ಅನ್ನಭಾಗ್ಯದ ಯಶಸ್ಸಿನಲ್ಲಿ ನಾಡಿನ ಭವಿಷ್ಯ ನಿಂತಿದೆ

Update: 2023-07-01 04:49 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಅನ್ನವನಿಕ್ಕುವುದು, ನನ್ನಿಯ ನುಡಿಯುವುದು

ತನ್ನಂತೆ ಪರರ ಬಗೆಯುವುದು-ಸ್ವರ್ಗ ತಾ

ಬಿನ್ನಾಣವಲ್ಲ ಸರ್ವಜ್ಞ’

ನಮ್ಮ ಸಮಾಜವನ್ನು ಸ್ವರ್ಗವಾಗಿಸುವ ದಾರಿಯನ್ನು ಸರ್ವಜ್ಞ ಶತಮಾನಗಳ ಹಿಂದೆಯೇ ತಿಳಿಸಿ ಹೋಗಿದ್ದಾನೆ. ಅನ್ನ-ನನ್ನಿ-ತನ್ನಂತೆ ಪರರನ್ನೂ ಬಗೆಯುವುದು ಇವುಗಳು ನಾಡನ್ನು ಸ್ವರ್ಗವಾಗಿಸುತ್ತವೆೆ ಎಂದು ಅವನು ಅಭಿಪ್ರಾಯಪಡುತ್ತಾನೆ.ಅಸ್ತಿತ್ವಕ್ಕೆ ಬಂದಿರುವ ನೂತನ ಸರಕಾರದ ಬಹುಮುಖ್ಯ ಗ್ಯಾರಂಟಿಗಳಲ್ಲಿ ಒಂದು ‘ಅನ್ನಭಾಗ್ಯ’. ಆ ಭಾಗ್ಯವನ್ನು ಈಡೇರಿಸುವುದೆಂದರೆ ನನ್ನಿಯನ್ನು ಉಳಿಸಿಕೊಂಡಂತೆ. ಬಡವರ ನೋವು, ಸಂಕಟಗಳನ್ನು ತನ್ನಂತೆ ಬಗೆದು ಅರ್ಥ ಮಾಡಿಕೊಂಡಾಗ ಮಾತ್ರ ಅನ್ನ ಭಾಗ್ಯದಂತಹ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ಸಾಧ್ಯ. ಅನ್ನ ಭಾಗ್ಯದಂತಹ ಅಪ್ಪಟ ಜನಪರ ಯೋಜನೆಗಳು ಜಾರಿಯಾಗಬೇಕಾದರೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ರಾಜಕೀಯ ಮರೆತು ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ಇದೀಗ ಎಲ್ಲ ಅಡೆತಡೆಗಳನ್ನು ಮೀರಿ ನೂತನ ಸರಕಾರ ಅನ್ನ ಭಾಗ್ಯವನ್ನು ಜಾರಿಗೆ ತರಲು ಮುಂದಾಗಿದೆ. ಜು. 1ರಿಂದ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ. 5 ಕೆಜಿ ಅಕ್ಕಿ ಮತ್ತು ಇನ್ನು ಉಳಿದ 5 ಕೆ.ಜಿ.ಯನ್ನು ಹಣದ ರೂಪದಲ್ಲಿ ನೀಡಲು ಸರಕಾರ ನಿರ್ಧರಿಸಿದೆ. ಪ್ರತಿ ಕೆಜಿ ಅಕ್ಕಿಗೆ 34 ರೂ.ಯಂತೆ ಒಬ್ಬ ಸದಸ್ಯನಿಗೆ 170 ರೂ.ಯನ್ನು ಬ್ಯಾಂಕ್ ಖಾತೆಗೆ ಹಾಕಲು ಸರಕಾರ ನಿರ್ಧರಿಸಿದೆ. ಇದು ಅನುಷ್ಠಾನಗೊಂಡದ್ದೇ ಆದರೆ ಒಂದು ತಿಂಗಳಿಗೆ 750-800 ಕೋಟಿ ರೂ.ಬೇಕಾಗುತ್ತದೆ. ಅಕ್ಕಿ ಲಭ್ಯತೆ ಖಾತರಿಯಾದ ಬಳಿಕ ಅಕ್ಕಿಯನ್ನೇ ವಿತರಿಸಲಾಗುವುದು ಎಂದು ಸರಕಾರ ಭರವಸೆ ನೀಡಿದೆ.

5 ಕೆಜಿ ಅಕ್ಕಿಯ ಬದಲು ನಗದು ನೀಡಲು ನಿರ್ಧರಿಸಿದ ಬೆನ್ನಿಗೇ ಸರಕಾರದ ವಿರುದ್ಧ ಬಿಜೆಪಿ ಟೀಕೆಗಳ ಮಳೆ ಸುರಿಸಿದೆ. ‘‘ಇವರು ಕೊಡುವ ಹಣಕ್ಕೆ ಮಾರುಕಟ್ಟೆಯಲ್ಲಿ ಎರಡೂವರೆ ಕೆಜಿ ಅಕ್ಕಿ ಮಾತ್ರ ಬರುತ್ತದೆ’’ ಎಂದು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿಯವರು ವ್ಯಂಗ್ಯವಾಡಿದ್ದಾರೆ. ವಾಸ್ತವ ಬಿಜೆಪಿಯವರಿಗೆ ತಿಳಿಯದಿರುವುದೇನೂ ಅಲ್ಲ. ಪಡಿತರ ವ್ಯವಸ್ಥೆಯಡಿ ವಿತರಣೆ ಮಾಡಲು ಪ್ರತೀ ತಿಂಗಳು 135 ಲಕ್ಷ ಟನ್ ಅಕ್ಕಿಯ ಅಗತ್ಯವಿದೆ. ಪ್ರತೀ ಕೆಜಿಗೆ 31 ರೂ.ಯಂತೆ ಕೇಂದ್ರದ ಬಳಿ ಇರುವ ಅಕ್ಕಿಯನ್ನು ಕೊಂಡುಕೊಳ್ಳಲು ರಾಜ್ಯ ಸರಕಾರ ನಿರ್ಧರಿಸಿತ್ತು. ಕೇಂದ್ರದ ಬಳಿ 262 ಲಕ್ಷ ಟನ್ ಅಕ್ಕಿ ಲಭ್ಯವಿದ್ದರೂ ಅದನ್ನು ಕರ್ನಾಟಕಕ್ಕೆ ಮಾರಲು ನಿರಾಕರಿಸಿತು ಮಾತ್ರವಲ್ಲ, ಅವುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಹರಾಜಿಗೆ ನಿರ್ಧರಿಸಿದೆ. ಈ ಸಂದರ್ಭದಲ್ಲಿ ವಿರೋಧ ಪಕ್ಷದ ಹೊಣೆಗಾರಿಕೆ ದೊಡ್ಡದಿತ್ತು. ರಾಜ್ಯದಿಂದ ಅತ್ಯಧಿಕ ಬಿಜೆಪಿ ಸಂಸದರು ಪ್ರತಿನಿಧಿಸುತ್ತಿದ್ದಾರೆ. ರಾಜ್ಯದ ಜನರ ಮೂಲಭೂತ ಬೇಡಿಕೆ ಇದಾಗಿರುವುದರಿಂದ ರಾಜ್ಯಕ್ಕೆ ಅಕ್ಕಿಯನ್ನು ನೀಡುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುವುದು ಸಂಸದರ ಕರ್ತವ್ಯವಾಗಿತ್ತು. ಕೇಂದ್ರದಿಂದ ಅಕ್ಕಿ ಬರುವಂತೆ ಮಾಡಿದ್ದಿದ್ದರೆ ಇಂದು ರಾಜ್ಯ ಸರಕಾರವನ್ನು ಟೀಕಿಸುವ ಎಲ್ಲ ಅರ್ಹತೆಗಳನ್ನು ಬಿಜೆಪಿ ನಾಯಕರು ಪಡೆದುಕೊಳ್ಳುತ್ತಿದ್ದರು. ಆದರೆ ತೋರಿಕೆಗಾದರೂ ಅಕ್ಕಿ ಒದಗಿಸಲು ಸಂಸದರು ಕೇಂದ್ರ ಸರಕಾರವನ್ನು ಒತ್ತಾಯಿಸಲಿಲ್ಲ. ಮಾತ್ರವಲ್ಲ, ‘ಕೇಂದ್ರ ಸರಕಾರ ರಾಜ್ಯಕ್ಕೆ ಅಕ್ಕಿ ನೀಡುವ ಅಗತ್ಯವಿಲ್ಲ’ ಎನ್ನುವ ಹೇಳಿಕೆಗಳನ್ನು ನೀಡಿದರು. ಈ ಹಿಂದೆ ಯಡಿಯೂರಪ್ಪ ಸರಕಾರ ಅಧಿಕಾರದಲ್ಲಿದ್ದಾಗ ‘ರಾಜ್ಯಕ್ಕೆ ಮಳೆ ಪರಿಹಾರ ನೀಡುವ ಅಗತ್ಯವಿಲ್ಲ. ರಾಜ್ಯದ ಬೊಕ್ಕಸದಲ್ಲಿ ಸಾಕಷ್ಟು ಹಣವಿದೆ’ ಎಂದು ಹೇಳಿಕೆ ನೀಡಿದ್ದ ಸಂಸದರಿವರು. ಇಂತಹ ಸಂಸದರಿಗೆ, ರಾಜ್ಯದ ಬಡವರಿಗೆ ಅಕ್ಕಿಯ ಬದಲು ನಗದು ನೀಡುವುದನ್ನು ಟೀಕಿಸುವ ನೈತಿಕ ಹಕ್ಕಿದೆಯೆ?

ಬಡವರಿಗೆ ಹತ್ತು ಕೆಜಿ ಅಕ್ಕಿ ನೀಡುವುದರ ಬಗ್ಗೆ ಬಿಜೆಪಿಯು ತನ್ನ ನಿಲುವನ್ನು ಮೊದಲು ಸ್ಪಷ್ಟಪಡಿಸಬೇಕು. ಅಕ್ಕಿ ನೀಡುವ ಕುರಿತಂತೆ ಬಿಜೆಪಿ ನಾಯಕರಿಗೆ ನಿಜಕ್ಕೂ ಕಾಳಜಿಯಿದೆಯಾದರೆ, ಯಡಿಯೂರಪ್ಪ ಸರಕಾರದ ಅವಧಿಯಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ನೀಡುವ ಅಕ್ಕಿಯನ್ನು ಯಾಕೆ ಕಡಿತಗೊಳಿಸಲಾಯಿತು? ಅಷ್ಟೇ ಅಲ್ಲ, ಕಡಿಮೆ ಬೆಲೆಯಲ್ಲಿ ರಾಜ್ಯಾದ್ಯಂತ ಅನುಷ್ಠಾನಗೊಳಿಸಲಾಗಿದ್ದ ಇಂದಿರಾ ಕ್ಯಾಂಟೀನ್‌ನ್ನು ಬಿಜೆಪಿ ಸರಕಾರ ಯಾಕೆ ಮುಚ್ಚಿಸಿತು? ‘ತನ್ನಂತೆ ಪರರ ಬಗೆಯುವ’ ಸರಕಾರ ಮಾಡುವ ಕೃತ್ಯವೇ ಇದು? ಕೇಂದ್ರದಲ್ಲಿ ಪ್ರಧಾನಿ ಮೋದಿಯವರು ಕೂಡ ಕಾಂಗ್ರೆಸ್‌ನ ‘ಗ್ಯಾರಂಟಿ’ಗಳನ್ನು ಟೀಕಿಸುತ್ತಿದ್ದಾರೆ. ಮೋದಿಯ ಆಡಳಿತವನ್ನೇ ಮಾದರಿಯಾಗಿಸಿಕೊಂಡಿರುವ ಬಿಜೆಪಿ ನಾಯಕರು ಕೂಡ ಈ ಗ್ಯಾರಂಟಿಗಳನ್ನು ಅಂದರೆ ಉಚಿತವಾಗಿ ಅಕ್ಕಿ ನೀಡುವುದನ್ನು ವಿರೋಧಿಸುತ್ತಿದ್ದಾರೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅಕ್ಕಿ ನೀಡುವುದೇ ಇಷ್ಟವಿಲ್ಲದವರು, ಕೇಂದ್ರದಿಂದ ಅಕ್ಕಿಯನ್ನು ತರಿಸಲು ಯಾವುದೇ ಪ್ರಯತ್ನ ಮಾಡದೇ ಇರುವವರು, ಇದೀಗ ‘ಕೊಡುವ ಹಣದಿಂದ ಎರಡೂವರೆ ಕೆಜಿ ಅಕ್ಕಿ ಕೂಡ ಸಿಗುವುದಿಲ್ಲ’ ಎಂದು ವ್ಯಂಗ್ಯವಾಡುವುದಕ್ಕೆ ಅರ್ಥವಿದೆಯೆ? ಇವರು ನಿಜಕ್ಕೂ ವ್ಯಂಗ್ಯವಾಡುತ್ತಿರುವುದು ಬಡವರ ಹಸಿವನ್ನು, ಸಂಕಟಗಳನ್ನು. ಸರಕಾರ ನೀಡುವ 34 ರೂ.ಗೆ ಅಂಗಡಿಗಳಲ್ಲಿ ಒಂದು ಕೆಜಿ ಅಕ್ಕಿ ಸಿಗುವುದಿಲ್ಲ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಕೊಡುತ್ತಿದ್ದ ಅಕ್ಕಿಯನ್ನೇ ರದ್ದುಗೊಳಿಸಿದ್ದ ಹಿಂದಿನ ಸರಕಾರಕ್ಕಿಂತ ಇದು ವಾಸಿ ಎಂದು ಜನರು ಸಮಾಧಾನ ಪಟ್ಟುಕೊಳ್ಳಬೇಕಾಗಿದೆ. ಸರಕಾರ ನೀಡುವ ಅಕ್ಕಿಯ ಗುಣಮಟ್ಟದ ಬಗ್ಗೆ ತಕರಾರಿರುವವರು ಈ ನಗದನ್ನು ಬೇರೆ ಬೇರೆ ರೂಪದಲ್ಲಿ ಬಳಸಬಹುದು. ಅಕ್ಕಿಯ ಬದಲಿಗೆ ಬೇರೆ ಮೂಲಭೂತ ಅಗತ್ಯಗಳಿಗಾಗಿ ಈ ಹಣವನ್ನು ವ್ಯಯ ಮಾಡುವ ಅವಕಾಶ ಜನರಿಗಿದೆ. ಉಚಿತ ಅಕ್ಕಿಯನ್ನು ಪಡೆದು ಜನರು ಅದನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ಆರೋಪಗಳನ್ನು ವಿರೋಧ ಪಕ್ಷದ ನಾಯಕರುಗಳು ಮಾಡುತ್ತಿದ್ದಾರೆ. ಇದೀಗ ಹಣವನ್ನೇ ನೇರವಾಗಿ ವಿತರಿಸುತ್ತಿರುವುದರಿಂದ ಬಡವರಿಗೆ ಅವರ ಅಗತ್ಯಗಳಿಗೆ ಅನುಗುಣವಾಗಿ ಅಕ್ಕಿಯನ್ನು ಕೊಂಡು ಉಳಿದ ಚಿಲ್ಲರೆ ಹಣದಿಂದ ಇತರ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಬಹುದು.

ಅಪೌಷ್ಟಿಕತೆಯ ಕಾರಣಕ್ಕಾಗಿ ರಾಜ್ಯ ದೇಶದಲ್ಲಿ ಸುದ್ದಿಯಾಗುತ್ತಿದೆ ಎನ್ನುವ ಅಂಶವನ್ನು ನಾವು ಮರೆಯಬಾರದು. ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಅಪೌಷ್ಟಿಕತೆಯ ಭೀಕರತೆಯಿಂದಾಗಿ ಮಕ್ಕಳ ದೈಹಿಕ ಬೆಳವಣಿಗೆ ಕುಂಠಿತವಾಗುತ್ತಿರುವುದು ಈಗಾಗಲೇ ಸಮೀಕ್ಷೆಗಳಿಂದ ಹೊರ ಬಂದಿದೆ. 2022ರಲ್ಲಿ ರಾಜ್ಯದ ಆರೋಗ್ಯ ಇಲಾಖೆಯು ಹೈಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲೂ ಅಪೌಷ್ಟಿಕತೆ ಮತ್ತು ಹಸಿವಿನ ಗಂಭೀರ ಸಮಸ್ಯೆಯನ್ನು ಉಲ್ಲೇಖಿಸಿತ್ತು. ರಾಜ್ಯದಲ್ಲಿ 4 ಸಾವಿರಕ್ಕೂ ಅಧಿಕ ಅಪೌಷ್ಟಿಕತೆ ಮತ್ತು ಕಡಿಮೆ ತೂಕದಿಂದ ನರಳುತ್ತಿರುವ 5 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಆರೋಗ್ಯ ಇಲಾಖೆ ಪತ್ತ್ತೆ ಮಾಡಿದೆ. ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ, ಬೆಳಗಾವಿ ಮೊದಲಾದ ಪ್ರದೇಶಗಳಲ್ಲಿ ಹಸಿವಿನ ಕಾರಣದಿಂದ ಅನಾರೋಗ್ಯ ಪೀಡಿತ ಮಕ್ಕಳ ಸಂಖ್ಯೆ ಹೆಚ್ಚುತ್ತಿವೆ. ಈ ಹಸಿವು ಪರೋಕ್ಷವಾಗಿ ಶಿಕ್ಷಣ ಮತ್ತು ಇನ್ನಿತರ ಕ್ಷೇತ್ರಗಳ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತಿದೆ. ಸದ್ಯಕ್ಕೆ ಅನ್ನಭಾಗ್ಯದ ಮೂಲಕ ಸರಕಾರ ಆಕಾಶದಿಂದ ಸ್ವರ್ಗವನ್ನು ಧರೆಗಿಳಿಸದಿದ್ದರೂ ಪರವಾಗಿಲ್ಲ, ಈಗಾಗಲೇ ಹಸಿವು-ಅನಾರೋಗ್ಯದ ನರಕದಲ್ಲಿ ನರಳುತ್ತಿರುವವರನ್ನು ಅಲ್ಲಿಂದ ಭಾಗಶಃ ಹೊರಗೆ ತರುವ ಕೆಲಸ ಮಾಡಿದರೂ ಸಾಕು. ವಿರೋಧಪಕ್ಷ ಸರಕಾರದ ಅನ್ನಭಾಗ್ಯಕ್ಕೆ ಅಕ್ಕಿ ಸುರಿಯದಿದ್ದರೂ ಪರವಾಗಿಲ್ಲ, ಕಲ್ಲು ಸುರಿಯುವ ಕೆಲಸವನ್ನು ಮಾಡಬಾರದು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News