ನಾಯಕರ ಮಕ್ಕಳು ದಾರಿತಪ್ಪಲು ಯಾರ ‘ಗ್ಯಾರಂಟಿ’ ಕಾರಣ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ಬಂಗಾರದ ಬಳೆ ತೊಟ್ಟು ಬೈಬೇಡ ಬಡವರನು, ಬಂಗಾರ ನಿನಗೆ ಸ್ಥಿರವಲ್ಲ, ಮಧ್ಯಾಹ್ನದ ಬಿಸಿಲು ಹೊಳ್ಳೋದು ತಡವಲ್ಲ’ ಎನ್ನುವ ಜಾನಪದ ಹಾಡಿನ ಸಾಲು ಜೆಡಿಎಸ್ ನಾಯಕ ಕುಮಾರಸ್ವಾಮಿ ಮತ್ತು ಅವರ ಕುಟುಂಬಕ್ಕೆ ಅನ್ವಯವಾಗುವಂತಿದೆ. ಬಡವರಿಗೆ ಸರಕಾರ ನೀಡಿದ ‘ಗ್ಯಾರಂಟಿ ಯೋಜನೆಗಳನ್ನು’ ಉಲ್ಲೇಖಿಸಿ ಈ ಯೋಜನೆಗಳಿಂದ ‘ಮಹಿಳೆಯರು ದಾರಿತಪ್ಪುತ್ತಿದ್ದಾರೆ’ ಎಂದು ಈ ನಾಡಿನ ಮಧ್ಯಮ ವರ್ಗದ ಮಹಿಳೆಯರನ್ನು ಎಚ್. ಡಿ. ಕುಮಾರಸ್ವಾಮಿ ಸಾರ್ವಜನಿಕವಾಗಿ ಅವಮಾನಿಸಿದ್ದರು. ಇದರ ವಿರುದ್ಧ ನಾಡಿನ ಮಹಿಳೆಯರೆಲ್ಲ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆಯೇ ಅವರು ‘ಕ್ಷಮೆಯಾಚನೆ’ ಮಾಡಬೇಕಾಯಿತು. ವಿಪರ್ಯಾಸವೆಂದರೆ, ಹೀಗೆ ಅವಮಾನಿಸಿದ ಕೆಲವೇ ದಿನಗಳಲ್ಲಿ ಅವರ ಕುಟುಂಬದ ಸದಸ್ಯ, ಜೆಡಿಎಸ್ ಪಕ್ಷದ ಯುವ ನಾಯಕ, ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಪ್ರಜ್ವಲ್ ಗೌಡ ಅವರದೆಂದು ಹೇಳಲಾಗುತ್ತಿರುವ ಅಶ್ಲೀಲ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವೀಡಿಯೊದಲ್ಲಿರುವ ಅತ್ಯಂತ ಅಶ್ಲೀಲ ಮತ್ತು ಆಘಾತಕಾರಿ ದೃಶ್ಯಗಳಿಂದ ನಾಡು ತಲೆತಗ್ಗಿಸಿದೆ. ನೂರಾರು ಹೆಣ್ಣು ಮಕ್ಕಳ ಮಾನ ಈ ಪೆನ್‌ಡ್ರೈವ್‌ನಿಂದ ಬೀದಿಗೆ ಬಂದಿದೆ. ಗಣ್ಯರು, ಬಡವರು ಎನ್ನದೇ ಹಲವು ಮಹಿಳೆಯರ ಮೇಲೆ ಜೆಡಿಎಸ್ ಮುಖಂಡ, ಯುವ ನಾಯಕ ಅತ್ಯಂತ ವಿಕೃತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನುವ ಆರೋಪ ಈ ಪೆನ್‌ಡ್ರೈವ್ ದೃಶ್ಯಗಳ ಜೊತೆ ಜೊತೆಗೇ ಕೇಳಿ ಬಂದಿವೆ. ಇಷ್ಟಾದರೂ ‘ಈ ಅಶ್ಲೀಲ ದೃಶ್ಯಗಳಿರುವ ಪೆನ್‌ಡ್ರೈವ್‌ಗಳಿಗೂ ಜೆಡಿಎಸ್‌ನ ಯುವ ನಾಯಕನಿಗೂ ಯಾವುದೇ ಸಂಬಂಧವಿಲ್ಲ....ಇದು ತಿರುಚಿದ ವೀಡಿಯೊಗಳಾಗಿವೆ...’ ಎಂಬಿತ್ಯಾದಿಯಾಗಿ ಯಾವನೇ ಜೆಡಿಎಸ್ ನಾಯಕರೂ ಈವರೆಗೆ ಸ್ಪಷ್ಟೀಕರಣ ನೀಡಿಲ್ಲ. ಬದಲಿಗೆ ಕುಮಾರಸ್ವಾಮಿಯವರು ಈ ವೀಡಿಯೊ ಬಗ್ಗೆ ಪ್ರತಿಕ್ರಿಯಿಸುತ್ತಾ ‘ಉಪ್ಪು ತಿಂದವರು ನೀರು ಕುಡಿಯುತ್ತಾರೆ’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಅಂದರೆ, ಜೆಡಿಎಸ್‌ನ ಯುವ ನಾಯಕ ‘ಉಪ್ಪು ತಿಂದಿರುವ ಬಗ್ಗೆ’ ಅವರಿಗೂ ಅನುಮಾನಗಳಿವೆ ಎಂದಾಯಿತು. ಪೆನ್ ಡ್ರೈವ್‌ನ ದೃಶ್ಯಗಳು ಅದೆಷ್ಟು ವಿಕೃತವಾಗಿವೆ ಎಂದರೆ, ರಾಜ್ಯ ಸರಕಾರ ಅನಿವಾರ್ಯವಾಗಿ ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸುವುದಾಗಿ ಘೋಷಿಸಿದೆ.
ಈ ಹಿಂದೆ ಬಿಜೆಪಿಯ ಆಪರೇಷನ್ ಕಮಲಕ್ಕೆ ಬಲಿಯಾಗಿದ್ದ ಹಲವು ರಾಜಕೀಯ ನಾಯಕರ ಅಶ್ಲೀಲ ಸಿಡಿಗಳು ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಸಾಕಷ್ಟು ತಲ್ಲಣಗಳನ್ನು ಎಬ್ಬಿಸಿದ್ದವು. ವಿಪರ್ಯಾಸವೆಂದರೆ ಆ ಅಶ್ಲೀಲ ಸಿಡಿಗಳಲ್ಲಿ ಗುರುತಿಸಿಕೊಂಡ ಬಹುತೇಕರು ‘ಸಂಸ್ಕೃತಿ, ಸಭ್ಯತೆ, ಹಿಂದುತ್ವ’ದ ಬಗ್ಗೆ ಮಾತನಾಡುವ ಬಿಜೆಪಿ ಪಕ್ಷದ ನಾಯಕರೇ ಆಗಿದ್ದರು. ಮಾಜಿ ಮುಖ್ಯಮಂತ್ರಿಯ ಖಾಸಗಿ ಕ್ಷಣಗಳ ಸಿಡಿಗಳೂ ಈ ಸಂದರ್ಭದಲ್ಲಿ ಬಹಿರಂಗವಾಗಿತ್ತು. ಇದೀಗ ಬಿಜೆಪಿಯ ಸಹವಾಸ ಮಾಡಿದ ಬೆನ್ನಿಗೇ ಜೆಡಿಎಸ್‌ನ ನಾಯಕರ ಅಶ್ಲೀಲ ಕೃತ್ಯಗಳು ಬೆಳಕಿಗೆ ಬಂದಿರುವುದನ್ನು ‘ಸಹವಾಸ ದೋಷ’ ಎಂದು ನಿರ್ಲಕ್ಷಿಸುವಂತಿಲ್ಲ. ಈಗ ಬಿಡುಗಡೆಯಾಗಿರುವ ಪೆನ್‌ಡ್ರೈವ್ ದೃಶ್ಯಗಳು ನಮ್ಮ ಸಾಮಾಜಿಕ ಮತ್ತು ರಾಜಕೀಯ ವಾತಾವರಣ ಸರಿಪಡಿಸಲಾಗದಷ್ಟು ಕೆಟ್ಟು ಹೋಗಿರುವುದನ್ನು ಹೇಳುತ್ತಿದೆ. ಹೆಣ್ಣಿನ ಮಾನ, ಪ್ರಾಣವನ್ನೂ ಈ ಚುನಾವಣೆಯಲ್ಲಿ ರಾಜಕೀಯ ನಾಯಕರು ದಾಳವಾಗಿ ಬಳಸಿದ್ದಾರೆ. ಹಾಸನದ ಪೆನ್‌ಡ್ರೈವ್ ಪ್ರಕರಣ ‘ಹನಿಟ್ರ್ಯಾಪ್’ನಂತೆ ಕಾಣುತ್ತಿಲ್ಲ. ಆರೋಪಿಯು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಸಂದರ್ಭದಲ್ಲಿ ಸ್ವತಃ ದೃಶ್ಯಗಳನ್ನು ಚಿತ್ರೀಕರಿಸಿದ್ದಾನೆ. ಒಬ್ಬಳೋ, ಇಬ್ಬರೋ ಅಲ್ಲ, ಹಲವು ಹೆಣ್ಣು ಮಕ್ಕಳನ್ನು ತನ್ನ ಲೈಂಗಿಕ ವಿಕೃತಿಗೆ ಬಳಸಿಕೊಂಡಿದ್ದಾನೆ. ಈತ ತನ್ನ ಖಾಸಗಿ ಕ್ಷಣಗಳನ್ನು ಯಾಕೆ ಚಿತ್ರೀಕರಿಸಿದ್ದ? ಆತ ಆ ಮೂಲಕ ಹೆಣ್ಣು ಮಕ್ಕಳನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನೆ? ಎನ್ನುವುದು ತನಿಖೆಯಿಂದಷ್ಟೇ ಬಹಿರಂಗವಾಗಬೇಕಾಗಿದೆ. ವೀಡಿಯೋದಲ್ಲಿರುವುದು ಜೆಡಿಎಸ್‌ನ ಯುವ ನಾಯಕ ಹೌದು ಎಂದಾದರೆ, ಅದರ ನೈತಿಕ ಹೊಣೆಯನ್ನು ಹೊತ್ತುಕೊಂಡು ದೇವೇಗೌಡರು, ರೇವಣ್ಣ ಕುಮಾರಸ್ವಾಮಿಯಾದಿಗಳು ರಾಜಕೀಯದಿಂದ ನಿವೃತ್ತರಾಗಬೇಕು.
ಉಚಿತ ಬಸ್ ಪ್ರಯಾಣದ ಅವಕಾಶ ಮಾಡಿಕೊಟ್ಟ ಕಾರಣಕ್ಕಾಗಿ ಮಹಿಳೆಯರು ದಾರಿತಪ್ಪುತ್ತಿದ್ದಾರೆ ಎಂದು ಸಾರ್ವಜನಿಕ ಭಾಷಣ ಮಾಡಿದ ಕುಮಾರಸ್ವಾಮಿ, ತನ್ನ ಕುಟುಂಬ ಸದಸ್ಯನೊಬ್ಬ ದಾರಿ ತಪ್ಪಿದ್ದಲ್ಲದೆ, ನಾಡಿನ ನೂರಾರು ತರುಣಿಯರ ದಾರಿಗೆಡಿಸಿದ್ದು ಯಾರು ನೀಡಿದ ‘ಗ್ಯಾರಂಟಿ’ಯ ಬಲದಿಂದ ಎನ್ನುವುದನ್ನು ನಾಡಿಗೆ ಸ್ಪಷ್ಟ ಪಡಿಸಬೇಕಾಗಿದೆ. ವಿಪರ್ಯಾಸವೆಂದರೆ, ಕುಮಾರಸ್ವಾಮಿಯ ಮಾತಿಗೆ ಒಂದು ಕಾಲದಲ್ಲಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡು, ಇದೀಗ ರಾಜಕೀಯ ಪ್ರವೇಶಿಸಿರುವ ಶೃತಿ ಧ್ವನಿಗೂಡಿಸಿರುವುದು. ಈಕೆ ಸಾರ್ವಜನಿಕ ಸಮಾವೇಶದಲ್ಲಿ ‘ಭಾರತೀಯ ಸಂಸ್ಕೃತಿ’ಯ ಬಗ್ಗೆ ಭಾಷಣ ನೀಡುತ್ತಾ, ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ಘನತೆಗೆ ಚ್ಯುತಿ ಬಂದಿದೆ ಎಂಬರ್ಥದಲ್ಲಿ ಹೇಳಿಕೆಗಳನ್ನು ನೀಡಿದ್ದರು. ಹೀಗೆ ಹೇಳಿಕೆ ನೀಡುವ ಮುನ್ನ ಶೃತಿಯವರು ತನ್ನ ವೈಯಕ್ತಿಕ ಬದುಕು ಈ ನಾಡಿನ ಮಹಿಳೆಯರಿಗೆ ಎಷ್ಟರಮಟ್ಟಿಗೆ ಆದರ್ಶಮಯವಾಗಿದೆ ಎನ್ನುವುದನ್ನು ಹೇಳಬೇಕು. ಒಂದು ಕಾಲದಲ್ಲಿ ‘ಮದುವೆಯ ಹೆಸರಿನಲ್ಲಿ’ ಈಕೆ ಆಡಿದ ಆಟಗಳೆಲ್ಲವೂ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಒಳಗಾಗಿದ್ದವು. ಪ್ರಕರಣಗಳು ಪೊಲೀಸ್ ಠಾಣೆಯನ್ನು ತುಳಿದಿದ್ದವು. ಇವೆಲ್ಲ ಈಕೆಯ ವೈಯಕ್ತಿಕ ಬದುಕಿಗೆ ಸಂಬಂಧ ಪಟ್ಟವುಗಳು ಎಂದು ನಾವು ಸುಮ್ಮನಿರಬಹುದಿತ್ತು. ಆದರೆ ಈ ನಾಡಿನ ಜನಸಾಮಾನ್ಯರ ಹಕ್ಕಾಗಿರುವ ‘ಗ್ಯಾರಂಟಿ’ ಯೋಜನೆಗಳನ್ನು ಟೀಕಿಸಿ, ಆ ಸವಲತ್ತುಗಳನ್ನು ಪಡೆದ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಮಹಿಳೆಯರನ್ನು ಪರೋಕ್ಷವಾಗಿ ‘ಸಂಸ್ಕೃತಿ ಹೀನರು’ ಎಂದು ಸಾರ್ವಜನಿಕವಾಗಿ ಈ ನಟಿ ಟೀಕಿಸಬಹುದಾದರೆ, ಈಕೆಯ ‘ಸಂಸ್ಕೃತಿ’ಯನ್ನು ಪ್ರತಿಯಾಗಿ ಪ್ರಶ್ನಿಸುವ ಹಕ್ಕು ಜನಸಾಮಾನ್ಯರಿಗೂ ಸಿಕ್ಕಿದಂತಾಗಲಿಲ್ಲವೆ?
ಹುಬ್ಬಳ್ಳಿಯಲ್ಲಿ ಪ್ರೇಮ ಪ್ರಕರಣವೊಂದು ಕೊಲೆಯಲ್ಲಿ ಅವಸಾನವಾಯಿತು. ತರುಣಿಯನ್ನು ಕೊಲೆ ಮಾಡಿದ ಯುವಕನನ್ನು ಪೊಲೀಸರು ಬಂಧಿಸಿದರು ಮಾತ್ರವಲ್ಲ, ಸರ್ವ ಧರ್ಮೀಯರು ಈತ ಎಸಗಿದ ಕೃತ್ಯದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಆದರೆ ಬಿಜೆಪಿ ಮಾತ್ರ ಇದರಲ್ಲಿ ‘ಧರ್ಮ’ವನ್ನು, ‘ಲವ್‌ಜಿಹಾದ್’ನ್ನು ಗುರುತಿಸಿತು. ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಹುಯಿಲೆಬ್ಬಿಸಿತು. ಆದರೆ ಹಾಸನದಲ್ಲಿ ‘ಹಿಂದೂ ಮಹಿಳೆಯರ’ ಮೇಲೆ ರಾಜಕೀಯ ನಾಯಕನೊಬ್ಬ ನಡೆಸಿರುವ ಬರ್ಬರ ದೌರ್ಜನ್ಯಗಳ ಬಗ್ಗೆ ಬಿಜೆಪಿ ಈವರೆಗೆ ತುಟಿ ಬಿಚ್ಚಿಲ್ಲ. ರಾಜಕೀಯ ನಾಯಕನೊಬ್ಬ ಮಹಿಳೆಯರ ಮೇಲೆ ವಿಕೃತ ದೌರ್ಜನ್ಯವೆಸಗಿ ಅದನ್ನು ಚಿತ್ರೀಕರಿಸಿ ಇದೀಗ ಅವರ ಮಾನವನ್ನು ಬೀದಿ ಪಾಲು ಮಾಡಿರುವುದು ಹಿಂದೂ ಧರ್ಮದ ಮಹಿಳೆಯರಿಗೆ ಮಾಡಿದ ಅವಮಾನ ಎಂದು ಬಿಜೆಪಿಗೆ ಈವರೆಗೂ ಅನ್ನಿಸಿಲ್ಲ. ‘ಹಿಂದೂ ಮಹಿಳೆಯರ ಮಾನ ರಕ್ಷಣೆ’ಗೆ ಬಿಜೆಪಿ ಇನ್ನೂ ಬೀದಿಗೆ ಇಳಿದಿಲ್ಲ. ತನ್ನ ಮೌನದ ಮೂಲಕ, ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯಗಳನ್ನು ಬಿಜೆಪಿ ಸಮರ್ಥಿಸುತ್ತಿದೆ.
ಆರೆಸ್ಸೆಸ್ ನಾಯಕನೊಬ್ಬ ಮಂಡ್ಯದಲ್ಲಿ ಭಾಷಣ ಮಾಡುತ್ತಾ ‘ಮುಸ್ಲಿಮ್ ಮಹಿಳೆಯರು ದಿನಕ್ಕೊಬ್ಬ ಗಂಡನ ಜೊತೆಗೆ ಬಾಳಬೇಕಾದ ಸ್ಥಿತಿಯಿತ್ತು. ಪ್ರಧಾನಿಯಿಂದ ಅದಕ್ಕೆ ತಡೆ ಬಿತ್ತು’ ಎಂದು ಹೇಳಿದ್ದರು. ಈ ಹೇಳಿಕೆ ನೀಡಿದ ಆರೆಸ್ಸೆಸ್ ನಾಯಕನನ್ನು ‘ಸಂಸ್ಕೃತಿಯ ವಕ್ತಾರ’ನೆಂದು ಕರೆದು ಸಾರ್ವಜನಿಕ ವೇದಿಕೆಯಲ್ಲಿ ಕುಮಾರಸ್ವಾಮಿ ತಬ್ಬಿಕೊಂಡಿದ್ದರು. ಆದರೆ ಇದೀಗ ಹೊರಬಿದ್ದಿರುವ ಪೆನ್‌ಡ್ರೈವ್ ಈ ನಾಡಿನ ಮಹಿಳೆಯರ ದೌರ್ಭಾಗ್ಯಗಳ ಬಗ್ಗೆ ಬೇರೆಯೇ ಕತೆಗಳನ್ನು ಹೇಳುತ್ತಿದೆ. ಆರೆಸ್ಸೆಸ್ ನಾಯಕನೂ ಈ ಲೈಂಗಿಕ ದೌರ್ಜನ್ಯಗಳನ್ನು ಮೌನವಾಗಿ ಸಮರ್ಥಿಸಿಕೊಳ್ಳುತ್ತಿದ್ದಾನೆ. ತೆನೆ ಹೊತ್ತ ಮಹಿಳೆ ಮುಖವನ್ನು ಸೆರಗಿನಿಂದ ಮುಚ್ಚಿ ಅಳುತ್ತಿದ್ದಾಳೆ. ಆಕೆಯನ್ನು ಸಮಾಧಾನಿಸುವ ಒಬ್ಬನೇ ಒಬ್ಬ ವ್ಯಕ್ತಿ ಆರೆಸ್ಸೆಸ್‌ನಲ್ಲಾಗಲಿ, ಜೆಡಿಎಸ್‌ನಲ್ಲಾಗಲಿ, ಬಿಜೆಪಿಯಲ್ಲಾಗಲಿ ಕಾಣುತ್ತಿಲ್ಲ.
ಸರಕಾರ ಎಸ್ ಐಟಿ ತನಿಖೆಗೆ ಆದೇಶ ನೀಡುತ್ತಿದ್ದಂತೆಯೇ ಪ್ರಮುಖ ಆರೋಪಿ ದೇಶ ಬಿಟ್ಟಿರುವ ಕುರಿತಂತೆ ವದಂತಿಗಳು ಹರಡಿವೆ. ಇದು ತನಿಖೆಗೆ ಬಹುದೊಡ್ಡ ಹಿನ್ನಡೆಯಾಗಲಿದೆ. ಅವರನ್ನು ಮರಳಿ ದೇಶಕ್ಕೆ ಕರೆಸುವ ಹೊಣೆಗಾರಿಕೆಯನ್ನು ದೇವೇಗೌಡರೇ ಹೊತ್ತುಕೊಳ್ಳಬೇಕು. ಈ ಆರೋಪಿಯಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಎಲ್ಲ ಮಹಿಳೆಯರೂ ತನಿಖಾಧಿಕಾರಿಗಳ ಮುಂದೆ ಸತ್ಯಾಸತ್ಯತೆಯನ್ನು ಬಿಚ್ಚಿಡಬೇಕಾಗಿದೆ. ಸಂತ್ರಸ್ತ ಮಹಿಳೆಯರ ಖಾಸಗಿ ವಿವರಗಳನ್ನು ಬಹಿರಂಗಗೊಳಿಸದೆಯೇ ತನಿಖೆ ನಡೆಸಿ ಆರೋಪಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಸಿಟ್ ಜವಾಬ್ದಾರಿಯಾಗಿದೆ. ತನಿಖೆಯ ಹೆಸರಿನಲ್ಲಿ ಸಂತ್ರಸ್ತ ಮಹಿಳೆಯರೇ ಇನ್ನಷ್ಟು ನೋವನ್ನು ಅನುಭವಿಸುವಂತಾಗಬಾರದು.