ವಿರೋಧ ಪಕ್ಷ ನಾಯಕನೆಲ್ಲಿ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬೆನ್ನಿಗೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ರಾಜೀನಾಮೆ ನೀಡುವುದು ಅತ್ಯಗತ್ಯವಾಗಿತ್ತು. ಈಗಾಗಲೇ ಅವರ ಅಧಿಕಾರಾವಧಿಯೂ ಮುಗಿದಿರುವುದರಿಂದ ಮತ್ತು ರಾಜೀನಾಮೆ ನೀಡಲು ಕಟೀಲು ತುದಿಗಾಲಲ್ಲಿ ನಿಂತಿರುವುದರಿಂದ ಇದು ಎಂದೋ ನಡೆಯಬೇಕಾಗಿದ್ದ ಪ್ರಕ್ರಿಯೆ. ಕೆಲವು ದಿನಗಳ ಹಿಂದೆ ‘ರಾಜೀನಾಮೆಯನ್ನು ಘೋಷಿಸಿ’ ಬಳಿಕ ವರಿಷ್ಠರ ಸಲಹೆಯಂತೆ ರಾಜೀನಾಮೆಯನ್ನು ಕಟೀಲ್ ಅವರು ಹಿಂದೆಗೆದುಕೊಂಡಿದ್ದರು. ಸಂಸದನಾಗಿ ಕರಾವಳಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದಲೇ ಅತಿ ಹೆಚ್ಚು ಟೀಕೆ ಎದುರಿಸಿರುವ ನಳಿನ್ ಕುಮಾರ್ ಕಟೀಲು ಅವರನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿದಾಗಲೇ, ತೀವ್ರ ಅಸಮಾಧಾನ ಬಿಜೆಪಿಯೊಳಗೆ ವ್ಯಕ್ತವಾಗಿತ್ತು. ಯಾವುದೇ ವಿದ್ವತ್ತು, ಮುತ್ಸದ್ದಿತನ, ಪ್ರಬುದ್ಧತೆ, ಹಿರಿತನಗಳಿಲ್ಲದ ಕಟೀಲರನ್ನು ನೇಮಕ ಮಾಡುವುದರ ಹಿಂದೆ ಆರೆಸ್ಸೆಸ್ ಕಾರ್ಯತಂತ್ರವಿತ್ತು. ಹೆಸರಿಗಷ್ಟೇ ಒಬ್ಬ ರಾಜ್ಯಾಧ್ಯಕ್ಷನನ್ನು ನೇಮಿಸಿ ಆತನ ಮೂಲಕ ಬಿಜೆಪಿಯನ್ನು ನಿಯಂತ್ರಿಸುವ ಉದ್ದೇಶವನ್ನು ಆರೆಸ್ಸೆಸ್ ಹೊಂದಿತ್ತು. ಆದುದರಿಂದ ಸದ್ಯಕ್ಕೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಪಕ್ಷಾಧ್ಯಕ್ಷ ನಳಿನ್‌ಕುಮಾರ್ ಅವರನ್ನು ಹೊಣೆಮಾಡುವುದಕ್ಕಿಂತ ಆರೆಸ್ಸೆಸ್‌ನೊಳಗಿರುವ ಮುಖಂಡರನ್ನು ಹೊಣೆ ಮಾಡುವುದು ಸೂಕ್ತ.
ಇದೀಗ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕರ ಆಯ್ಕೆಯಲ್ಲಿ ಮತ್ತೆ ಆರೆಸ್ಸೆಸ್ ಮತ್ತೆ ಮೂಗು ತೂರಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯೊಳಗಿರುವ ಹಿರಿಯರನ್ನು ಹೊರಗಿಡುವ ಪ್ರಯತ್ನದ ಮುಂದುವರಿದ ಭಾಗ ಇದಾಗಿದೆ. ಹೀನಾಯ ಸೋಲಿನಿಂದಾಗಿ ಮುಖಭಂಗಕ್ಕೀಡಾಗಿರುವ ಆರೆಸ್ಸೆಸ್ ಆಯ್ಕೆ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗಿಯಾಗದಿದ್ದರೂ, ಹಿಂಬಾಗಿಲ ಮೂಲಕ ಹಸ್ತ ಕ್ಷೇಪ ನಡೆಸುತ್ತಿದೆ. ನಳಿನ್‌ಕುಮಾರ್ ಕಟೀಲು ಅಧ್ಯಕ್ಷ ಸ್ಥಾನದಿಂದ ಇಳಿಸಿ ಆ ಜಾಗಕ್ಕೆ ಅವರಿಗೆ ಸಾಟಿಯಾಗಬಲ್ಲ ಇನ್ನೊಬ್ಬ ಸೂತ್ರದ ಗೊಂಬೆಯ ಹುಡುಕಾಟದಲ್ಲಿದೆ. ಇದೇ ಸಂದರ್ಭದಲ್ಲಿ ಪಕ್ಷದ ಹಲವು ಹಿರಿಯರು ‘ರಾಜ್ಯಾಧ್ಯಕ್ಷ ಸ್ಥಾನವನ್ನು ನಿರ್ವಹಿಸಲು ಸಿದ್ಧ’ ಎಂದು ಘೋಷಿಸಿದ್ದಾರೆ. ಆದರೆ ಅವರ ಕೈಗೆ ಬಿಜೆಪಿಯ ಚುಕ್ಕಾಣಿಯನ್ನು ನೀಡಲು ಆರೆಸ್ಸೆಸ್ ಸಿದ್ಧವಿಲ್ಲ. ಬಿಜೆಪಿಯೊಳಗೆ ಈಗಾಗಲೇ ಬ್ರಾಹ್ಮಣ್ಯ ಲಾಬಿ ತೀವ್ರ ಹಿನ್ನಡೆ ಅನುಭವಿಸಿರುವುದರಿಂದ ಲಿಂಗಾಯತ ಅಥವಾ ಶೂದ್ರ ನಾಯಕನ ಕೈಗೆ ಪಕ್ಷದ ಚುಕ್ಕಾಣಿಯನ್ನು ಕೊಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕಾಗಿ ಆರೆಸ್ಸೆಸ್‌ಗೆ ಸದ್ಯಕ್ಕೆ ಬೇಕಾಗಿರುವುದು ಅನುಭವಿ, ಮುತ್ಸದ್ದಿ ಹಿರಿಯ ಬಿಜೆಪಿ ನಾಯಕರಲ್ಲ. ಆರೆಸ್ಸೆಸ್‌ನ ದ್ವೇಷ ಅಜೆಂಡಾಗಳನ್ನು ಸಾಧಿಸಿ ಕೊಡಬಲ್ಲ ಸಿ.ಟಿ. ರವಿ, ಅಶ್ವತ್ಥನಾರಾಯಣ್, ಯತ್ನಾಳ್‌ರಂತಹ ನಾಯಕರನ್ನು ಮುಂದಿಟ್ಟು ಆಟವಾಡಲು ಸಿದ್ಧತೆ ನಡೆಸುತ್ತಿದೆ. ಸದ್ಯಕ್ಕೆ ಕಾಂಗ್ರೆಸ್ ಅಭಿವೃದ್ಧಿಯ ರಾಜಕಾರಣ ಮಾಡುತ್ತಿದೆ. ಅಭಿವೃದ್ಧಿ ರಾಜಕಾರಣದ ಬಗ್ಗೆ ಮೊದಲಿಂದಲೂ ಬಿಜೆಪಿಗೆ ನಂಬಿಕೆಯಿಲ್ಲ. ಆ ಮೂಲಕ ಅಧಿಕಾರಕ್ಕೆ ಬರುವುದು ಸಾಧ್ಯವೂ ಇಲ್ಲ ಎನ್ನುವುದು ಆರೆಸ್ಸೆಸ್‌ಗೆ ಸ್ಪಷ್ಟವಿದೆ. ಆದುದರಿಂದ ಅದು ರಾಜ್ಯದಲ್ಲಿ ಮತ್ತೆ ದ್ವೇಷ ರಾಜಕಾರಣವನ್ನು ಹುರಿದುಂಬಿಸಲಿದೆ. ಈಗಾಗಲೇ ಸಂಘಪರಿವಾರ ಸಂಘಟನೆಗಳು ಅಲ್ಲಲ್ಲಿ ಉದ್ವಿಗ್ನಕಾರಿ ಹೇಳಿಕೆಗಳನ್ನು ನೀಡಲು ಶುರುಹಚ್ಚಿವೆ. ಅದಕ್ಕೆ ಪೂರಕವಾಗಿ ಕೆಲಸ ಮಾಡುವ ನಾಯಕನ ಕೈಗೆ ಬಿಜೆಪಿಯ ಚುಕ್ಕಾಣಿಯನ್ನು ನೀಡುವ ಪ್ರಯತ್ನದಲ್ಲಿದೆ.
ಟಿಕೆಟ್ ಹಂಚಿಕೆಯ ಸಂದರ್ಭದಲ್ಲಿ ಆರೆಸ್ಸೆಸ್ ನಾಯಕರ ಹಸ್ತಕ್ಷೇಪ ಬಿಜೆಪಿಯನ್ನು ರಾಜ್ಯದಲ್ಲಿ ಹೀನಾಯ ಸ್ಥಿತಿಗೆ ತಂದು ನಿಲ್ಲಿಸಿದೆ. ಇದೀಗ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕರ ಆಯ್ಕೆಯಲ್ಲಿ ನಡೆಸುತ್ತಿರುವ ಹಸ್ತಕ್ಷೇಪ ಕೂಡ ಬಿಜೆಪಿಯನ್ನು ಇನ್ನಷ್ಟು ಜರ್ಜರಿತಗೊಳಿಸಲಿದೆ. ಟಿಕೆಟ್ ಹಂಚುವಿಕೆಯ ಸಂದರ್ಭದಲ್ಲಿ ಆರೆಸ್ಸೆಸ್ ಮಾಡಿರುವ ದ್ರೋಹದ ಅರಿವಿರುವ ಬಿಜೆಪಿಯ ಹಿರಿಯ ನಾಯಕರಾರು ಮುಂದಿನ ದಿನಗಳಲ್ಲಿ ಸುಮ್ಮನಿರಲಾರರು. ಹಿರಿಯ ನಾಯಕ ಸೋಮಣ್ಣ ಒಳಗಿಂದೊಳಗೆ ಭುಸುಗುಟ್ಟುತ್ತಿದ್ದಾರೆ. ಯಡಿಯೂರಪ್ಪ ಅವರು ಆರೆಸ್ಸೆಸ್ ಪಾಲಿಗೆ ಬಿಸಿ ತುಪ್ಪವಾಗಿದ್ದಾರೆ. ತನ್ನ ಹಿಂಬಾಲಕರ ಮೂಲಕವೇ ಅವರು ಆರೆಸ್ಸೆಸ್ ವಿರುದ್ಧ ಬಾಣ ಬಿಡುತ್ತಿದ್ದಾರೆ. ಜಗದೀಶ್ ಶೆಟ್ಟರ್ ಕಾಂಗ್ರೆಸ್‌ನಲ್ಲಿದ್ದರೂ ಬಿಜೆಪಿಯೊಳಗಿರುವ ಜೋಶಿ, ಸಂತೋಷ್‌ರನ್ನು ಬಗ್ಗು ಬಡಿಯುವುದಕ್ಕಾಗಿಯೇ ತಮ್ಮ ಅಳಿದುಳಿದ ರಾಜಕೀಯ ಬದುಕನ್ನು ಮೀಸಲಿಟ್ಟಂತೆ ವರ್ತಿಸುತ್ತಿದ್ದಾರೆ. ನಾಳೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವಲ್ಲಿ ಬಿಜೆಪಿ ಯಶಸ್ವಿಯಾದರೂ, ಹಾಗೆ ಆಯ್ಕೆಯಾದ ನಾಯಕ ಏಕಕಾಲದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ವಿರೋಧ ಪಕ್ಷದ ನಾಯಕನಾಗಿ ಕಾರ್ಯನಿರ್ವಹಿಸಬೇಕಾದ ಒತ್ತಡಕ್ಕೆ ಸಿಲುಕುವ ಸಾಧ್ಯತೆ ಇದೆ. ಆ ನಾಯಕನಿಗೆ ಬಿಜೆಪಿಯೊಳಗಿರುವ ಹಿರಿಯ ನಾಯಕರು ತಮ್ಮ ಸಹಕಾರವನ್ನು ನೀಡುವ ಸಾಧ್ಯತೆಗಳಿಲ್ಲ. ಆಪರೇಷನ್ ಕಮಲ, ದ್ವೇಷ ರಾಜಕಾರಣಗಳನ್ನು ನೆಚ್ಚಿ ಕೊಂಡು ಕರ್ನಾಟಕದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸಿದ ಫಲವಾಗಿ ಇಂದು ಬಿಜೆಪಿಯಲ್ಲಿ ಮುತ್ಸದ್ದಿ ರಾಜಕಾರಣಿಗಳ ಕೊರತೆ ಎದ್ದು ಕಾಣುತ್ತಿದೆ. ಹಣ ಮತ್ತು ದ್ವೇಷಕ್ಕೆ ಹೊರತಾದ ಬೇರೆ ಮಾರ್ಗಗಳು ಬಿಜೆಪಿ ನಾಯಕರ ಬಳಿ ಇಲ್ಲ. ಬಿಜೆಪಿಯೊಳಗಿರುವ ಯಡಿಯೂರಪ್ಪ ಅವರಂತಹ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಕ್ಕೆ ಹೆಜ್ಜೆ ಯಿಡದೇ ಇದ್ದರೆ ಅದು ಮುಂದಿನ ದಿನಗಳಲ್ಲಿ ಇನ್ನಷ್ಟು ಹಾಸ್ಯಾಸ್ಪದಕ್ಕೀಡಾಗಬಹುದು. ರಾಜ್ಯದಲ್ಲಿ ವಿರೋಧ ಪಕ್ಷವೇ ಇಲ್ಲ ಎನ್ನುವಂತಹ ಸ್ಥಿತಿಯ ಸಂಪೂರ್ಣ ಲಾಭವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ತನ್ನದಾಗಿಸಿಕೊಳ್ಳಬಹುದು. ದಿಲ್ಲಿಯ ವರಿಷ್ಠರು ಆರೆಸ್ಸೆಸ್‌ನ ಪುಂಗಿಗೆ ತಲೆಯಾಡಿಸುವುದನ್ನು ನಿಲ್ಲಿಸಿ, ಕರ್ನಾಟಕದ ವಾಸ್ತವವನ್ನು ಅರ್ಥಮಾಡಿಕೊಂಡು ಅದಕ್ಕೆ ಪೂರಕವಾಗಿ ಬಿಜೆಪಿಯನ್ನು ಇಲ್ಲಿ ಹೊಸದಾಗಿ ಕಟ್ಟುವುದಕ್ಕೆ ಮುಂದಾಗಬೇಕು. ಕಾಂಗ್ರೆಸ್‌ನ ಅಭಿವೃದ್ಧಿ ರಾಜಕಾರಣಕ್ಕೆ ಆ ಮೂಲಕವೇ ಉತ್ತರಿಸುವುದಕ್ಕೆ ಬಿಜೆಪಿ ಸಿದ್ಧತೆ ನಡೆಸದೇ ಇದ್ದರೆ ಬಿಜೆಪಿಗೆ ಉಳಿಗಾಲವಿಲ್ಲ. ಅದಕ್ಕೆ ಅರ್ಹರಾದ ಹಿರಿಯ, ಅನುಭವಿ, ಪ್ರಬುದ್ಧ ನಾಯಕನನ್ನು ಗುರುತಿಸುವ ಕೆಲಸ ವರಿಷ್ಠರಿಂದ ನಡೆಯಬೇಕು.