ಉತ್ತರ-ದಕ್ಷಿಣ: ವಿಭಿನ್ನ ಫಲಿತಾಂಶ

Update: 2023-12-05 05:09 GMT

Photo: freepik

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಳೆದ ನವೆಂಬರ್‌ನಲ್ಲಿ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಬಂದಿದೆ. ಉತ್ತರ ಭಾರತದ ಹಿಂದಿ ಭಾಷಿಕ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡಗಳಲ್ಲಿ ಬಿಜೆಪಿ ಭಾರೀ ಅಂತರದಿಂದ ಗೆಲುವಿನ ಬಾವುಟ ಹಾರಿಸಿದೆ. ಐದು ವರ್ಷಗಳ ಹಿಂದೆ ಕಾಂಗ್ರೆಸ್ ಗೆದ್ದಿದ್ದ ರಾಜಸ್ಥಾನ, ಛತ್ತೀಸ್‌ಗಡಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಕಾಂಗ್ರೆಸ್ ಒಡಕಿನ ಪರಿಣಾಮವಾಗಿ ಮಧ್ಯಪ್ರದೇಶದಲ್ಲಿ ಅಧಿಕಾರ ಹಿಡಿದಿದ್ದ ಬಿಜೆಪಿ ಅಲ್ಲಿ ಮತ್ತೆ ಗೆಲುವು ಸಾಧಿಸಿದೆ. ದಕ್ಷಿಣ ಭಾರತದ ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದೆ.

ಈ ವಿಧಾನಸಭಾ ಚುನಾವಣೆಗಳಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತಾವೇ ನೇರವಾಗಿ ಚುನಾವಣಾ ಪ್ರಚಾರದ ಕಣಕ್ಕೆ ಇಳಿದು ಹಿಂದುತ್ವದ ಕೋಮು ಧ್ರುವೀಕರಣದ ರಾಜಕೀಯದ ಜೊತೆಗೆ ಕರ್ನಾಟಕದ ಕಾಂಗ್ರೆಸ್ ಮಾದರಿಯ ಗ್ಯಾರಂಟಿ ಯೋಜನೆಗಳನ್ನು ಹೆಣೆದು ಪಕ್ಷಕ್ಕೆ ಜಯ ತಂದುಕೊಟ್ಟರು.ಹೊಸಬರಿಗೆ ಟಿಕೆಟ್ ಹಂಚಿಕೆ, ಹೊಸ ಚುನಾವಣಾ ಪ್ರಚಾರ ತಂತ್ರ ಬಿಜೆಪಿಗೆ ನೆರವಾಯಿತು. ಹಾಗೆ ನೋಡಿದರೆ ಚುನಾವಣೆ ನಡೆದ ರಾಜ್ಯಗಳ ಪ್ರಭಾವಿ ನಾಯಕರಾದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ, ಛತ್ತೀಸ್‌ಗಡದ ರಮಣಸಿಂಗ್ ಅವರನ್ನು ಕೇವಲ ಅಲಂಕಾರಕ್ಕೆ ಇಟ್ಟುಕೊಂಡು ಮುನ್ನುಗ್ಗಿದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಪ್ರಾದೇಶಿಕ ನಾಯಕತ್ವವನ್ನು ಮುಂಚೂಣಿಗೆ ತರದೆ ತಾವೇ ಕಣಕ್ಕೆ ಇಳಿದು ಗೆಲುವು ತಂದುಕೊಟ್ಟರು. ಹಾಗೆಂದು ಇವರೇನೂ ಪವಾಡ ಪುರುಷರಲ್ಲ. ಈ ಗೆಲುವಿನ ಹಿಂದಿರುವುದು ಬರೀ ಬಿಜೆಪಿ ಅಲ್ಲ. ಅದರ ಸೈದ್ಧಾಂತಿಕ ಸ್ಫೂರ್ತಿಯಾದ ಆರೆಸ್ಸೆಸ್‌ನ ಸಂಘಟನಾ ಸಾಮರ್ಥ್ಯ ಗೆಲುವು ತಂದುಕೊಟ್ಟಿತು. ಬಹಿರಂಗ ಸಭೆಯಿಂದ ಹಿಡಿದು ನೇರವಾಗಿ ಮತಗಟ್ಟೆವರೆಗೆ, ಹಳ್ಳಿ, ಹಳ್ಳಿಗೂ ವ್ಯಾಪಿಸಿರುವ ಸಂಘಟನಾ ಜಾಲ ಈ ಗೆಲುವಿನ ಮೂಲ.

ಈ ಚುನಾವಣಾ ಫಲಿತಾಂಶವನ್ನು ಇವಿಷ್ಟೇ ಅಂಶಗಳಿಂದ ವ್ಯಾಖ್ಯಾನಿಸಲು ಆಗುವುದಿಲ್ಲ. ಬಿಜೆಪಿಯ ಈ ಗೆಲುವಿನಲ್ಲಿ ಕಾಂಗ್ರೆಸ್ ಪಕ್ಷದ ದುರ್ಬಲ ಸಂಘಟನೆ, ಅಶಿಸ್ತು ಮತ್ತು ಪಕ್ಷದ ನಾಯಕರ ಒಳಕಿತ್ತಾಟಗಳು ಬಿಜೆಪಿಗೆ ನೆರವಾದವು. ರಾಜಸ್ಥಾನದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಆದರೆ ಅವರು ಮತ್ತು ಸಚಿನ್ ಪೈಲಟ್ ನಡುವಿನ ಒಳ ಜಗಳ ಬೀದಿಗೆ ಬಂದು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಯಿತು. ಮಧ್ಯಪ್ರದೇಶದ ಕಾಂಗ್ರೆಸ್ ಒಡೆದ ಮನೆಯಾಗಿರುವುದು ಗುಟ್ಟಿನ ಸಂಗತಿಯಲ್ಲ. ಹಿಂದೆ ಮುಖ್ಯ ಮಂತ್ರಿಯಾಗಿದ್ದ ಕಮಲ್‌ನಾಥ್ ಅವರನ್ನು ಕಂಡರೆ ಅಲ್ಲಿನ ಅನೇಕ ಕಾಂಗ್ರೆಸ್ ನಾಯಕರಿಗೆ ಆಗುವುದಿಲ್ಲ. ಮುಖ್ಯವಾಗಿ ದಿಗ್ವಿಜಯ ಸಿಂಗ್ ಮತ್ತು ಕಮಲ್‌ನಾಥ್ ನಡುವಿನ ಕಿತ್ತಾಟವನ್ನು ಬಗೆಹರಿಸುವಲ್ಲಿ ಪಕ್ಷದ ರಾಷ್ಟ್ರೀಯ ನಾಯಕತ್ವ ವಿಫಲವಾದ ಪರಿಣಾಮವಾಗಿ ಬಿಜೆಪಿ ಗೆಲುವು ಸಾಧಿಸಿತು. ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಉತ್ತಮ ಆಡಳಿತ ನೀಡಿದರೂ ಗೆಲುವು ಸಾಧಿಸಲಿಲ್ಲ. ಈ ರಾಜ್ಯಕ್ಕೆ ಚುನಾವಣಾ ಪ್ರಚಾರಕ್ಕೆ ಎಂಟು ಸಲ ಬಂದು ಹೋದ ಪ್ರಧಾನಿ ನರೇಂದ್ರ ಮೋದಿಯವರು ಹಿಂದುತ್ವದ ಜೊತೆಗೆ ಅಭಿವೃದ್ಧಿ ಮಂತ್ರವನ್ನು ಬೆರೆಸಿ ಗೆಲುವು ಸಾಧಿಸಿದರು.

ಇನ್ನು ದಕ್ಷಿಣದ ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯ ಚಂದ್ರಶೇಖರ ರಾವ್ ಅವರ ಸೋಲಿಗೆ ಅವರೇ ಕಾರಣ. ತೆಲಂಗಾಣ ಪ್ರತ್ಯೇಕ ರಾಜ್ಯ ನಿರ್ಮಾಣಕ್ಕಾಗಿ ಅವರು ಎರಡು ದಶಕಗಳ ಕಾಲ ಹೋರಾಡಿದ್ದು ನಿಜ. ಆದರೆ ಈ ಹೋರಾಟದಲ್ಲಿ ಅವರೊಬ್ಬರೇ ಇರಲಿಲ್ಲ. ಅವರಿಗಿಂತ ಮುಂಚೆ ಕ್ರಾಂತಿಕವಿ, ಗಾಯಕ ಗದ್ದರ್ ಹಳ್ಳಿ, ಹಳ್ಳಿಗೆ ಹೋಗಿ ಹಾಡು ಹಾಡಿ ಜನಾಭಿಪ್ರಾಯ ರೂಪಿಸಿದರು. ತನ್ನ ಚುನಾವಣಾ ರಾಜಕಾರಣಕ್ಕೆ ಇವರನ್ನು ಬಳಸಿಕೊಂಡ ಚಂದ್ರಶೇಖರ ರಾವ್ ಗೆಲುವು ಸಾಧಿಸಿದ ನಂತರ ಗದ್ದರ್ ಮಾತ್ರವಲ್ಲ ಹೋರಾಟದ ಜೊತೆಗಾರರನ್ನು ಮರೆತು ತನ್ನ ಮಗ ಮತ್ತು ಮಗಳನ್ನು ರಾಜಕೀಯಕ್ಕೆ ತಂದು ಅಧಿಕಾರ ನೀಡಿ ವಂಶಾಡಳಿತದ ಅಡ್ಡಹಾದಿ ಹಿಡಿದರು. ಒಳಗೊಳಗೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡರು. ಬಿಜೆಪಿ ನಾಯಕರೂ ಅಲ್ಲಿ ಕಾಲೂರಲು ಪ್ರಯತ್ನಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಹಲವಾರು ಸಲ ಬಂದು ಹೋದರು. ಆದರೆ ತೆಲಂಗಾಣದ ಜನ ಒಲಿದಿದ್ದು ಕಾಂಗ್ರೆಸ್ ಪಕ್ಷಕ್ಕೆ. ಇಲ್ಲಿ ಪಕ್ಷದ ಗೆಲುವಿನಲ್ಲಿ ಕರ್ನಾಟಕದ ಕಾಂಗ್ರೆಸ್ ನಾಯಕರ ಪರಿಶ್ರಮ ಸಾಕಷ್ಟಿದೆ. ಇಲ್ಲಿ ಮೊದಲು ಕಾಂಗ್ರೆಸ್ ಅಷ್ಟು ಪ್ರಭಾವಶಾಲಿಯಾಗಿರದಿದ್ದರೂ ಪಕ್ಷದ ಹೈಕಮಾಂಡ್‌ಆದೇಶದಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಪ್ರಚಾರಕ್ಕೆ ಧುಮುಕಿ ಗೆಲುವು ಸಾಧಿಸಿದರು.

ಬಿಜೆಪಿ ಗೆಲುವು ಸಾಧಿಸಿದ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸುವ ಬದಲು ಸಮಾನ ಮನಸ್ಕ ಪಕ್ಷಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಗೆಲುವಿನ ತಂತ್ರವನ್ನು ರೂಪಿಸಿದ್ದರೆ ಫಲಿತಾಂಶ ವಿಭಿನ್ನವಾಗಿರಬಹುದಾಗಿತ್ತು. ಆದರೆ ‘ಇಂಡಿಯಾ’ ಎಂದು ಹೆಸರಿಟ್ಟುಕೊಂಡು ಸಂಯುಕ್ತ ರಂಗವನ್ನು ಕಟ್ಟಿ ಕೊಂಡಿದ್ದರೂ ಬಿಜೆಪಿಯೇತರ ಪಕ್ಷಗಳ ಪ್ರತ್ಯೇಕ ಸ್ಪರ್ಧೆ ಪ್ರತಿಕೂಲ ಫಲಿತಾಂಶ ಬರಲು ಕಾರಣವಾಯಿತು.

ಕಾಂಗ್ರೆಸ್ ಸೋಲಿನ ಇನ್ನೊಂದು ಮುಖ್ಯವಾದ ಕಾರಣವೆಂದರೆ ದಶಕಗಳ ಕಾಲ ನಾಯಕತ್ವ ಹಿಡಿದು ಕುಳಿತುಕೊಂಡ ನಾಯಕರು ಹೊಸರಕ್ತದ ಯುವಕರನ್ನು ರಾಜಕೀಯವಾಗಿ ಬೆಳೆಸಲಿಲ್ಲ. ಪಕ್ಷವನ್ನು ನಾಯಕರ ಪಕ್ಷವನ್ನಾಗಿ ಮಾಡದೆ ಕಾರ್ಯಕರ್ತರ ಅಂದರೆ ಕೇಡರ್ ಬೇಸ್ ಪಕ್ಷವನ್ನಾಗಿ ಬಲಪಡಿಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಇಷ್ಟೇ ಅಲ್ಲ ಸ್ವಾತಂತ್ರ್ಯ ಹೋರಾಟದ ಭವ್ಯ ಚಾರಿತ್ರಿಕ ಹಿನ್ನೆಲೆ ಹೊಂದಿರುವ ಕಾಂಗ್ರೆಸ್ ಪಕ್ಷ ಕಾರ್ಯಕರ್ತರಿಗೆ ಸೈದ್ಧಾಂತಿಕ ತರಬೇತಿ ನೀಡಿ ತಳಪಾಯದ ಸಂಘಟನೆಯನ್ನು ಗಟ್ಟಿಗೊಳಿಸಲಿಲ್ಲ. ಹೀಗಾಗಿ ಅಧಿಕಾರಕ್ಕಾಗಿ, ಲಾಭಕ್ಕಾಗಿ ಬರುವವರು ಪಕ್ಷದ ತುಂಬಾ ತುಂಬಿಕೊಂಡರು. ಇಂಥವರೇ ಆಪರೇಶನ್ ಕಮಲಕ್ಕೆ ಒಳಗಾಗಿ ಬಿಜೆಪಿಗೆ ಜಿಗಿದರು.

ಕಾಂಗ್ರೆಸ್ ಸೋಲಿನ ಇನ್ನೊಂದು ಕಾರಣವೆಂದರೆ ಅದರ ಮೆದು ಹಿಂದುತ್ವ. ಜಾತ್ಯತೀತ ಪಕ್ಷವಾದ ಕಾಂಗ್ರೆಸ್ ಅದೇ ಕಾರಣಕ್ಕಾಗಿ ಭಾರತದ ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಬೆಂಬಲವನ್ನು ಗಳಿಸುತ್ತ ಬಂದಿದೆ. ಆದರೆ ಅಯೋಧ್ಯೆಯ ಬಾಬರಿ ಮಸೀದಿ ನೆಲಸಮಗೊಂಡ ನಂತರ ಪಿ.ವಿ.ನರಸಿಂಹರಾವ್ ಕಾಲದಲ್ಲಿ ಮೆದು ಹಿಂದುತ್ವದ ನೀತಿಯನ್ನು ಅನುಸರಿಸುತ್ತಾ ಬಂತು. ಕೋಮುವಾದಿ ಗಳ ವಿರುದ್ಧ ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆಯವರನ್ನು ಬಿಟ್ಟರೆ ಉಳಿದವರು ಗಟ್ಟಿಯಾಗಿ ಮಾತಾಡುವುದಿಲ್ಲ. ಅಯೋಧ್ಯೆಯ ರಾಮ ಮಂದಿರ ಶಿಲಾನ್ಯಾಸದ ಸಂದರ್ಭದಲ್ಲಿ ಕಾಂಗ್ರೆಸ್‌ನ ಅವಕಾಶವಾದಿತನ ಬಯಲಾಯಿತು. ಈ ಮೆದು ಹಿಂದುತ್ವದ ಬದಲಾಗಿ ಗಟ್ಟಿಯಾದ ಜಾತ್ಯತೀತ ನಿಲುವಿಗೆ ಬದ್ಧವಾಗಿ ಉಳಿದರೆ ಕಾಂಗ್ರೆಸ್‌ಗೆ ಇನ್ನೂ ಸಾಕಷ್ಟು ಅವಕಾಶಗಳಿವೆ.

ಒಟ್ಟಾರೆ ಈ ಚುನಾವಣಾ ಫಲಿತಾಂಶದಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ದೇಶದ ದಿಕ್ಕು ದೆಸೆಗೆ ಸಂಬಂಧಿಸಿದಂತೆ ಹಿಂದಿ ಭಾಷಿಕ ಉತ್ತರ ಭಾರತದ ರಾಜ್ಯಗಳು ಹಾಗೂ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷಿಕ ದಕ್ಷಿಣ ಭಾರತದ ರಾಜ್ಯಗಳು ವಿಭಿನ್ನವಾದ ನಿಲುವನ್ನು ಹೊಂದಿವೆ. ಬಿಜೆಪಿ ಎಷ್ಟೇ ಹೆಣಗಾಡಿದರೂ ನರೇಂದ್ರ ಮೋದಿ ಮತ್ತು ಅಮಿತ್ ಶಾ ಎಷ್ಟೇ ಬಾರಿ ಬಂದು ಹೋದರೂ ಬಿಜೆಪಿ ಇಲ್ಲಿ ನೆಲೆಯೂರುವುದು ಸುಲಭವಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News