ಶಾಲೆಗಳಲ್ಲಿ ಶೌಚಾಲಯದ ಜೊತೆಗೆ ಮೆದುಳಿನ ಮಾಲಿನ್ಯವೂ ಸ್ವಚ್ಛವಾಗಲಿ

Update: 2024-01-01 05:37 GMT

ಕೋಲಾರದ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಮಲದ ಗುಂಡಿ ಸ್ವಚ್ಛತೆಗೆ ಬಳಸಿರುವ ಆಘಾತಕಾರಿ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ಈ ಕೃತ್ಯಕಕೆ ಸಂಬಂಧಿಸಿ ಸಿಬ್ಬಂದಿಯ ಬಂಧನವೂ ಆಯಿತು. ಮುಖ್ಯಮಂತ್ರಿ ಸಹಿತ ಹಲವು ನಾಯಕರು ಇದರ ವಿರುದ್ಧ ಹೇಳಿಕೆಗಳನ್ನು ನೀಡಿದರು. ಇದರ ಬೆನ್ನಿಗೇ ಬೆಂಗಳೂರು, ಶಿವಮೊಗ್ಗದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಶೌಚಾಲಯ ಶುಚಿಗೊಳಿಸಿದ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಬೆನ್ನಿಗೇ ಶಾಲಾ ಸಿಬ್ಬಂದಿಯನ್ನು ಅಮಾನತುಗೊಳಿಸಿ, ವಿದ್ಯಾರ್ಥಿಗಳಿಗೆ ನ್ಯಾಯ ನೀಡಲಾಯಿತು. ಇದೀಗ ಶಿಕ್ಷಣ ಇಲಾಖೆ ಸುತ್ತೋಲೆಯೊಂದನ್ನು ನೀಡಿದ್ದು ‘‘ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಂದ ಯಾವ ಕಾರಣಕ್ಕೂ ಶೌಚಾಲಯಗಳನ್ನು ಸ್ವಚ್ಛಗೊಳಿಸಬಾರದು’’ ಎಂದು ಆದೇಶಿಸಿದೆ. ‘‘ವಿದ್ಯಾರ್ಥಿಗಳನ್ನು ಶೌಚಾಲಯಗಳ ಸ್ವಚ್ಚತೆಯಂತಹ ಕಾರ್ಯಗಳಿಂದ ದೂರವಿರಿಸುವುದು ಅಧಿಕಾರಿಗಳ, ಮುಖ್ಯ ಶಿಕ್ಷಕ, ಶಿಕ್ಷಕರ, ಸಿಬ್ಬಂದಿಯ ಕರ್ತವ್ಯವಾಗಿರುತ್ತದೆ’’ ಎಂದು ಇಲಾಖೆ ತಿಳಿಸಿದೆ. ಇಲಾಖೆಯ ಆದೇಶವೇನೋ ಶ್ಲಾಘನೀಯ. ಆದರೆ ಇದಿಷ್ಟರಿಂದಲೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವೆ? ಅಥವಾ ಬೀಸುವ ದೊಣ್ಣೆಯಿಂದ ತಕ್ಷಣಕ್ಕೆ ಪಾರಾಗಲು ಶಿಕ್ಷಣ ಇಲಾಖೆ ಇಂತಹದೊಂದು ಆದೇಶವನ್ನು ನೀಡಿದೆಯೆ?

ಈ ಆದೇಶದಿಂದ ಖಂಡಿತವಾಗಿಯೂ ಕೆಲ ದಿನಗಳ ಕಾಲ ಶಾಲೆಗಳಲ್ಲಿ ಶೌಚಾಲಯಗಳನ್ನು ವಿದ್ಯಾರ್ಥಿಗಳಿಂದ ಶುಚಿಗೊಳಿಸುವ ಕೆಟ್ಟ ಪ್ರವೃತ್ತಿ ನಿಂತೀತು. ಇರುವ ಕೆಲಸಕ್ಕೆ ಧಕ್ಕೆ ತಂದು, ಮೈಮೇಲೆ ಎಫ್‌ಐಆರ್ ಜಡಿಸಿಕೊಳ್ಳಲು ಯಾವ ಶಿಕ್ಷಕರೂ ಸಿದ್ಧವಿರಲಾರರು. ಆದರೆ ಇದೇ ಸಂದರ್ಭದಲ್ಲಿ, ಪ್ರಾಥಮಿಕ ಶಾಲೆಗಳ ಶೌಚಾಲಯಗಳನ್ನು ಶುಚಿಗೊಳಿಸುವವರು ಯಾರು? ಎನ್ನುವ ನೂರು ಅಂಕದ ಪ್ರಶ್ನೆಯನ್ನು ಮಾತ್ರ ಉತ್ತರ ತುಂಬಿಸದೇ ಖಾಲಿ ಬಿಡಲಾಗಿದೆ. ಶಿಕ್ಷಕರೇ ಶೌಚಾಲಯವನ್ನು ಶುಚಿಗೊಳಿಸಬೇಕು ಎಂದು ಇಲಾಖೆ ಹೇಳುತ್ತದೆಯೆ? ಶಿಕ್ಷಕರು ಅಥವಾ ಶಾಲೆಯ ಇತರ ಸಿಬ್ಬಂದಿ ಶೌಚಾಲಯವನ್ನು ಶುಚಿ ಮಾಡಬೇಕು ಎಂದು ಬಲವಂತ ಪಡಿಸುವುದು ಕಾನೂನು ಪ್ರಕಾರ ಎಷ್ಟು ಸರಿ? ಇದನ್ನು ಎಷ್ಟರಮಟ್ಟಿಗೆ ಶಿಕ್ಷಕರು ಸ್ವೀಕರಿಸಿಯಾರು? ಎನ್ನುವ ಪ್ರಶ್ನೆ ಏಳುತ್ತದೆ. ಶಾಲಾ ನಿರ್ವಹಣಾ ಅನುದಾನವನ್ನು ಆಯಾ ಸರಕಾರಿ ಶಾಲೆಗಳಿಗೆ ಪ್ರಸ್ತುತ ಸಾಲಿಗೆ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಈ ಅನುದಾನವನ್ನು ಪ್ರಥಮ ಪ್ರಾಶಸ್ತ್ಯದಲ್ಲಿ ಶೌಚಾಲಯಗಳ ಸ್ವಚ್ಛತಾ ಕಾರ್ಯಗಳಿಗೆ ಬಳಸಿಕೊಂಡು ಆಯಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸಹಕಾರದೊಂದಿಗೆ, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಶೌಚಾಲಯಗಳ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆ ತನ್ನ ಆದೇಶದಲ್ಲಿ ಹೇಳಿದೆ. ಈ ನಾಡಿನಲ್ಲಿರುವ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಶೌಚಾಲಯವನ್ನು ಶುಚಿಗೊಳಿಸುವುದಕ್ಕಾಗಿಯೇ ಒಂದು ಸಿಬ್ಬಂದಿಯನ್ನು ಇಟ್ಟುಕೊಳ್ಳುವಂತಹ ವ್ಯವಸ್ಥೆ ಇದೆಯೇ ಎನ್ನುವುದನ್ನು ನಾವು ಮೊದಲು ಕೇಳಿಕೊಳ್ಳಬೇಕಾಗಿದೆ. ಮೂಲಭೂತ ಸೌಕರ್ಯಗಳಿಗೆ ಬೇಕಾದ ಅಗತ್ಯ ಹಣವನ್ನು ಪೂರೈಸಲು ಸಾಧ್ಯವಾಗದೇ ಈಗಾಗಲೇ, ವಿದ್ಯಾರ್ಥಿಗಳ ಪೋಷಕರಿಂದ ಹಣ ವಸೂಲಿ ಮಾಡಿ ಎಂದು ಆದೇಶ ನೀಡಿ ಟೀಕೆಗಳು ಎದುರಾದಾಗ ಆ ಆದೇಶವನ್ನು ಹಿಂದೆಗೆದುಕೊಂಡಿದೆ. ಶಾಲೆಗಳಲ್ಲಿ ಇರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬೇಕಾದ ಹಣವನ್ನು ಒದಗಿಸಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಸರಕಾರಿ ಶಾಲೆಗಳಲ್ಲಿ ಸೌಕರ್ಯಗಳಿಗಾಗಿ ದಾನಿಗಳ ನೆರವು ಪಡೆಯಲು ಸರಕಾರ ಈಗಾಗಲೇ ಸೂಚನೆಯನ್ನು ನೀಡಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಬಹುತೇಕ ಶಾಲೆಗಳಿಗೆ ಯೋಗ್ಯ ಶೌಚಾಲಯಗಳೇ ಇಲ್ಲ.ಸರಕಾರಿ ಶಾಲೆಗಳ ಮೂಲ ಸೌಕರ್ಯಗಳಿಗಾಗಿ ವಿವೇಕ, ನರೇಗಾ ಸೇರಿದಂತೆ ಇನ್ನಿತರ ಯೋಜನೆಗಳ ಮೂಲಕ ಕಳೆದ ಐದು ವರ್ಷಗಳಲ್ಲಿ ೧,೩೦೬ ಕೋಟಿ ರೂ.ಗಳನ್ನು ಒದಗಿಸಲಾಗಿದೆಯಾದರೂ, ರಾಜ್ಯದ ೨,೭೩೨ ಸರಕಾರಿ ಶಾಲೆಗಳಲ್ಲಿ ಶೌಚಾಯಲಗಳೇ ಇಲ್ಲ ಎನ್ನುವ ಅಂಶ ಇತ್ತೀಚೆಗೆ ಮಾಧ್ಯಮಗಳಲ್ಲಿ ಬಹಿರಂಗವಾಗಿತ್ತು. ೪೬೪ ಶಾಲೆಗಳಲ್ಲಿ ಶೌಚಾಲಯಗಳಿದ್ದರೂ ಅವುಗಳು ಕಾರ್ಯನಿರ್ವಹಿಸುತ್ತಿಲ್ಲ. ೧೩೬ ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯಗಳೇ ಇಲ್ಲ. ೮೩೦ ಶಾಲೆಗಳಲ್ಲಿ ವಿದ್ಯುತ್ ಸಂಪರ್ಕಗಳೇ ಇಲ್ಲ. ೨,೭೩೨ ಶಾಲೆಗಳ ಪೈಕಿ ಕೇವಲ ೩೮ ಶಾಲೆಗಳಲ್ಲಿ ಮಾತ್ರ ಶೌಚಾಲಯ ಕಾಮಗಾರಿ ಪ್ರಗತಿಯಲ್ಲಿದೆ ಎನ್ನುವುದು ಕಳೆದ ನವೆಂಬರ್ ತಿಂಗಳಿನಲ್ಲಿ ಸರಕಾರ ಮಾಹಿತಿಯನ್ನು ನೀಡಿತ್ತು. ಇಂತಹ ಸಂದರ್ಭದಲ್ಲಿ, ಶಾಲಾ ನಿರ್ವಹಣಾ ಅನುದಾನವನ್ನು ಸ್ವಚ್ಛತಾ ಕಾರ್ಯಗಳಿಗೆ ಬಳಸಿ ಎಂಬ ಆದೇಶ ಎಷ್ಟರಮಟ್ಟಿಗೆ ಪ್ರಾಮಾಣಿಕವಾಗಿದೆ ಎನ್ನುವ ಪ್ರಶ್ನೆ ಏಳುತ್ತದೆ. ಶೌಚಾಲಯಗಳನ್ನು ಶುಚಿಯಾಗಿಡುವುದು ಪ್ರತಿ ದಿನ ನಡೆಯಬೇಕು. ಈ ಕೆಲಸಕ್ಕಾಗಿ ಮತ್ತೆ ಸಿಬ್ಬಂದಿಯನ್ನು ಬಳಸಬೇಕಾಗುತ್ತದೆ ಮತ್ತು ಆತ ದಲಿತ ಸಮುದಾಯಕ್ಕೇ ಸೇರಿರುತ್ತಾನೆ ಎನ್ನುವುದು ವಾಸ್ತವವಾಗಿದೆ. ಒಂದು ವೇಳೆ ಸಿಬ್ಬಂದಿಗೆ ವೇತನವನ್ನು ನೀಡಲು ಶಾಲೆ ಶಕ್ತವಾಗಿಲ್ಲ ಎಂದಾದರೆ, ಈಗಾಗಲೇ ಶೌಚಾಲಯಗಳು ಹೊಂದಿರುವ ಶಾಲೆಗಳು ಭಾರೀ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಂದ ಶೌಚಾಲಯವನ್ನು ಶುಚಿಗೊಳಿಸಿದರೆ ಶಿಕ್ಷಕರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎನ್ನುವುದೇನೋ ನಿಜ. ಶೌಚಾಲಯಗಳನ್ನು ಶುಚಿಗೊಳಿಸದೆಯೇ ಇದ್ದರೆ ಯಾರ ಮೇಲೆ ಕ್ರಮ ತೆಗೆದುಕೊಳ್ಳುವುದು? ಶಿಕ್ಷಕರ ಮೇಲೋ ಅಥವಾ ಅದಕ್ಕೆ ಬೇಕಾದ ಆರ್ಥಿಕ ಸವಲತ್ತನ್ನು ಒದಗಿಸದ ಸರಕಾರದ ಮೇಲೋ? ಶಿಕ್ಷಣ ಇಲಾಖೆಯ ಹೊಸ ಆದೇಶದಿಂದಾಗಿ ಇರುವ ಶೌಚಾಲಯಗಳು ಗಬ್ಬೆದ್ದು, ಮುಚ್ಚಲ್ಪಡುವ ಸಾಧ್ಯತೆಗಳಿವೆ. ಅಥವಾ ಇಂತಹ ಶೌಚಾಲಯಗಳನ್ನು ಬಳಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅನಾರೋಗ್ಯಗಳಿಗೆ ಬಲಿಯಾಗುವ ಅಪಾಯವೂ ಇದೆ.

ಆದುದರಿಂದ ಸರಕಾರಿ ಆದೇಶ ತಕ್ಷಣದ ಒತ್ತಡದಿಂದ ಹೊರಟಿರುವುದೋ ಅಥವಾ ವಿದ್ಯಾರ್ಥಿಗಳ ಮೇಲಿನ ಕಾಳಜಿಯಿಂದಲೋ ಎನ್ನುವುದು ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳ ಮೇಲಿನ ಕಾಳಜಿ ಈ ಆದೇಶದ ಹಿಂದೆ ಇದೆ ಎಂದಾದರೆ, ಶಾಲಾ ಶೌಚಾಲಯಗಳ ಸ್ವಚ್ಛತೆಗಾಗಿ ಪರ್ಯಾಯ ಕ್ರಮವನ್ನು ತೆಗೆದುಕೊಳ್ಳಬೇಕು. ಮುಖ್ಯವಾಗಿ ಶಾಲಾ ಶೌಚಾಲಯಗಳಲ್ಲಿ ಆಧುನಿಕ ಉಪಕರಣಗಳನ್ನು ಬಳಸುವುದು ಅತ್ಯಗತ್ಯ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಕುರಿತಂತೆ ಜಾಗೃತಿಯನ್ನು ಮೂಡಿಸುವ ಕೆಲಸವೂ ನಡೆಯಬೇಕು. ಸ್ವಚ್ಛತಾ ಆಂದೋಲನಕ್ಕೆ ಸರಕಾರ ಕೋಟ್ಯಂತರ ರೂ.ಯನ್ನು ವ್ಯಯ ಮಾಡುತ್ತಿದೆ. ಆ ಹಣದ ಪ್ರಮುಖ ಭಾಗ ಶಾಲೆಗಳ ಸ್ವಚ್ಛತೆಗಾಗಿ ವ್ಯಯ ಮಾಡಬೇಕು. ಶಾಲೆ ಎನ್ನುವುದು ಒಂದು ಮನೆ ಇದ್ದ ಹಾಗೆ. ಅಂತಹ ಮನೆಯ ವಾತಾವರಣದಲ್ಲಿ, ಶೌಚಾಲಯದ ಶುಚಿತ್ವದಲ್ಲಿ ಶಿಕ್ಷಕರು-ಸಿಬ್ಬಂದಿ-ವಿದ್ಯಾರ್ಥಿಗಳು-ಪೋಷಕರು ಸಮಭಾಗಿಗಳಾಗಬೇಕು. ವಿದ್ಯಾರ್ಥಿಗಳಲ್ಲಿ ಯಾವುದೇ ಜಾತಿ ಅಥವಾ ವರ್ಗ ತಾರತಮ್ಯಗಳನ್ನು ಮಾಡದೇ ಸ್ವಚ್ಛತೆಯ ಮೌಲ್ಯಗಳನ್ನು ಅವರಲ್ಲಿ ತುಂಬಿ ಆ ಮೂಲಕ ಶಾಲೆಯ ಸ್ವಚ್ಛತಾ ಆಂದೋಲನದಲ್ಲಿ ಭೇದ ಭಾವ ರಹಿತವಾಗಿ ಅವರನ್ನು ತೊಡಗಿಸಬೇಕು. ಇದರಿಂದ ಹೊರಗಿನ ಸ್ವಚ್ಛತೆಯಷ್ಟೇ ಅಲ್ಲ, ಮೆದುಳಿನಲ್ಲಿರುವ ಜಾತೀಯತೆ, ತಾರತಮ್ಯ ಮೊದಲಾದ ಕಲ್ಮಶಗಳೂ ಸ್ವಚ್ಛವಾದಂತಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News