ಯುಜಿಸಿ ಮಾರ್ಗಸೂಚಿ: ಉನ್ನತ ಶಿಕ್ಷಣದಿಂದ ಶೋಷಿತ ಸಮುದಾಯ ಹೊರಕ್ಕೆ ?

Update: 2024-02-01 04:19 GMT

Photo: freepik

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮೀಸಲಾತಿಯನ್ನು ನೇರ ಆದೇಶದ ಮೂಲಕ ಕಿತ್ತು ಹಾಕುವುದು ಸುಲಭವಿಲ್ಲ ಎನ್ನುವುದನ್ನು ಅರಿತ ರಾಜಕೀಯ ನಾಯಕರು ಅವುಗಳನ್ನು ದುರ್ಬಲಗೊಳಿಸುವುದಕ್ಕೆ ಬೇರೆ ಬೇರೆ ಒಳದಾರಿಗಳನ್ನು ಹುಡುಕುತ್ತಿದ್ದಾರೆ. ಮೇಲ್‌ಜಾತಿಯ ಬಡವರಿಗೆ ಶೇ. 10 ಮೀಸಲಾತಿ ಜಾರಿ ಸಂವಿಧಾನದ ಮೀಸಲಾತಿ ಆಶಯದ ಮೇಲೆ ಬಹುದೊಡ್ಡ ಪ್ರಹಾರವಾಗಿತ್ತು. ದಲಿತರಿಗೆ, ಹಿಂದುಳಿದವರ್ಗಗಳಿಗೆ ಮೀಸಲಾತಿಯನ್ನು ನೀಡಲು ಕಾರಣವಾದ ಅಂಶಗಳ ಬಹುದೊಡ್ಡ ಅಣಕವಾಗಿತ್ತು ಇದು. ಇನ್ನೊಂದೆಡೆ ಶೈಕ್ಷಣಿಕ, ರಾಜಕೀಯ ಕ್ಷೇತ್ರಗಳನ್ನು ಬಹುಸಂಖ್ಯೆಯಲ್ಲಿ ಪ್ರತಿನಿಧಿಸುತ್ತಿರುವ ಬಲಾಢ್ಯ ಜಾತಿಗಳು ಮೀಸಲಾತಿಯನ್ನು ಆಗ್ರಹಿಸಿ ಬೀದಿಗಿಳಿದಿವೆ. ತಮ್ಮ ಜನಬಲ ಮತ್ತು ಹಣಬಲವನ್ನು ಮುಂದಿಟ್ಟುಕೊಂಡು ಮೀಸಲಾತಿಯಲ್ಲಿ ಪಾಲು ಕೇಳುತ್ತಿವೆ. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸರಕಾರ ಈ ಬಲಾಢ್ಯ ಜಾತಿಗಳನ್ನು ಮೀಸಲಾತಿಯ ಒಳಗೆ ಸೇರಿಸುತ್ತಿದೆ. ಬಲಾಢ್ಯರನ್ನು ಇನ್ನಷ್ಟು ಸಬಲರನ್ನಾಗಿಸುವುದೆಂದರೆ, ದುರ್ಬಲರನ್ನು ಇನ್ನಷ್ಟು ದುರ್ಬಲರನ್ನಾಗಿಸುವುದು ಎಂದರ್ಥ. ಈಗಾಗಲೇ ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗಿರುವ ಮೇಲ್‌ಜಾತಿಗಳು ಮೀಸಲಾತಿಯನ್ನು ಕೇಳುತ್ತಿರುವುದಾದರೂ ಯಾಕೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ತಮ್ಮ ಸಮುದಾಯ ಸಾಮಾಜಿಕವಾಗಿ ಹಿಂದುಳಿದಿದೆ ಎನ್ನುವ ಕಾರಣಕ್ಕಾಗಿಯಲ್ಲ, ಮೀಸಲಾತಿಯಿಂದ ಶೋಷಿತ ಸಮುದಾಯ ತಮ್ಮ ಮಟ್ಟಕ್ಕೆ ಬೆಳೆದು ನಿಲ್ಲುತ್ತದೆ ಎನ್ನುವ ಅಸಹನೆಯ ಕಾರಣದಿಂದ ‘ನಮಗೂ ಮೀಸಲಾತಿ ಬೇಕು’ ಎಂದು ಅವರು ಬೀದಿಗಿಳಿದಿದ್ದಾರೆ. ಮೀಸಲಾತಿಯ ಹಕ್ಕಿಗಾಇ ಶೋಷಿತ ಸಮುದಾಯಕ್ಕಿಂತ ಈ ಬಲಾಢ್ಯ ಸಮುದಾಯಗಳೇ ಬೀದಿಯಲ್ಲಿ ಹೆಚ್ಚು ಸದ್ದು ಮಾಡುತ್ತಿವೆ.

ಇದೇ ಸಂದರ್ಭದಲ್ಲಿ ಮೀಸಲಾತಿಯು ದಲಿತ ಸಮುದಾಯಕ್ಕೆ ಮೂಗಿಗೆ ಸವರಿದ ಬೆಣ್ಣೆಯಂತಾಗಿದೆ. ಒಂದೆಡೆ ‘ದಲಿತರು ಮೀಸಲಾತಿಯಿಂದ ಕೊಬ್ಬಿದ್ದಾರೆ’ ಎನ್ನುವ ಮನಸ್ಥಿತಿಯನ್ನು ಪೋಷಿಸಲಾಗುತ್ತಿದೆ. ಮತ್ತೊಂದೆಡೆ ದಲಿತರಿಗೆ ಈ ಮೀಸಲಾತಿಯ ಸೌಲಭ್ಯಗಳು ದಕ್ಕದಂತೆ ನೋಡಿಕೊಳ್ಳಲಾಗುತ್ತಿದೆ. ಇದರ ಪರಿಣಾಮವಾಗಿಯೇ ಒಂದೆಡೆ ಅರ್ಹ ದಲಿತರು ಉದ್ಯೋಗಗಳಿಗಾಗಿ ಇಲಾಖೆಯಿಂದ ಇಲಾಖೆಗೆ ಎಡತಾಕುತ್ತಿದ್ದಾರೆ. ಮತ್ತೊಂದೆಡೆ ಸಾವಿರಾರು ಬ್ಯಾಕ್‌ಲಾಗ್ ಹುದ್ದೆಗಳು ಖಾಲಿ ಬಿದ್ದಿವೆ. ಮೀಸಲಾತಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಬಂದಿಲ್ಲ ಎಂದು ಖಾಲಿ ಉಳಿಸಲಾಗುತ್ತದೆ. ಅಕ್ರಮವಾಗಿ ಈ ಹುದ್ದೆಗಳಿಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತದೆ. ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್ ಎಲ್ಲ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆದೇಶ ನೀಡಿತ್ತು. ಆರು ತಿಂಗಳ ಸಮಯಾವಕಾಶವನ್ನೂ ನೀಡಿತ್ತು. ಆದರೆ ಈ ಆದೇಶ ಎಷ್ಟರಮಟ್ಟಿಗೆ ಅನುಷ್ಠಾನವಾಗಿದೆ ಎನ್ನುವುದನ್ನು ಪರಿಶೀಲಿಸಿದರೆ ನಿರಾಶೆಯಾಗುತ್ತದೆ. ಇನ್ನು ಉನ್ನತ ಶಿಕ್ಷಣದಲ್ಲಂತೂ ಮೀಸಲಾತಿಯನ್ನು ತೆಗೆದು ಹಾಕಲು ನ್ಯಾಯವ್ಯವಸ್ಥೆಯೇ ತುದಿಗಾಲಿನಲ್ಲಿ ನಿಂತಿದೆ. 2015ರಲ್ಲಿ ಸುಪ್ರೀಂಕೋರ್ಟ್ ತನ್ನ ತೀರ್ಪೊಂದರಲ್ಲಿ , ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲ ರೀತಿಯ ಮೀಸಲಾತಿ ಸೌಲಭ್ಯಗಳನ್ನು ತೆಗೆದು ಹಾಕಬೇಕು ಎಂದು ಅಭಿಪ್ರಾಯ ಪಟ್ಟಿತ್ತು. ಅತಿ ತಜ್ಞತೆ ಬಯಸುವ ಕೋರ್ಸ್‌ಗಳಲ್ಲಿ ಮೆರಿಟ್ ಒಂದೇ ಮುಖ್ಯವಾಗಬೇಕು ಎಂದು ನ್ಯಾಯ ವ್ಯವಸ್ಥೆಯೇ ಆದೇಶ ನೀಡಿತ್ತು. ಜಾತಿ ಮೀಸಲಾತಿಯ ಸಂದರ್ಭದಲ್ಲಿ ಮೆರಿಟ್ ಬಗ್ಗೆ ಮಾತನಾಡುವ ನ್ಯಾಯಾಲಯ ಪೇಮೆಂಟ್ ಸೀಟ್‌ನಿಂದ ಮೆರಿಟ್‌ಗೆ ಅನ್ಯಾಯವಾಗುತ್ತಿರುವ ಬಗ್ಗೆ ಮೌನ ತಾಳಿದೆ. ಇದೇ ಸಂದರ್ಭದಲ್ಲಿ, ಎಲ್ಲಿಯವರೆಗೆ ವೈಜ್ಞಾನಿಕವಾದ ಜಾತಿ ಅಂಕಿಅಂಶಗಳನ್ನು ಸಂಗ್ರಹಿಸಲು ಸಾಧ್ಯವಿಲ್ಲವೋ, ಅಲ್ಲಿಯವರೆಗೆ ಮೀಸಲಾತಿಯನ್ನು ಜಾರಿಗೊಳಿಸುವುದು ಸಾಧುವಲ್ಲ ಎಂದೂ ಇದೇ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲೇ ಜಾತಿ ಗಣತಿಯ ಪರ ವಿರೋಧ ಚರ್ಚೆಗಳು ದೇಶದಲ್ಲಿ ತೀವ್ರವಾಗಿದೆ.

ಉನ್ನತ ಶಿಕ್ಷಣದಲ್ಲಿ ದಲಿತರ ಮೀಸಲಾತಿಯನ್ನು ಕಸಿಯಲು ಬೇರೆ ಬೇರೆ ರೀತಿಯ ತಂತ್ರಗಳನ್ನು ಜಾರಿಗೊಳಿಸಲಾಗುತ್ತಿದೆ. ಮೀಸಲಾತಿಯನ್ನು ಮುಂದಿಟ್ಟುಕೊಂಡು ವಿಶ್ವವಿದ್ಯಾಲಯಗಳಲ್ಲಿ ದಲಿತರ ಮೇಲೆ ಮಾನಸಿಕ ದೌರ್ಜನ್ಯಗಳನ್ನು ಎಸಗುವುದು ವ್ಯಾಪಕವಾಗುತ್ತಿವೆ. ವಿದ್ಯಾರ್ಥಿಗಳು, ಶಿಕ್ಷಕರೆನ್ನದೆ ಈ ದೌರ್ಜನ್ಯಗಳಿಗೆ ಬಲಿಯಾಗುತ್ತಿದ್ದಾರೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಕಾರಣಕ್ಕಾಗಿ ಆತ್ಮಹತ್ಯೆಗಳೂ ಹೆಚ್ಚುತ್ತಿವೆ. ಶಿಕ್ಷಣದ ಮೂಲಕ ದಲಿತರು ಮುಖ್ಯವಾಹಿನಿಗೆ ಕಾಲಿಡಬೇಕು ಎಂದು ಹೇಳುತ್ತಲೇ ದಲಿತರಿಗೆ ಉನ್ನತ ಶಿಕ್ಷಣದ ಬಾಗಿಲನ್ನು ಮುಚ್ಚುವ ಪ್ರಯತ್ನಗಳು ನಡೆಯುತ್ತಿವೆ.ಯುಜಿಸಿಯು ಇತ್ತೀಚೆಗೆ ಹೊರಡಿಸಿರುವ ಕರಡು ಮಾರ್ಗಸೂಚಿಯು ಉನ್ನತ ಶಿಕ್ಷಣದಿಂದ ದಲಿತರನ್ನು ಹಂತ ಹಂತವಾಗಿ ಹೊರಗಿಡುವ ಪ್ರಯತ್ನದ ಭಾಗವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಉನ್ನತ ಶಿಕ್ಷಣದಲ್ಲಿ ದಲಿತರಿಗಿರುವ ಮೀಸಲಾತಿಯನ್ನು ತೊಡೆದು ಹಾಕುವ ದುರುದ್ದೇಶವನ್ನು ಯುಜಿಸಿ ಮಾರ್ಗಸೂಚಿಯು ಹೊಂದಿದೆ ಎಂದು ಶಿಕ್ಷಣ ತಜ್ಞರು, ಸಾಮಾಜಿಕ ಹೋರಾಟಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕರಡು ಮಾರ್ಗಸೂಚಿಯಲ್ಲಿ ಮೀಸಲಾತಿಯಡಿಯಲ್ಲಿ ನೇಮಕಾತಿ ಮಾಡಲು ನಿಯಮಗಳನ್ನು ಕಠಿಣಗೊಳಿಸಲಾಗಿದೆ. ಅಥವಾ ಹಂತ ಹಂತವಾಗಿ ಈ ಮೀಸಲಾತಿ ನೇಮಕಾತಿಯನ್ನು ಕಡಿತಗೊಳಿಸಲು ಈ ಮಾರ್ಗಸೂಚಿ ನೆರವಾಗುತ್ತದೆ.

ಮಾರ್ಗಸೂಚಿಯ ಪ್ರಕಾರ, ಒಂದು ನೇಮಕಾತಿ ವರ್ಷದಲ್ಲಿ ಒಂದೇ ಹುದ್ದೆ ಸೃಷ್ಟಿಯಾದರೆ ಆ ಹುದ್ದೆಯನ್ನು ಮೀಸಲಾತಿಯಿಂದ ಹೊರಗಿಡಬೇಕು ಮತ್ತು ಸಾಮಾನ್ಯ ವರ್ಗಕ್ಕೆ ಅದನ್ನು ಮೀಸಲಿಡಬೇಕು. ಮೀಸಲಾತಿ ಹುದ್ದೆಯನ್ನು ಮುಂದಿನ ವರ್ಷಕ್ಕೆ ವರ್ಗಾಯಿಸಬೇಕು. ಆಗಲೂ ಒಂದೇ ಹುದ್ದೆಯಿದ್ದಾಗ ಮಾತ್ರ ಅದನ್ನು ಮೀಸಲಾತಿಗೆ ಪರಿಗಣಿಸಬೇಕು. ಶಾರ್ಟ್‌ಫಾಲ್ ಹುದ್ದೆಗಳು ಎಷ್ಟೇ ಇದ್ದರೂ ಮೀಸಲಾತಿಯ ಪ್ರಮಾಣ ಶೇ. 50ನ್ನು ದಾಟುವಂತಿಲ್ಲ. ಒಂದು ಶೈಕ್ಷಣಿಕ ವರ್ಷದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ಮೀಸಲಾದ ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳು ಸಿಗಲಿಲ್ಲವೆಂದರೆ, ಆ ಸೀಟುಗಳನ್ನು ಭರ್ತಿ ಮಾಡಲು ಹೆಚ್ಚುವರಿಯಾಗಿ ಎರಡು ಬಾರಿ ಪ್ರಯತ್ನಿಸಬೇಕು. ಆಗಲೂ ಭರ್ತಿಯಾಗದೇ ಇದ್ದಲ್ಲಿ ಆ ಸೀಟುಗಳನ್ನು ರದ್ದುಗೊಳಿಸಬೇಕು. ಸೀಟುಗಳನ್ನು ಯಾವುದೇ ಕಾರಣಕ್ಕೂ ಮುಂದಿನ ಶೈಕ್ಷಣಿಕ ವರ್ಷಕ್ಕೆ ವರ್ಗಾಯಿಸಬಾರದು. ಪಿಎಚ್‌ಡಿ ಸೀಟುಗಳಿಗೂ ಇದು ಅನ್ವಯವಾಗುತ್ತದೆ. ಮೀಸಲಾತಿ ಹುದ್ದೆಗಳಿಗೆ ನೇಮಕಾತಿ ಆಗದೇ ಇದ್ದರೆ, ಆ ಹುದ್ದೆಗಳನ್ನು ಮೀಸಲಾತಿಯಿಂದ ಹೊರಗಿಡುವ ಅವಕಾಶವನ್ನು ಮಾರ್ಗ ಸೂಚಿ ನೀಡುತ್ತದೆ. ಈಗಾಗಲೇ ಮೀಸಲಾತಿ ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳ ಆಯ್ಕೆಗೆ ಹಲವು ತೊಡಕುಗಳನ್ನು ಒಡ್ಡಿ, ಬಳಿಕ ಅರ್ಹ ಅಭ್ಯರ್ಥಿಗಳ ಕೊರತೆಯನ್ನು ತೋರಿಸಿ ಅವುಗಳನ್ನು ಖಾಲಿ ಬಿಡಲಾಗುತ್ತಿದೆ. ಹಾಗೆಯೇ ಆ ಸ್ಥಾನಗಳಿಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳನ್ನು ನೇಮಕ ಮಾಡುವ ಪ್ರಯತ್ನ ಮುಂದುವರಿದಿದೆ. ವಿಶ್ವವಿದ್ಯಾನಿಲಯಗಳು, ಕಾಲೇಜುಗಳಲ್ಲಿ ಸಾವಿರಾರು ಹುದ್ದೆಗಳಿಗೆ ಪೂರ್ಣಕಾಲಿಕ ಪ್ರಾಧ್ಯಾಪಕರನ್ನು ನೇಮಕ ಮಾಡದೆ, ಅರೆಕಾಲಿಕ ಪ್ರಾಧ್ಯಾಪಕರನ್ನು ಬಳಸುವ ಮೂಲಕ ಮೀಸಲಾತಿ ಅಭ್ಯರ್ಥಿಗಳನ್ನು ಹೊರಗಿಡಲಾಗುತ್ತಿದೆ. ಈಗ ಯುಜಿಸಿಯೇ ಮುಂದೆ ನಿಂತು ತಂತ್ರಪೂರ್ವವಾಗಿ ಮೀಸಲಾತಿ ಅಭ್ಯರ್ಥಿಗಳನ್ನು ಹಂತ ಹಂತವಾಗಿ ಉನ್ನತ ಶಿಕ್ಷಣದಿಂದ ಹೊರಗಿಡಲು ಯೋಜನೆ ಹಾಕಿದೆ. ಈ ಮಾರ್ಗ ಸೂಚಿಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ, ಮೀಸಲಾತಿಯನ್ನು ರದ್ದು ಮಾಡುವ ಯಾವ ಪ್ರಸ್ತಾವವೂ ಇಲ್ಲ ಎಂದು ಸರಕಾರ ಸ್ಪಷ್ಟೀಕರಣ ನೀಡಿದೆ. ಪ್ರಸ್ತಾವ ಇಲ್ಲದೇ ಇದ್ದರೆ, ಈ ಮಾರ್ಗಸೂಚಿಯನ್ನು ಯಾಕೆ ಸರಕಾರ ಹಿಂದಕ್ಕೆ ತೆಗೆದುಕೊಳ್ಳುವ ಭರವಸೆ ನೀಡುತ್ತಿಲ್ಲ?. ಸರಕಾರ ಈ ಮಾರ್ಗಸೂಚಿಯನ್ನೇ ಹಿಂದೆಗೆದುಕೊಳ್ಳುವ ಮೂಲಕ, ದಲಿತರು ಮತ್ತು ಹಿಂದುಳಿದವರ್ಗದ ಆತಂಕವನ್ನು ನಿವಾರಣೆ ಮಾಡಬೇಕು. ವಿಶ್ವವಿದ್ಯಾನಿಲಯಗಳ ಹೆಬ್ಬಾಗಿಲನ್ನು ಶೋಷಿತ ಸಮುದಾಯಕ್ಕೆ ಮುಚ್ಚುವುದೆಂದರೆ, ಶಿಕ್ಷಣದಿಂದ ಈ ಸಮುದಾಯವನ್ನು ಹೊರಗಿಡುವುದೆಂದೇ ಅರ್ಥ. ಕೇಂದ್ರ ಸರಕಾರದ ‘ರಾಮರಾಜ್ಯ’ದಲ್ಲಿ ದಲಿತರು, ಹಿಂದುಳಿದವರ್ಗದ ಜನರಿಗೆ ಶಿಕ್ಷಣವನ್ನು ನಿಷೇಧಿಸಲಾಗಿದೆ ಎನ್ನುವುದನ್ನು ಯುಜಿಸಿ ಮಾರ್ಗಸೂಚಿ ಬಹಿರಂಗ ಪಡಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News