ರಣಜಿ ಪಂದ್ಯ ಆಡಲು ಮೈದಾನಕ್ಕಿಳಿದ ಬಿಹಾರದ ಎರಡು ತಂಡಗಳು!

Update: 2024-01-06 12:19 GMT

Photo credit: indiatoday.in

ಪಾಟ್ನಾ: ಬಿಹಾರದ ಈ ವರ್ಷದ ಮೊದಲ ರಣಜಿ ಟ್ರೋಫಿ ಪಂದ್ಯ ಆಡಲು ಇಂದು ಪಾಟ್ನಾದ ಕ್ರೀಡಾಂಗಣಕ್ಕೆ ರಾಜ್ಯದ ಎರಡು ತಂಡಗಳು ಆಗಮಿಸಿದ್ದು ಸ್ವಲ್ಪ ಸಮಯ ಗೊಂದಲಕ್ಕೆ ಕಾರಣವಾಯಿತು. ಬಿಹಾರ ಕ್ರಿಕೆಟ್‌ ಅಸೋಸಿಯೇಷನ್‌ನಲ್ಲಿರುವ ಭಿನ್ನಮತದ ಕಾರಣ ಅಸೋಸಿಯೇಷನ್‌ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಪ್ರತ್ಯೇಕ ತಂಡಗಳನ್ನು ಪ್ರಕಟಿಸಿದ್ದರು. ಪೊಲೀಸರು ಕಾರ್ಯದರ್ಶಿ ಘೋಷಿಸಿದ ತಂಡವನ್ನು ಮುಂಬೈ ವಿರುದ್ಧದ ಪಂದ್ಯದಲ್ಲಿ ಆಡುವುದರಿಂದ ತಡೆದರು.

ಈ ಅಚ್ಚರಿಯ ವಿದ್ಯಮಾನದಿಂದ ಪಂದ್ಯ ಒಂದೆರಡು ಗಂಟೆ ವಿಳಂಬವಾಗಿ ಆರಂಭಗೊಂಡಿತು. ಹಲವು ವರ್ಷಗಳ ನಂತರ ರಣಜಿ ಪಂದ್ಯದ ಜವಾಬ್ದಾರಿಯನ್ನು ಬಿಹಾರ ವಹಿಸಿಕೊಂಡಿದ್ದು ಇಂದಿನ ಪಂದ್ಯ ಇಲ್ಲಿನ ಮೊಯಿನ್‌ ಉಲ್‌-ಹಖ್‌ ಕ್ರೀಡಾಂಗಣದಲ್ಲಿ ನಡೆದಿದೆ.

ಬಿಹಾರ ಕ್ರಿಕೆಟ್‌ ಅಸೋಸಿಯೇಷನ್‌ ಅಧ್ಯಕ್ಷ ರಾಕೇಶ್‌ ತಿವಾರಿ ಒಂದು ತಂಡ ಘೋಷಿಸಿದ್ದರೆ ಉಚ್ಛಾಟಿತರಾಗಿರುವ ಕಾರ್ಯದರ್ಶಿ ಇನ್ನೊಂದು ತಂಡ ಘೋಷಿಸಿದ್ದರು, ಇಂದು ಎರಡೂ ತಂಡಗಳು ಆಗಮಿಸಿದಾಗ ಪೊಲೀಸರು ಕಾರ್ಯದರ್ಶಿ ಘೋಷಿಸಿದ ತಂಡವನ್ನು ಹೊರಕಳುಹಿಸಿ ಅವರ ಬಸ್ಸಿನಲ್ಲಿ ಅವರನ್ನು ಕೂರಿಸಿ ಅವರು ಹೊರಡುವಂತೆ ಮಾಡಿದರು.

ಇದಾದ ಸ್ವಲ್ಪ ಹೊತ್ತಿನಲ್ಲೇ ಅಪರಿಚಿತರು ಬಿಹಾರ ಕ್ರಿಕೆಟ್‌ ಅಸೋಸಿಯೇಶನ್‌ ಒಎಸ್‌ಡಿ ಮನೋಜ್‌ ಕುಮಾರ್‌ ಮೇಲೆ ಹಲ್ಲೆ ನಡೆಸಿದ್ದು ಅವರ ತಲೆಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.

ಬಿಹಾರ ಕ್ರಿಕೆಟ್‌ ಅಸೋಸಿಯೇಶನ್‌ನಲ್ಲಿ ಹಲವು ವರ್ಷಗಳಿಂದ ಆಂತರಿಕ ಭಿನ್ನಮತವಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News