ಹಿಂದೂ ಧರ್ಮದ ಹಿರಿಮೆಯನ್ನು ಸಂಸತ್‌ನಲ್ಲಿ ಎತ್ತಿ ಹಿಡಿದ ರಾಹುಲ್

Update: 2024-07-03 07:57 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಲೋಕಸಭೆಯಲ್ಲಿ ಪ್ರತಿ ಪಕ್ಷ ನಾಯಕನಾಗಿ ಸೋಮವಾರ ತನ್ನ ಚೊಚ್ಚಲ ಭಾಷಣ ಮಾಡಿದ ರಾಹುಲ್ ಗಾಂಧಿ, ಈ ದೇಶವನ್ನು ಗಂಭೀರವಾಗಿ ಕಾಡುತ್ತಿರುವ ಹಲವು ವಿಷಯಗಳನ್ನು ಎತ್ತಿದ್ದಾರೆ ಮತ್ತು ಅದರ ಹಿಂದಿರುವ ಶಕ್ತಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿಯೂ ಸೇರಿದಂತೆ ಹಲವು ಬಿಜೆಪಿ ನಾಯಕರು ರಾಹುಲ್ ಗಾಂಧಿ ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ವಿಷಯಾಂತರಗೊಳಿದ್ದಾರೆ. ಹಿಂದೂ ಧರ್ಮದ ಹೆಸರಿನಲ್ಲಿ ಹಿಂಸೆ, ದ್ವೇಷ ರಾಜಕಾರಣ ನಡೆಸುವ ಬಿಜೆಪಿಯು ಯಾವ ಕಾರಣಕ್ಕೂ ಹಿಂದೂ ಧರ್ಮವನ್ನು ಪ್ರತಿನಿಧಿಸುವುದಿಲ್ಲ ಎನ್ನುವುದನ್ನು ರಾಹುಲ್ ಸಂಸತ್ತಿನಲ್ಲಿ ಘಂಟಾಘೋಷವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಮಣಿಪುರ ಹಿಂಸಾಚಾರ, ತನಿಖಾ ಸಂಸ್ಥೆಗಳ ದುರುಪಯೋಗ, ನೋಟು ನಿಷೇಧ, ನೀಟ್ ಹಗರಣ ಹೀಗೆ ಹತ್ತು ಹಲವು ವಿಷಯಗಳಲ್ಲಿ ಸರಕಾರದ ಪಾತ್ರವನ್ನು ಅವರು ಅತ್ಯಂತ ಪರಿಣಾಮಕಾರಿಯಾಗಿ ಮುಂದಿಟ್ಟರು. ಇದಕ್ಕೆ ಉತ್ತರಿಸಲು ವಿಫಲವಾಗಿರುವ ಬಿಜೆಪಿ, ರಕ್ಷಣೆಗೆ ಮತ್ತೆ ಹಿಂದೂ ಧರ್ಮದ ಹೆಸರನ್ನು ಬಳಸಿಕೊಳ್ಳುತ್ತಿದೆ. ‘‘ರಾಹುಲ್ ಗಾಂಧಿ ಹಿಂದೂಗಳನ್ನು ಅವಮಾನಿಸಿದ್ದಾರೆ’’ ಎಂದು ಆರೋಪಿಸುವ ಮೂಲಕ, ರಾಹುಲ್ ಗಾಂಧಿ ಎತ್ತಿದ ಉಳಿದೆಲ್ಲ ವಿಷಯಗಳನ್ನು ಮರೆ ಮಾಚಲು ಹೊರಟಿದೆ.

ಹಿಂದೂಗಳನ್ನು ಮಾತ್ರವಲ್ಲ, ಹಿಂದೂ ಧರ್ಮವನ್ನು ಕಳೆದ ಕೆಲವು ದಶಕಗಳಿಂದ ಅತ್ಯಂತ ಹೀನಾಯವಾಗಿ ಜಗತ್ತಿನ ಮುಂದೆ ಬಿಂಬಿಸುತ್ತಾ ಬಂದಿರುವುದು ಬಿಜೆಪಿ ಮತ್ತು ಅದರ ಪರಿವಾರ. ಸ್ವಾಮಿ ವಿವೇಕಾನಂದ, ನಾರಾಯಣ ಗುರುಗಳು, ಮಹಾತ್ಮ್ಮಾಗಾಂಧೀಜಿ, ರಾಮಕೃಷ್ಣ ಪರಮಹಂಸರಂತಹ ಮಹಾತ್ಮರು ಜಗತ್ತಿನ ಮುಂದೆ ಕಟ್ಟಿಕೊಟ್ಟ ಹಿಂದೂ ಧರ್ಮಕ್ಕೆ ಬಿಜೆಪಿ ಮತ್ತು ಅದರ ಪರಿವಾರ ಎಂತಹ ಗತಿ ಒದಗಿಸಿದೆ ಎನ್ನುವುದಕ್ಕೆ ಕಳೆದ ಎರಡು ದಶಕಗಳ ಭಾರತವನ್ನು ನೋಡಿದರೆ ಸಾಕು, ಅರ್ಥವಾಗಿ ಬಿಡುತ್ತದೆ. ಮಧ್ಯರಾತ್ರಿಯಲ್ಲೂ ಮಹಿಳೆಯೊಬ್ಬಳು ಏಕಾಂಗಿಯಾಗಿ, ಧೈರ್ಯವಾಗಿ ಓಡಾಡುವ ವಾತಾವರಣ ಸೃಷ್ಟಿಯಾದ ದಿನ ಈ ದೇಶದಲ್ಲಿ ರಾಮರಾಜ್ಯ ಸ್ಥಾಪನೆಯಾದಂತಾಗುತ್ತದೆ ಎನ್ನುವುದು ಗಾಂಧೀಜಿಯ ಕನಸಾಗಿತ್ತು. ಆದರೆ, ಬಿಜೆಪಿಯ ರಾಮರಾಜ್ಯದಲ್ಲಿ ಹಾಡ ಹಗಲೇ ಮಹಿಳೆಯರನ್ನು ಬೆತ್ತಲಾಗಿಸಿ ಮೆರವಣಿಗೆ ನಡೆಸಿದ್ದಲ್ಲದೆ ಅವರ ಮೇಲೆ ಸಾಮೂಹಿಕ ಅತ್ಯಾಚಾರಗಳು ನಡೆದವು ಮತ್ತು ಈಗಲೂ ನಡೆಯುತ್ತಿದೆ. ಮಣಿಪುರ ಅಂತಹ ಬರ್ಬರ ಕೃತ್ಯಗಳಿಗೆ ಇತ್ತೀಚಿನ ಉದಾಹರಣೆಯಾಗಿದೆ. ಮತ್ತು ಈ ಘಟನೆಗಳಿಗೆ ಪ್ರಧಾನಿ ಮೋದಿಯವರು ಹೇಗೆ ಸ್ಪಂದಿಸಿದರು ಎನ್ನುವುದು ಜಗತ್ತಿಗೇ ಗೊತ್ತಿದೆ. ಮಣಿಪುರದಲ್ಲಿ ನಡೆಯುತ್ತಿರುವ ಅನ್ಯಾಯ, ಅನಾಚಾರಗಳಿಗಾಗಿ ಭಾರತವು ತೀವ್ರ ಟೀಕೆಗೊಳಗಾಗಿದೆ. ಹಿಂದೂ ಧರ್ಮದ ಹೆಸರಿನಲ್ಲಿ ಸಂಘಪರಿವಾರ ಗುಜರಾತ್‌ನಲ್ಲಿ ಮಾಡಿದ್ದೇನು ಎನ್ನುವುದು ಜಗತ್ತು ಮರೆತಿಲ್ಲ. ಇತ್ತೀಚೆಗಷ್ಟೇ ಧರ್ಮದ ಹೆಸರಿನಲ್ಲಿ ನಡೆಸುತ್ತಿರುವ ದ್ವೇಷ ರಾಜಕಾರಣಕ್ಕಾಗಿ ಅಮೆರಿಕ ಭಾರತವನ್ನು ಖಂಡಿಸಿದೆ. ಬಿಜೆಪಿ ಮತ್ತು ಸಂಘಪರಿವಾರ ತಾನು ನಡೆಸುತ್ತಿರುವ ಎಲ್ಲ ಕುಕೃತ್ಯಗಳಿಗೂ ಹಿಂದೂಧರ್ಮದ ಹೆಸರನ್ನು ಬಳಸುತ್ತಿರುವುದರಿಂದ ನಿಜಕ್ಕೂ ಅತ್ಯಂತ ಹಾನಿಯಾಗಿರುವುದು ಹಿಂದೂಧರ್ಮಕ್ಕೇ ಆಗಿದೆ. ಆದುದರಿಂದ, ಸಂಘಪರಿವಾರ ಪ್ರತಿಪಾದಿಸುವ ಹಿಂದೂಧರ್ಮದಿಂದ ಅಂತರ ಕಾಯುವುದು ಪ್ರತಿಯೊಬ್ಬ ಹಿಂದೂ ಧರ್ಮೀಯನಿಗೂ ಅನಿವಾರ್ಯವಾಗಿದೆ. ವಿವೇಕಾನಂದರು ಜಗತ್ತಿನ ಮುಂದಿಟ್ಟ ಹಿಂದೂ ಧರ್ಮವನ್ನು ಮತ್ತೆ ಮುನ್ನೆಲೆಗೆ ತರುವ ಅಗತ್ಯವಿದೆ. ಆದುದರಿಂದಲೇ, ರಾಹುಲ್‌ಗಾಂಧಿಯವರು ತನ್ನ ಮಾತಿನಲ್ಲಿ ಸ್ಪಷ್ಟವಾಗಿ ಭಾರತದ ಹಿಂದೂ ಧರ್ಮದ ಹಿರಿಮೆಯನ್ನು ತೆರೆದಿಟ್ಟರು.

ಹಿಂದೂ ಧರ್ಮ ಅಹಿಂಸೆಯನ್ನು ಎತ್ತಿ ಹಿಡಿಯುತ್ತಾ ಬಂದಿದೆ. ನಿರ್ಭಯ ಮತ್ತು ಅಭಯ ಇವೆರಡೂ ಹಿಂದೂ ಧರ್ಮದ ಹಿರಿಮೆಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರೆ, ಬಿಜೆಪಿಗೆ ಅದು ಹಿಂದೂ ಧರ್ಮದ ನಿಂದನೆಯಂತೆ ಕೇಳುತ್ತದೆ. ಸಂಸತ್ತಿನಲ್ಲಿ ಕೊರಳಲ್ಲಿ ಹಾವು ಸುತ್ತಿಕೊಂಡ ಶಿವನ ಚಿತ್ರವನ್ನು ಅವರು ಪ್ರದರ್ಶಿಸಿದರು. ಶಿವನ ಹಿರಿಮೆಯನ್ನು ಅವರು ಹೇಳಿದರು. ಆದರೆ ಬಿಜೆಪಿಗೆ ಅದು ಪಥ್ಯವಾಗಲಿಲ್ಲ ಎನ್ನುವುದರಲ್ಲೇ ಯಾರು ಹಿಂದೂ ಧರ್ಮಕ್ಕೆ ಅವಮಾನಿಸಿದ್ದಾರೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದಾಗಿದೆ. ಇಸ್ಲಾಮ್‌ನ ಮಹನೀಯರು, ಗುರುನಾನಕ್, ಬುದ್ಧ, ಮಹಾವೀರ ಎಲ್ಲರೂ ಈ ನೆಲದಲ್ಲಿ ಅಹಿಂಸೆಯನ್ನು ಪ್ರತಿಪಾದಿಸಿದರು ಎನ್ನುವ ಮೂಲಕ ಭಾರತದ ಪರಂಪರೆಯ ಹೆಗ್ಗಳಿಕೆಯನ್ನು ಅವರು ಸಂಸತ್ತಿನಲ್ಲಿ ಮುಂದಿಟ್ಟರು. ಸಂಘಪರಿವಾರ ಮತ್ತು ಬಿಜೆಪಿಯ ನಾಯಕರು ಕೇಸರಿ ವೇಷ ಧರಿಸಿ ದೇಶದಲ್ಲಿ ನಡೆಸುತ್ತಿರುವ ಅವಾಂತರ, ಅಪರಾಧಗಳ ಕಳಂಕವನ್ನು ಹಿಂದೂಧರ್ಮದ ತಲೆಗೆ ಕಟ್ಟಲಾಗುತ್ತಿದೆ. ಇಂದು ಬಿಜೆಪಿ ಮತ್ತು ಸಂಘಪರಿವಾರದ ಕೈಯಿಂದ ಹಿಂದೂ ಧರ್ಮವನ್ನು ಉಳಿಸಬೇಕಾಗಿದೆ ಎನ್ನುವುದನ್ನು ರಾಹುಲ್‌ಗಾಂಧಿ ಪ್ರತಿಪಾದಿಸಿದ್ದಾರೆ. ಬಿಜೆಪಿ ಮತ್ತು ಆರೆಸ್ಸೆಸ್ ಇಡೀ ಹಿಂದೂ ಸಮಾಜವನ್ನು ಪ್ರತಿನಿಧಿಸುವುದಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ರಾಹುಲ್ ಗಾಂಧಿ ಸಂಸತ್ತಿನಲ್ಲಿ ಆಡಿದ ಮಾತುಗಳು ಕಾಂಗ್ರೆಸ್‌ನೊಳಗಿರುವ ಎಷ್ಟು ನಾಯಕರಿಗೆ ಪಥ್ಯವಾಗಿದೆ ಎನ್ನುವುದರ ಬಗ್ಗೆ ಅನುಮಾನಗಳಿವೆ. ಯಾಕೆಂದರೆ, ಕಾಂಗ್ರೆಸ್‌ನೊಳಗಿರುವ ಹಲವು ನಾಯಕರು ಆರೆಸ್ಸೆಸ್ ಜೊತೆಗೆ, ಬಿಜೆಪಿಯ ಹಿಂದುತ್ವದ ಜೊತೆಗೆ ಮೃದು ಧೋರಣೆಯನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. ಆರೆಸ್ಸೆಸ್‌ನ ವಿರುದ್ಧ ಬಹಿರಂಗವಾಗಿ ಕಟುವಾಗಿ ರಾಹುಲ್‌ಗಾಂಧಿ ಆಡಿದ ಮಾತುಗಳು ಈ ಕಾಂಗ್ರೆಸಿಗರಿಗೆ ಎಷ್ಟರಮಟ್ಟಿಗೆ ಮನವರಿಕೆಯಾಗಿದೆ? ಇಂದು ರಾಹುಲ್ ಗಾಂಧಿ ಆರೆಸ್ಸೆಸ್‌ನ ವಿರುದ್ಧ ಸ್ಪಷ್ಟವಾಗಿ ತನ್ನ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ. ರಾಹುಲ್ ಗಾಂಧಿ ಸಂಸತ್‌ನಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮದ ಬಗ್ಗೆ ತನ್ನ ಕಾರ್ಯಕರ್ತರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಉಳಿದ ಕಾಂಗ್ರೆಸ್ ನಾಯಕರು ಮಾಡಬೇಕಾಗಿದೆ. ಕಾಂಗ್ರೆಸಿನ ಇತರ ನಾಯಕರು ರಾಹುಲ್ ಗಾಂಧಿಯ ಈ ನಿಲುವಿನ ಜೊತೆಗೆ ಗಟ್ಟಿಯಾಗಿ ನಿಲ್ಲಬೇಕಾಗಿದೆ.

ಪ್ರಧಾನಿ ಮೋದಿಯವರು ರಾಹುಲ್ ಗಾಂಧಿಯ ಭಾಷಣಕ್ಕೆ ಅತ್ಯಂತ ನೀರಸವಾಗಿ ಪ್ರತಿಕ್ರಿಯಿಸಿದ್ದಾರೆ. ಅಗ್ನಿವೀರ್ ವಿರುದ್ಧ ರಾಹುಲ್ ಗಾಂಧಿ ಎತ್ತಿದ ಪ್ರಶ್ನೆಗಳಿಗೆ ಮೋದಿಯವರಲ್ಲಿ ಉತ್ತರವಿರಲಿಲ್ಲ. ನೋಟು ನಿಷೇಧದ ಒಳಿತುಗಳನ್ನಾದರೂ ಸಂಸತ್ತಿನಲ್ಲಿ ಮಂಡಿಸಿ ರಾಹುಲ್ ಗಾಂಧಿಯ ಬಾಯಿಯನ್ನು ಮುಚ್ಚಿಸುವ ಕೆಲಸ ಮಾಡಬಹುದಿತ್ತು. ಆದರೆ ಆ ಪ್ರಶ್ನೆಯಿಂದಲೂ ಮೋದಿ ನುಣುಚಿಕೊಂಡಿದ್ದಾರೆ. ಇತ್ತೀಚಿನ ನೀಟ್ ಹಗರಣದಲ್ಲಿ ಬಿಜೆಪಿ ನಾಯಕರ ಹೆಸರು ಕೇಳಿ ಬಂದಿದೆ. ಅದಕ್ಕೂ ಮೋದಿಯವರಿಂದ ಉತ್ತರವಿಲ್ಲ. ಮಣಿಪುರ ಹಿಂಸಾಚಾರದ ಬಗ್ಗೆಯಂತೂ ಅವರ ಮಾತಿನಲ್ಲಿ ವಿಷಾದವೇ ಇಲ್ಲ. ತನ್ನ ಮೇಲಿನ ಆರೋಪಗಳನ್ನು ಮರೆಮಾಚಲು ಅವರು ಮತ್ತೆ ಹಿಂದೂ ಧರ್ಮವನ್ನು ಕರ್ಚೀಪಿನಂತೆ ಬಳಸಿಕೊಂಡರು. ಹಾಗಾದರೆ ಸಂಸತ್ತಿನಲ್ಲಿ ಹಿಂದೂಧರ್ಮಕ್ಕೆ ನಿಜಕ್ಕೂ ಅವಮಾನಿಸಿದವರು ಯಾರು? ಬಿಜೆಪಿ ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News