ಭಾರತೀಯ ವಿದ್ಯಾರ್ಥಿಗಳ ಮೇಲೆ ವಿದೇಶದಲ್ಲಿ ಹೆಚ್ಚುತ್ತಿರುವ ದೌರ್ಜನ್ಯ

Update: 2024-07-29 05:13 GMT

ಸಾಂದರ್ಭಿಕ ಚಿತ್ರ PC: x.com/NH_India

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಳೆದ ಜನವರಿಯಲ್ಲಿ ಅಮೆರಿಕದ ಸಿಯಾಟಲ್‌ನಲ್ಲಿ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂಡುಲಾ ಎಂಬವರು ರಸ್ತೆ ದಾಟುತ್ತಿದ್ದಾಗ ವಾಹನವೊಂದು ಢಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದರು. ಪೊಲೀಸ್ ಅಧಿಕಾರಿಯೊಬ್ಬ ಚಲಾಯಿಸುತ್ತಿದ್ದ ವಾಹನ ಈ ವಿದ್ಯಾರ್ಥಿನಿಗೆ ಢಿಕ್ಕಿ ಹೊಡೆದಿತ್ತು. ಪ್ರಕರಣ ಗಂಭೀರತೆಯನ್ನು ಪಡೆದದ್ದು, ಬೇರೆಯೇ ಕಾರಣಕ್ಕಾಗಿ. ಪೊಲೀಸ್ ಅಧಿಕಾರಿ ಈ ಸಾವನ್ನು ಅತ್ಯಂತ ಹಗುರವಾಗಿ ಪರಿಗಣಿಸಿ, ವೀಡಿಯೊ ಚಿತ್ರೀಕರಣ ಮಾಡಿದ್ದ. ‘‘ಸತ್ತವಳು ಸಾಮಾನ್ಯ ವ್ಯಕ್ತಿ. ಆಕೆಗೆ ಏನಿದ್ದರೂ 26 ವರ್ಷ. ನಗರಾಡಳಿತವು ಆಕೆಯ ಸಾವಿಗೆ 11 ಸಾವಿರ ಡಾಲರ್ ಪರಿಹಾರದ ಚೆಕ್ ಬರೆದುಕೊಟ್ಟರೆ ಸಾಕು’’ ಎಂದು ವ್ಯಂಗ್ಯವಾಗಿ ನಕ್ಕಿದ್ದ ವೀಡಿಯೊ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪೊಲೀಸ್ ಅಧಿಕಾರಿಯ ಈ ವರ್ತನೆ ತೀವ್ರ ಟೀಕೆಗೆ ಒಳಗಾಗಿತ್ತು. ಪ್ರಕರಣವನ್ನು ಅಮೆರಿಕ ಸರಕಾರ ಗಂಭೀರವಾಗಿ ತೆಗೆದುಕೊಂಡಿತು. ವಾಹನ ಅವಘಡದಲ್ಲಿ ಸಾವಿಗೀಡಾದ ಭಾರತೀಯ ವಿದ್ಯಾರ್ಥಿನಿಯ ಬಗ್ಗೆ ವ್ಯಂಗ್ಯವಾಡಿದ ಹಾಗೂ ಸಂವೇದನಾ ರಹಿತ ಹೇಳಿಕೆಗಳನ್ನು ನೀಡಿದ ಸಿಯಾಟಲ್ ಪೊಲೀಸ್ ಅಧಿಕಾರಿಯನ್ನು ಕಳೆದ ಬುಧವಾರ ಸೇವೆಯಿಂದ ವಜಾಗೊಳಿಸಿತು. ಪೊಲೀಸ್ ಅಧಿಕಾರಿಯ ಬೇಜವಾಬ್ದಾರಿಯಷ್ಟೇ ಅವಘಡಕ್ಕೆ ಕಾರಣವಲ್ಲ. ಆ ಅವಘಡಕ್ಕೆ ಆತ ಸ್ಪಂದಿಸಿದ ರೀತಿ, ವಿದೇಶಿ ವಿದ್ಯಾರ್ಥಿಗಳ ಅದರಲ್ಲೂ ಭಾರತೀಯ ವಿದ್ಯಾರ್ಥಿಗಳ ಕುರಿತಂತೆ ಆತನಿಗಿರುವ ಮನಸ್ಥಿತಿಯನ್ನು ಬಹಿರಂಗಪಡಿಸಿದೆ. ಇತ್ತೀಚಿನ ದಿನಗಳಲ್ಲಿ ಅಮೆರಿಕವೂ ಸೇರಿದಂತೆ ಯುರೋಪ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಮತ್ತು ಅದನ್ನು ಸಂಭ್ರಮಿಸುತ್ತಿರುವ ರೀತಿ ನಿಜಕ್ಕೂ ಆತಂಕಕಾರಿಯಾಗಿದೆ.

ಕಳೆದ ಐದು ವರ್ಷಗಳಲ್ಲಿ ವಿದೇಶಗಳಲ್ಲಿ ಕಲಿಯುವುದಕ್ಕೆ ತೆರಳಿದ್ದ 633 ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎನ್ನುವುದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಂಸತ್ತಿನಲ್ಲಿ ತಿಳಿಸಿದೆ. ಕೆನಡಾದಲ್ಲಿ ಗರಿಷ್ಠ ವಿದ್ಯಾರ್ಥಿಗಳು ಅಂದರೆ 172 ಮಂದಿ ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ 108, ಬ್ರಿಟನ್‌ನಲ್ಲಿ 58, ಆಸ್ಟ್ರೇಲಿಯದಲ್ಲಿ 57, ರಶ್ಯದಲ್ಲಿ 37 ಮತ್ತು ಜರ್ಮನಿಯಲ್ಲಿ 24 ಸಾವುಗಳು ಸಂಭವಿಸಿವೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. ನೆರೆಯ ಪಾಕಿಸ್ತಾನದಲ್ಲಿ ಅತ್ಯಂತ ಕನಿಷ್ಠ ಅಂದರೆ ಒಬ್ಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಸಾಧಾರಣವಾಗಿ ಅವಘಡದಲ್ಲಿ ಸಂಭವಿಸುವ ಸಾವುಗಳ ಕುರಿತಂತೆ ಅಸಹಾಯಕರಾಗಬೇಕಾಗುತ್ತದೆ. ಕೆಲವೊಮ್ಮೆ ವಿದ್ಯಾರ್ಥಿಗಳ ಬೇಜವಾಬ್ದಾರಿಯಿಂದಲೂ ಸಾವುಗಳು ಸಂಭವಿಸುತ್ತವೆ. ಒತ್ತಡಗಳ ಪರಿಣಾಮವಾಗಿ ಮಾನಸಿಕ ಖಿನ್ನತೆಯಂತಹ ಸಮಸ್ಯೆಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳೂ ಹೆಚ್ಚುತ್ತಿವೆ. ಇವೆಲ್ಲಕ್ಕಿಂತ ಹೆಚ್ಚಾಗಿ, ಭಾರತೀಯ ವಿದ್ಯಾರ್ಥಿಗಳು ಅಲ್ಲಿನ ಹಿಂಸಾಚಾರಕ್ಕೆ ಬಲಿಯಾಗುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಒಟ್ಟು ಸಾವುಗಳ ಪೈಕಿ 19 ಹಿಂಸಾಚಾರದಿಂದ ಸಂಭವಿಸಿವೆ. ಇಲ್ಲಿಯೂ ಕೆನಡಾವೇ ಅಗ್ರಸ್ಥಾನದಲ್ಲಿದೆ. ಕೆನಡಾದಲ್ಲಿ ಹಿಂಸಾಚಾರದಿಂದ ಒಂಭತ್ತು ಮಂದಿ ಮೃತಪಟ್ಟಿದ್ದರೆ, ಅಮೆರಿಕದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಆಸ್ಟ್ರೇಲಿಯ, ಚೀನಾ, ಬ್ರಿಟನ್ ಮತ್ತು ಕಿರ್ಗಿಸ್ಥಾನದಲ್ಲಿ ತಲಾ ಒಬ್ಬರು ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಅಮೆರಿಕವೂ ಸೇರಿದಂತೆ ಯುರೋಪ್ ದೇಶಗಳಲ್ಲಿ ವರ್ಷದಿಂದ ವರ್ಷಕ್ಕೆ ಭಾರತೀಯರ ಮೇಲೆ ಹಿಂಸಾಚಾರ, ದೌರ್ಜನ್ಯಗಳು ಹೆಚ್ಚುತ್ತಿವೆಯಾದರೂ, ಭಾರತದಿಂದ ವಿದೇಶಕ್ಕೆ ವಲಸೆ ಹೋಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವುದು ವಿಶೇಷ.

ಕಳೆದ ಜನವರಿ ಒಂದಕ್ಕೆ 101 ದೇಶಗಳಲ್ಲಿ 13 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. 4.27 ಲಕ್ಷ ವಿದ್ಯಾರ್ಥಿಗಳೊಂದಿಗೆ ಕೆನಡಾ ಅಗ್ರಸ್ಥಾನದಲ್ಲಿದ್ದರೆ, ಅಮೆರಿಕದಲ್ಲಿ 3.37 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಬ್ರಿಟನ್‌ನಲ್ಲಿ 1.85 ಲಕ್ಷ ಭಾರತೀಯರು, ಆಸ್ಟ್ರೇಲಿಯದಲ್ಲಿ 1.22 ಲಕ್ಷ, ಜರ್ಮನಿಯಲ್ಲಿ 42,997, ಯುಎಇಯಲ್ಲಿ 25,000, ರಶ್ಯದಲ್ಲಿ 24,490 ವಿದ್ಯಾರ್ಥಿಗಳಿದ್ದಾರೆ. ಇನ್ನೊಂದು ವಿಪರ್ಯಾಸವೆಂದರೆ, ವಿದೇಶಗಳಿಗೆ ಕಲಿಯಲೆಂದು ಹೋಗುವ ಹೆಚ್ಚಿನ ವಿದ್ಯಾರ್ಥಿಗಳು ಭಾರತವನ್ನು ತೊರೆದು ಶಾಶ್ವತವಾಗಿ ವಿದೇಶದಲ್ಲಿ ನೆಲೆಸುವ ಬಗ್ಗೆ ಆಲೋಚಿಸುತ್ತಾರೆ ಮತ್ತು ಹೀಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಭಾರತವನ್ನು ತೊರೆದು ವಿದೇಶದಲ್ಲಿ ಶಾಶ್ವತವಾಗಿ ನೆಲೆಸುವ ವಿದ್ಯಾರ್ಥಿಗಳಲ್ಲಿ ಮೇಲ್‌ಜಾತಿಯ ಸಮುದಾಯದ ಜನರೇ ಹೆಚ್ಚು ಎನ್ನುವುದು ಅಂಕಿಅಂಶಗಳಿಂದ ಬಹಿರಂಗವಾಗಿದೆ. ಸದ್ಯಕ್ಕೆ ವಿದೇಶದಲ್ಲಿ ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳನ್ನು ನಾವು ಎರಡು ನೆಲೆಗಳಿಂದ ನೋಡಬೇಕು. ಒಂದು, ವಿದೇಶಗಳಲ್ಲಿ ಆತಂಕಗಳನ್ನು ಎದುರಿಸುತ್ತಿದ್ದರೂ, ಭಾರತದಿಂದ ವಿದೇಶಕ್ಕೆ ವಲಸೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಯಾಕೆ ಹೆಚ್ಚುತ್ತಿದೆ? ಎರಡನೆಯದು, ವಿದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ಹಲ್ಲೆಗಳು ಹೆಚ್ಚುತ್ತಿರುವುದಕ್ಕೆ ಕಾರಣಗಳೇನು?

ದೇಶದಲ್ಲಿ ಕಳೆದ ಒಂದು ದಶಕದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಇಲ್ಲಿನ ವಿದ್ಯಾರ್ಥಿಗಳ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ. ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ, ದೌರ್ಜನ್ಯಗಳು ಇಲ್ಲಿನ ಹೊಸ ತಲೆಮಾರಿನ ತಲೆಯಲ್ಲಿ ಭವಿಷ್ಯದ ಬಗ್ಗೆ ಆತಂಕವನ್ನು ಹುಟ್ಟಿಸಿದೆ. ತೀವ್ರ ಆರ್ಥಿಕ ಹಿಂಜರಿಕೆ, ಶೈಕ್ಷಣಿಕ ವಲಯದಲ್ಲಿ ಹೆಚ್ಚುತ್ತಿರುವ ರಾಜಕೀಯ ಹಸ್ತಕ್ಷೇಪ, ಪರಿಣಾಮವಾಗಿ ಇಳಿಕೆಯಾಗುತ್ತಿರುವ ಶಿಕ್ಷಣದ ಗುಣಮಟ್ಟ,ಹೆಚ್ಚುತ್ತಿರುವ ನಿರುದ್ಯೋಗ, ಹೆಚ್ಚುತ್ತಿರುವ ಶೈಕ್ಷಣಿಕ ವೆಚ್ಚ ಇವೆಲ್ಲವೂ ವಿದ್ಯಾರ್ಥಿಗಳಲ್ಲಿ ಒಂದು ವರ್ಗವನ್ನು ವಿದೇಶಕ್ಕೆ ತೆರಳುವಂತೆ ಮಾಡುತ್ತಿವೆ. ಉಕ್ರೇನ್ ಮೇಲೆ ಯುದ್ಧ ಘೋಷಣೆಯಾದಾಗ ಉಕ್ರೇನ್‌ನಲ್ಲಿ ಕಲಿಯುತ್ತಿದ್ದ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಬೀದಿಗೆ ಬಿದ್ದರು. ಭಾರತದಲ್ಲಿ ಅತ್ಯುನ್ನತ ಶಿಕ್ಷಣಕ್ಕೆ ಸಕಲ ವ್ಯವಸ್ಥೆಯಿದ್ದರೂ, ಉಕ್ರೇನ್‌ನಂತಹ ಸಣ್ಣ ದೇಶಕ್ಕೆ ಯಾಕೆ ವಲಸೆ ಹೋಗುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿಯೇ ಅಚ್ಚರಿ ವ್ಯಕ್ತಪಡಿಸುವಂತಾಯಿತು. ಆದರೆ ಉಕ್ರೇನ್‌ನಂತಹ ಸಣ್ಣ ದೇಶಕ್ಕೆ ವಲಸೆ ಹೋಗುವ ವಿದ್ಯಾರ್ಥಿಗಳು ಹಿಂದುಳಿದ ವರ್ಗಕ್ಕೆ ಸೇರಿದ, ಮಧ್ಯಮ ವರ್ಗದ ವಿದ್ಯಾರ್ಥಿಗಳು. ಅಮೆರಿಕ, ಬ್ರಿಟನ್‌ನಂತಹ ದೇಶಗಳನ್ನು ಆರಿಸಿಕೊಳ್ಳುವವರು ಶ್ರೀಮಂತರು ಮತ್ತು ಮೇಲ್‌ಜಾತಿಗೆ ಸೇರಿದವರು. ಅಮೆರಿಕದಲ್ಲಿ ಜನಾಂಗೀಯ ದೌರ್ಜನ್ಯ ಹೆಚ್ಚಿದ್ದರೂ, ಭಾರತದಲ್ಲಿ ಹೆಚ್ಚುತ್ತಿರುವ ಕೋಮುಹಿಂಸಾಚಾರ, ಜನಾಂಗೀಯ ದೌರ್ಜನ್ಯಗಳು, ಜಾತಿ ಅಸಮಾನತೆ ಇತ್ಯಾದಿಗಳಿಗಿಂತ ಅಮೆರಿಕ ವಾಸಿ ಎಂದು ಹೊಸ ತಲೆಮಾರಿಗೆ ಅನ್ನಿಸುತ್ತಿದೆ. ದೇಶದಲ್ಲಿ ರಾಷ್ಟ್ರೀಯವಾದಕ್ಕೆ ಕುಮ್ಮಕ್ಕು ನೀಡುವವರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಅಮೆರಿಕ, ಯುರೋಪ್ ದೇಶಗಳನ್ನು ಆರಿಸಿಕೊಳ್ಳುತ್ತಿರುವುದು ಇಂದಿನ ವಿಪರ್ಯಾಸವಾಗಿದೆ.

ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಹಲ್ಲೆಗಳಿಗೆ ಕೇವಲ ಆ ದೇಶಗಳನ್ನಷ್ಟೇ ಹೊಣೆ ಮಾಡುವಂತಿಲ್ಲ. ಭಾರತ ಯಾವ ದಿಕ್ಕಿನತ್ತ ಸಾಗುತ್ತಿದೆ ಎನ್ನುವುದನ್ನು ವಿಶ್ವವೂ ಗಮನಿಸುತ್ತಿದೆ. ಭಾರತದಲ್ಲಿ ಹೆಚ್ಚಿರುವ ಹಿಂಸಾಚಾರ, ದೌರ್ಜನ್ಯ, ಜಾತೀಯತೆ ಇತ್ಯಾದಿಗಳನ್ನು ವಿದೇಶಿಯರೂ ಗಮನಿಸುತ್ತಿದ್ದಾರೆ. ಭಾರತದಲ್ಲಿ ಹೆಚ್ಚಿರುವ ಅಸಹನೆ, ದುರ್ಬಲರ ಮೇಲೆ ಇಲ್ಲಿ ನಡೆಯುತ್ತಿರುವ ದಾಳಿ, ಅದನ್ನು ಮೇಲ್‌ಜಾತಿಯ ಜನರು ಸಂಭ್ರಮಿಸುತ್ತಿರುವುದು ಅಂತಿಮವಾಗಿ ಈ ದೇಶದ ಜನರ ಕುರಿತಂತೆ ವಿದೇಶಿಯರಲ್ಲಿ ಕೀಳು ಅಭಿಪ್ರಾಯವನ್ನು ಬಿತ್ತುತ್ತಿದೆ. ಭಾರತದ ವರ್ಚಸ್ಸು ಅಂತರ್‌ರಾಷ್ಟ್ರೀಯಮಟ್ಟದಲ್ಲಿ ಕುಗ್ಗುತ್ತಿರುವುದು, ಭಾರತೀಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳಿಗೆ ಪ್ರಮುಖ ಕಾರಣವಾಗಿದೆ. ವಿದೇಶಗಳಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಿಲ್ಲಬೇಕಾದರೆ, ಮುಖ್ಯವಾಗಿ ಭಾರತದಲ್ಲಿ ಭಾರತೀಯರು ಜಾತಿ, ಧರ್ಮಗಳ ಹೆಸರಿನಲ್ಲಿ ಪರಸ್ಪರ ದಾಳಿಗಳನ್ನು ನಡೆಸುವುದನ್ನು ನಿಲ್ಲಿಸಬೇಕಾಗಿದೆ. ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನು ಸಂಭ್ರಮಿಸುವ ಜನರಿದ್ದಾರೆ. ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದ ಅತ್ಯಾಚಾರ, ಕೊಲೆ ಆರೋಪಿಗಳನ್ನು ಸರಕಾರವೇ ಮುಂದೆ ನಿಂತು ಬಿಡುಗಡೆ ಮಾಡುತ್ತದೆ ಮತ್ತು ಅವರನ್ನು ಹೂಹಾರ ಹಾಕಿ, ಆರತಿ ಎತ್ತಿ ಸ್ವಾಗತಿಸಲಾಗುತ್ತದೆ. ಇಂತಹ ದೇಶಕ್ಕೆ ವಿದೇಶದಲ್ಲಿ ತಮ್ಮ ಜನರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಮಾತನಾಡುವ ನೈತಿಕ ಹಕ್ಕಿದೆಯೆ? ವಿದೇಶಗಳಲ್ಲಿ ನಮ್ಮ ವಿದ್ಯಾರ್ಥಿಗಳ ಮೇಲೆ ನಡೆಯುವ ದಾಳಿಗಳನ್ನು ಖಂಡಿಸುವ ಸಂದರ್ಭದಲ್ಲಿ ಈ ಬಗ್ಗೆ ಆತ್ಮವಿಮರ್ಶೆಯನ್ನು ಮಾಡಿಕೊಳ್ಳುವ ಅಗತ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News