ಬದ್ಲಾಪುರ ಪ್ರತಿಭಟನೆ ಮಕ್ಕಳ ಬದುಕಿನಲ್ಲಿ ಬದಲಾವಣೆ ತರಲಿ

Update: 2024-08-24 04:23 GMT

PC: x.com/kumar_lovenesh

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಪಶ್ಚಿಮ ಬಂಗಾಳದಲ್ಲಿ ವೈದ್ಯೆಯ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ದೇಶಾದ್ಯಂತ ಸುದ್ದಿಯಾಗಿರುವ ಹೊತ್ತಿನಲ್ಲೇ, ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರದ ಶಾಲೆಯೊಂದರ ನರ್ಸರಿ ವಿಭಾಗದಲ್ಲಿ ಕಲಿಯುತ್ತಿರುವ ಇಬ್ಬರು ಮಕ್ಕಳ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಮಹಾರಾಷ್ಟ್ರದಲ್ಲಿ ಗದ್ದಲ ಎಬ್ಬಿಸುತ್ತಿದೆ. ಈ ದೌರ್ಜನ್ಯದ ವಿರುದ್ಧ ಸೋಮವಾರ ಬದ್ಲಾಪುರ ಶಾಲಾ ಮುಂಭಾಗದಲ್ಲಿ ಆರಂಭಗೊಂಡ ಪ್ರತಿಭಟನೆ ಬೇರೆ ಬೇರೆ ರೂಪಗಳನ್ನು ಪಡೆಯುತ್ತಾ, ಇದೀಗ ಇಡೀ ಮಹಾರಾಷ್ಟ್ರವನ್ನು ಸುಡುವ ಮಟ್ಟಕ್ಕೆ ಬಂದು ತಲುಪಿದೆ. ಮಂಗಳವಾರ ಸ್ಥಳೀಯ ರೈಲು ನಿಲ್ದಾಣದಲ್ಲಿ ನಡೆದ ಪ್ರತಿಭಟನೆ ಅಂತಿಮವಾಗಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಮುಕ್ತಾಯಗೊಂಡಿತು. ಈ ಪ್ರತಿಭಟನೆಯ ಸಂದರ್ಭದಲ್ಲಿ 25 ಪೊಲೀಸರು ಗಾಯಗೊಂಡಿದ್ದಾರೆ ಎಂದು ಸರಕಾರಿ ಮೂಲಗಳು ಹೇಳುತ್ತಿವೆ. ಇದೇ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ 70ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನೆ ಇದೀಗ ರಾಜಕೀಯ ರೂಪ ಪಡೆದಿದೆ. ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ನಾಯಕರು ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದಾರೆ. ಆಗಸ್ಟ್ 24 ಶನಿವಾರ ಮಹಾ ವಿಕಾಸ್ ಅಘಾಡಿಯು ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿದೆ. ಪಶ್ಚಿಮಬಂಗಾಳದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಮುಂದಾಳತ್ವವನ್ನು ವಹಿಸಿರುವ ಬಿಜೆಪಿ, ಮಹಾರಾಷ್ಟ್ರದ ಪ್ರಕರಣಕ್ಕೆ ಮಾತ್ರ ಬೆನ್ನು ತಿರುಗಿಸಿದೆ. ಪ್ರತಿಭಟನೆಯ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಹೇಳಿರುವ ರಾಜ್ಯದ ಮುಖ್ಯಮಂತ್ರಿ ಏಕನಾಥ ಶಿಂದೆ, ವಿರೋಧ ಪಕ್ಷಗಳು ಘಟನೆಗೆ ರಾಜಕೀಯ ಬಣ್ಣ ಬಳಿಯಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ. ಇದೇ ಸಂದರ್ಭದಲ್ಲಿ , ‘ಬದ್ಲಾಪುರ ಪ್ರತಿಭಟನೆಯ ಹಿಂದೆ ರಾಜಕೀಯ ಕೈವಾಡವಿದೆ ಎಂದು ಭಾವಿಸುವವರು ಒಂದೋ ತಲೆ ಸರಿಯಿಲ್ಲದವರು ಅಥವಾ ಪಾತಕಿಗಳನ್ನು ಬೆಂಬಲಿಸುವವರು’ ಎಂದು ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ. ಶನಿವಾರ ನಡೆಯಲಿರುವ ಬಂದ್ ಬದ್ಲಾಪುರದಲ್ಲಿ ನಡೆದ ಕೃತ್ಯವನ್ನು ವಿರೋಧಿಸಿ ಮಾತ್ರವಲ್ಲ, ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯದ ವಿರುದ್ಧ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಎನ್‌ಸಿಪಿ ಮುಖಂಡ ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ.

ಬದ್ಲಾಪುರದಲ್ಲಿ ನಡೆದಿರುವುದು ಈ ದೇಶದ ಮೂಲೆ ಮೂಲೆಯಲ್ಲಿ ಪ್ರತೀ ದಿನ ನಡೆಯುತ್ತಿದೆ. ಆದರೆ ಇದು ಬೆಳಕಿಗೆ ಬರದಂತೆ ವ್ಯವಸ್ಥೆಯೇ ಮುಚ್ಚಿಡುತ್ತಾ ಬರುತ್ತ್ತಿದೆ. ಬದ್ಲಾಪುರದಲ್ಲಿಯೂ ಇದೇ ಪ್ರಯತ್ನ ನಡೆಯಿತು. ಇಲ್ಲಿನ ನರ್ಸರಿ ಶಾಲೆಯಲ್ಲಿ ಕಲಿಯುತ್ತಿರುವ ಮೂರು ಮತ್ತು ನಾಲ್ಕು ವರ್ಷದ ಇಬ್ಬರು ಹೆಣ್ಣು ಮಕ್ಕಳ ಮೇಲೆ ಶಾಲಾ ಜವಾನ ಶೌಚಾಲಯದಲ್ಲಿ ಅನುಚಿತವಾಗಿ ವರ್ತಿಸಿದ್ದಾನೆ. ಪೋಷಕರು ಹೇಳುವಂತೆ ಲೈಂಗಿಕ ದೌರ್ಜನ್ಯವನ್ನು ಎಸಗಿದಾನೆೆ. ಪೋಷಕರ ಗಮನಕ್ಕೆ ಬಂದಾಕ್ಷಣ ಅವರು ಶಾಲೆಯನ್ನು ಸಂಪರ್ಕಿಸಿದ್ದಾರೆ. ಶಾಲಾ ಆಡಳಿತ ಮಂಡಳಿ ತಕ್ಷಣ ಸ್ಪಂದಿಸಿ ಜವಾನನ ವಿರುದ್ಧ ಪೊಲೀಸ್ ದೂರು ನೀಡಿದ್ದರೆ ಇಷ್ಟೆಲ್ಲ ಸಂಭವಿಸುತ್ತಿರಲಿಲ್ಲವೇನೋ. ಎಳೆ ಕಂದಮ್ಮಗಳಿಗೆ ಪ್ರಕರಣವನ್ನು ವಿವರಿಸುವ ಶಕ್ತಿಯಿಲ್ಲದೇ ಇರುವುದನ್ನು ಬಳಸಿಕೊಂಡು ಪ್ರಾಂಶುಪಾಲರು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದರು. ಇಬ್ಬರು ಮಕ್ಕಳ ಭವಿಷ್ಯಕ್ಕಿಂತ ತಮ್ಮ ಶಾಲೆಯ ವರ್ಚಸ್ಸು, ಭವಿಷ್ಯ ಅವರಿಗೆ ಮುಖ್ಯವಾಗಿತ್ತು. ಪ್ರತಿಭಟನೆ ತೀವ್ರವಾದ ಬಳಿಕವಷ್ಟೇ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿತು. ಈ ಪ್ರಕರಣದಲ್ಲಿ ಶಾಲೆ, ಪೊಲೀಸ್ ಇಲಾಖೆ ಎರಡೂ ತಪ್ಪೆಸಗಿವೆೆ. ಮುಖ್ಯವಾಗಿ ಆಡಳಿತ ಮಂಡಳಿಯೇ ಸ್ವಯಂ ಕ್ರಮವನ್ನು ತೆಗೆದುಕೊಳ್ಳಬೇಕಾಗಿತ್ತು. ಆದರೆ ಕ್ರಮ ತೆಗೆದುಕೊಳ್ಳುವ ಬದಲು ಪ್ರಕರಣ ನಡೆದೇ ಇಲ್ಲ ಎನ್ನುವಂತೆ ವರ್ತಿಸಿತು. ಎರಡನೆಯದಾಗಿ ಪೊಲೀಸರು ಕೂಡ ಪ್ರಕರಣವನ್ನು ನಿರ್ಲಕ್ಷಿಸಿದರು. ಎಳೆಯ ಮಕ್ಕಳ ಮೇಲೆ ಇಂತಹ ದೌರ್ಜನ್ಯಗಳು ನಡೆದಿದೆ ಎನ್ನುವ ಆರೋಪ ಕೇಳಿ ಬಂದಾಗ ವ್ಯವಸ್ಥೆ ಅದನ್ನು ನಿಭಾಯಿಸುವ ರೀತಿಯ ಬಗ್ಗೆ ಇಂದು ನಾವು ಚರ್ಚಿಸುವುದು ಅತ್ಯಗತ್ಯವಾಗಿದೆ.

ಮಹಾರಾಷ್ಟ್ರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮುಖ್ಯಸ್ಥೆಯ ಪ್ರಕಾರ, ಶಾಲೆಯ ಆಡಳಿತ ಮಂಡಳಿಯವರು ಲೈಂಗಿಕ ದೌರ್ಜನ್ಯವನ್ನು ಮುಚ್ಚಿ ಹಾಕಲು ಯತ್ನಿಸಿದ್ದರು. ಹೆತ್ತವರಿಗೆ ಉಡಾಫೆಯ ಉತ್ತರವನ್ನು ನೀಡಿದರು. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದರು. ‘‘ಮಗುವಿನ ಮೇಲೆ ಹೊರಗಿನವರು ಯಾರೋ ಹಲ್ಲೆ ನಡೆಸಿರಬಹುದು’’ ಎಂದು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಯತ್ನಿಸಿದರು. ಬದ್ಲಾಪುರ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸುವ ಮೊದಲು ಸಂತ್ರಸ್ತರ ಹೆತ್ತವರನ್ನು ಸುಮಾರು 11 ಗಂಟೆ ಕಾಯಿಸಲಾಗಿದೆ ಎಂದು ಮುಖ್ಯಸ್ಥೆ ಆರೋಪಿಸಿದ್ದಾರೆ. ಶಾಲಾ ಆಡಳಿತ ಮಂಡಳಿ ಮತ್ತು ಪೊಲೀಸರ ನಿರ್ಲಕ್ಷ್ಯದಿಂದ ರೋಸಿ ಹೋದ ಹೆತ್ತವರು ಮತ್ತು ಸ್ಥಳೀಯರು ಮಂಗಳವಾರ ನ್ಯಾಯಕ್ಕಾಗಿ ರಸ್ತೆ ತಡೆ, ರೈಲು ತಡೆಗಳನ್ನು ಮಾಡಬೇಕಾಯಿತು. ಇದು ಅಂತಿಮವಾಗಿ ಹಿಂಸಾಚಾರಕ್ಕೆ ಕಾರಣವಾಯಿತು. ಇದೀಗ ಪ್ರಕರಣ ರಾಜ್ಯ ಮಟ್ಟದಲ್ಲಿ ಚರ್ಚೆಯ ವಿಷಯವಾಗಿದೆ. ರಾಜ್ಯದ ಹಿರಿಯ ರಾಜಕೀಯ ನಾಯಕರ ಕೈಗೆ ಪ್ರತಿಭಟನೆಯ ಧ್ವಜ ಹಸ್ತಾಂತರವಾಗಿದೆ.

ಎಳೆಯ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ಭಾರತ ಇನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ವಿಶ್ವಸಂಸ್ಥೆಯ ವರದಿ ಹೇಳುತ್ತಿದೆ. ದೌರ್ಜನ್ಯಕ್ಕೊಳಗಾಗುವ ಬಹುತೇಕ ಮಕ್ಕಳಿಗೆ ತಮ್ಮ ಮೇಲೆ ನಡೆಯುತ್ತಿರುವುದು ದೌರ್ಜನ್ಯ ಎನ್ನುವ ಅರಿವು ಕೂಡ ಇರುವುದಿಲ್ಲ. ಹೆಚ್ಚಿನ ದೌರ್ಜನ್ಯಗಳು ನಡೆಯುತ್ತಿರುವುದು ಮನೆಯ ಒಳಗೆ ಅದರಲ್ಲೂ ತಮ್ಮದೇ ಸಂಬಂಧಿಕರಿಂದ. ಇದರಾಚೆಗೆ ಶಾಲೆಗಳಲ್ಲಿ ಮಕ್ಕಳು ಶಿಕ್ಷಕರಿಂದ ಇಂತಹ ದೌರ್ಜನ್ಯಗಳನ್ನು ಎದುರಿಸಬೇಕಾಗುತ್ತದೆ. ಆದರೆ ಅದರ ವಿರುದ್ಧ ದೂರು ನೀಡುವ ಸ್ವಾತಂತ್ರ್ಯ, ಅವಕಾಶವೇ ಮಕ್ಕಳಿಗಿಲ್ಲ. ಒಂದು ವೇಳೆ ದೂರು ನೀಡಿದ್ದೇ ಆದಲ್ಲಿ, ಮಕ್ಕಳನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ. ಜೊತೆಗೆ ಪೋಷಕರು ಮಕ್ಕಳ ಬಾಯಿ ಮುಚ್ಚಿಸಿ, ಪ್ರಕರಣ ಬೆಳಕಿಗೆ ಬರದಂತೆ ತಡೆಯುತ್ತಾರೆ. ಶಾಲೆಗಳಲ್ಲಿ ನಡೆಯುವ ಇಂತಹ ದೌರ್ಜನ್ಯಗಳ ಬಗ್ಗೆ ದೂರು ಬಂದರೆ, ಆಡಳಿತ ಸಂಸ್ಥೆಯೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ತಮ್ಮ ಸಿಬ್ಬಂದಿಯಿಂದ ಅಪರಾಧಗಳು ಘಟಿಸಿದಾಗ, ಶಾಲೆಯ ವರ್ಚಸ್ಸನ್ನು ದೃಷ್ಟಿಯಲ್ಲಿಟ್ಟುಕೊಂಡು ಆರೋಪಿಗಳ ಪರವಾಗಿ ನಿಂತುಕೊಳ್ಳುತ್ತದೆ. ಸರಕಾರಿ ಆಯೋಗ ನಡೆಸಿದ ಸಮೀಕ್ಷೆಯೊಂದರಲ್ಲಿ ಈ ದೇಶದ ಶೇ. 53ಕ್ಕಿಂತ ಅಧಿಕ ಮಕ್ಕಳು ಒಂದಲ್ಲ ಒಂದುರೀತಿಯಲ್ಲಿ ಲೈಂಗಿಕ ದೌರ್ಜನ್ಯವನ್ನು ಅನುಭವಿಸಿದ್ದಾರೆ ಎನ್ನುವುದು ಬಹಿರಂಗವಾಗಿದೆ. ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ, ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ವರದಿಯಾಗುವುದು ಶೇ. 65.6ರಷ್ಟು ಮಾತ್ರ. ಉಳಿದ ಅಪರಾಧಗಳನ್ನು ಅನಧಿಕೃತವಾಗಿ ಮಾತ್ರ ಹಂಚಿಕೊಳ್ಳಲು ಪೋಷಕರು ಸಿದ್ಧರಿರುತ್ತಾರೆ. ಭಾರತದಲ್ಲಿ ಶೇ. 90ರಷ್ಟು ಮಕ್ಕಳ ಮೇಲಿನ ದೌರ್ಜನ್ಯಗಳು ನಡೆಯುವುದು ಮನೆಯಲ್ಲಿ ಎನ್ನುವುದನ್ನು ವಿಶ್ವಸಂಸ್ಥೆಯ ಸಮೀಕ್ಷೆ ಹೇಳುತ್ತದೆ. ಭಾರತದಲ್ಲಿ ಪ್ರತೀ ಇಬ್ಬರಲ್ಲಿ ಒಬ್ಬರು 18 ವರ್ಷದ ಒಳಗೆ ಒಂದಲ್ಲ ಒಂದು ರೀತಿಯ ಲೈಂಗಿಕ ಕಿರುಕುಳವನ್ನು ಎದುರಿಸುತ್ತಾರೆ. ಲಾಕ್‌ಡೌನ್‌ನ ಆರಂಭಿಕ 15 ದಿನಗಳಲ್ಲಿ ಮಕ್ಕಳ ಅಭಿವೃದ್ಧಿ ಸಚಿವಾಲಯದ ಸಹಭಾಗಿತ್ವದ ಚೈಲ್ಡ್‌ಲೈನ್ ಬೇರೆ ಬೇರೆ ಸಮಸ್ಯೆಗಳಿಗಾಗಿ 3.07 ಲಕ್ಷ ಕರೆಗಳನ್ನು ಸ್ವೀಕರಿಸಿತ್ತು. ಇವುಗಳಲ್ಲಿ 92,105 ಕರೆಗಳು ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿದ್ದಾಗಿತ್ತು ಎನ್ನುವುದನ್ನು ಅಂಕಿಅಂಶಗಳು ಬಹಿರಂಗಪಡಿಸಿವೆ. ಲಾಕ್‌ಡೌನ್ ಸಂದರ್ಭಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯಗಳು ಶೇ. 50ರಷ್ಟು ಏರಿಕೆ ಕಂಡಿತ್ತು ಎನ್ನುವುದನ್ನು ಚೈಲ್ಡ್ ಲೈನ್ ಉಲ್ಲೇಖಿಸಿತ್ತು.

ಬಾಲ್ಯ ಒಬ್ಬ ವ್ಯಕ್ತಿಯ ಒಟ್ಟು ವ್ಯಕ್ತಿತ್ವವನ್ನು ನಿರ್ಮಿಸುತ್ತದೆ. ಬಾಲ್ಯ ಒಡೆದರೆ, ವ್ಯಕ್ತಿತ್ವವೇ ಒಡೆದು ಹೋಗುತ್ತದೆ. ಈ ಕಾರಣದಿಂದ, ಬದ್ಲಾಪುರ ಪ್ರತಿಭಟನೆ ನಮ್ಮ ಮಕ್ಕಳ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗೆ ಒಂದು ನೆಪವಾಗಬೇಕು. ಈ ಪ್ರತಿಭಟನೆ ಕೇವಲ ಮಹಾರಾಷ್ಟ್ರದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಮಕ್ಕಳ ಹಕ್ಕುಗಳ ಕುರಿತಂತೆ ಜಾಗೃತಿ ಮೂಡಿಸುವಂತಾಗಬೇಕು. ಮಕ್ಕಳ ಹಕ್ಕುಗಳಿಗಾಗಿ ಕಾನೂನು ಇನ್ನಷ್ಟು ಬಿಗಿಯಾಗಬೇಕು. ಮಕ್ಕಳ ಮೇಲೆ ನಡೆಯುವ ಯಾವುದೇ ದೌರ್ಜನ್ಯಗಳ ಬಗ್ಗೆ ಉಡಾಫೆಯಾಗಿ ವರ್ತಿಸುವ ಶಾಲೆ ಕಾಲೇಜುಗಳ ವಿರುದ್ಧ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳುವಂತಾಗಬೇಕು. ನರ್ಸರಿ, ಎಲ್‌ಕೆಜಿ, ಯುಕೆಜಿ, ಪ್ರಾಥಮಿಕ ಶಾಲೆಗಳಲ್ಲಿ ಕಲಿಯುವ ಮಕ್ಕಳ ಅಂಕ ಪಟ್ಟಿಯ ಬಗ್ಗೆ ಮಾತ್ರವಲ್ಲ, ಅವರ ಒಳಗಿನ ಇನ್ನಿತರ ಮಾತುಗಳನ್ನು ಕೇಳಿಸಿಕೊಳ್ಳುವ ಸೂಕ್ಷ್ಮತೆಯನ್ನು ಪೋಷಕರು ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News