ಗ್ಯಾರಂಟಿಗಳು ಭಿಕ್ಷೆಯಲ್ಲ, ಜನಸಾಮಾನ್ಯರ ಹಕ್ಕು

Update: 2024-02-14 04:44 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯ ಪ್ರವಾಸಗೈದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ಗ್ಯಾರಂಟಿ ಯೋಜನೆ’ಗಳ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ರಾಜ್ಯ ಸರಕಾರಕ್ಕೆ ಬರಬೇಕಾಗಿದ್ದ ತೆರಿಗೆಯ ಹಣವನ್ನು ಕೇಂದ್ರ ಸರಕಾರ ಹಿಡಿದಿಟ್ಟುಕೊಂಡಿದೆ ಎನ್ನುವ ಆರೋಪಗಳಿಗೆ ಉತ್ತರಿಸುತ್ತಾ ‘‘ಗ್ಯಾರಂಟಿಗಳಿಂದಾಗಿ ರಾಜ್ಯದ ಬೊಕ್ಕಸ ಬರಿದಾಗಿದೆ. ಇದಕ್ಕೆ ಕೇಂದ್ರ ಸರಕಾರ ಹೊಣೆಯಲ್ಲ’’ ಎಂದು ಹೇಳಿದ್ದಾರೆ. ಬರಪರಿಹಾರಗಳನ್ನು ಬಿಡುಗಡೆ ಮಾಡಲು ಯೋಗ್ಯತೆಯಿಲ್ಲದ ಈ ಕೇಂದ್ರ ಸಚಿವರು, ರಾಜ್ಯದ ಜನತೆಗೆ ನೀಡುತ್ತಿರುವ ಗ್ಯಾರಂಟಿಗಳನ್ನು ಮೊದಲು ವಾಪಸ್ ತೆಗೆದುಕೊಳ್ಳಿ ಎಂದು ರಾಜ್ಯ ಸರಕಾರವನ್ನು ಪರೋಕ್ಷವಾಗಿ ಒತ್ತಾಯಿಸಿದ್ದಾರೆ. ಮತ್ತು ಬಿಜೆಪಿಯ ರಾಜ್ಯ ನಾಯಕರು ಕೇಂದ್ರದ ತಮ್ಮ ವರಿಷ್ಠರ ಮಾತುಗಳಿಗೆ ತಲೆದೂಗಿಸಿದ್ದಾರೆ. ರಾಜ್ಯದ ಜನಪರ ಕಾರ್ಯಕ್ರಮಗಳು ಕೇಂದ್ರದ ನಾಯಕರಿಗೆ ತಲೆನೋವಾಗಿದೆ ಎನ್ನುವುದು ಇದರಿಂದ ಸ್ಪಷ್ಟವಾಗಿದೆ. ಆಡಳಿತ ನಡೆಸುವುದೆಂದರೆ ಬಡವರಿಂದ ಕಿತ್ತು ಅಂಬಾನಿ, ಅದಾನಿಯಂತಹ ಕಾರ್ಪೊರೇಟ್ ಕುಳಗಳಿಗೆ ಪುಕ್ಕಟೆ ನೀಡುವುದು ಎಂದು ತಿಳಿದುಕೊಂಡಿರುವ ಕೇಂದ್ರ ಸರಕಾರವು ರಾಜ್ಯದ ಗ್ಯಾರಂಟಿ ಯೋಜನೆಗಳಿಂದ ತೀವ್ರ ಮುಜುಗರಕ್ಕೆ ಸಿಲುಕಿಕೊಂಡಿದೆ. ಗ್ಯಾರಂಟಿ ಯೋಜನೆಗಳು ಯಾವ ಕಾರಣಕ್ಕೂ ಯಶಸ್ವಿಯಾಗಬಾರದು ಎನ್ನುವ ಕಾರಣಕ್ಕಾಗಿಯೇ ರಾಜ್ಯದ ಪಾಲನ್ನು ನೀಡದೆ ಸತಾಯಿಸುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿ ಬಿಡುತ್ತದೆ.

ಮುಖ್ಯವಾಗಿ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತಕ್ಕೆ ಹೇಗೆ ಆಡಳಿತ ನಡೆಸಬೇಕು ಎನ್ನುವುದನ್ನು ಉತ್ತರ ಭಾರತದ ನಾಯಕರು ಕಲಿಸಬೇಕಾಗಿಲ್ಲ. ತಮ್ಮ ಆಡಳಿತದಿಂದಾಗಿ ಉತ್ತರ ಭಾರತಕ್ಕೆ ಅವರು ಯಾವ ಸ್ಥಿತಿಯನ್ನು ತಂದಿಟ್ಟಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಧರ್ಮ ರಾಜಕಾರಣದ ಮೂಲಕ ಅಧಿಕಾರ ಹಿಡಿದ ಸರಕಾರವೊಂದು ಜನರ ಅಭಿವೃದ್ಧಿಗೆ ಸಹಜವಾಗಿಯೇ ಒತ್ತು ನೀಡುವುದಿಲ್ಲ. ಯಾಕೆಂದರೆ, ಗಲಭೆಗಳ ಮೂಲಕ ಸುಲಭವಾಗಿ ಮತಗಳನ್ನು ತಮ್ಮದಾಗಿಸಿಕೊಳ್ಳಲು ಸಾಧ್ಯವಿರುವಾಗ ಅಭಿವೃದ್ಧಿಯ ಮೂಲಕ ಜನರನ್ನು ಒಲಿಸುವ ಅಗತ್ಯವಿಲ್ಲ ಎನ್ನುವುದು ಅವರಿಗೆ ಗೊತ್ತಿದೆ. ಉತ್ತರ ಭಾರತದ ಜನರಿಗೆ ಕೋಮುಗಲಭೆಗಳನ್ನು, ತ್ರಿಶೂಲಗಳನ್ನು, ಮಂದಿರಗಳನ್ನೇ ‘ಗ್ಯಾರಂಟಿ’ಗಳಾಗಿ ಬಿಜೆಪಿ ನೇತೃತ್ವದ ಸರಕಾರಗಳು ಹಂಚುತ್ತಿವೆ. ಆ ಮೂಲಕವೇ ಅಧಿಕಾರ ಹಿಡಿದಿರುವ ಅಮಿತ್ ಶಾ ಅವರಿಗೆ ರಾಜ್ಯದಲ್ಲಿ ಜನಸಾಮಾನ್ಯರಿಗಾಗಿ ತೆರಿಗೆಯ ಹಣವನ್ನು ವೆಚ್ಚ ಮಾಡುವುದು ಅನಗತ್ಯವೆನಿಸಿದೆ. ರಾಜ್ಯಗಳ ಭಾಷೆ, ಸಂಸ್ಕೃತಿಯ ಮೇಲೆ ಹೇರಿಕೆಗಳನ್ನು ಮಾಡುತ್ತಿರುವ ಸರಕಾರ ಆಡಳಿತವನ್ನೂ ತನ್ನ ಮೂಗಿನ ನೇರಕ್ಕೆ ನೀಡಬೇಕು ಎಂದು ರಾಜ್ಯ ಸರಕಾರಗಳಿಗೆ ಆದೇಶ ನೀಡುತ್ತಿದೆ. ಒಂದು ವೇಳೆ ಆದೇಶವನ್ನು ಪಾಲಿಸದೇ ಇದ್ದರೆ ನಿಮಗೆ ನಿಮ್ಮ ಪಾಲಿನ ಹಣವನ್ನು ನಾವು ನೀಡುವುದಿಲ್ಲ ಎಂಬ ಬೆದರಿಕೆಯನ್ನು ಒಡ್ಡುತ್ತಿದೆ. ಅದರ ಭಾಗವಾಗಿಯೇ, ಗ್ಯಾರಂಟಿಗಳ ವಿರುದ್ಧ ಅಮಿತ್‌ಶಾ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸುತ್ತಿದ್ದಾರೆ. ದಕ್ಷಿಣ ಭಾರತವನ್ನು ಆರ್ಥಿಕವಾಗಿ ಜರ್ಜರಿತಗೊಳಿಸಿ ಉತ್ತರಭಾರತವನ್ನಾಗಿಸುವ ಉದ್ದೇಶ ಇದರ ಹಿಂದಿದೆ.

ರಾಜ್ಯದಲ್ಲಿ ಬಡವರಿಗಾಗಿ, ಮಹಿಳೆಯರಿಗಾಗಿ ಗ್ಯಾರಂಟಿಗಳನ್ನು ಜಾರಿಗೊಳಿಸಿರುವುದು ಕೇಂದ್ರದ ಭಿಕ್ಷೆಯಿಂದಲ್ಲ ಎನ್ನುವುದನ್ನು ಮೊತ್ತ ಮೊದಲು ಅಮಿತ್ ಶಾ ಅವರಿಗೆ ಬಿಜೆಪಿಯ ರಾಜ್ಯ ನಾಯಕರು ತಿಳಿಸಿ ಕೊಡಬೇಕಾಗಿದೆ. ರಾಜ್ಯದ ಜನತೆಗೆ ಸರಕಾರ ಗ್ಯಾರಂಟಿಗಳನ್ನು ನೀಡಿರುವುದು ಅವರೇ ಕಟ್ಟಿದ ತೆರಿಗೆ ಹಣದಿಂದ. ಈ ದೇಶದ ಬಡವರು ಕಟ್ಟುತ್ತಿರುವ ಪರೋಕ್ಷ ತೆರಿಗೆ ನೇರ ತೆರಿಗೆಗಿಂತ ಹಲವು ಪಟ್ಟ್ಟು ಅಧಿಕ ಎನ್ನುವುದನ್ನು ಈಗಾಗಲೇ ಆರ್ಥಿಕ ತಜ್ಞರು ಹೇಳಿದ್ದಾರೆ. ಜನಸಂಖ್ಯೆಯ ಶೇ. ೫೦ ಇರುವ ಬಡವರ್ಗ ಹೆಚ್ಚಿನ ಪರೋಕ್ಷ ತೆರಿಗೆಗಳನ್ನು ಅಥವಾ ಬಳಕೆಗೆ ಸಂಬಂಧಿಸಿದ ತೆರಿಗೆಗಳನ್ನು ಪಾವತಿಸುತ್ತಾರೆ ಎನ್ನುವ ಅಂಶವನ್ನು ಆಕ್ಸ್‌ಫಾಮ್ ವರದಿ ಹೇಳುತ್ತದೆ. ವರದಿಯ ಪ್ರಕಾರ ಒಟ್ಟು ಜಿಎಸ್‌ಟಿಯಲ್ಲಿ ದೇಶದ ಜನಸಂಖ್ಯೆಯ ಕೆಳಭಾಗದಲ್ಲಿರುವ ಶೇ. ೫೦ ಜನರಿಂದ ಮೂರನೇ ಒಂದು ಭಾಗ (ಶೇ. ೬೪.೩)ತೆರಿಗೆ ಪಾವತಿಯಾಗುತ್ತದೆ. ಶೇ. ೧೦ ಶ್ರೀಮಂತ ಜನರಿಂದ ಕೇವಲ ಶೇ. ೩-೪ ತೆರಿಗೆ ಬರುತ್ತದೆ. ಇದೇ ಸಂದರ್ಭದಲ್ಲಿ ಶ್ರೀಮಂತರಿಗೆ ಅತ್ಯಧಿಕ ಸವಲತ್ತುಗಳನ್ನು ಅಥವಾ ಉಚಿತಗಳನ್ನು ಸರಕಾರ ಒದಗಿಸುತ್ತಾ ಬರುತ್ತಿದೆ. ಒಂದು ರೀತಿಯಲ್ಲಿ, ಜನಸಾಮಾನ್ಯರ ದುಡ್ಡಿನಿಂದ ಸರಕಾರ ಶ್ರೀಮಂತರನ್ನು ಸಲಹುತ್ತಾ ಬಂದಿದೆ. ಗ್ಯಾರಂಟಿಗಳೆಂದರೆ ಸರಕಾರ ನೀಡುವ ಭಿಕ್ಷೆಯೂ ಅಲ್ಲ. ಕೆರೆಯ ನೀರನ್ನು ಕೆರೆಗೆ ಚೆಲ್ಲಿದಂತೆ, ಜನರಿಂದ ಪಡೆದ ತೆರಿಗೆಯನ್ನು ಅವರ ಏಳಿಗೆಗೆೆ ಬಳಸಲಾಗುತ್ತದೆ.

ಮೊತ್ತ ಮೊದಲಾಗಿ ರಾಜ್ಯ ಸರಕಾರ ಕೇಳುತ್ತಿರುವುದು ತನ್ನ ಹಕ್ಕಿನ ಹಣವನ್ನು. ಅದನ್ನು ಹೇಗೆ ಬಳಸಬೇಕು ಎನ್ನುವುದನ್ನು ರಾಜ್ಯಕ್ಕೆ ಕೇಂದ್ರ ಸರಕಾರ ತಿಳಿಸಿಕೊಡುವ ಅಗತ್ಯವಿಲ್ಲ. ಯಾಕೆಂದರೆ ಶಿಕ್ಷಣ, ಆರೋಗ್ಯ, ತಂತ್ರಜ್ಞಾನ ಇವೆಲ್ಲ ಕ್ಷೇತ್ರಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳು ಮೇಲುಗೈ ಸಾಧಿಸಿವೆೆ. ಇದೇ ಸಂದರ್ಭದಲ್ಲಿ ಉತ್ತರ ಭಾರತದ ರಾಜ್ಯಗಳು ಹಣವನ್ನು ಯಾವ ರೀತಿಯಲ್ಲಿ ಪೋಲು ಮಾಡುತ್ತಿವೆ ಎನ್ನುವುದನ್ನು ಗಮನಿಸೋಣ. ಶಿವಾಜಿ ಪಾರ್ಕ್, ಪಟೇಲ್ ಪ್ರತಿಮೆ, ಮಂದಿರಗಳು ಎಂದು ಸಹಸ್ರಾರು ಕೋಟಿ ರೂಪಾಯಿಗಳನ್ನು ಸರಕಾರ ಉಡಾಯಿಸಿದೆ. ಇವೆಲ್ಲವೂ ಅನುತ್ಪಾದಕ ಯೋಜನೆಗಳು. ಅಭಿವೃದ್ಧಿಯ ಜೊತೆಗೆ ಇದಕ್ಕೆ ಯಾವ ಸಂಬಂಧವೂ ಇಲ್ಲ. ಇವುಗಳಿಗಾಗಿ ವೆಚ್ಚ ಮಾಡುತ್ತಿರುವುದು ಜನಸಾಮಾನ್ಯರ ಹಣವನ್ನು. ದಕ್ಷಿಣದ ರಾಜ್ಯದ ಜನರು ಕಟ್ಟಿದ ತೆರಿಗೆ ಹಣವನ್ನು ಉತ್ತರ ಭಾರತದ ಅಭಿವೃದ್ಧಿಗೆ ಸುರಿಯುತ್ತಿದ್ದರೆ ಇಂದು ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳ ಸ್ಥಿತಿ ಇಷ್ಟು ದೈನೇಸಿಯಾಗುತ್ತಿರಲಿಲ್ಲ. ದಕ್ಷಿಣ ಭಾರತದ ಜನರ ತೆರಿಗೆಯ ಹಣದ ಅರ್ಹ ಪಾಲನ್ನು ಇಲ್ಲಿನ ಜನರಿಗೆ ಕೊಟ್ಟು ಬಳಿಕ ಉತ್ತರ ಭಾರತದ ಅಭಿವೃದ್ಧಿಗೆ ಬಳಸುತ್ತಿದ್ದರೆ ಇಂದು ದಕ್ಷಿಣ ರಾಜ್ಯಗಳು ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆಗಳನ್ನು ಮಾಡುತ್ತಿರಲಿಲ್ಲ ಎನ್ನುವುದನ್ನು ಅಮಿತ್ ಶಾ ಅವರಿಗೆ ರಾಜ್ಯದ ಬಿಜೆಪಿ ನಾಯಕರು ಮನವರಿಕೆ ಮಾಡಿಕೊಡಬೇಕು. ಕೋಮುಗಲಭೆಗಳು ಈ ದೇಶದ ಆರ್ಥಿಕತೆಯ ಮೇಲೆ ಬೀರಿರುವ ದುಷ್ಪರಿಣಾಮಗಳೆಷ್ಟು, ಅರ್ಥವ್ಯವಸ್ಥೆಗೆ ಅದು ಮಾಡಿದ ಹಾನಿಯೆಷ್ಟು ಎನ್ನುವುದನ್ನು ಕೂಡ ಆರ್ಥಿಕ ತಜ್ಞರು ವಿವರಿಸಿದ್ದಾರೆ. ಈ ದೇಶದ ಬಹುತೇಕ ಕೋಮುಗಲಭೆಗಳು ಸಂಘಪರಿವಾರ ಮತ್ತು ಬಿಜೆಪಿ ಜಂಟಿಯಾಗಿ ನೀಡಿದ ಗ್ಯಾರಂಟಿಗಳು. ಇವುಗಳು ಇಲ್ಲ ಎಂದಿದ್ದರೆ ಈ ದೇಶ ಯಾವತ್ತೂ ಸೂಪರ್ ಪವರ್ ದೇಶವಾಗಿ ಹೊರ ಹೊಮ್ಮುತ್ತಿತ್ತು. ಉತ್ತರ ಭಾರತದ ಈ ಗ್ಯಾರಂಟಿಗಳನ್ನು ಕರ್ನಾಟಕದಲ್ಲೂ ಜಾರಿಗೊಳಿಸಲು ಗರಿಷ್ಠ ಮಟ್ಟದಲ್ಲಿ ಬಿಜೆಪಿ ಪ್ರಯತ್ನಿಸುತ್ತಿದೆ. ತಮ್ಮ ಗ್ಯಾರಂಟಿಗಳನ್ನು ಜಾರಿಗೊಳಿಸಲು, ಕರ್ನಾಟಕದ ಗ್ಯಾರಂಟಿಗಳು ಅಡ್ಡಿಯಾಗುತ್ತಿವೆ ಎನ್ನುವುದೇ ಬಿಜೆಪಿ ನಾಯಕರ ಅತಿ ದೊಡ್ಡ ಸಮಸ್ಯೆಯಾಗಿದೆ.

ಕಳೆದ ಬಾರಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದ ಸಂದರ್ಭದಲ್ಲಿ ಯಾವುದೇ ಗ್ಯಾರಂಟಿಗಳನ್ನು ನೀಡಿರಲಿಲ್ಲ. ಆಗ ಕರ್ನಾಟಕದ ಖಜಾನೆ ತುಂಬಿ ತುಳುಕುತ್ತಿತ್ತೇ? ಯಾವ ಗ್ಯಾರಂಟಿಯನ್ನು ನೀಡದೆಯೇ ಅವರು ಖಜಾನೆಯನ್ನು ಬರಿದುಗೊಳಿಸಿದ್ದು ಹೇಗೆ? ನೋಟು ನಿಷೇಧ ಮತ್ತು ಲಾಕ್‌ಡೌನ್‌ಗಳು ಈ ದೇಶದ ಜನತೆಯ ಮೇಲೆ ಮಾಡಿರುವ ಗಾಯಗಳಿಗೆ ಹಚ್ಚಿದ ಮುಲಾಮುಗಳಾಗಿವೆ ಕರ್ನಾಟಕದ ಗ್ಯಾರಂಟಿಗಳು. ಗ್ಯಾರಂಟಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಎನ್ನುವುದು ಬಿಜೆಪಿ ನಾಯಕರ ಆಗ್ರಹವಾಗಬೇಕು. ಜನಸಾಮಾನ್ಯರ ಹಣವನ್ನು ಜನಸಾಮಾನ್ಯರಿಗೆ ವಾಪಸ್ ಮಾಡುವಾಗ ಅದನ್ನು ತಡೆಯುವ ಕೇಂದ್ರದ ನಾಯಕರಿಂದ ರಾಜ್ಯದ ಬಿಜೆಪಿಗೆ ಇನ್ನಷ್ಟು ಹಾನಿಯಾಗಲಿದೆ. ರಾಜ್ಯದ ಪಾಲಿನ ಹಣವನ್ನು ಕೊಡದೇ ಸತಾಯಿಸುತ್ತಾ, ಜನಸಾಮಾನ್ಯರ ಕಲ್ಯಾಣ ಕಾರ್ಯಕ್ರಮಗಳನ್ನು ತೆಗಳುವ ಕೇಂದ್ರದ ನಾಯಕರಿಗೆ ರಾಜ್ಯದ ಜನತೆಯೇ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News