ಬಿಜೆಪಿ ಬಳಸಿ ಎಸೆದ ಬಾಳೆಎಲೆ ಈಶ್ವರಪ್ಪ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈಶ್ವರಪ್ಪ ಬಿಜೆಪಿಯ ವಿರುದ್ಧವೇ ತನ್ನ ಮೂರನೇ ಕಣ್ಣನ್ನು ತೆರೆದಿದ್ದಾರೆ. ತನ್ನ ಪುತ್ರನಿಗೆ ಟಿಕೆಟ್ ಕೈ ತಪ್ಪಿದ ದಿನದಿಂದ ಶಿವಮೊಗ್ಗವನ್ನು ವೇದಿಕೆ ಮಾಡಿಕೊಂಡು ರುದ್ರ ತಾಂಡವವಾಡುತ್ತಿರುವ ಈಶ್ವರಪ್ಪ ಅವರು, ಯಡಿಯೂರಪ್ಪ ಅವರ ಲಿಂಗಾಯತ ಲಾಬಿಯ ವಿರುದ್ಧ ಹಿಂದುಳಿದ ವರ್ಗದ ಶಕ್ತಿಯನ್ನು ಎತ್ತಿ ಕಟ್ಟಲು ಮತ್ತೆ ಸಿದ್ಧತೆ ನಡೆಸುತ್ತಿದ್ದಾರೆ. ತನ್ನ ಹೋರಾಟ ಬಿಜೆಪಿಯ ವಿರುದ್ಧವಲ್ಲ, ಯಡಿಯೂರಪ್ಪ ಅವರ ವಿರುದ್ಧ ಎನ್ನುವುದನ್ನೂ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಟಿಕೆಟ್ ಕೈ ತಪ್ಪಿದ ಬೆನ್ನಿಗೇ ಬಂಡಾಯ ಸ್ಪರ್ಧಿಸುವ ಘೋಷಣೆಯನ್ನು ಮಾಡಿದರು. ಇದಾದ ಬಳಿಕ, ಅಮಿತ್ ಶಾ ತನ್ನನ್ನು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡರು. ಅವರ ಮುಮ್ಮೇಳಕ್ಕೆ ಯತ್ನಾಳ್ ಹಿಮ್ಮೇಳವಾದರು. ‘‘ಈಶ್ವರಪ್ಪ ದಿಲ್ಲಿಗೆ ತೆರಳಿ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿ ಯಡಿಯೂರಪ್ಪರಿಗೆ ಪಾಠ ಕಲಿಸುತ್ತಾರೆ’’ ಎಂದು ಅಮಿತ್ ಶಾ-ಈಶ್ವರಪ್ಪ ಭೇಟಿಗೆ ಯತ್ನಾಳ್ ಅವರು ಇನ್ನಷ್ಟು ಬಣ್ಣ ತುಂಬಿದರು. ಹೃದಯವಿದ್ರಾವಕ ಸಂಗತಿಯೆಂದರೆ, ದಿಲ್ಲಿಯಲ್ಲಿ ಈಶ್ವರಪ್ಪರನ್ನು ಅಮಿತ್ ಶಾ ಭೇಟಿ ಮಾಡುವುದಿರಲಿ, ದೂರವಾಣಿಯ ಮೂಲಕವೂ ಸಂಪರ್ಕಿಸಲಿಲ್ಲ. ಅಮಿತ್ ಶಾ ಅವರು ಈಶ್ವರಪ್ಪರನ್ನು ಲೆಕ್ಕಕ್ಕೇ ತೆಗೆದುಕೊಂಡಿರಲಿಲ್ಲ.
‘ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬಂತೆ, ಅಮಿತ್ ಶಾ ಭೇಟಿಯಾಗದೆ ಬರಿಗೈಯಲಿ ವಾಪಾಸಾಗಿ, ‘ಚುನಾವಣೆಯಲ್ಲಿ ಸ್ಪರ್ಧಿಸಲು ಅಮಿತ್ ಪರೋಕ್ಷ ಸೂಚನೆಯನ್ನು ನೀಡಿದ್ದಾರೆ’ ಎಂದು ಮಾಧ್ಯಮಗಳಿಗೆ ಈಶ್ವರಪ್ಪ ಹೇಳಿಕೆ ನೀಡಿದರು. ದಿಲ್ಲಿಗೆ ಕರೆಸಿಕೊಂಡು ತನ್ನನ್ನು ಕಾಲಕಸ ಮಾಡಿದ ವರಿಷ್ಠರ ಬಗ್ಗೆ ಎಳ್ಳಷ್ಟು ಬೇಜಾರು ಮಾಡಿಕೊಳ್ಳದ ಈಶ್ವರಪ್ಪ ಅವರು ಅಮಿತ್ ಶಾ ನಿರ್ಲಕ್ಷ್ಯವನ್ನು ‘ನಿಮ್ಮೊಂದಿಗೆ ಮಾತುಕತೆ ನಡೆಸಲು ನಾನು ಸಿದ್ಧನಿಲ್ಲ, ಬೇಕಾದರೆ ಬಂಡಾಯ ಸ್ಪರ್ಧಿಸಿ’ ಎಂದು ವ್ಯಾಖ್ಯಾನಿಸಿದ್ದಾರೆ. ಬಂಡಾಯ ಸ್ಪರ್ಧಿಸಲು ಹೊರಟ ನನಗೆ ಅಮಿತ್ ಶಾ ನೀಡಿರುವ ಆಶೀರ್ವಾದ ಇದು ಎಂದು ಅವರು ಬಣ್ಣಿಸಿದ್ದಾರೆ. ಅವಮಾನಿಸಿ ಮುಖಕ್ಕೆ ಸೆಗಣಿ ಎಸೆದರೆ, ಆ ಸೆಗಣಿಯನ್ನೇ ಪ್ರಸಾದವೆಂದು ಈಶ್ವರಪ್ಪ ಸ್ವೀಕರಿಸಿದ್ದಾರೆ. ಈ ಮೂಲಕ ಬಿಜೆಪಿಯೊಳಗೆ ತಳಸ್ತರದ ಶೂದ್ರರು ಆರೆಸ್ಸೆಸ್‌ನ ಬಾಗಿಲು ಕಾಯುವ ಕೆಲಸವನ್ನು ಅದೆಷ್ಟು ನಿಷ್ಠಾವಂತರಾಗಿ ನಿರ್ವಹಿಸಿದರೂ, ಅಂತಿಮವಾಗಿ ಅವರ ಸ್ಥಾನವೇನು ಎನ್ನುವುದನ್ನು ಬಿಜೆಪಿ ವರಿಷ್ಠರೇ ತಿಳಿಸಿಕೊಟ್ಟಿದ್ದಾರೆ. ಇದೀಗ ಶಿವಮೊಗ್ಗದಲ್ಲಿ ಬಂಡಾಯ ಸ್ಪರ್ಧಿಸಲೇ ಬೇಕಾದಂತಹ ಸ್ಥಿತಿಗೆ ಬಂದು ನಿಂತಿದ್ದಾರೆ ಈಶ್ವರಪ್ಪ.
ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಯಡಿಯೂರಪ್ಪ ಅವರ ಕಾಲೆಳೆಯಲು ಯತ್ನಿಸಿ ಈಶ್ವರಪ್ಪ ಹಲವು ಬಾರಿ ಯಶಸ್ವಿಯಾಗಿದ್ದಾರೆ. ಅದೇ ರೀತಿಯಲ್ಲಿ ಬಿದ್ದಲ್ಲಿಂದ ಮತ್ತೆ ವಿಕ್ರಮ ರೂಪದಲ್ಲಿ ಯಡಿಯೂರಪ್ಪ ಎದ್ದು ನಿಂತಿದ್ದಾರೆ. ಈಶ್ವರಪ್ಪರಿಗೆ ಬಿಜೆಪಿಯಲ್ಲಿ ಸ್ವಂತ ವ್ಯಕ್ತಿತ್ವವೇನೂ ಇಲ್ಲ. ಕೋಮುದ್ವೇಷಿ ಹೇಳಿಕೆಗಳ ಮೂಲಕ ಆರೆಸ್ಸೆಸ್‌ನ್ನು ಒಲಿಸಿ ಆ ಮೂಲಕ ತನ್ನ ಸ್ಥಾನವನ್ನು ಭದ್ರ ಪಡಿಸುತ್ತಾ ಬಂದವರು ಈಶ್ವರಪ್ಪ. ಶಿವಮೊಗ್ಗದ ಸಾಮಾಜಿಕ ವಾತಾವರಣ ಕಲುಷಿತಗೊಳ್ಳಲು ಈಶ್ವರಪ್ಪ ಮತ್ತು ಅವರ ಪುತ್ರನ ಪಾತ್ರ ಬಹುದೊಡ್ಡದು. ಇದು ಈಶ್ವರಪ್ಪ ಕುಟುಂಬದ ರಾಜಕೀಯ ಗಳಿಕೆ, ಹೆಗ್ಗಳಿಕೆಯಾಗಿದೆ. ಲಿಂಗಾಯತ ಲಾಬಿ ಅದರಲ್ಲೂ ಯಡಿಯೂರಪ್ಪರನ್ನು ನೇರವಾಗಿ ಎದುರಿಸಿ ಕೈ ಸುಟ್ಟುಕೊಂಡಿರುವ ಆರೆಸ್ಸೆಸ್ ಈಗ ಈಶ್ವರಪ್ಪರಂತಹ ಶೂದ್ರ ನಾಯಕರನ್ನು ಅವರ ವಿರುದ್ಧ ಬಳಸಲು ಮುಂದಾಗಿದೆ. ಹಿಂದೂ-ಮುಸ್ಲಿಮರ ನಡುವೆ ವಿಷವನ್ನು ಬಿತ್ತುವ ದ್ವೇಷ ರಾಜಕೀಯಕ್ಕೂ ಆರೆಸ್ಸೆಸ್ ಇವರನ್ನು ಗರಿಷ್ಠವಾಗಿ ಬಳಸಿಕೊಂಡಿದೆ. ಲಿಂಗಾಯತ ಲಾಬಿಯನ್ನು ಎದುರಿಸುವುದಕ್ಕಾಗಿ ಈಶ್ವರಪ್ಪ ನೇತೃತ್ವದಲ್ಲಿ ಹಿಂದುಳಿದ ವರ್ಗದ ಬ್ರಿಗೇಡ್‌ನ್ನು ಕಟ್ಟಲಾಯಿತು. ಕುರುಬರೂ ಸೇರಿದಂತೆ ಹಿಂದುಳಿದ ವರ್ಗದ ಏಳಿಗೆಗಾಗಿ ಈಶ್ವರಪ್ಪರ ಬಳಿ ಯಾವುದೇ ಅಜೆಂಡಾಗಳಿರಲಿಲ್ಲ. ಆರೆಸ್ಸೆಸ್‌ನ ದ್ವೇಷ ರಾಜಕಾರಣಕ್ಕೆ ಹಿಂದುಳಿದ ವರ್ಗದ ಬ್ರಿಗೇಡ್‌ನ್ನು ಬಳಸುವ ಪ್ರಯತ್ನವಷ್ಟೇ ನಡೆಯಿತು. ಹಿಂದುಳಿದ ವರ್ಗಗಳ ನಾಯಕನಾಗುವ ಅವರ ಪ್ರಯತ್ನವೂ ವಿಫಲವಾಯಿತು. ಯಾವುದೇ ರಾಜಕೀಯ ಮುತ್ಸದ್ದಿತನವಿಲ್ಲದ ಈಶ್ವರಪ್ಪರ ಬಂಡವಾಳವೇ ಅವರ ನಾಲಗೆ. ದ್ವೇಷ ರಾಜಕಾರಣಕ್ಕೆ ಈಶ್ವರಪ್ಪರನ್ನು ಬಳಸಿಕೊಂಡರೂ, ಆರೆಸ್ಸೆಸ್‌ನ ಸಜ್ಜನ ಹಿರಿಯ ರಾಜಕಾರಣಿಗಳೆಲ್ಲರೂ ಇವರಿಂದ ಸದಾ ಅಂತರವನ್ನು ಕಾಪಾಡಿಕೊಂಡೇ ಬಂದಿದ್ದಾರೆ. ಯಾವತ್ತೂ ಇವರ ಹೇಳಿಕೆಗಳೊಂದಿಗೆ ಬಹಿರಂಗವಾಗಿ ಗುರುತಿಸಿಕೊಂಡಿಲ್ಲ.
ಲೋಕಸಭಾ ಚುನಾವಣೆಯ ಟಿಕೆಟ್ ನಿರಾಕರಣೆಯ ಬೆನ್ನಿಗೇ, ಬಂಡಾಯವಾಗಿ ನಿಲ್ಲಲು ಈಶ್ವರಪ್ಪರಿಗೆ ನೈತಿಕ ಸ್ಥೈರ್ಯ ಕೊಟ್ಟಿದ್ದು ಆರೆಸ್ಸೆಸ್‌ನೊಳಗಿರುವ ನಾಯಕರೇ ಆಗಿದ್ದಾರೆ. ಆ ಮೂಲಕ ಯಡಿಯೂರಪ್ಪರ ವಿರುದ್ಧ ರಾಜ್ಯ ನಾಯಕರು ತಿರುಗಿ ಬಿದ್ದಿದ್ದಾರೆ ಎನ್ನುವ ಸಂದೇಶವನ್ನು ದಿಲ್ಲಿ ವರಿಷ್ಠರಿಗೆ ನೀಡುವುದು ಆರೆಸ್ಸೆಸ್‌ನೊಳಗಿರುವ ಬ್ರಾಹ್ಮಣ್ಯ ಗುಂಪಿನ ಉದ್ದೇಶ. ಅಮಿತ್ ಶಾ ಅವರು ಭೇಟಿ ಮಾಡಿ ಮಾತುಕತೆ ನಡೆಸಲು ಬಯಸಿದ್ದಾರೆ ಎಂದು ಈಶ್ವರಪ್ಪರನ್ನು ದಾರಿ ತಪ್ಪಿಸಿರುವುದು ಕೂಡ ಈ ಆರೆಸ್ಸೆಸ್ ವರಿಷ್ಠರೇ ಆಗಿದ್ದಾರೆ. ಅದನ್ನು ನಿಜವೆಂದು ನಂಬಿ, ತಾನು ಚುನಾವಣೆಯಿಂದ ಹಿಂದೆ ಸರಿಯಬೇಕಾದರೆ, ಯಡಿಯೂರಪ್ಪ ಪುತ್ರನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂಬ ಬೇಡಿಕೆಯನ್ನು ಮುಂದಿಡಲು ಹೊರಟಿದ್ದರು. ತನ್ನ ಬಂಡಾಯ ಸ್ಪರ್ಧೆಯಿಂದ ಬಿಜೆಪಿ ವರಿಷ್ಠರು ನಿಜಕ್ಕೂ ಆತಂಕಕ್ಕೀಡಾಗಿದ್ದಾರೆ ಎಂದೇ ಅವರು ಭಾವಿಸಿದ್ದರು. ಆರೆಸ್ಸೆಸ್‌ನ ಮುಖಂಡರ ಮಾತುಗಳನ್ನು ನಂಬಿ ದಿಲ್ಲಿಗೆ ಹೊರಟ ಈಶ್ವರಪ್ಪ ಅವರಿಗೆ ಅಲ್ಲಿ ಆಘಾತ ಕಾದಿತ್ತು. ಅಮಿತ್ ಶಾ ಬಳಿ ಈಶ್ವರಪ್ಪರನ್ನು ಭೇಟಿ ಮಾಡುವ ಯಾವ ಕಾರ್ಯಕ್ರಮವೂ ಇರಲಿಲ್ಲ. ಈ ಭೇಟಿ ರಾಜ್ಯ ಬಿಜೆಪಿಯೊಳಗೆ ಅದೇನೋ ಭಾರೀ ಸಂಚಲನವನ್ನು ಸೃಷ್ಟಿಸುತ್ತದೆ ಎಂದು ನಿರೀಕ್ಷಿಸಿದವರಿಗೆ ನಿರಾಶೆ ಕಾದಿತ್ತು. ಸ್ವತಃ ಈಶ್ವರಪ್ಪ ಅವರೇ ದಿಲ್ಲಿಯಲ್ಲಿ ವರಿಷ್ಠರಿಂದ ತೀವ್ರ ಮುಖಭಂಗಕ್ಕೆ ಈಡಾಗಿದ್ದರು. ಆರೆಸ್ಸೆಸ್‌ನ ಸಹವಾಸ ಇಂತಹದೊಂದು ಅವಮಾನಕ್ಕೆ ಅವರನ್ನು ಅರ್ಹರನ್ನಾಗಿಸಿತ್ತು. ಈ ಅವಮಾನಕ್ಕೆ ಪ್ರತಿಯಾಗಿ ಆರೆಸ್ಸೆಸನ್ನಾಗಲಿ, ವರಿಷ್ಠರನ್ನಾಗಲಿ ಟೀಕಿಸುವ ಧೈರ್ಯವಿಲ್ಲದ ಈಶ್ವರಪ್ಪ ‘‘ತನ್ನನ್ನು ಭೇಟಿ ಮಾಡದೇ ಇರುವುದು ಅಮಿತ್ ಶಾ ಅವರ ಚಾಣಾಕ್ಷತನ. ಈ ಮೂಲಕ ಯಡಿಯೂರಪ್ಪ ಅವರ ಪುತ್ರನ ವಿರುದ್ಧ ಸ್ಪರ್ಧಿಸಲು ಪರೋಕ್ಷವಾಗಿ ಸೂಚನೆ ನೀಡಿದ್ದಾರೆ’’ ಎಂದು ಮೂಗು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಈಶ್ವರಪ್ಪ ಬಂಡಾಯ ಘೋಷಣೆ ಮಾಡಿರುವುದು ಪರೋಕ್ಷವಾಗಿ ಯಡಿಯೂರಪ್ಪರ ರಾಜಕೀಯ ನಡೆಯನ್ನು ಇನ್ನಷ್ಟು ಸುಲಭಗೊಳಿಸಿದೆ. ಬಿಜೆಪಿಯ ವಿರುದ್ಧ ತೊಡೆ ತಟ್ಟಿ ಯಡಿಯೂರಪ್ಪ ಗೆದ್ದಂತೆ ಈಶ್ವರಪ್ಪ ಅವರಿಗೆ ಗೆಲ್ಲಲು ಸಾಧ್ಯವಿಲ್ಲ. ಯಡಿಯೂರಪ್ಪ ಬೆನ್ನಿಗಿರುವ ರಾಜಕೀಯ ಬಲ, ಜಾತಿ ಬಲ ಈಶ್ವರಪ್ಪರಿಗೆ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಈಶ್ವರಪ್ಪ ನಿಂತರೂ ಮತ ಯಾಚಿಸುವುದು ಪ್ರಧಾನಿ ಮೋದಿಯವರನ್ನು ಮುಂದಿಟ್ಟು. ಸ್ವಂತ ಬಲದಿಂದ ಗೆಲ್ಲುವ ಶಕ್ತಿ ಈಶ್ವರಪ್ಪ ಪುತ್ರನಿಗೂ ಇಲ್ಲ. ಹೀಗಿರುವಾಗ ಅವರ ಸ್ಪರ್ಧೆಗೆ ಬಿಜೆಪಿಯಾಗಲಿ, ಯಡಿಯೂರಪ್ಪ ಆಗಲಿ ತಲೆಕೆಡಿಸಿಕೊಳ್ಳುವ ಸಾಧ್ಯತೆಗಳಿಲ್ಲ. ಈಶ್ವರಪ್ಪರನ್ನು ಬಳಸಿಕೊಂಡು ಯಡಿಯೂರಪ್ಪರನ್ನು ಬಗ್ಗು ಬಡಿಯುವ ಪ್ರಯತ್ನ ವಿಫಲವಾದುದಕ್ಕೆ ಆರೆಸ್ಸೆಸ್ ನಾಯಕರು ಒಳಗೊಳಗೆ ಕೈ ಹಿಚುಕಿಕೊಳ್ಳುತ್ತಿದ್ದಾರೆ. ಲೋಕಸಭಾ ಚುನಾವಣೆಯ ಬಳಿಕ ಈಶ್ವರಪ್ಪ ರಾಜಕೀಯವಾಗಿ ಸಂಪೂರ್ಣ ಮೂಲೆಗುಂಪಾಗುವ ಎಲ್ಲ ಸಾಧ್ಯತೆಗಳಿವೆ. ಶೂದ್ರ ನಾಯಕರನ್ನು ಬಿಜೆಪಿ ಹೇಗೆ ಬಳಸಿ ಎಸೆಯುತ್ತದೆ ಎನ್ನುವುದಕ್ಕೆ ಈಶ್ವರಪ್ಪ ಇನ್ನೊಂದು ಉದಾಹರಣೆಯಾಗಿದ್ದಾರೆ.