ಹೆಚ್ಚುತ್ತಿರುವ ರಸ್ತೆ ದುರಂತಗಳಿಗೆ ಯಾರು ಹೊಣೆ?

Update: 2023-12-11 06:42 GMT

Photo:freepik.com 

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತದ ಅಭಿವೃದ್ಧಿಯೆಂದರೆ ಆಧುನಿಕ ರಸ್ತೆಗಳು ಎಂದು ನಂಬಿಸಲಾಗಿದೆ. ನೂರಾರು ಹಳ್ಳಿಗಳನ್ನು, ಕಾಡುಗಳನ್ನು, ಮನೆಗಳನ್ನು, ಬದುಕನ್ನು, ಸಂಸ್ಕೃತಿಯನ್ನು ಬಲಿಕೊಟ್ಟು ಸಾವಿರಾರು ಕೋಟಿ ರೂ. ವೆಚ್ಚ ಮಾಡಿ ವಿಶಾಲ ರಸ್ತೆಗಳನ್ನು ನಿರ್ಮಿಸಲು ಯೋಜನೆಗಳನ್ನು ರೂಪಿಸಲಾಗಿದೆ. ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ದಿನಗಳಿಂದ ಬಹುಪಥ ರಸ್ತೆಗಳು ಭಾರತದ ದಿಕ್ಸೂಚಿಯಾಗಿ ಬದಲಾಗಿದೆ. ಬದಲಾಗುತ್ತಿರುವ ರಸ್ತೆಗಳಿಗೆ ಅನುಗುಣವಾಗಿ ವಾಹನಗಳು ಮತ್ತು ಅದನ್ನು ಚಲಾಯಿಸುತ್ತಿರುವ ಚಾಲಕರು ಎಷ್ಟರಮಟ್ಟಿಗೆ ಬದಲಾಗುತ್ತಿದ್ದಾರೆ ಎನ್ನುವುದರ ಬಗ್ಗೆ ಚರ್ಚೆ ನಡೆಸುವುದಕ್ಕೆ ಇದು ಸೂಕ್ತ ಸಮಯವಾಗಿದೆ. ಜನಸಾಮಾನ್ಯರನ್ನು ಹೊರಗಿಟ್ಟು, ರಾಜಧಾನಿಗಳನ್ನು ಗುರಿಯಾಗಿಸಿಕೊಂಡಿರುವ ರಾಜರಸ್ತೆಗಳ ಮೂಲಕ ಈ ದೇಶ ಅಭಿವೃದ್ಧಿ ಎಷ್ಟರ ಮಟ್ಟಿಗೆ ಸಾಧ್ಯ ಎನ್ನುವ ಚರ್ಚೆ ಒಂದಾದರೆ, ಭಾರತದ ರಸ್ತೆಗಳು ನೇರವಾಗಿ ಬಲಿ ಪಡೆಯುತ್ತಿರುವ ಜನಸಾಮಾನ್ಯರ ಬದುಕಿನ ಕುರಿತಂತೆ ಸರಕಾರ ಎಷ್ಟು ಗಂಭೀರವಾಗಿ ಯೋಚಿಸಿದೆ ಎನ್ನುವುದು ಚರ್ಚೆಯ ಇನ್ನೊಂದು ಮಗ್ಗುಲು.

ಭಾರತದ ರಸ್ತೆಗಳಲ್ಲಿ ಪ್ರತಿದಿನ ಸುಮಾರು 465 ಮಂದಿ ಸಾವಿಗೀಡಾಗುತ್ತಿದ್ದಾರೆ. ಜೊತೆಗೆ, ಈ ಸಂಖ್ಯೆಯ ಮೂರು ಪಟ್ಟು ಜನರು ಗಾಯಗೊಳ್ಳುತ್ತಿದ್ದಾರೆ ಎಂದು ಸರಕಾರಿ ಅಂಕಿಅಂಶಗಳು ಹೇಳುತ್ತಿವೆ. ರಸ್ತೆ ಅಪಘಾತಗಳ ಸಂಖ್ಯೆ, ಸಾವಿನ ಸಂಖ್ಯೆ ಮತ್ತು ಗಾಯಾಳುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ..ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ 2022ರ ‘ಭಾರತದಲ್ಲಿ ರಸ್ತೆ ಅಪಘಾತಗಳು’ ಎಂಬ ವರದಿಯು, ರಸ್ತೆ ಅಪಘಾತಗಳಿಗೆ ಹಲವು ಪ್ರಮುಖ ಕಾರಣಗಳನ್ನು ಗುರುತಿಸಿದೆ. ಇವುಗಳ ಪೈಕಿ ಕೆಲವು ಚಾಲನೆ ಅಥವಾ ಚಾಲಕನಿಗೆ ಸಂಬಂಧಿಸಿದವುಗಳು: ಅತಿವೇಗ, ಶರಾಬು ಕುಡಿದು ವಾಹನ ಚಾಲನೆ ಮಾಡುವುದು, ತಪ್ಪು ಬದಿಯಲ್ಲಿ ವಾಹನ ಚಲಾಯಿಸುವುದು, ಕೆಂಪು ದೀಪವನ್ನು ಉಲ್ಲಂಘಿಸುವುದು ಮತ್ತು ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವುದು.

ಅದೂ ಅಲ್ಲದೆ, ಕೆಟ್ಟ ರಸ್ತೆಗಳು, ರಸ್ತೆಗಳ ಕೆಟ್ಟ ವಿನ್ಯಾಸ, ರಸ್ತೆ ನಿಯಮಗಳ ನೀರಸ ಅನುಷ್ಠಾನ, ಗಾಯಾಳುಗಳ ತುರ್ತು ಚಿಕಿತ್ಸಾ ಸೌಲಭ್ಯಗಳ ಕೊರತೆ, ರಸ್ತೆ ಜಾಲದ ಕ್ಷಿಪ್ರ ವಿಸ್ತರಣೆ, ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಮತ್ತು ರಸ್ತೆಯಲ್ಲಿ ಹೆಚ್ಚುತ್ತಿರುವ ಸರಾಸರಿ ವೇಗ- ಇವುಗಳೂ ರಸ್ತೆ ಅಪಘಾತಕ್ಕೆ ಕಾರಣಗಳಾಗುತ್ತವೆ.ಈ ಎಲ್ಲಾ ಅಂಶಗಳು ರಸ್ತೆ ಅಪಘಾತಗಳಿಗೆ ನೇರವಾಗಿ ಎಷ್ಟು ಕೊಡುಗೆಯನ್ನು ನೀಡುತ್ತವೆ ಎನ್ನುವುದನ್ನು ವರದಿ ಹೇಳಿಲ್ಲ. ಬಹುಷಃ ರಸ್ತೆ ಅಪಘಾತಗಳಿಗೆ ಸಂಬಂಧಿಸಿದ ಅಂಕಿಅಂಶಗಳಿಗೆ ಸಚಿವಾಲಯವು ರಾಜ್ಯಗಳನ್ನೇ ಸಂಪೂರ್ಣವಾಗಿ ಅವಲಂಬಿಸಿರುವುದು ಇದಕ್ಕೆ ಕಾರಣವಾಗಿರಬಹುದು.

ಜಗತ್ತಿನಲ್ಲಿ ರಸ್ತೆ ಅಪಘಾತಗಳು ವ್ಯಾಪಕವಾಗಿರುವ 20 ದೇಶಗಳನ್ನು ಪಟ್ಟಿ ಮಾಡಿದರೆ, ಪಟ್ಟಿಯ ಕೆಳ 16 ದೇಶಗಳಲ್ಲಿ ಸಾಯುವ ಜನರ ಒಟ್ಟು ಸಂಖ್ಯೆಯು ಭಾರತ ಒಂದರಲ್ಲೇ ಸಾಯುವ ಜನರ ಸಂಖ್ಯೆಗಿಂತ ಕಡಿಮೆಯಾಗಿದೆ!ಚತುಷ್ಚಕ್ರ ವಾಹನಗಳ (ಮುಖ್ಯವಾಗಿ ಕಾರುಗಳು) ಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳುವುದಾದರೆ, ಅಮೆರಿಕದಲ್ಲಿ ಭಾರತಕ್ಕಿಂತ ಹೆಚ್ಚಿನ ಸಂಖ್ಯೆಯ ಕಾರುಗಳಿವೆ (ಭಾರತದಲ್ಲಿ 7 ಕೋಟಿ ಕಾರುಗಳಿದ್ದರೆ, ಅಮೆರಿಕದಲ್ಲಿ 29 ಕೋಟಿ ಕಾರುಗಳಿವೆ). ಆದರೆ, ಭಾರತದಲ್ಲಿ ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವಿನ ಸಂಖ್ಯೆ ಅಮೆರಿಕದ ಸಂಖ್ಯೆಗಿಂತ ಸುಮಾರು ಮೂರೂವರೆ ಪಟ್ಟು ಅಧಿಕವಾಗಿದೆ.

ಭಾರತದಲ್ಲಿ ರಸ್ತೆ ಅಪಘಾತದ ತೀವ್ರತೆ ದರ (ಪ್ರತಿ 100 ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡರ ಸಂಖ್ಯೆ)ವು 2000ದ ಬಳಿಕ ನಿರಂತರವಾಗಿ ಹೆಚ್ಚುತ್ತಿದೆ. 2000ದಲ್ಲಿ ಅದು 20.2 ಆಗಿತ್ತು. 2021ಕ್ಕೆ ಬರುವಾಗ ಅದು 37.3 ಆಗಿದೆ. 2022ರಲ್ಲಿ ಅದು ಸ್ವಲ್ಪ ತಗ್ಗಿದೆ (36.5). 2022ರಲ್ಲಿ, ಇಡೀ ಭಾರತದ ರಸ್ತೆ ಅಪಘಾತ ತೀವ್ರತೆ ದರದ ಸರಾಸರಿ 36.5 ಆಗಿತ್ತು. ಇದಕ್ಕೆ ಹೋಲಿಸಿದರೆ, ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣಗಳ ನಿರ್ವಹಣೆ ಉತ್ತಮವಾಗಿವೆ.ರಾಜ್ಯ ಹೆದ್ದಾರಿಗಳ ಪ್ರಮಾಣವು ದೇಶದಲ್ಲಿರುವ ಒಟ್ಟು ರಸ್ತೆ ಜಾಲದ 3 ಶೇಕಡಕ್ಕಿಂತಲೂ ಕಡಿಮೆಯಾದರೂ, ರಸ್ತೆ ಅಪಘಾತಗಳ ಒಟ್ಟು ಸಾವಿನ 25 ಶೇಕಡ ಅವೇ ರಸ್ತೆಗಳಲ್ಲಿ ನಡೆಯುತ್ತಿರುವುದು ವಿಪರ್ಯಾಸವಾಗಿದೆ. ಭಾರತದಲ್ಲಿ ಸಂಭವಿಸುವ ಸಾವುಗಳ ಅಗ್ರ 10 ಕಾರಣಗಳಲ್ಲಿ ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಗಾಯಗಳೂ ಸೇರಿವೆ. ದೇಶದ ಸಂಪನ್ಮೂಲವಾಗಬಹುದಾಗಿದ್ದ ಯುವ ಶಕ್ತಿ, ಅಂಗವೈಕಲ್ಯ, ಅನಾರೋಗ್ಯಗಳಿಂದ ಜೀವನಪೂರ್ತಿ ಬಳಲುವುದಕ್ಕೆ ಅಪಘಾತಗಳು ನೀಡುತ್ತಿರುವ ಕೊಡುಗೆ ಬಹುದೊಡ್ಡದು. ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಗಾಯಗಳು ಮತ್ತು ಸಾವುಗಳು ಗಣನೀಯವಾಗಿ ಕಡಿಮೆಯಾಗಬೇಕೆಂದು ಬಾಯಲ್ಲಿ ಹೇಳಿದರೆ ಏನೂ ಪ್ರಯೋಜನವಿಲ್ಲ. ಹಲವಾರು ಪ್ರಾಯೋಗಿಕ ಹಾಗೂ ಹೆಚ್ಚಿನ ಸಂದರ್ಭಗಳಲ್ಲಿ ಸರಳ ಎನ್ನಬಹುದಾದ ವಿಧಾನಗಳು ರಸ್ತೆ ಸುರಕ್ಷತೆಯನ್ನು ಹೆಚ್ಚಿಸುತ್ತವೆ. ನಿಯಮಗಳ ಇಲೆಕ್ಟ್ರಾನಿಕ್ ಅನುಷ್ಠಾನ, ದಂಡಗಳಲ್ಲಿ ಹೆಚ್ಚಳ, ವೇಗವನ್ನು ಕಡಿಮೆಗೊಳಿಸುವ ಪಟ್ಟಿಗಳು, ಹೆಲ್ಮೆಟ್‌ಗಳ ಸರಿಯಾದ ಬಳಕೆ, ಸೀಟ್ ಬೆಲ್ಟ್ ಗಳನ್ನು ಬಳಸುವುದು, ‘ಅಪಘಾತ ಸ್ಥಳ’ಗಳು ಎನ್ನಲಾದ ಸ್ಥಳಗಳನ್ನು ಗುರುತಿಸುವುದು, ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡುವುದು ಈ ಮೂಲಕ ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಗಾಯಗಳು ಮತ್ತು ಸಾವುಗಳನ್ನು ವಿವಿಧ ಇಲಾಖೆಗಳು ಕನಿಷ್ಠಗೊಳಿಸಬಹುದಾಗಿದೆ.ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವುಗಳನ್ನು ಕಡಿಮೆಗೊಳಿಸಲು ಹೆಚ್ಚಿನದೇನನ್ನೂ ಮಾಡಬೇಕಾಗಿಲ್ಲ, ಸಾರಿಗೆ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನವೊಂದೇ ಸಾಕು.

ರಸ್ತೆ ಅಪಘಾತಗಳಿಗೆ ಕಾರಣವಾಗಬಹುದಾದ ಬಹುಮುಖ್ಯ ಕಾರಣವೊಂದರ ಕಡೆಗೆ ಸರಕಾರ ಉದ್ದೇಶಪೂರ್ವಕವಾಗಿ ಕುರುಡಾಗಿದೆ. ಅದು ಸಾರಿಗೆ ಇಲಾಖೆಗಳಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ. ಆಯಸ್ಸು ಮುಗಿದ ಸಾವಿರಾರು ವಾಹನಗಳು ರಸ್ತೆಯಲ್ಲಿ ಓಡಾಡುವುದಕ್ಕೆ ಮುಖ್ಯ ಕಾರಣ ಸಾರಿಗೆ ಇಲಾಖೆಗಳ ಭ್ರಷ್ಟ ಅಧಿಕಾರಿಗಳಾಗಿದ್ದಾರೆ. ವಾಹನ ಮಾಲಕರು ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ನಡುವಿನ ಅನೈತಿಕ ಸಂಬಂಧಗಳಿಗೆ ಬಲಿಯಾಗುವವರು ಚಾಲಕರು. ಭ್ರಷ್ಟಾಚಾರದ ಕಾರಣದಿಂದಾಗಿ ಅವಧಿ ಮುಗಿದ ವಾಹನಗಳಿಗೂ ಅಕ್ರಮವಾಗಿ ಅಧಿಕಾರಿಗಳು ಪರವಾನಿಗೆ ನೀಡುತ್ತಾರೆ. ಇದೇ ಸಂದರ್ಭದಲ್ಲಿ ಚಾಲಕರ ದೈಹಿಕ ಹಾಗೂ ಮಾನಸಿಕ ಕ್ಷಮತೆಯ ಬಗ್ಗೆ ಇರುವ ಗಾಢ ನಿರ್ಲಕ್ಷ್ಯವೂ ಅಪಘಾತಗಳಿಗೆ ಕಾರಣವಾಗುತ್ತದೆ. ಕುಡಿತ, ಅನಾರೋಗ್ಯ ಇತ್ಯಾದಿಗಳಿಂದ ತೀವ್ರವಾಗಿ ನರಳುತ್ತಿರುವವರು ಚಾಲಕನ ಜಾಗದಲ್ಲಿ ಕುಳಿತಾಗಲೂ ದುರಂತಗಳು ಸಂಭವಿಸುತ್ತವೆ. ಭಾರತ ಲಾರಿ ಅಥವಾ ಖಾಸಗಿ ಬಸ್‌ಗಳಂತಹ ಘನ ವಾಹನ ಚಾಲಕರ ಆಯ್ಕೆಯ ಸಂದರ್ಭದಲ್ಲಿ ಯಾವುದೇ ಗುಣಮಟ್ಟದ ಸಂದರ್ಶನಗಳನ್ನು ನಡೆಸುವುದಿಲ್ಲ. ಇದರ ಪರಿಣಾಮವನ್ನು ಸಾರ್ವಜನಿಕರು ಉಣ್ಣಬೇಕಾಗುತ್ತದೆ. ಜೊತೆಗೆ ಚಾಲಕನ ದುಡಿಮೆಗೆ ನಿರ್ದಿಷ್ಟ ಸಮಯವೆನ್ನುವುದಿಲ್ಲ. ಸರಕುಗಳನ್ನು ಸಾಗಿಸುವ ಹೆಚ್ಚಿನ ಘನವಾಹನಗಳಲ್ಲಿ ಒಬ್ಬನೇ ಚಾಲಕನಿರುತ್ತಾನೆ. ಹಗಲು ರಾತ್ರಿ ಆತನೇ ವಾಹನ ಓಡಿಸಬೇಕಾಗುತ್ತದೆ. ಸಿಗುವ ವೇತನ, ಸವಲತ್ತುಗಳು ಕೂಡ ಅಷ್ಟಕ್ಕಷ್ಟೇ. 24 ಗಂಟೆಗಳ ದುಡಿಮೆ ಸಹಜವಾಗಿಯೇ ಅಪಘಾತಗಳಿಗೆ ಕಾರಣವಾಗುತ್ತದೆ. ಇಂತಹ ದುಡಿಮೆಯಿಂದ ಬಳಲಿದ ಚಾಲಕ ಮದ್ಯದ ಮೊರೆ ಹೋಗುತ್ತಾನೆ. ಇದು ಇನ್ನಷ್ಟು ಅನಾಹುತಗಳನ್ನು ಸೃಷ್ಟಿಸುತ್ತದೆ. ಈ ಎಲ್ಲ ಅಂಶಗಳ ಕಡೆಗೆ ಸರಕಾರ ಇನ್ನೂ ಗಂಭೀರವಾಗಿ ಗಮನವನ್ನು ಹರಿಸಿಲ್ಲ. ಮುಂದಿನ ದಿನಗಳಲ್ಲಿ ಎಸಿ ಕ್ಯಾಬಿನ್‌ಗಳುಳ್ಳ ಲಾರಿಗಳನ್ನು ಸಿದ್ಧ ಪಡಿಸಲು ಸರಕಾರ ಸೂಚನೆಗಳನ್ನು ನೀಡಿದೆ. ಆದರೆ ಅದಕ್ಕೆ ಮೊದಲು, ಘನ ವಾಹನಗಳಲ್ಲಿ ದುಡಿಯುತ್ತಿರುವ ಚಾಲಕರನ್ನು ಅತ್ಯಂತ ಮಾನವೀಯವಾಗಿ ನಡೆಸಿಕೊಳ್ಳಲು ಸರಕಾರ ಒಂದು ಸ್ಪಷ್ಟ ಕಾನೂನನ್ನು ಮಾಡಬೇಕಾಗಿದೆ. ವಾಹನಗಳು ಅದೆಷ್ಟು ಆಧುನಿಕವಾಗಿದ್ದರೂ, ಅದನ್ನು ಚಲಾಯಿಸುವ ಚಾಲಕ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಮರ್ಥನಲ್ಲದೇ ಇದ್ದರೆ ರಸ್ತೆ ಅಪಘಾತಗಳನ್ನು ತಡೆಯಲು ಸಾಧ್ಯವಿಲ್ಲ. ಇದೇ ಸಂದರ್ಭದಲ್ಲಿ ಸಾರಿಗೆ ಇಲಾಖೆಯೊಳಗಿನ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿಯೂ ಸರಕಾರ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News