75ನೇ ಆವೃತ್ತಿಯ ಸ್ಟ್ರಾಂಡ್ಜಾ ಸ್ಮಾರಕ ಬಾಕ್ಸಿಂಗ್ ಟೂರ್ನಮೆಂಟ್
ಸೋಫಿಯಾ(ಬಲ್ಗೇರಿಯ): ಎರಡು ಬಾರಿಯ ವಿಶ್ವ ಚಾಂಪಿಯನ್ ನಿಖಾತ್ ಝರೀನಾ ಹಾಗೂ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತ ಅಮಿತ್ ಪಾಂಘಾಲ್, ಭಾರತದ ಇತರ ನಾಲ್ವರು ಬಾಕ್ಸರ್ಗಳೊಂದಿಗೆ 75ನೇ ಆವೃತ್ತಿಯ ಸ್ಟ್ರಾಂಡ್ಜಾ ಸ್ಮಾರಕ ಟೂರ್ನಮೆಂಟ್ ನಲ್ಲಿ ಫೈನಲ್ ಗೆ ಪ್ರವೇಶಿಸಿದ್ದಾರೆ.
ನಿಖಾತ್ ಝರೀನಾ(50 ಕೆಜಿ)ಶನಿವಾರ ಮೊದಲ ಸೆಮಿ ಫೈನಲ್ ನಲ್ಲಿ ತನ್ನ ಲಯ ಕಂಡುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಿದ್ದರೂ ಎದುರಾಳಿ ಬಲ್ಗೇರಿಯದ ಝ್ಲಾಟಿಸ್ಲಾವಾ ಚುಕನೋವಾರನ್ನು 3-2 ಅಂತರದಿಂದ ಮಣಿಸುವಲ್ಲಿ ಶಕ್ತರಾದರು.
ಭಾರತದ ಅಮಿತ್ ಪಾಂಫಾಲ್(51ಕೆಜಿ)ಸತತ ಮೂರನೇ ಪಂದ್ಯವನ್ನು 5-0 ಒಮ್ಮತದ ನಿರ್ಧಾರದಲ್ಲಿ ಗೆದ್ದುಕೊಂಡರು. ಟರ್ಕಿಯ ಗುಮುಸ್ ಸಮೆಟ್ರನ್ನು ಎದುರಿಸಿದ ಅಮಿತ್ ಆರಂಭದಿಂದಲೇ ಉತ್ತಮ ಪ್ರದರ್ಶನ ನೀಡಿದರು. ತನ್ನೆಲ್ಲಾ ಅನುಭವ ಬಳಸಿಕೊಂಡ ಅಮಿತ್ ಎದುರಾಳಿಗೆ ಗುದ್ದು ನೀಡಿದರು.
ಅಮಿತ್ ಫೈನಲ್ ಸುತ್ತಿನಲ್ಲಿ ಹಾಲಿ ವಿಶ್ವ ಚಾಂಪಿಯನ್ ಕಝಕಿಸ್ತಾನದ ಸ್ಯಾಂಝರ್ರನ್ನು ಎದುರಿಸಲಿದ್ದಾರೆ.
ಮತ್ತೊಂದೆಡೆ ಅರುಂಧತಿ ಚೌಧರಿ(66ಕೆಜಿ) ಎದುರಾಳಿ ಸ್ಲೋವಾಕಿಯದ ಜೆಸ್ಸಿಕಾರನ್ನು 5-0 ಅಂತರದಿಂದ ಸುಲಭವಾಗಿ ಸೋಲಿಸಿದರು. ಅರುಂಧತಿ ಫೈನಲ್ ನಲ್ಲಿ ಹಾಲಿ ವಿಶ್ವ ಹಾಗೂ ಏಶ್ಯನ್ ಚಾಂಪಿಯನ್ ಚೀನಾದ ಯಾಂಗ್ ಲಿಯು ಅವರನ್ನು ಎದುರಿಸಲಿದ್ದಾರೆ.
ಅಲ್ಜೇರಿಯದ ಖೆನೌಸ್ಸಿ ಕಮೆಲ್ರನ್ನು 5-0 ಅಂತರದ ಒಮ್ಮತದ ತೀರ್ಪಿನಲ್ಲಿ ಮಣಿಸಿದ ಬರುನ್ ಸಿಂಗ್(48ಕೆಜಿ) ಟೂರ್ನಿಯಲ್ಲಿ ಭಾರತ ತನ್ನ ಪ್ರಾಬಲ್ಯ ಮುಂದುವರಿಸಲು ನೆರವಾದರು. ಕ್ವಾರ್ಟರ್ ಫೈನಲ್ ನಲ್ಲಿ ಬೈ ಪಡೆದಿದ್ದ ಬರುನ್ ಸಿಂಗ ಟೂರ್ನಿಯಲ್ಲಿ ಮೊದಲ ಪಂದ್ಯ ಆಡಿದರು. ತಾಂತ್ರಿಕ ಸಾಮರ್ಥ್ಯದ ಜೊತೆಗೆ ಚುರುಕಾದ ಚಲನೆಯ ಮೂಲಕ ಎದುರಾಳಿಯನ್ನು ಒಮ್ಮತದ ತೀರ್ಪಿನಲ್ಲಿ ಸೋಲಿಸಿದರು.
ಸಚಿನ್(57ಕೆಜಿ)ಉಕ್ರೇನ್ನ ಅಬ್ದುರೈಮೊವ್ರನ್ನು 4-1 ಅಂತರದಿಂದ ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಉಝ್ಬೇಕಿಸ್ತಾನದ ಶಖೋಡ್ರನ್ನು ಎದುರಿಸಲಿದ್ದಾರೆ.
ಸೆಮಿ ಫೈನಲ್ ಎದುರಾಳಿ ಜಾರ್ಜಿಯದ ಗುರುಲಿ ಲಾಶಾ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ರಜತ್(67 ಕೆಜಿ)ಫೈನಲ್ ಗೆ ಪ್ರವೇಶಿಸಿದರು.
ಸ್ಟ್ರಾಂಡ್ಜಾ ಸ್ಮಾರಕ ಟೂರ್ನಿ ಯುರೋಪಿನ ಹಳೆಯ ಅಂತರ್ರಾಷ್ಟ್ರೀಯ ಕ್ರೀಡಾ ಸ್ಪರ್ಧಾವಳಿಯಾಗಿದ್ದು, 30 ದೇಶಗಳ 300ಕ್ಕೂ ಬಾಕ್ಸರ್ ಗಳು ಭಾಗವಹಿಸುತ್ತಿದ್ದಾರೆ.