದ್ದ ಪ್ರಧಾನಿ, ತನ್ನ ಭಾಷಣಗಳ ಮೂಲಕ ಈ ದೇಶವನ್ನು ಹಿಂದೂ-ಮುಸ್ಲಿಮ್ ಎಂದು ಒಡೆದು ಮತ ಯಾಚನೆ ಮಾಡುತ್ತಿದ್ದಾರೆ. ಪ್ರಧಾನಿಗೆ ನೀತಿ ಸಂಹಿತೆಯ ಪಾಠ ಹೇಳಬೇಕಾಗಿದ್ದ ಚುನಾವಣಾ ಆಯೋಗ ಜಾಣ ಕಿವುಡನಂತೆ ವರ್ತಿಸುತ್ತಿದೆ. ಜಾತಿ ಧರ್ಮಗಳನ್ನು ಮೀರಿ ಕ್ರಿಕೆಟನ್ನೇ ಧರ್ಮವಾಗಿಸಿಕೊಂಡು ಆಡುತ್ತಾ ಈ ದೇಶಕ್ಕೆ ಕೀರ್ತಿಯನ್ನು ತಂದ ಆಟಗಾರರಿಗೆ ಪ್ರಧಾನಿ ಮೋದಿಯವರು ತಮ್ಮ ಹೇಳಿಕೆಗಳ ಮುಜುಗರವುಂಟು ಮಾಡಿದ್ದಾರೆ.

ಕಾಂಗ್ರೆಸ್ ಆಡಳಿತವಿದ್ದ 70 ವರ್ಷಗಳಲ್ಲಿ ಭಾರತದ ಕ್ರಿಕೆಟ್ ತಂಡ ಮಾಡಿರುವ ಸಾಧನೆಗಳು ಬಹುದೊಡ್ಡದು. 1983ರಲ್ಲಿ ಭಾರತ ವಿಶ್ವಕಪ್‌ನ್ನು ಗೆದ್ದಾಗ ತಂಡದಲ್ಲಿದ್ದ ಏಕೈಕ ಮುಸ್ಲಿಮ್ ಆಟಗಾರ ಸಯ್ಯದ್ ಕೀರ್ಮಾನಿ. ಭಾರತದ ಕ್ರಿಕೆಟ್ ತಂಡದಲ್ಲಿ ಕಾಲ ಕಾಲಕ್ಕೆ ತಮ್ಮ ಪ್ರತಿಭೆಯ ಬಲದಿಂದಲೇ ಹಲವು ಮುಸ್ಲಿಮ್ ಆಟಗಾರರು ಸ್ಥಾನವನ್ನು ಪಡೆದಿದ್ದಾರೆ. ತಮ್ಮ ಆಟಗಳ ಮೂಲಕ ಧರ್ಮ, ಜಾತಿ, ದೇಶ, ಗಡಿಗಳಾಚೆಗೆ ಪ್ರೀತಿಯನ್ನು ಸಂಪಾದಿಸಿದ್ದಾರೆ. ಕ್ರಿಕೆಟ್ ಆಟಗಾರರನ್ನು ಭಾರತದ ಜನತೆ ಯಾವತ್ತೂ ಧರ್ಮದ ಆಧಾರದಲ್ಲಿ ಗುರುತಿಸಿಲ್ಲ ಮತ್ತು ಪ್ರೀತಿಸಿಲ್ಲ. ಬಹುಶಃ ಕ್ರಿಕೆಟ್ ಇತಿಹಾಸದಲ್ಲೇ ಆಟಗಾರರನ್ನು ಧರ್ಮದ ಆಧಾರದಲ್ಲಿ ಗುರುತಿಸಿರುವುದು ಪ್ರಧಾನಿ ಮೋದಿಯವರೇ ಇರಬೇಕು. ಈ ದೇಶದ ಕ್ರಿಕೆಟನ್ನು ಪ್ರತಿಭಾವಂತ ಮುಸ್ಲಿಮ್ ಆಟಗಾರರನ್ನು ಹೊರಗಿಟ್ಟು ನೋಡುವುದು ಸಾಧ್ಯವೇ ಇಲ್ಲ. ಮನ್ಸೂರ್ ಅಲಿಖಾನ್ ಪಟೌಡಿ ತನ್ನ ಆಟದ ಮೂಲಕ ಭಾರತದ ಕ್ರಿಕೆಟನ್ನು ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರು. ದೇಶದ ಮಾತ್ರವಲ್ಲ, ವಿಶ್ವದ ಅತ್ಯುತ್ತಮ ಫೀಲ್ಡರ್ ಎಂದು ವಿದೇಶಿ ಆಟಗಾರರಿಂದ ಗುರುತಿಸಲ್ಪಟ್ಟವರು. ಬಹುಶಃ ಆಗ ಏನಾದರೂ ಪ್ರಧಾನಿ ಮೋದಿಯವರು ಇದ್ದಿದ್ದರೆ, ಆ ಹೆಗ್ಗಳಿಕೆಯನ್ನೂ ತನ್ನ ಜೇಬಿಗೆ ಹಾಕಿಕೊಂಡು ಆ ಹೆಸರಲ್ಲಿ ಮತಯಾಚಿಸುತ್ತಿದ್ದರೋ ಏನೋ? ಒಂದು ಕಣ್ಣಿನ ಮೂಲಕವೇ ಪಟೌಡಿ ಕ್ರಿಕೆಟ್‌ನಲ್ಲಿ ಸಾಧಿಸಿದ ಸಾಧನೆ ಭಾರತದ ಇತರ ಕ್ರಿಕೆಟಿಗರಿಗೆ ಇಂದಿಗೂ ಸ್ಫೂರ್ತಿಯಾಗಿದೆ. ಇಂದು ಮನ್ಸೂರ್ ಅಲಿಯನ್ನು ಕ್ರಿಕೆಟ್‌ಗಾಗಿ ಮಾತ್ರವಲ್ಲ, ಇನ್ನಿತರ ಹಲವು ಕಾರಣಗಳಿಗಾಗಿ ದೇಶ ನೆನೆಯುತ್ತಿದೆ. ಹಾಗೆಯೇ, ಭಾರತ ಕ್ರಿಕೆಟ್ ಮೈದಾನದಲ್ಲಿ ಅಂಬೆಗಾಲಿಕ್ಕುತ್ತಿರುವ ಸಂದರ್ಭದಲ್ಲಿ ಸಾಧನೆಯನ್ನು ಮಾಡಿದ ಮುಶ್ತಾಕ್ ಅಲಿಯ ಬಗ್ಗೆಯೂ ಪ್ರಧಾನಿ ಮೋದಿಯವರಿಗೆ ಅರಿವಿದ್ದಂತಿಲ್ಲ. ಕ್ರಿಕೆಟ್‌ನಲ್ಲಿ ಧರ್ಮವನ್ನು ತರುವ ಮೂಲಕ ಭಾರತದ ಕ್ರಿಕೆಟ್ ಪರಂಪರೆಗೇ ಅವರು ಅವಮಾನಿಸಿದ್ದಾರೆ. ಪ್ರಧಾನಿ ಮೋದಿಯ ರಾಜಕೀಯ ಹೇಳಿಕೆಯ ವಿರುದ್ಧ ಒಬ್ಬರೇ ಒಬ್ಬ ಹಿರಿಯ ಕ್ರಿಕೆಟಿಗರು ಈವರೆಗೆ ಧ್ವನಿಯೆತ್ತದೇ ಇರುವುದು ಅತ್ಯಂತ ವಿಷಾದನೀಯವಾಗಿದೆ.

2023ರಲ್ಲಿ ಇಂಡಿಯಾ ತಂಡ ವಿಶ್ವಕಪ್ ಫೈನಲ್‌ನಲ್ಲಿ ಧೀರೋದಾತ್ತವಾಗಿ ಹೋರಾಡಿ ಸೋತಾಗ, ಪ್ರಧಾನಿ ನರೇಂದ್ರ ಮೋದಿಯವರು ಡ್ರೆಸ್ಸಿಂಗ್ ರೂಮಿಗೆ ಹೋಗಿ ಮುಹಮ್ಮದ್ ಶಮಿಯವರನ್ನು ತಬ್ಬಿಕೊಳ್ಳುವ ಮೂಲಕ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. ವಿಶ್ವಕಪ್‌ನಲ್ಲಿ ಸೋತರೂ, ಗೆಲುವಿಗೆ ಶ್ರಮಿಸಿದ ಮುಹಮ್ಮದ್ ಶಮಿ ಮತ್ತು ಇತರ ಆಟಗಾರರನ್ನು ಅವರು ಅಭಿನಂದಿಸಿದ್ದು ಸಾಕಷ್ಟು ಶ್ಲಾಘನೆಗೊಳಗಾಯಿತು. ಇದೀಗ ಚುನಾವಣೆಯ ಹೊತ್ತಿಗೆ ಕ್ರಿಕೆಟ್ ಆಟದಲ್ಲಿ ‘ಹಿಂದೂ-ಮುಸ್ಲಿಮ್’ ಎಂದು ಪ್ರಧಾನಿ ಮೋದಿಯವರು ಮಾತನಾಡುತ್ತಿದ್ದಾರೆ. ಹಾಗಾದರೆ, ಅಂದು ಮುಹಮ್ಮದ್ ಶಮಿಯವರನ್ನು ಯಾವ ಕಾರಣಕ್ಕಾಗಿ ಅವರು ತಬ್ಬಿಕೊಂಡರು? ಅದನ್ನು ಮಾಧ್ಯಮಗಳು ‘ಮುಸ್ಲಿಮರ ಓಲೈಕೆ’ ಎಂದು ವ್ಯಾಖ್ಯಾನಿಸಬೇಕೆ? ಈ ಹಿಂದಿನ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಧರ್ಮಾಧಾರಿತವಾಗಿ ಕ್ರಿಕೆಟ್‌ನಲ್ಲಿ ಮುಸ್ಲಿಮ್ ಆಟಗಾರರನ್ನು ಸೇರಿಸಿರುವುದಕ್ಕೆ ಯಾವುದಾದರೂ ದಾಖಲೆಗಳಿವೆಯೇ? ಮುಹಮ್ಮದ್ ಅಝರುದ್ದೀನ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಝಾಹಿರ್ ಖಾನ್ ಮೊದಲಾದ ಆಟಗಾರರು ತಮ್ಮ ಧರ್ಮದ ಹಿನ್ನೆಲೆಯಲ್ಲಿ ಸ್ಥಾನವನ್ನು ಪಡೆದರೆ? ಅಥವಾ ಪ್ರತಿಭೆಯ ಆಧಾರದಲ್ಲಿ ಸ್ಥಾನವನ್ನು ಪಡೆದವರೇ? ಇವರು ಕ್ರಿಕೆಟ್‌ನಲ್ಲಿ ಮಾಡಿರುವ ಸಾಧನೆಗಳು ಪ್ರಧಾನಿ ಮೋದಿಗೆ ಅರಿವಿಲ್ಲವೆ?

ಪ್ರಧಾನಿಗೆ ನಿಜಕ್ಕೂ ಕ್ರಿಕೆಟ್‌ನ ಬಗ್ಗೆ, ಕ್ರಿಕೆಟ್ ಆಟಗಾರರ ಬಗ್ಗೆ ಕಾಳಜಿಯಿದ್ದರೆ, ಕ್ರಿಕೆಟ್‌ನಲ್ಲಿ ತಳಸ್ತರದ ಜಾತಿಯ ಹಾಗೂ ಬಡವರ್ಗದಿಂದ ಬಂದ ಪ್ರತಿಭಾವಂತರಿಗೂ ಆದ್ಯತೆ ಸಿಗುವಂತೆ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ನೀಡಬಹುದಿತ್ತು. ಯಾಕೆಂದರೆ, ಶೋಷಿತ ಸಮುದಾಯಕ್ಕೆ ಸೇರಿರುವ ಹಲವು ಪ್ರತಿಭಾವಂತ ಕ್ರಿಕೆಟ್ ಆಟಗಾರರು ಹಣ ಬಲ, ಜಾತಿ ಬಲಗಳ ಶಿಫಾರಸುಗಳಿಲ್ಲದೆ ಕ್ರಿಕೆಟ್ ತಂಡದಲ್ಲಿ ಅವಕಾಶ ಪಡೆಯಲು ವಿಫಲರಾಗಿದ್ದಾರೆ. ತಳಸ್ತರದಲ್ಲಿರುವ ಸಮುದಾಯದ ಪ್ರತಿಭಾವಂತ ಆಟಗಾರರಿಗೆ ಸ್ಥಾನ ಸಿಗುವಂತೆ ಮಾಡಿ ಕ್ರಿಕೆಟ್‌ನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ಪ್ರಧಾನಿ ಮಾತನಾಡಬೇಕಿತ್ತು. ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಾಲನ್ನು ಪಡೆದಿರುವ ಮೇಲ್ವರ್ಣೀಯ ಸಮುದಾಯದ ಬಗ್ಗೆ ಯೂ ಈ ಸಂದರ್ಭದಲ್ಲಿ ಅವರು ಮೌನವಾಗಿದ್ದಾರೆ. ಕ್ರಿಕೆಟನ್ನು ಹಿಂದೂ ಮುಸ್ಲಿಮ್ ಎಂದು ಒಡೆದು, ಅಳಿದುಳಿದ ಆಟವನ್ನು ತನ್ನ ದ್ವೇಷ ರಾಜಕೀಯಕ್ಕೆ ಬಲಿಕೊಡುವುದು ಅವರ ಉದ್ದೇಶವಾಗಿದೆ.

ಕ್ರಿಕೆಟ್‌ನ ಬಗ್ಗೆ ಮಾತನಾಡುವ ಮೊದಲು, ಈ ದೇಶದ ಅತ್ಲೀಟ್‌ಗಳಿಗೆ ಆಗುತ್ತಿರುವ ಅನ್ಯಾಯಗಳಿಗೆ ಮೋದಿ ಸ್ಪಷ್ಟೀಕರಣ ನೀಡಬೇಕಾಗಿದೆ. ಕುಸ್ತಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಭಾಗವಹಿಸಿ ದೇಶಕ್ಕೆ ಪದಕಗಳನ್ನು ತಂದುಕೊಟ್ಟ ಮಹಿಳಾ ಕುಸ್ತಿ ಪಟುಗಳಿಗೆ ಆಗಿರುವ ಅನ್ಯಾಯಗಳ ಬಗ್ಗೆ ಈವರೆಗೆ ಪ್ರಧಾನಿ ಮೋದಿಯವರು ಬಾಯಿ ತೆರೆದಿಲ್ಲ. ಆಟಗಾರರನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸುವುದಾದರೆ, ‘ತಮ್ಮ ಮೇಲೆ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಲೈಂಗಿಕ ದೌರ್ಜನ್ಯವೆಸಗಿದ್ದಾನೆ’ ಎಂದು ಅಷ್ಟೂ ‘ಹಿಂದೂ ಸಮುದಾಯಕ್ಕೆ ಸೇರಿದ ಮಹಿಳಾ ಕುಸ್ತಿ ಪಟುಗಳು’ ಆರೋಪಿಸಿದಾಗ ಪ್ರಧಾನಿ ಮೋದಿಯವರು ಯಾಕೆ ಹಿಂದೂ ಮಹಿಳಾ ಕ್ರೀಡಾ ಪಟುಗಳಿಗಾಗಿ ಮಿಡಿಯಲಿಲ್ಲ. ನ್ಯಾಯಕ್ಕಾಗಿ ಬೀದಿಗಿಳಿದ ಈ ಮಹಿಳಾ ಕುಸ್ತಿಪಟುಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದಾಗ ಪ್ರಧಾನಿ ಮೋದಿ ಯಾಕೆ ಅದನ್ನು ತಡೆಯಲಿಲ್ಲ? ಯಾಕೆ ಅವರಿಗೆ ನ್ಯಾಯ ನೀಡಲಿಲ್ಲ? ಅಷ್ಟೇ ಯಾಕೆ, ನ್ಯಾಯ ಸಿಗದೇ ಅಂತಿಮವಾಗಿ ಅಂತರ್‌ರಾಷ್ಟ್ರೀಯ ಮಟ್ಟದ ಆಟಗಾರ್ತಿ ಕುಸ್ತಿ ಕ್ರೀಡೆಯಿಂದಲೇ ನಿರ್ಗಮಿಸಿದಾಗಲೂ ಅವರನ್ನು ಸಮಾಧಾನಿಸಲು ಯಾಕೆ ಮುಂದಾಗಲಿಲ್ಲ? ಇದೀಗ ಲೋಕಸಭಾ ಚುನಾವಣೆಯಲ್ಲಿ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಯ ಪುತ್ರನಿಗೇ ಬಿಜೆಪಿ ಟಿಕೆಟ್ ನೀಡಿದೆ. ಕ್ರೀಡೆಯ ಬಗ್ಗೆ ಒಂದಿಷ್ಟು ಕಾಳಜಿಯಿದ್ದರೆ, ಹಿಂದೂಗಳ ಬಗ್ಗೆ ಹನಿಯಷ್ಟಾದರೂ ಪ್ರೀತಿಯಿದ್ದರೆ, ಮಹಿಳೆಯರ ಬಗ್ಗೆ ಎಳ್ಳಷ್ಟಾದರೂ ಗೌರವವಿದ್ದರೆ ಪ್ರಧಾನಿ ಮೋದಿ ಇದಕ್ಕೆ ಮೊದಲು ಸ್ಪಷ್ಟೀಕರಣವನ್ನು ನೀಡಲಿ. ಕ್ರಿಕೆಟ್ ಕುರಿತಂತೆ ಮೋದಿಯವರು ನೀಡಿದ ದ್ವೇಷ ಹೇಳಿಕೆಯನ್ನು ಕ್ರಿಕೆಟ್ ಪ್ರಿಯರು ಒಕ್ಕೊರಲಿನಲ್ಲಿ ಖಂಡಿಸಿ, ರಾಜಕೀಯ ದ್ವೇಷದ ಬೆಂಕಿ ಭಾರತದ ಕ್ರಿಕೆಟ್‌ನ್ನು ಬಲಿ ಪಡೆಯದಂತೆ ನೋಡಿಕೊಳ್ಳಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News