ಕನ್ನಡಿಗರಿಗೆ ಮೀಸಲಾತಿ: ಭಿಕ್ಷೆಯಲ್ಲ, ಸ್ಥಳೀಯರ ಹಕ್ಕು!

Update: 2024-07-18 05:37 GMT
Full View

ಸ್ಥಳೀಯರಿಗೆ ಅಂದರೆ ಕನ್ನಡಿಗರಿಗೆ ಸರಕಾರಿ ಮತ್ತು ಖಾಸಗಿ ವಲಯದ ಸಂಸ್ಥೆಗಳಲ್ಲಿ ಉದ್ಯೋಗ ಕಲ್ಪಿಸಲು ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು ಎನ್ನುವ ಬೇಡಿಕೆ ಇಂದು ನಿನ್ನೆಯದಲ್ಲ. ಎಲ್ಲ ಸರಕಾರಗಳೂ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸುವ ಭರವಸೆಗಳನ್ನು ನೀಡುತ್ತಲೇ ಬಂದಿವೆೆ. ಸ್ಥಳೀಯರು ಎಂದರೆ ಯಾರು ಎನ್ನುವುದಕ್ಕೆ ಒಂದು ತಾತ್ವಿಕ ಅಡಿಗಲ್ಲನ್ನು ಹಾಕಿಕೊಟ್ಟಿರುವುದು ಕೂಡ ಸರೋಜಿನಿ ಮಹಿಷಿ ವರದಿ. 80ರ ದಶಕದಲ್ಲಿ ಈ ವರದಿ ಜಾರಿಯಾಗಿದೆಯಾದರೂ, ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಮೀಸಲಾತಿ ನೀಡುವ ನಿಟ್ಟಿನಲ್ಲಿ ಯಾವ ಸರಕಾರವೂ ಈವರೆಗೆ ಕ್ರಮ ತೆಗೆದುಕೊಂಡಿಲ್ಲ. ಐಟಿ, ಬಿಟಿ, ಕಾರ್ಪೊರೇಟ್ ವಲಯಗಳು ಬೆಳವಣಿಗೆಯಾದಂತೆಯೇ ಕೈಗಾರಿಕಾ ನೀತಿಯಲ್ಲೂ ಬದಲಾವಣೆಗಳಾದವು. ಎಲ್ಲ ಸರಕಾರಗಳೂ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಬಗ್ಗೆ ಶೀಘ್ರ ಕಾನೂನು ಜಾರಿಗೊಳಿಸುತ್ತೇವೆ ಎಂದು ಘೋಷಿಸಿ, ಬಳಿಕ ಮೌನವಾಗಿ ಬಿಡುತ್ತಿದ್ದವು. ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಆದ್ಯತೆಯನ್ನು ನೀಡಿದರೆ, ಕಾರ್ಪೊರೇಟ್ ಕಂಪೆನಿಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಹಿಂದೇಟು ಹಾಕಬಹುದು ಎನ್ನುವ ಆತಂಕವೇ ಈ ಮೌನಕ್ಕೆ ಮುಖ್ಯ ಕಾರಣ. ಇದೇ ಸಂದರ್ಭದಲ್ಲಿ ಸರಕಾರಗಳ ಮೇಲೆ ಖಾಸಗಿ ಉದ್ಯಮಿಗಳ ಒತ್ತಡವೂ ಸರೋಜಿನಿ ಮಹಿಷಿ ವರದಿ ಜಾರಿಗೊಳ್ಳದಂತೆ ತಡೆದಿದೆ.

ಇದೀಗ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ, ಖಾಸಗಿ ಕೈಗಾರಿಕೆಗಳು ಹಾಗೂ ಇತರ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ. 50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ. 75ರಷ್ಟು ಮೀಸಲಾತಿ ನಿಗದಿ ಪಡಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಹೀಗೆ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ತನ್ನ ನಿರ್ಧಾರದಿಂದ ಸರಕಾರ ಹಿಂದೆ ಸರಿದಿದೆ. ಸಿದ್ದರಾಮಯ್ಯ ಟ್ವೀಟ್ ಮಾಡಿದ ಬೆನ್ನಿಗೇ ಖಾಸಗಿ ವಲಯದ ಉದ್ಯಮಿಗಳು, ಸಂಸ್ಥೆಗಳ ಮುಖ್ಯಸ್ಥರು ತಮ್ಮ ವ್ಯಾಪಕ ಅಸಮಾಧಾನಗಳನ್ನು ವ್ಯಕ್ತಪಡಿಸತೊಡಗಿದ್ದರು. ನ್ಯಾಶನಲ್ ಅಸೋಸಿಯೇಶನ್ ಆಫ್ ಸಾಫ್ಟ್‌ವೇರ್ ಆ್ಯಂಡ್ ಸರ್ವೀಸ್ ಕಂಪೆನೀಸ್(ನಾಸ್‌ಕಾಮ್) ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದು, ‘‘ಉದ್ಯಮದ ಬೆಳವಣಿಗೆಗೆ ಇದು ಧಕ್ಕೆ ತರುತ್ತದೆ. ಈ ವಿಧೇಯಕ ಅಂಗೀಕಾರವಾದರೆ ನವೋದ್ಯಮಗಳು ವಲಸೆ ಹೋಗಬಹುದು’’ ಎಂದು ಬೆದರಿಕೆ ಒಡ್ಡಿದೆ. ಉದ್ಯಮಿ ಮೋಹನ್ ದಾಸ್ ಪೈ ಸರಕಾರದ ನಿರ್ಧಾರವನ್ನು ಪ್ರಶ್ನಿಸಿದ್ದು, ‘‘ಇದು ಕೌಶಲ್ಯ ಅಭಿವೃದ್ಧಿಯ ಮೇಲೆ ದುಷ್ಪರಿಣಾಮ ಬೀರಲಿದೆ. ಸಿಬ್ಬಂದಿಯ ಗುಣಮಟ್ಟದ ಮೇಲೆಯೂ ಪರಿಣಾಮ ಬೀರಲಿದೆ’’ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳು ಸರಕಾರದ ನಿರ್ಧಾರವನ್ನು ಸ್ವಾಗತಿಸಿತ್ತು. ಆದರೆ ತನ್ನ ನಿರ್ಧಾರಕ್ಕೆ ಕನಿಷ್ಠ 12 ಗಂಟೆಗಳ ಕಾಲವೂ ಬದ್ಧವಾಗಿ ಉಳಿದುಕೊಳ್ಳಲು ಸರಕಾರಕ್ಕೆ ಸಾಧ್ಯವಾಗಲಿಲ್ಲ. ಇದೀಗ ‘‘ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಸಂಬಂಧ ಸಂಪುಟ ಅನುಮೋದನೆ ನೀಡಲಾಗಿದ್ದ ವಿಧೇಯಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮತ್ತೊಮ್ಮೆ ಪರಾಮರ್ಶಿಸಿ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು’’ ಎಂದು ಪ್ರಕಟಿಸಿದೆ.

ವಿಧೇಯಕ ಜಾರಿಗೊಳಿಸಿದರೂ ಇದರ ವಿರುದ್ಧ ಖಾಸಗಿ ಕಂಪೆನಿಗಳು ನ್ಯಾಯಾಲಯದ ಮೆಟ್ಟಿಲೇರಬಹುದು. ಸರಕಾರದ ನಿರ್ಧಾರ ಅಲ್ಲಿ ಮಾನ್ಯವಾಗುತ್ತದೆ ಎನ್ನುವಂತಿಲ್ಲ. ಕನಿಷ್ಟ ಅಂತಹದೊಂದು ವಿಧೇಯಕವನ್ನು ಅಂಗೀಕರಿಸುವ ಧೈರ್ಯವನ್ನು ಸರಕಾರ ಪ್ರದರ್ಶಿಸುವುದು ಸದ್ಯದ ಅಗತ್ಯವಾಗಿತ್ತು. ಅಂತಹ ಧೈರ್ಯವನ್ನು ಪ್ರದರ್ಶಿಸಿ ಕೊನೆಯ ಕ್ಷಣದಲ್ಲಿ ಮುಖ್ಯಮಂತ್ರಿ ಹಿಂದೆ ಸರಿದಿದ್ದಾರೆ. ತಾನು ಮಾಡಿದ ಟ್ವೀಟ್‌ನ್ನು ಕೆಲವೇ ಗಂಟೆಗಳಲ್ಲಿ ಮುಖ್ಯಮಂತ್ರಿ ಹಿಂದೆಗೆದುಕೊಳ್ಳುವಂತಹ ಸ್ಥಿತಿ ನಿರ್ಮಾಣ ಮಾಡಿದ ಕನ್ನಡ ವಿರೋಧಿ ಶಕ್ತಿ ಯಾವುದು? ವಿಧೇಯಕದ ವಿರುದ್ಧ ಖಾಸಗಿ ವಲಯದ ಬಹುದೊಡ್ಡ ಆಕ್ಷೇಪವೆಂದರೆ, ಇದರಿಂದ ಸಿಬ್ಬಂದಿಯ ಗುಣ ಮಟ್ಟ ಕುಸಿಯುತ್ತದೆ ಎನ್ನುವುದು. ಶೋಷಿತ ಸಮುದಾಯಕ್ಕೆ ಮೀಸಲಾತಿಯನ್ನು ನೀಡಬೇಕು ಎಂದಾಗ, ಮೇಲ್‌ಜಾತಿಯ ಜನರು ‘‘ಇದರಿಂದ ಪ್ರತಿಭೆಗೆ ಅನ್ಯಾಯವಾಗುತ್ತದೆ. ಗುಣಮಟ್ಟ ಇಳಿಮುಖವಾಗುತ್ತದೆ’’ ಎಂದೆಲ್ಲ ಆಕ್ಷೇಪ ತೆಗೆಯುತ್ತಾರೆ. ಅದಕ್ಕೂ, ಸ್ಥಳೀಯರ ಮೀಸಲಾತಿಗೆ ಖಾಸಗಿ ಕಂಪೆನಿಗಳು ಮಾಡುತ್ತಿರುವ ಆಕ್ಷೇಪಕ್ಕೂ ದೊಡ್ಡ ವ್ಯತ್ಯಾಸವೇನೂ ಇಲ್ಲ. ಕನ್ನಡದ ನೆಲ, ಜಲ ಎಲ್ಲವನ್ನೂ ಗರಿಷ್ಟ ಪ್ರಮಾಣದಲ್ಲಿ ಹೀರಿಕೊಳ್ಳುವ ಕಂಪೆನಿಗಳು, ಕನ್ನಡಿಗರಿಗೆ ಉದ್ಯೋಗ ನೀಡುವ ಸಂದರ್ಭದಲ್ಲಿ ಮಾತ್ರ, ಕನ್ನಡಿಗರಲ್ಲಿ ಗುಣಮಟ್ಟವಿಲ್ಲ, ಪ್ರತಿಭೆಯಿಲ್ಲ, ಕೌಶಲ್ಯವಿಲ್ಲ ಎಂಬರ್ಥದಲ್ಲಿ ಮಾತನಾಡುವುದು ಅತ್ಯಂತ ಆಘಾತಕಾರಿಯಾಗಿದೆ. ಇಂದು ಕನ್ನಡಿಗರು ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ, ಅಂತಾರ್‌ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯ ಬಲದಿಂದಲೇ ಮಿಂಚುತ್ತಿದ್ದಾರೆ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರಗಳಲ್ಲಿ ಅಂತಾರ್‌ರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರು ಸುದ್ದಿಯಾಗುತ್ತಿದ್ದಾರೆ. ಐಟಿಯಲ್ಲಿ ಬೆಂಗಳೂರು ವಿಶ್ವಮಟ್ಟದಲ್ಲಿ ಗುರುತಿಸುತ್ತಿದೆ. ಮತ್ತು ಇಂಫೋಸಿಸ್‌ನ

ಮುಖ್ಯಸ್ಥರೇ ಕನ್ನಡಿಗರು. ಹೀಗಿರುವಾಗ, ಕನ್ನಡಿಗರಿಗೆ ಆದ್ಯತೆ ನೀಡಿದರೆ ಉದ್ಯೋಗ ವಲಯದ ಗುಣಮಟ್ಟ ಕಡಿಮೆಯಾಗುತ್ತದೆ ಎಂದು ಇವರು ಯಾವ ಆಧಾರದಲ್ಲಿ ಹೇಳುತ್ತಾರೆ? ವಿಪರ್ಯಾಸವೆಂದರೆ, ಕನ್ನಡಿಗರೆಂದು ಗುರುತಿಸಿಕೊಂಡಿರುವ ಮೋಹನ್ ದಾಸ್ ಪೈಯಂತಹ ಉದ್ಯಮಿಗಳೇ ಸ್ಥಳೀಯರ ವಿರುದ್ಧ, ಕನ್ನಡಿಗರ ವಿರುದ್ಧ ಕತ್ತಿ ಮಸೆಯುತ್ತಿರುವುದು.

ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಕಡ್ಡಾಯ ಮೀಸಲಾತಿ ಎಂದಿದ್ದರೆ ಅದನ್ನು ಪರಿಶೀಲಿಸಬಹುದಿತ್ತೋ ಏನೋ? ಯಾಕೆಂದರೆ, ಇಲ್ಲಿ ಕನ್ನಡ ಮಾಧ್ಯಮದಲ್ಲಿ ಉನ್ನತ ಶಿಕ್ಷಣಕ್ಕೆ ಬೇಕಾದ ಸೌಲಭ್ಯಗಳ ಕೊರತೆಯಿದೆ. ಎಸ್‌ಎಸ್‌ಎಲ್‌ಸಿಯ ಬಳಿಕ ಕನ್ನಡ ಮಾಧ್ಯಮದಲ್ಲೇ ಕಲಿಕೆಯನ್ನು ಮುಂದುವರಿಸುವ ವಾತಾವರಣ ರಾಜ್ಯದಲ್ಲಿ ಇಲ್ಲ. ಯಾರು ಸ್ಥಳೀಯರು, ಯಾರು ಕನ್ನಡಿಗರು ಎನ್ನುವುದಕ್ಕೂ ಒಂದು ಮಾನದಂಡವನ್ನು ಸರಕಾರ ಈಗಾಗಲೇ ಕಲ್ಪಿಸಿದೆ. ಕರ್ನಾಟಕದಲ್ಲಿ ಹುಟ್ಟಿರಬೇಕು, 15 ವರ್ಷದಿಂದ ಕರ್ನಾಟಕದಲ್ಲಿ ವಾಸಿಸುತ್ತಿರಬೇಕು, ಎಸ್‌ಎಸ್‌ಎಲ್‌ಸಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿಯದವರು, ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಅಂದರೆ ಅವರಿಗೆ ಕನಿಷ್ಠ ಮಟ್ಟದಲ್ಲಿ ಕನ್ನಡ ಗೊತ್ತಿರಬೇಕು ಎನ್ನುವುದನ್ನಷ್ಟೇ ಸರಕಾರ ಸೂಚಿಸಿದೆ. ಕರ್ನಾಟಕದಲ್ಲಿದ್ದು ಇಷ್ಟರಮಟ್ಟಿಗೆ ಕನ್ನಡವನ್ನು ತನ್ನದಾಗಿಸುವುದು ಕಷ್ಟವೇನೂ ಇಲ್ಲ. ಉದ್ಯೋಗದ ಬೆನ್ನು ಹತ್ತಿ ಕನ್ನಡವನ್ನು ಸಂಪೂರ್ಣ ತಿರಸ್ಕರಿಸಿ, ಇಂಗ್ಲಿಷ್‌ಗೆ ನೇತಾಡುವವರು, ಮೀಸಲಾತಿಯ ಕಾರಣಕ್ಕಾಗಿ ಕನ್ನಡಕ್ಕೂ ಆದ್ಯತೆಯನ್ನು ನೀಡುವಂತಾಗುತ್ತದೆ. ಇಂದು ಬೃಹತ್ ಉದ್ಯಮಗಳಿಗಾಗಿ ಕನ್ನಡಿಗರು ಸಾವಿರಾರು ಎಕರೆ ಭೂಮಿಯನ್ನು ಬಿಟ್ಟುಕೊಟ್ಟಿದ್ದಾರೆ. ಹಾಗೆಯೇ ಇಲ್ಲಿನ ಗಾಳಿ, ನೀರು ಇತ್ಯಾದಿಗಳನ್ನು ಈ ಉದ್ಯಮಗಳಿಗಾಗಿ ಕನ್ನಡಿಗರು ತ್ಯಾಗ ಮಾಡಿದ್ದಾರೆ. ಸರಕಾರವೂ ಸಾಕಷ್ಟು ಸಬ್ಸಿಡಿಗಳನ್ನು ಇವುಗಳಿಗೆ ನೀಡುತ್ತಿದೆ. ಪ್ರತಿಯಾಗಿ ಉದ್ಯೋಗದಲ್ಲಿ ಇಂತಿಷ್ಟು ಮೀಸಲಾತಿಯನ್ನು ಯಾಕೆ ಕೇಳಬಾರದು? ಸರಕಾರ ತನ್ನ ನಿರ್ಧಾರದಿಂದ ಯಾವ ಕಾರಣಕ್ಕೂ ಹಿಂದೆ ಸರಿಯಬಾರದು. ಖಾಸಗಿ ಕಂಪೆನಿಗಳ ಒತ್ತಡಕ್ಕೂ ಮಣಿಯಬಾರದು. ಈಗಾಗಲೇ ಉತ್ತರ ಭಾರತೀಯರು ಬ್ಯಾಂಕುಗಳಲ್ಲಿ, ರೈಲ್ವೆ ಇಲಾಖೆಗಳಲ್ಲಿ, ಸರಕಾರಿ ಉದ್ಯೋಗಗಳಲ್ಲಿ ತುಂಬಿ ಹೋಗಿದ್ದಾರೆ. ವೈದ್ಯಕೀಯದಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿಯೂ ನೀಟ್ ಹೆಸರಿನಲ್ಲಿ ಕನ್ನಡಿಗರ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಕರ್ನಾಟಕದ ನೆಲ, ಜಲವನ್ನು ಬಳಸಿಕೊಂಡು, ಸರಕಾರದ ಸಕಲ ನೆರವನ್ನು ಪಡೆದುಕೊಂಡು ಸ್ಥಾಪನೆಗೊಳ್ಳುವ ಕೈಗಾರಿಕೆಗಳಲ್ಲೂ ಕನ್ನಡಿಗರಿಗೆ ಪಾಲಿಲ್ಲದೇ ಇದ್ದರೆ, ಮುಂದಿನ ದಿನಗಳಲ್ಲಿ ಕನ್ನಡಿಗರೆಲ್ಲ ಉದ್ಯೋಗ ಅರಸಿ ವಿದೇಶಕ್ಕೆ ವಲಸೆ ಹೋಗಬೇಕಾದಂತಹ ಸ್ಥಿತಿ ನಿರ್ಮಾಣವಾಗಬಹುದು. ಸ್ಥಳೀಯರಿಗೆ ಉದ್ಯೋಗ ಖಾಸಗಿ ಕಂಪೆನಿಗಳು ನೀಡುವ ಭಿಕ್ಷೆಯಲ್ಲ, ಅದು ಕನ್ನಡಿಗರ ಹಕ್ಕು. ಇದನ್ನು ಸರಕಾರ ಖಾಸಗಿ ಕಂಪೆನಿಗಳ ದನಿಗಳಿಗೆ ಮನದಟ್ಟು ಮಾಡಿಕೊಡಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News