ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್ ಕಡಿವಾಣ

Update: 2024-05-21 06:58 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಳೆದ ಹತ್ತು ವರ್ಷಗಳಿಂದ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ), ಜಾರಿ ನಿರ್ದೇಶನಾಲಯ (ಈ.ಡಿ.), ಆದಾಯ ತೆರಿಗೆ ಇಲಾಖೆ(ಐಟಿ)ಗಳನ್ನು ಸರಕಾರ ಹೇಗೆ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬುದು ಗುಟ್ಟಿನ ಸಂಗತಿಯಾಗಿ ಉಳಿದಿಲ್ಲ. ಇತ್ತೀಚೆಗೆ ಜಾರ್ಖಂಡ್ ಮುಖ್ಯ ಮಂತ್ರಿಯಾಗಿದ್ದ ಹೇಮಂತ ಸೊರೇನ್ ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ ಇದಕ್ಕೆ ನಮ್ಮ ಕಣ್ಣ ಮುಂದಿನ ಉದಾಹರಣೆಗಳಾಗಿವೆ. ಈ ಹಿನ್ನೆಲೆಯಲ್ಲಿ ಕಳೆದ ವಾರ ನೀಡಿರುವ ತೀರ್ಪು ಗಮನಾರ್ಹ ಮಾತ್ರವಲ್ಲ, ಸ್ವಾಗತಾರ್ಹವಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಲಯ ಒಮ್ಮೆ ಸದರಿ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ ಆರೋಪಿಯಾಗಿರುವ ವ್ಯಕ್ತಿಯನ್ನು ಬಂಧಿಸುವಂತಿಲ್ಲ ಎಂದು ತೀರ್ಪು ನೀಡುವ ಮೂಲಕ ಈ.ಡಿ.ಗೆ ಕಡಿವಾಣ ಹಾಕಿದೆ.

ಈ ವರೆಗೆ ಜಾರಿ ನಿರ್ದೇಶನಾಲಯ ಮನ ಬಂದಂತೆ ಯಾರದೋ ಒತ್ತಡಕ್ಕೆ ಮಣಿದು ಬಂಧಿಸುತ್ತ ಬಂದಿದೆ. ಹಣದ ಅಕ್ರಮ ವರ್ಗಾವಣೆ ತಡೆಯ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರ ಬದುಕುವ ಹಕ್ಕು ಹಾಗೂ ವೈಯಕ್ತಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಪ್ರವೃತ್ತಿ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಗಳು ಅಪರಾಧಿಗಳೆಂದು ನ್ಯಾಯಾಲಯ ತೀರ್ಪು ನೀಡುವ ಮೊದಲೇ 19 ವಿಧಿಯನ್ವಯ ಆರೋಪಿಯನ್ನು ಬಂಧಿಸು ವಂತಿಲ್ಲ ಎಂದು ಹೇಳಿದೆ. ಒಮ್ಮೆ ಈ ಕುರಿತು ದಾಖಲಾಗಿರುವ ದೂರನ್ನು ವಿಶೇಷ ನ್ಯಾಯಾಲಯವು ವಿಚಾರಣೆಗೆ ಅಂಗೀಕರಿಸಿದ ನಂತರ ಆರೋಪಿಯನ್ನು ಈ.ಡಿ. ಬಂಧಿಸುವುದು ಸರಿಯಲ್ಲ. ಆರೋಪವನ್ನು ಎದುರಿಸುತ್ತಿರುವ ವ್ಯಕ್ತಿಯ ವಿಚಾರಣೆಗೆ ತನ್ನ ವಶಕ್ಕೆ ಬೇಕಿದ್ದರೆ ತನಿಖಾ ಸಂಸ್ಥೆ (ಈ.ಡಿ.) ನ್ಯಾಯಾಲಯದ ಮುಂದೆ ಅರ್ಜಿ ಹಾಕಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅಕ್ರಮ ಹಣ ವರ್ಗಾವಣೆಯ ಕಠಿಣ ಕಾನೂನುಗಳನ್ನು ದುರ್ಬಳಕೆ ಮಾಡಿಕೊಂಡು ಯಾರನ್ನೇ ಆಗಲಿ, ಅದರಲ್ಲೂ ಕೇಂದ್ರದ ಆಡಳಿತ ಪಕ್ಷದ ವಿರೋಧಿಗಳನ್ನು ದೀರ್ಘಕಾಲದ ವರೆಗೆ ಬಂಧನದಲ್ಲಿ ಇಡುವ ಈ.ಡಿ. ವರ್ತನೆ ಬಗ್ಗೆ ಎಲ್ಲೆಡೆ ಅಸಮಾಧಾನ ವ್ಯಕ್ತವಾಗುತ್ತಿರುವಾಗಲೇ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿ ಜನತೆಯ ಮೂಲಭೂತ ಹಕ್ಕುಗಳ ಮೇಲೆ ಅವ್ಯಾಹತವಾಗಿ ನಡೆಯುತ್ತಿರುವ ದಾಳಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿ ಜಾಮೀನು ಮೇಲೆ ಹೊರಗೆ ಬರುವುದು ಸುಲಭವಲ್ಲ. ಆತ ನಿರಪರಾಧಿ ಎಂದು ಸಾಬೀತು ಪಡಿಸಬೇಕಾಗುತ್ತದೆ ಹಾಗೂ ಜಾಮೀನು ಮೇಲೆ ಹೊರಗಿರುವಾಗ ಮತ್ತೆ ಅಂತಹ ಕೃತ್ಯ ಎಸಗುವುದಿಲ್ಲ ಎಂದು ಮನವರಿಕೆ ಮಾಡಿಕೊಡಬೇಕಾಗುತ್ತದೆ. ಈ ಎರಡು ಕಠಿಣ ಕರಾರುಗಳಿಂದಾಗಿ ಆರೋಪಿ ಜಾಮೀನು ಪಡೆಯುವುದು ಸುಲಭವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ವ್ಯಕ್ತಿಗಳನ್ನು ಬಂಧಿಸಿ ಜಾಮೀನು ಸಿಗದಂತೆ ಮಾಡಿ ವರ್ಷಾನುಗಟ್ಟಲೆ ಸೆರೆಮನೆಯಲ್ಲಿ ಕೊಳೆ ಹಾಕುವುದು ಸರಿಯಲ್ಲ. ಇಂತಹ ಪ್ರಕರಣಗಳಲ್ಲಿ ಆರೋಪಿಗಳು ಆರೋಪ ಸಾಬೀತಾಗದೇ ತಮ್ಮ ಅಮೂಲ್ಯ ಜೀವನದ ಕೆಲವು ವರ್ಷಗಳನ್ನು ಜೈಲುಗಳಲ್ಲಿ ವ್ಯರ್ಥವಾಗಿ ಕಳೆಯಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಸೂಕ್ತವಾಗಿದೆ.

ಅಧಿಕಾರದಲ್ಲಿ ಇರುವವರನ್ನು ಓಲೈಸಲು ತನ್ನ ಅಧಿಕಾರವನ್ನು ಲಂಗು ಲಗಾಮಿಲ್ಲದೇ ಬಳಸಿಕೊಳ್ಳುತ್ತ ಬಂದ ಜಾರಿ ನಿರ್ದೇಶನಾಲಯ ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದ ಹೇಮಂತ್ ಸೊರೇನ್ ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಲಿಪಶು ಮಾಡಿತು. ಆದರೆ ಬಿಜೆಪಿ ಜೊತೆ ಕೈಗೂಡಿಸಿದ ಮಹಾರಾಷ್ಟ್ರದ ಎನ್‌ಸಿಪಿಯಿಂದ ಹೊರ ನಡೆದ ಅಜಿತ್ ಪವಾರ್ ಮತ್ತು ಏಕನಾಥ ಶಿಂದೆಯಂಥವರು ಬಚಾವ್ ಆದರು. ಸುಪ್ರೀಂ ಕೋರ್ಟ್ ಅರವಿಂದ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡದಿದ್ದರೆ ಅವರಿನ್ನೂ ಜೈಲಿನಲ್ಲಿ ಕೊಳೆಯುತ್ತಿದ್ದರು. ದೇಶದಲ್ಲಿ ಮಹತ್ವದ ಸಾರ್ವತ್ರಿಕ ಚುನಾವಣೆಗಳು ನಡೆದಿರುವಾಗ ಪ್ರತಿಪಕ್ಷ ನಾಯಕರನ್ನು ಈ ರೀತಿ ಏಕಾಏಕಿ ಬಂಧಿಸುವುದು ಸದುದ್ದೇಶದಿಂದ ಕೂಡಿದ ವರ್ತನೆಯಲ್ಲ ಎಂಬುದು ನ್ಯಾಯಾಲಯಕ್ಕೂ ಅರ್ಥವಾಗಿದೆ.

ಚುನಾವಣಾ ಪ್ರಚಾರದಲ್ಲಿ ಮತ್ತೆ 400 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದು ಭ್ರಷ್ಟರನ್ನು ಜೈಲಿಗೆ ಹಾಕುತ್ತೇವೆ ಎನ್ನುತ್ತಲೇ ಬಿಜೆಪಿ ಸೇರುವ ಭ್ರಷ್ಟರಿಗೆ ಅಧಿಕಾರ ನೀಡುವ ಈ ದೇಶದ ಪ್ರಧಾನಿ ಹೂಂಕರಿಸುವ ಹೊತ್ತಿನಲ್ಲೇ ಆರೋಪಿಗಳನ್ನು ಬಂಧಿಸುವ ಕುರಿತಂತೆ ಜಾರಿ ನಿರ್ದೇಶನಾಲಯ ಈ ವರೆಗೆ ಹೊಂದಿದ್ದ ಅಧಿಕಾರಕ್ಕೆ ಕಡಿವಾಣ ಹಾಕಿದೆ. ಯಾವುದೇ ನಾಗರಿಕನ ಬಂಧನವು ಆತ ಸಂವಿಧಾನದತ್ತವಾಗಿ ಹೊಂದಿರುವ ಹಕ್ಕುಗಳು ಹಾಗೂ ಮಾನವ ಹಕ್ಕುಗಳ ಜೊತೆಗೆ ತಳಕು ಹಾಕಿಕೊಂಡಿರುತ್ತವೆ. ಹಾಗಾಗಿ ತನಿಖಾ ಸಂಸ್ಥೆಗಳು ಬಂಧನದ ಅಧಿಕಾರವನ್ನು ಬಳಸುವಾಗ ಮೈ ಮೇಲೆ ಎಚ್ಚರವಿರಬೇಕು. ಯಾವುದೇ ವ್ಯಕ್ತಿಯನ್ನು ಸೂಕ್ತ ಕಾರಣವಿಲ್ಲದೆ ಒಂದು ದಿನ ಕೂಡ ನಿರ್ಬಂಧಕ್ಕೆ ಗುರಿಪಡಿಸುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಈ ಹಿಂದೆಯೂ ಅನೇಕ ಪ್ರಕರಣಗಳಲ್ಲಿ ಹೇಳಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಆರೋಪಿಯು ವಿಶೇಷ ನ್ಯಾಯಾಲಯಕ್ಕೆ ಸಮನ್ಸ್ ಮೂಲಕ ಹಾಜರಾಗಿದ್ದರೆ ಅವರನ್ನು ಕಸ್ಟಡಿಯಲ್ಲಿದ್ದಾರೆಂದು ಪರಿಗಣಿಸಲು ಆಗುವುದಿಲ್ಲ ಹಾಗೂ ಆರೋಪಿಯು ಸಮನ್ಸ್ ಗೆ ಅನುಗುಣವಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದರೆ ಅವರು ಜಾಮೀನಿಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಪಿಎಂಎಲ್‌ಎ(ಅಕ್ರಮ ಹಣ ವರ್ಗಾವಣೆ)ಯ 45ನೇ ವಿಧಿಯ ಪ್ರಕಾರ ಇರುವ ಎರಡು ಶರತ್ತುಗಳು ಅನ್ವಯಿಸುವುದಿಲ್ಲ. ಈ ಎರಡು ಷರತ್ತುಗಳು ಯಾವುವು ಅಂದರೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯು ಜಾಮೀನಿಗೆ ಅರ್ಜಿ ಸಲ್ಲಿಸಿದಾಗ ನ್ಯಾಯಾಲಯವು ಮೊದಲು ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ವಾದವನ್ನು ಆಲಿಸಬೇಕು ಹಾಗೂ ವಿಚಾರಣೆಯ ವೇಳೆ ಆರೋಪಿಯು ತಪ್ಪಿತಸ್ಥನಲ್ಲ ಎಂದು ಗೊತ್ತಾದರೆ ಹಾಗೂ ಆರೋಪಿಯನ್ನು ಬಿಡುಗಡೆ ಮಾಡಿದರೆ ತಪ್ಪು ಪುನರಾವರ್ತನೆಯಾಗುವ ಸಾಧ್ಯತೆಯಿಲ್ಲ ಎಂದು ಮನವರಿಕೆ ಯಾದರೆ ಮಾತ್ರ ಅವರಿಗೆ ಜಾಮೀನು ನೀಡಬಹುದು. ಈ ಎರಡು ಷರತ್ತುಗಳನ್ನು ಬಳಸಿಕೊಂಡು ಜಾರಿ ನಿರ್ದೇಶನಾಲಯ ಈ ವರೆಗೆ ಬಿಜೆಪಿಯನ್ನು ವಿರೋಧಿಸುವ ರಾಜಕಾರಣಿಗಳಿಗೆ ಕಿರುಕುಳ ನೀಡುತ್ತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದಾಗಿದೆ.

ಸುಪ್ರೀಂ ಕೋರ್ಟನ್ನು ನಿಯಂತ್ರಿಸಲು ಮಸಲತ್ತು ನಡೆಸಿದವರಿಗೆ ಈ ತೀರ್ಪಿನಿಂದ ಮುಖಭಂಗವಾದಂತಾಗಿದೆ. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿ ನಿರಂಕುಶ ಆಡಳಿತವನ್ನು ಹೇರಲು ಹೊರಟವರು ಯಾವ ಪರಿ ಸೇಡಿನ ರಾಜಕೀಯ ನಡೆಸಿದರೆಂಬುದಕ್ಕೆ ನೂರಾರು ಉದಾಹರಣೆಗಳಿವೆ. ಯಾರು ಎಷ್ಟೇ ಕುತಂತ್ರ ಮಾಡಲಿ ಪ್ರಜಾಪ್ರಭುತ್ವವನ್ನು ನಾಶ ಮಾಡಲು ಸಾಧ್ಯವಿಲ್ಲ ಎಂಬ ಖಾತರಿ ಸರ್ವೋಚ್ಚ ನ್ಯಾಯಾಲಯದಿಂದ ಸಿಕ್ಕಿದೆ. ಇನ್ನು ಜನತಾ ನ್ಯಾಯಾಲಯದ ತೀರ್ಪಿಗಾಗಿ ನಾವು ಕಾಯಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News