ಸರಕಾರಿ ಕಚೇರಿಗಳಲ್ಲಿ ದ್ವೇಷದ ಅಂಗಡಿ

Update: 2024-07-24 04:55 GMT

Photo: PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸರಕಾರಿ ನೌಕರರು ಆರೆಸ್ಸೆಸ್ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಹೇರಿದ್ದ ನಿಷೇಧವನ್ನು ಕೇಂದ್ರ ಸರಕಾರ ಹಿಂದೆಗೆದುಕೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. 1966ರಲ್ಲಿ ಅಂದರೆ ಸುಮಾರು 58 ವರ್ಷಗಳ ಹಿಂದೆ, ಸರಕಾರಿ ನೌಕರರು ಆರೆಸ್ಸೆಸ್ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ನಿಷೇಧ ಹೇರಲಾಗಿತ್ತು. ಆರೆಸ್ಸೆಸ್ ಸಿದ್ಧಾಂತ, ಸಂವಿಧಾನದ ಕುರಿತಂತೆ ಅದು ಹೊಂದಿರುವ ದೃಷ್ಟಿಕೋನ, ಜಾತಿಯಾಧಾರಿತ ವ್ಯವಸ್ಥೆಯ ಮೇಲಿರುವ ನಂಬಿಕೆ ಮತ್ತು ದೇಶದ ಸೌಹಾರ್ದವನ್ನು ಕೆಡಿಸಲು ಅದು ನಡೆಸಿದ ಸಂಚುಗಳು ಈ ನಿಷೇಧಕ್ಕೆ ಮುಖ್ಯ ಕಾರಣಗಳಾಗಿದ್ದವು. ಹಾಗೆ ನೋಡಿದರೆ, 1948ರಲ್ಲಿ ಇಡೀ ಆರೆಸ್ಸೆಸನ್ನೇ ನಿಷೇಧಿಸಲಾಗಿತ್ತು. ಮಹಾತ್ಮಾ ಗಾಂಧೀಜಿಯ ಕೊಲೆಯ ಹಿಂದೆ ಆರೆಸ್ಸೆಸ್ ಸಿದ್ಧಾಂತ ಕೆಲಸ ಮಾಡಿದೆ ಎನ್ನುವ ಆರೋಪದಲ್ಲಿ ಈ ನಿಷೇಧವನ್ನು ಸರ್ದಾರ್ ವಲಭಭಾಯಿ ಪಟೇಲ್ ಅವರು ಹೊರಡಿಸಿದ್ದರು. ಬಳಿಕ ಆರೆಸ್ಸೆಸನ್ನು ಸಾಂಸ್ಕೃತಿಕ ಸಂಘಟನೆಯಾಗಿ ಮುಂದುವರಿಸುವ ಮತ್ತು ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಮೂಗು ತೂರಿಸದೇ ಇರುವ ಭರವಸೆ ನೀಡಿದ ಬಳಿಕ, ಈ ನಿಷೇಧವನ್ನು ಹಿಂದೆಗೆದುಕೊಳ್ಳಲಾಯಿತು. ಆರೆಸ್ಸೆಸ್‌ನ ಮೇಲಿರುವ ಸಂಪೂರ್ಣ ನಿಷೇಧ ಹಿಂದೆಗೆದುಕೊಂಡ ಬಳಿಕ, ಸರಕಾರಿ ನೌಕರರು ಆರೆಸ್ಸೆಸ್‌ನ ಜೊತೆಗೆ ಅಧಿಕೃತವಾಗಿ ಸಂಬಂಧವನ್ನು ಇಟ್ಟುಕೊಳ್ಳುವುದನ್ನು ನಿಷೇಧಿಸಲಾಯಿತು.

ಇತಿಹಾಸದುದ್ದಕ್ಕೂ ಆರೆಸ್ಸೆಸ್ ದೇಶವಿರೋಧಿ ಕೃತ್ಯಗಳಲ್ಲಿ ಗುರುತಿಸಿಕೊಳ್ಳುತ್ತಲೇ ಬಂದಿದೆ. ಹಿಂದೂ ಮಹಾಸಭಾ ಬ್ರಿಟಿಷರೊಂದಿಗೆ ಪರೋಕ್ಷವಾಗಿ ಕೈಜೋಡಿಸಿತ್ತು. ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಹಲವು ಹಿರಿಯರು ಇಂದು ಸರಕಾರದಿಂದ ಅಧಿಕೃತವಾಗಿ ಪಿಂಚಣಿ ಪಡೆಯುತ್ತಿದ್ದಾರೆ. ಆದರೆ, ಆರೆಸ್ಸೆಸ್ ಸಂಘಟನೆಯ ಪ್ರಾತಃಸ್ಮರಣೀಯ ವ್ಯಕ್ತಿಯಾಗಿರುವ ಸಾವರ್ಕರ್, ಕ್ಷಮೆಯಾಚನೆ ಮಾಡಿ, ಸ್ವಾತಂತ್ರ‍್ಯ ಹೋರಾಟದಿಂದ ದೂರ ಉಳಿದು ಬ್ರಿಟಿಷರಿಂದಲೇ ಮಾಸಿಕ ಪಿಂಚಣಿಯನ್ನು ಪಡೆದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಸುಭಾಶ್ ಚಂದ್ರ ಬೋಸರ ಸೇನೆಗೆ ಯುವಕರು ಸೇರದಂತೆ ತಡೆದವರೂ ಸಾವರ್ಕರ್. ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗವಹಿಸಿದ ಯಾವ ಹಿನ್ನೆಲೆಯೂ ಆರೆಸ್ಸೆಸ್‌ನ ಹಿರಿಯರಿಗಿಲ್ಲ. ಇದೇ ಸಂದರ್ಭದಲ್ಲಿ ದೇಶವನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಿ ಪಾಕಿಸ್ತಾನ ಸೃಷ್ಟಿಗೆ ಪರೋಕ್ಷವಾಗಿ ಕಾರಣವಾದದ್ದು ಹಿಂದೂ ಮಹಾ ಸಭಾ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯನ್ನು ಕೊಂದ ಆರೋಪದ ಕಳಂಕವನ್ನು ಆರೆಸ್ಸೆಸ್ ತನ್ನದಾಗಿಸಿಕೊಂಡಿದೆ. ಆ ಕಾರಣಕ್ಕಾಗಿಯೇ ಅದು ನಿಷೇಧಕ್ಕೊಳಗಾಯಿತು. ಗಾಂಧೀಜಿಯ ಕೊಲೆಯಾದಾಗ ಆರೆಸ್ಸೆಸ್ ಸಿಹಿ ಹಂಚಿರುವುದರ ಬಗ್ಗೆ ಪಟೇಲ್ ಅತ್ಯಂತ ಖೇದ, ಆತಂಕದಿಂದ ಗೋಳ್ವಾಲ್ಕರ್‌ಗೆ ಪತ್ರವನ್ನು ಬರೆದಿದ್ದರು. ಆರೆಸ್ಸೆಸ್‌ನ ಹಿರಿಯರು ಸಂವಿಧಾನವನ್ನು, ರಾಷ್ಟ್ರಧ್ವಜವನ್ನು ಸ್ಪಷ್ಟವಾಗಿ ವಿರೋಧಿಸುತ್ತಾ ಬಂದವರು. ಆರೆಸ್ಸೆಸ್ ಅಧಿಕೃತವಾಗಿ ಎಂದೂ ತನ್ನ ಮುಖ್ಯ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿರಲಿಲ್ಲ. 2001ರಲ್ಲಿ ಗಣರಾಜ್ಯೋತ್ಸವ ದಿನದಂದು ರಾಷ್ಟ್ರಪ್ರೇಮಿ ಯುವ ದಳದ ಮೂವರು ಯುವಕರು ಮುಖ್ಯ ಕಚೇರಿಗೆ ನುಗ್ಗಿ ರಾಷ್ಟ್ರಧ್ವಜವನ್ನು ಬಲವಂತವಾಗಿ ಹಾರಿಸಿದ್ದರು. ಆದರೆ ಇವರ ಮೇಲೆ ಆರೆಸ್ಸೆಸ್ ಸುಳ್ಳು ದೂರನ್ನು ದಾಖಲಿಸಿತು. ರಾಷ್ಟ್ರಧ್ವಜವನ್ನು ಹಾರಿಸಿದ ತಪ್ಪಿಗಾಗಿ ಈ ಮೂವರು ಯುವಕರನ್ನು 12 ವರ್ಷಗಳ ಕಾಲ ನ್ಯಾಯಾಲಯಕ್ಕೆ ಅಲೆದಾಡಿಸಿತು. 2013ರಂದು ಈ ಯುವಕರು ದೋಷ ಮುಕ್ತರಾದರು. ದೇಶದ ಕೋಮುಗಲಭೆಗಳಲ್ಲಿ ಆರೆಸ್ಸೆಸ್‌ನ ಪಾತ್ರಗಳೇನು ಎನ್ನುವುದನ್ನು ಇಲ್ಲಿ ವಿವರಿಸಬೇಕಾಗಿಲ್ಲ. ಇವೆಲ್ಲವೂ, ಸರಕಾರಿ ನೌಕರರು ಯಾಕೆ ಆರೆಸ್ಸೆಸ್ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎನ್ನುವುದಕ್ಕೆ ಕಾರಣಗಳಾಗಿವೆ.

ಆರೆಸ್ಸೆಸ್ ಧಾರ್ಮಿಕ ಅಥವಾ ಸಾಂಸ್ಕೃತಿಕ ಸಂಘಟನೆಯಲ್ಲ. ಅದೊಂದು ಅಪ್ಪಟ ರಾಜಕೀಯ ಸಂಘಟನೆಯಾಗಿದೆ. ಬಿಜೆಪಿಯ ಬಹುತೇಕ ನಾಯಕರು ಆರೆಸ್ಸೆಸನ್ನು ಮಾತೃ ಸಂಘಟನೆಯಾಗಿ ಎದೆಯೊಳಗೆ ಇಟ್ಟುಕೊಂಡಿದ್ದಾರೆ. ಯಾವುದೇ ಧಾರ್ಮಿಕ, ಸಾಂಸ್ಕೃತಿಕ ಸಂಘಟನೆಗಳು ಕೈಯಲ್ಲಿ ಲಾಠಿ, ಖಡ್ಗಗಳನ್ನು ಹಿಡಿದುಕೊಂಡು ಪಥಸಂಚಲನ ನಡೆಸುವುದಿಲ್ಲ. ಆರೆಸ್ಸೆಸ್ ಜಾತಿ ವ್ಯವಸ್ಥೆಯನ್ನು ಎತ್ತಿ ಹಿಡಿಯುತ್ತದೆ. ಆರೆಸ್ಸೆಸ್ ಚುಕ್ಕಾಣಿ ಈ ದೇಶದ ಮೇಲ್‌ಜಾತಿಯ ಕೈಯಲ್ಲಿದೆ. ಅದು ಎಂದೂ ಈ ದೇಶದ ದಲಿತರಿಗೆ, ರೈತರಿಗೆ, ಕರ‍್ಮಿಕರಿಗೆ ಅನ್ಯಾಯಗಳಾದಾಗ ಮಾತನಾಡಿದ್ದಿಲ್ಲ. ಅಸ್ಪಶ್ಯತೆಯ ಕೃತ್ಯಗಳು ನಡೆದಾಗ ಖಂಡಿಸಿದ್ದಿಲ್ಲ. ಮೀಸಲಾತಿಯ ಫಲಾನುಭವಿಗಳು ಬಡ, ಹಿಂದುಳಿದ ಹಿಂದೂಗಳೇ ಆಗಿದ್ದರೂ ಅದನ್ನು ಬೆಂಬಲಿಸಿದ್ದಿಲ್ಲ. ಗೋಳ್ವಾಲ್ಕರ್ ಅವರ ಬರಹಗಳ ತಳಹದಿಯ ಮೇಲೆ ಆರೆಸ್ಸೆಸ್ ನಿಂತಿದೆ. ಗೋಳ್ವಾಲ್ಕರ್ ಅವರ ಬರಹಗಳನ್ನು ಓದಿದರೆ ಸರಕಾರಿ ನೌಕರರು ಮಾತ್ರವಲ್ಲ, ಸಂವಿಧಾನದ ಮೇಲೆ, ಪ್ರಜಾಸತ್ತೆಯ ಮೇಲೆ ನಂಬಿಕೆಯಿರುವ ಯಾರೂ ಆರೆಸ್ಸೆಸ್ ಚಟುವಟಿಕೆಗಳಲ್ಲಿ ಭಾಗವಹಿಸಲಾರರು. ಆರೆಸ್ಸೆಸ್ ಇಂದು ಜಗತ್ತಿನಲ್ಲೇ ಅತಿ ಹೆಚ್ಚು ದೇಣಿಗೆಯನ್ನು ಪಡೆಯುವ ಸರಕಾರೇತರ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ. ವಿದೇಶಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳ ಮೇಲೆ ಪೊಲೀಸರು ಒಂದು ಕಣ್ಣಿಟ್ಟಿದ್ದಾರೆ. ಸರಕಾರಿ ನೌಕರರು ಸರಕಾರಕ್ಕೆ, ಸಂವಿಧಾನಕ್ಕೆ ಬದ್ಧರಾಗಿ ಕೆಲಸ ಮಾಡಬೇಕಾದವರು. ಆರೆಸ್ಸೆಸ್‌ನಲ್ಲಿ ಸಕ್ರಿಯವಾಗಿರುವವರು, ಪ್ರಜಾಸತ್ತೆಯ ಮೌಲ್ಯಗಳಿಗೆ ಪೂರ್ಣ ಪ್ರಮಾಣದಲ್ಲಿ ಬದ್ಧರಾಗಲು ಸಾಧ್ಯವಿಲ್ಲ.

ಸರಕಾರಿ ನೌಕರರಿಗೆ ಆರೆಸ್ಸೆಸ್ ಚಟುವಟಿಕೆಗಳಲ್ಲಿ ಈವರೆಗೆ ನಿಷೇಧ ಹೇರಲಾಗಿತ್ತು ಎಂದಾಕ್ಷಣ ಸರಕಾರಿ ನೌಕರರು ಆರೆಸ್ಸೆಸ್‌ನಲ್ಲಿ ಗುರುತಿಸಿಕೊಂಡಿರಲೇ ಇಲ್ಲ ಎಂದರೆ ತಪ್ಪಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ, ನ್ಯಾಯಾಲಯದಲ್ಲಿ, ಸರಕಾರಿ ಕಚೇರಿಗಳಲ್ಲಿ ಆರೆಸ್ಸೆಸ್ ಅಜೆಂಡಾಗಳನ್ನು ಗುಟ್ಟಾಗಿ ಅನುಷ್ಠಾನಕ್ಕಿಳಿಸುತ್ತಿರುವ ಅಧಿಕಾರಿ, ಸಿಬ್ಬಂದಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಪೊಲೀಸ್ ಇಲಾಖೆ, ಸೇನೆಯಲ್ಲೂ ಆರೆಸ್ಸೆಸ್ ಸಂಘಟನೆಯೊಂದಿಗೆ ಗುರುತಿಸಿಕೊಂಡ ಜನರಿದ್ದಾರೆ. ಧರ್ಮ, ಜಾತಿಯ ಹೆಸರಿನಲ್ಲಿ ಜನರನ್ನು ವಿಭಜಿಸುವ ಸರಕಾರಿ ನೌಕರರ ಸಂಖ್ಯೆ ದೊಡ್ಡದಿದೆ. ಶಾಲೆಗಳಲ್ಲಿ ಆರೆಸ್ಸೆಸ್ ಕಾರ‍್ಯಕ್ರಮಗಳನ್ನು ನಡೆಸುವ ಶಿಕ್ಷಕರಿದ್ದಾರೆ. ಸಂಘಪರಿವಾರ ಮತ್ತು ಪೊಲೀಸ್ ಇಲಾಖೆಗಳ ನಡುವಿನ ಅನೈತಿಕ ಸಂಬಂಧಗಳು ಆಗಾಗ ಬಯಲಾಗುತ್ತಿರುತ್ತವೆ. ಆದರೆ ಇದೀಗ ಅಧಿಕೃತವಾಗಿ ನಿಷೇಧವನ್ನು ಹಿಂದೆಗೆದಿರುವುದರಿಂದ, ಮುಂದಿನ ದಿನಗಳಲ್ಲಿ ಪೊಲೀಸರು, ನ್ಯಾಯಾಧೀಶರು, ಶಿಕ್ಷಕರು ಅಧಿಕೃತವಾಗಿ ಲಾಠಿ ಹಿಡಿದು ಸಾರ್ವಜನಿಕ ಮೆರವಣಿಗೆಯಲ್ಲಿ ಭಾಗವಹಿಸುವುದನ್ನು ನಾವು ನೋಡಬೇಕಾಗುತ್ತದೆ. ಸರಕಾರಿ ವ್ಯವಸ್ಥೆಯನ್ನು ಸಂಪೂರ್ಣ ಕೇಸರೀಕರಣಗೊಳಿಸುವ ಸಂಚಿನ ಪ್ರಮುಖ ಭಾಗ ಇದು.

ಕಾಂಗ್ರೆಸ್‌ನ ನಾಯಕರು ಈ ನಿಷೇಧ ಹಿಂದೆಗೆತವನ್ನು ಟೀಕಿಸಿದ್ದಾರೆ. ಆದರೆ, ಕಾಂಗ್ರೆಸ್‌ನ ಅತ್ಯಂತ ಹಿರಿಯ ನಾಯಕ, ರಾಷ್ಟ್ರಪತಿಯಂತಹ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ ಪ್ರಣವ್ ಮುಖರ್ಜಿ ಆರೆಸ್ಸೆಸ್ ಸಮಾವೇಶದಲ್ಲಿ ನೇರವಾಗಿ ಭಾಗಿಯಾಗಿದ್ದನ್ನು ಕಾಂಗ್ರೆಸ್ ನಾಯಕರು ಮರೆತಿದ್ದಾರೆ. ಸುಮಾರು 70 ವರ್ಷ  ಕಾಂಗ್ರೆಸ್ ಈ ದೇಶವನ್ನು ಆಳಿತು. ಆರೆಸ್ಸೆಸ್ ಬೆಳೆದು ವಿಸ್ತಾರವಾದದ್ದು ಈ ಅವಧಿಯಲ್ಲಿ. ಇಂದು ಮೋದಿ ನೇತೃತ್ವದ ಸರಕಾರದ ಅವಧಿಯಲ್ಲಿ ಮಾನವೀಯ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿರುವ, ಪರಿಸರಪರವಾಗಿ ಕೆಲಸ ಮಾಡುವ ಸರಕಾರೇತರ ಸಂಸ್ಥೆಗಳ ದೇಣಿಗೆಗಳನ್ನು ತಡೆ ಹಿಡಿದು ಅವುಗಳು ಕೆಲಸ ಮಾಡದಂತೆ ನೋಡಿಕೊಳ್ಳಲಾಗುತ್ತಿದೆ. ಐಟಿ, ಈ.ಡಿ. ದಾಳಿಗಳ ಮೂಲಕ ಪದೇ ಪದೇ ಅವುಗಳಿಗೆ ಕಿರುಕುಳ ನೀಡಲಾಗುತ್ತಿದೆ. ಮಾನವ ಹಕ್ಕು ಸಂಘಟನೆಗಳನ್ನು ಒಂದೊಂದಾಗಿ ನಿಷೇಧ ಮಾಡಲಾಗಿದೆ. ಗಾಂಧಿ ಹತ್ಯೆಯ ಕಳಂಕಕ್ಕಾಗಿ ನಿಷೇಧಕ್ಕೆ ಒಳಗಾಗಿ ಮತ್ತೆ ಕ್ಷಮಾಪಣಾ ಪತ್ರದೊಂದಿಗೆ ತನ್ನ ದ್ವೇಷದ ಅಂಗಡಿ ತೆರೆದ ಆರೆಸ್ಸೆಸ್ ಸಂಘಟನೆಯ ಮೇಲೆ ಕಾಂಗ್ರೆಸ್ ಸರಕಾರ ತನ್ನ ಅಧಿಕಾರಾವಧಿಯಲ್ಲಿ. ಎಷ್ಟರ ಮಟ್ಟಿಗೆ ಕಣ್ಣಿಟ್ಟಿತ್ತು? ಅದರ  ಆರ್ಥಿಕ ಮೂಲಗಳನ್ನು ಎಷ್ಟು ಬಾರಿ ತಪಾಸಣೆಗೈದಿತ್ತು? ಈ ಪ್ರಶ್ನೆಗಳಿಗೆ ಕಾಂಗ್ರೆಸ್ ನಾಯಕರು ಮೊದಲು ಉತ್ತರಿಸಬೇಕು. ಸರಕಾರಿ ಸಿಬ್ಬಂದಿಗಳಿಗೆ ಆರೆಸ್ಸೆಸ್ ಚಟುವಟಿಕೆಗಳಲ್ಲಿ ಭಾಗವಹಿಸುವ ನಿಷೇಧವನ್ನು ಹಿಂದೆಗೆಯುವ ಮೂಲಕ, ಸರಕಾರಿ ಕಚೇರಿಗಳಲ್ಲಿ ಕೇಂದ್ರ ಸರಕಾರ ಅಧಿಕೃತವಾಗಿ ದ್ವೇಷದ ಅಂಗಡಿ ತೆರೆಯಲು ಹೊರಟಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News