ಡಿಕೆಶಿ ಹೇಳಿಕೆಗೆ ಅಕಾಡಮಿಗಳ ಅಧ್ಯಕ್ಷರು ಅರ್ಹರೇ?

Update: 2024-06-21 05:38 GMT

PC: fb

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜ್ಯದ ವಿವಿಧ ಸಾಂಸ್ಕೃತಿಕ ಮತ್ತು ಸಾಹಿತ್ಯ ಅಕಾಡಮಿಗಳಿಗೆ ನೇಮಕವಾಗಿ ಅಧಿಕಾರ ಸ್ವೀಕರಿಸಿದ್ದ ನೂತನ ಅಧ್ಯಕ್ಷರುಗಳು ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ರಾಜಕಾರಣಿಗಳ ಸಭೆಯಲ್ಲಿ ಸಭಿಕರಾಗಿ ಭಾಗವಹಿಸಿ ಉಪದೇಶಗಳನ್ನು ಸ್ವೀಕರಿಸಿದ ವರದಿಗಳು ಸಾಕಷ್ಟು ಪರ-ವಿರೋಧ ಚರ್ಚೆಗಳಿಗೆ ಕಾರಣವಾಗಿತ್ತು. ಈ ನಾಡಿನ ಸಾಹಿತ್ಯಕ, ಸಾಂಸ್ಕೃತಿಕ ಪ್ರತಿನಿಧಿಗಳಾಗಿ ರಾಜಕಾರಣಿಗಳಿಗೆ ಮಾರ್ಗದರ್ಶನ ನೀಡಬೇಕಾಗಿದ್ದ ಸಾಹಿತಿಗಳು, ಚಿಂತಕರೇ ರಾಜಕಾರಣಿಗಳಿಂದ ಮಾರ್ಗದರ್ಶನಗಳನ್ನು ಪಡೆಯಬೇಕಾದ ಸ್ಥಿತಿಗೆ ಇಳಿದಿರುವುದು ಎಷ್ಟು ಸರಿ ಎನ್ನುವುದನ್ನು ಹಲವರು ಪ್ರಶ್ನಿಸಿದ್ದರು. ಈ ಸಂದರ್ಭದಲ್ಲಿ, ‘ಅದೊಂದು ಆಕಸ್ಮಿಕ ಭೇಟಿಯಾಗಿತ್ತು’ ಎಂದು ಕೆಲವು ಸಾಹಿತಿಗಳು ತಮ್ಮನ್ನು ಸಮರ್ಥಿಸಿಕೊಂಡಿದ್ದರು. ಆದರೆ ಇದಾದ ಎರಡೇ ದಿನಗಳಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆ ವಿವಾದದ ಬೆಂಕಿಗೆ ಇನ್ನಷ್ಟು ತುಪ್ಪವನ್ನು ಸುರಿದಿದೆ. ರಾಜಕಾರಣಿಗಳು ಮತ್ತು ಸಾಹಿತ್ಯ, ಸಂಸ್ಕೃತಿ ಚಿಂತಕರ ತಿಕ್ಕಾಟವಾಗಿ ಇದು ಪರಿವರ್ತನೆಗೊಂಡಿದೆ.

ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಅಕಾಡಮಿ ಅಧ್ಯಕ್ಷರು ಭಾಗವಹಿಸಿರುವುದನ್ನು ಸಮರ್ಥಿಸಿಕೊಂಡ ಡಿಕೆಶಿ ಅವರು, ‘‘ಸಾಹಿತಿಗಳನ್ನು ಪಕ್ಷದ ಕಚೇರಿಗೆ ಕರೆದು ಸಭೆ ನಡೆಸಿರುವುದು ನಾನೇ. ಅದರಲ್ಲಿ ತಪ್ಪೇನು? ಸಾಹಿತಿಗಳೂ ರಾಜಕಾರಣಿಗಳೇ ಆಗಿದ್ದಾರೆ. ಅವರು ಬಾಯಿ ಬಿಟ್ಟು ಹೇಳುವುದಿಲ್ಲ’’ ಎಂದಿದ್ದಾರೆ. ‘‘ಅಕಾಡಮಿಯ ನೇಮಕಗಳೂ ನಿಗಮ ಮತ್ತು ಮಂಡಳಿಗಳ ನೇಮಕದಂತೆ ಪಕ್ಷದ ಹಿತಾಸಕ್ತಿಗೆ ಅನುಗುಣವಾಗಿ ನಡೆಯುವ ನೇಮಕಗಳಾಗಿವೆ. ಅಕಾಡಮಿಗಳಿಗೆ ಸ್ವಾಯತ್ತತೆ ಎಂದೇನೂ ಇಲ್ಲ. ಎಲ್ಲಿ ಬೇಕಾದರೂ ಸಭೆ ನಡೆಸಬಹುದು’’ ಎಂದು ಸ್ಪಷ್ಟಪಡಿಸಿದ್ದಾರೆ. ಡಿಕೆಶಿಯ ಈ ಹೇಳಿಕೆ ಸರ್ವಾಧಿಕಾರಿ ಧೋರಣೆಯನ್ನು ಹೊಂದಿದೆ ಎಂದು ಹಲವು ಸಾಹಿತಿಗಳು, ಪ್ರಗತಿಪರ ಚಿಂತಕರು ಟೀಕಿಸಿದ್ದಾರೆ. ಆದರೆ ಡಿಕೆಶಿಯವರು ಇಂತಹದೊಂದು ಹೇಳಿಕೆ ನೀಡಲು ಸ್ವತಃ ಅಕಾಡಮಿಗಳ ಅಧ್ಯಕ್ಷರುಗಳು ಎಷ್ಟರಮಟ್ಟಿಗೆ ಹೊಣೆಗಾರರು ಎನ್ನುವುದರ ಬಗ್ಗೆ ಆತ್ಮಾವಲೋಕನ ಮಾಡದೇ ಏಕಮುಖವಾಗಿ ಡಿಕೆಶಿಯವರನ್ನು ಟೀಕಿಸುವುದು ತಪ್ಪಾಗುತ್ತದೆ. ಮುಖ್ಯವಾಗಿ, ಸಾಂಸ್ಕೃತಿಕ ಚಿಂತಕರು, ಸಾಹಿತಿಗಳ ಪಾಲಿಗೆ ರಾಜಕೀಯ ಯಾವ ಕಾರಣಕ್ಕೂ ಅಸ್ಪಶ್ಯವಾಗಬಾರದು. ಅವರ ಬರಹ, ಮಾತು, ಕೃತಿಗಳು ರಾಜಕೀಯಕ್ಕೆ ಮಾರ್ಗದರ್ಶಿಯಾಗಬೇಕು. ಆದುದರಿಂದ ರಾಜಕಾರಣಿಗಳಿರುವ ಸಭೆಯಲ್ಲಿ ಸಾಹಿತಿಗಳು, ಚಿಂತಕರು ಭಾಗವಹಿಸುವುದು ಅತ್ಯಗತ್ಯ. ಹಾಗೆಂದು, ರಾಜಕಾರಣಿಗಳು ಸಭಿಕರ ಸ್ಥಾನದಲ್ಲಿ, ಚಿಂತಕರು ವೇದಿಕೆಯಲ್ಲೇ ಇರಬೇಕು ಎಂದೇನೂ ಇಲ್ಲ. ಕನಿಷ್ಠ, ಪರಸ್ಪರ ಮಾತು-ಕತೆಗಳನ್ನು ಕೊಡುಕೊಳ್ಳುವಿಕೆಯ ರೂಪದಲ್ಲಿ ಹಂಚಿಕೊಳ್ಳಲು ಸುಲಭವಾಗುವಂತೆ ಎರಡೂ ಗುಂಪುಗಳು ಸಮಾನ ವೇದಿಕೆಯಲ್ಲಿರುವುದು ಅತ್ಯಗತ್ಯವಾಗಿತ್ತು. ಸಮಸ್ಯೆಯಾಗಿದ್ದೆಂದರೆ, ಹತ್ತು ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಗುರುತಿಸಿಕೊಂಡಿರುವ ರಾಜಕೀಯ ನಾಯಕರಿಂದ ಈ ಅಕಾಡಮಿಗಳ ಅಧ್ಯಕ್ಷರು ನೈತಿ ಉಪದೇಶಗಳನ್ನು ಕೇಳಿಸಿಕೊಳ್ಳುವಂತಹ ದುರ್ಗತಿ ಬಂದಿರುವುದು. ಆದರೆ ಅವರ ಈ ದುರ್ಗತಿಗೆ ನಾವು ಕೇವಲ ಡಿಕೆಶಿಯವರನ್ನು ಹೊಣೆ ಮಾಡಿ ಕೈ ತೊಳೆದುಕೊಳ್ಳುವಂತಿಲ್ಲ. ಅಕಾಡಮಿ ಅಧ್ಯಕ್ಷರುಗಳೇ ಇಂತಹದೊಂದು ಸ್ಥಿತಿಯನ್ನು ರಾಜಕಾರಣಿಗಳಿಂದ ಬೇಡಿ ಪಡೆದುಕೊಂಡಿದ್ದಾರೆ.

ಸಾಧಾರಣವಾಗಿ ಸಾಹಿತ್ಯ ಅಕಾಡೆಮಿಗಳಂತಹ ಸಂಸ್ಥೆಗಳಿಗೆ ಅರ್ಹರನ್ನು ಆಯ್ಕೆ ಮಾಡಲು ಒಂದು ಸಮಿತಿಯನ್ನು ನೇಮಿಸಲಾಗುತ್ತದೆ. ಈ ಸಮಿತಿಯಲ್ಲಿ ಹಿರಿಯ ಸಾಹಿತಿಗಳು, ಪತ್ರಕರ್ತರು ಒಳಗೊಂಡಂತೆ ಹಲವು ಹಿರಿಯ, ಅನುಭವಿ ಗಣ್ಯರಿರುತ್ತಾರೆ. ಅವರು ಅಳೆದು ತೂಗಿ ಅರ್ಹ ಅಭ್ಯರ್ಥಿಗಳ ಹೆಸರನ್ನು ಸರಕಾರಕ್ಕೆ ಕಳುಹಿಸುತ್ತಾರೆ. ಆದರೆ, ಈ ಸಮಿತಿಯ ಆಯ್ಕೆಯನ್ನು ಬದಿಗಿಟ್ಟು ರಾಜಕಾರಣಿಗಳು ತಮ್ಮ ಆಪ್ತರ ಹೆಸರನ್ನು ಅಂತಿಮವಾಗಿ ಘೋಷಿಸುತ್ತಾರೆ. ಆಯ್ಕೆ ಸಮಿತಿಯ ಆಯ್ಕೆಯನ್ನು ಬದಿಗಿಡಲು ರಾಜಕಾರಣಿಗಳ ಮೇಲೆ ಒತ್ತಡ ಹೇರುವವರೂ ಈ ಅಕಾಡಮಿ ಅಧ್ಯಕ್ಷ ಸ್ಥಾನ ಆಕಾಂಕ್ಷಿ ಸಾಹಿತಿಗಳು, ಸಂಘಟಕರೇ ಆಗಿರುತ್ತಾರೆ ಎನ್ನುವುದು ವಾಸ್ತವ. ಇವರ ಒತ್ತಡಗಳು ಯಾವುದೇ ರಾಜಕಾರಣಿಗಳು ನಿಗಮ, ಮಂಡಳಿ, ಸಚಿವ ಸ್ಥಾನಗಳಿಗೆ ನಡೆಸುವ ಲಾಬಿಗಳಿಗಿಂತ ಕಡಿಮೆಯಿರುವುದಿಲ್ಲ. ಬಹುತೇಕ ಅಕಾಡಮಿ ಅಧ್ಯಕ್ಷರುಗಳು, ಸದಸ್ಯರುಗಳು ಆಯ್ಕೆ ಸಮಿತಿಯ ಆಯ್ಕೆಗಳೇ ಅಲ್ಲ. ಅವರೆಲ್ಲ ನೇರವಾಗಿ ರಾಜಕಾರಣಿಗಳಿಗೆ ರಾಜಕೀಯ ಒತ್ತಡಗಳನ್ನು ಹೇರಿ ನೇಮಕವಾದವರು. ಒಂದೆಡೆ ಆಯ್ಕೆ ಸಮಿತಿಗಳು ಅಕಾಡಮಿ ಅಧ್ಯಕ್ಷರ ಆಯ್ಕೆಗೆ ಸಭೆ ನಡೆಸುತ್ತಿರುವಾಗಲೇ, ಇತ್ತ ಕೆಲವು ಸ್ವಯಂಘೋಷಿತ ಸಾಹಿತಿಗಳು ರಾಜಕಾರಣಿಗಳ ಮೇಲೆ ಒತ್ತಡ ಹಾಕಿ ತಮಗೆ ತಾವೇ ಅಕಾಡಮಿ ಅಧ್ಯಕ್ಷರೆಂದು ಘೋಷಿಸಿಕೊಂಡಿರುತ್ತಾರೆ. ಈ ಅನುಭವದ ಆಧಾರದಲ್ಲಿ ಡಿಕೆಶಿ ಅವರು ಈ ಅಕಾಡಮಿಗಳ ಅಧ್ಯಕ್ಷರನ್ನು ರಾಜಕಾರಣಿಗಳು ಎಂದು ಕರೆದಿದ್ದಾರೆ. ಆದುದರಿಂದ, ನಾವು ಮೊದಲು ಖಂಡಿಸಬೇಕಾಗಿರುವುದು ಡಿಕೆಶಿ ಅವರನ್ನಲ್ಲ. ರಾಜಕಾರಣಿಗಳ ಚೇಲಾಗಳ ಮೂಲಕ ಲಾಬಿ ಮಾಡಿ ಅಕಾಡಮಿಗಳ ಅಧ್ಯಕ್ಷ ಸ್ಥಾನಗಳನ್ನು ಗಿಟ್ಟಿಸಿಕೊಂಡವರೆಲ್ಲರೂ ಅಂತಹದೊಂದು ಅವಮಾನಕ್ಕೆ ಅರ್ಹರಾಗಿದ್ದಾರೆ. ಆದುದರಿಂದ, ಮೊದಲು ತಿದ್ದಿಕೊಳ್ಳಬೇಕಾಗಿರುವುದು ರಾಜಕಾರಣಿಗಳಲ್ಲ, ಸಾಹಿತಿಗಳು. ಅಕಾಡಮಿಯ ಅಧ್ಯಕ್ಷ, ಸದಸ್ಯ ಜುಜುಬಿ ಸ್ಥಾನಮಾನಕ್ಕೆ ಸಾಹಿತಿಗಳೆಂದು ಕರೆಸಿಕೊಂಡವರು ನಡೆಸುವ ಲಾಬಿಗಳಿಗೆ ರಾಜಕಾರಣಿಗಳೇ ಕೆಲವೊಮ್ಮೆ ದಂಗು ಬಡಿಯುವುದಿದೆ. ಈ ಕಾರಣಕ್ಕಾಗಿಯೇ ನೂತನವಾಗಿ ಆಯ್ಕೆಯಾಗಿರುವ ಅಕಾಡಮಿ ಅಧ್ಯಕ್ಷರುಗಳನ್ನು ಕೂರಿಸಿಕೊಂಡು ಡಿಕೆಶಿ ನೇತೃತ್ವದಲ್ಲಿ ರಾಜಕಾರಣಿಗಳು ಅವರಿಗೆ ನೈತಿಕತೆಯ ಪಾಠವನ್ನು ಬೋಧಿಸಿದ್ದಾರೆ. ಮತ್ತು ಈ ಪಾಠಗಳನ್ನು ವಿದ್ಯಾರ್ಥಿಗಳಂತೆ ಕುಳಿತು ಕಿವಿಗೊಟ್ಟು ಆಲಿಸುವಾಗ ಅವರಿಗೆ ಯಾವ ಮುಜುಗರವೂ ಆಗಿಲ್ಲ ಎನ್ನುವುದೇ ಅವರು ಸಾಹಿತಿಗಳು ಮಾತ್ರವಲ್ಲ ರಾಜಕಾರಣಿಗಳು ಕೂಡ ಎನ್ನುವ ಡಿಕೆಶಿ ಮಾತುಗಳಿಗೆ ಸಮರ್ಥನೆಯನ್ನು ನೀಡುತ್ತದೆ.

ನಿಜಕ್ಕೂ ಡಿಕೆಶಿ ಅವರ ಹೇಳಿಕೆ ತಪ್ಪೇ ಆಗಿದ್ದರೆ ಅದನ್ನು ಮೊದಲು ಅಲ್ಲಗಳೆಯ ಬೇಕಾದವರು ನೂತನವಾಗಿ ಆಯ್ಕೆಯಾಗಿರುವ ಅಕಾಡಮಿಗಳ ಅಧ್ಯಕ್ಷರುಗಳು ಮತ್ತು ಸದಸ್ಯರುಗಳು. ಆದರೆ ಅವರು ಈವರೆಗೆ ತುಟಿ ಬಿಚ್ಚಿಲ್ಲ. ‘ಮೌನ ಸಮ್ಮತಿಯ ಲಕ್ಷಣ’ ಎನ್ನುವಂತೆ ಡಿಕೆಶಿ ಹೇಳಿಕೆಗೆ ಎಲ್ಲ ಅಕಾಡಮಿಯ ಅಧ್ಯಕ್ಷರುಗಳು ತಮ್ಮ ಮೌನದ ರುಜುವನ್ನು ಒತ್ತಿದ್ದಾರೆ. ಅಕಾಡೆಮಿಗಳ ಸ್ಥಾನಕ್ಕಾಗಿ ರಾಜಕಾರಣಿಗಳು ಏನು ಹೇಳಿದರೂ ಅದನ್ನು ಪ್ರಸಾದವಾಗಿ ಸ್ವೀಕರಿಸುತ್ತೇವೆ ಎನ್ನುವ ಮನಸ್ಥಿತಿಯನ್ನು ಹೊಂದಿರುವ ಸಾಹಿತಿಗಳಿರುವವರೆಗೆ ಡಿಕೆಶಿಯಂತಹ ಸರ್ವಾಧಿಕಾರಿಗಳು ಈ ಸಾಹಿತಿಗಳ ತಲೆಯ ಮೇಲೆ ತಮ್ಮ ಪಾದವೂರುವ ಧೈರ್ಯವನ್ನು ಮಾಡುತ್ತಲೇ ಇರುತ್ತಾರೆ. ಆದುದರಿಂದ ಡಿಕೆಶಿ ಹೇಳಿದ್ದು ತಪ್ಪು ಎಂದಾದರೆ ಅದನ್ನು ಸ್ಪಷ್ಟಪಡಿಸುವುದಕ್ಕಾದರೂ, ಅಕಾಡಮಿಗಳ ಅಧ್ಯಕ್ಷರು ಜಂಟಿಯಾಗಿ ಪತ್ರಿಕಾಗೋಷ್ಠಿಯನ್ನು ಕರೆದು ತಮ್ಮ ಹೇಳಿಕೆಗಳನ್ನು ನೀಡಬೇಕು. ಡಿಕೆಶಿಯವರು ತಮ್ಮ ಮಾತುಗಳನ್ನು ಹಿಂದೆಗೆಯದೇ ಇದ್ದರೆ, ಸಾಮೂಹಿಕವಾಗಿ ರಾಜೀನಾಮೆ ನೀಡುವ ನೈತಿಕ ಸ್ಥೈರ್ಯವನ್ನು ಪ್ರದರ್ಶಿಸಬೇಕು. ಆಗ ಮಾತ್ರ ಅಕಾಡಮಿಗಳ ಘನತೆ, ಗೌರವ ಭವಿಷ್ಯದಲ್ಲಿ ಉಳಿಯಬಹುದು. ಅಕಾಡೆಮಿಗಳ ಸ್ವಾಯತ್ತತೆಯ ಅಳಿವು ಉಳಿವು ರಾಜಕಾರಣಿಗಳ ಕೈಯಲ್ಲಿ ಖಂಡಿತ ಇಲ್ಲ. ಅದು ಅಕಾಡೆಮಿಗಳ ಅಧ್ಯಕ್ಷರ ಕೈಯಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News