ಸರಿಯಾದ ನೆಟ್ ರನ್ ರೇಟ್ ಮಾಹಿತಿಯಿಲ್ಲದೆ ಪಂದ್ಯ ಕೈಚೆಲ್ಲಿದ ಅಫ್ಘಾನಿಸ್ತಾನ!

Update: 2023-09-06 18:27 GMT

Photo: twitter/SharyOfficial

ಲಾಹೋರ್: ಲಾಹೋರ್ನಲ್ಲಿ ಮಂಗಳವಾರ ನಡೆದ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ನಡುವಿನ ಏಶ್ಯ ಕಪ್ ಪಂದ್ಯವು ರೋಮಾಂಚಕ ಮುಕ್ತಾಯವನ್ನು ಕಂಡಿತು. 292 ರನ್ಗಳ ಗೆಲುವಿನ ಗುರಿಯತ್ತ ಅಫ್ಘಾನಿಸ್ತಾನ ಬಂದಿತ್ತಾದರೂ ಅಂತಿಮ ಕ್ಷಣಗಳಲ್ಲಿ ಎಡವಿತು ಹಾಗೂ ಶ್ರೀಲಂಕಾಗೆ 2 ರನ್ಗಳ ವಿಜಯವನ್ನು ಬಿಟ್ಟುಕೊಟ್ಟಿತು.

ಇದರೊಂದಿಗೆ, ನೆಟ್ ರನ್ ರೇಟ್ ಆಧಾರದಲ್ಲಿ ಶ್ರೀಲಂಕಾ ಸೂಪರ್ 4 ಹಂತವನ್ನು ತಲುಪಿತು.

ಆದರೆ, ಈಗ ಅಲ್ಲೊಂದು ವಿವಾದ ತಲೆದೋರಿದೆ. ತಮಗೆ ನೆಟ್ ರನ್ ರೇಟ್ನ ಲೆಕ್ಕಾಚಾರಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಲಾಗಿಲ್ಲ ಎಂದು ಅಫ್ಘಾನಿಸ್ತಾನ ತಂಡದ ಆಡಳಿತ ಆರೋಪಿಸಿದೆ.

ಸೂಪರ್ 4 ಹಂತಕ್ಕೆ ಏರಬೇಕಾದರೆ, ವಿಜಯದ ಗುರಿಯಾದ 292 ರನ್ಗಳನ್ನು 37.1 ಓವರ್ಗಳಲ್ಲಿ ತಲುಪಬೇಕು ಎಂಬುದಾಗಿ ಅಫ್ಘಾನಿಸ್ತಾನಕ್ಕೆ ಪಂದ್ಯಾವಳಿಯ ಸಂಘಟಕರು ತಿಳಿಸಿದ್ದರು. 37ನೇ ಓವರ್ನ ಕೊನೆಯಲ್ಲಿ ಅಫ್ಘಾನಿಸ್ತಾನವು 8 ವಿಕೆಟ್ಗಳ ನಷ್ಟಕ್ಕೆ 289 ರನ್ಗಳನ್ನು ಗಳಿಸಿತ್ತು. ಆಗಲೂ ಅದು ಗೆಲುವಿನ ದಾರಿಯಲ್ಲೇ ಇತ್ತು. ಆದರೆ, ಮುಂದಿನ ಎಸೆತದಲ್ಲಿ ಮುಜೀಬುರ್ರಹ್ಮಾನ್ ಲಾಂಗ್ಆನ್ನಲ್ಲಿ ಕ್ಯಾಚ್ ನೀಡಿದರು. ಆಗ ತಂಡವು ಪಂದ್ಯಾವಳಿಯಿಂದ ಹೊರಬಿತ್ತೆಂದು ತಿಳಿದು ನಾನ್-ಸ್ಟ್ರೈಕರ್ ತುದಿಯಲ್ಲಿದ್ದ ರಶೀದ್ ಖಾನ್ ನಿರಾಶೆಯಿಂದ ಮೊಣಕಾಲಿನ ಮೇಲೆ ಕುಸಿದು ಕುಳಿತರು.

ಆದರೆ, ನಿಜವಾದ ಲೆಕ್ಕಾಚಾರ ಬೇರೆಯಾಗಿತ್ತು ಎನ್ನುವುದು ಅವರಿಗೆ ತಿಳಿದಿರಲಿಲ್ಲ. ಒಂದು ವೇಳೆ, ಅಫ್ಘಾನಿಸ್ತಾನವು 37.2 ಓವರ್ಗಳಲ್ಲಿ 293, 37.3 ಓವರ್ಗಳಲ್ಲಿ 294, 37.5 ಓವರ್ಗಳಲ್ಲಿ 295, 38 ಓವರ್ಗಳಲ್ಲಿ 296 ಅಥವಾ 38.1 ಓವರ್ಗಳಲ್ಲಿ 297 ರನ್ಗಳನ್ನು ಮಾಡಿದ್ದರೂ ಶ್ರೀಲಂಕಾಗಿಂತ ಹೆಚ್ಚಿನ ನೆಟ್ ರನ್ ರೇಟ್ ಗಳಿಸುತ್ತಿತ್ತು ಹಾಗೂ ಆ ಮೂಲಕ ಸೂಪರ್ 4 ಹಂತವನ್ನು ತಲುಪುತ್ತಿತ್ತು.

ಮುಂದಿನ ಬ್ಯಾಟರ್ ಫಝಲ್ಹಕ್ ಫಾರೂಕಿ ದೊಡ್ಡ ಹೊಡೆತವೊಂದನ್ನು ಬಾರಿಸಿದ್ದರೆ ಅಥವಾ ರಶೀದ್ ಖಾನ್ಗೆ ಸ್ಟ್ರೈಕ್ ನೀಡಿದ್ದರೆ ಅಫ್ಘಾನಿಸ್ತಾನವು ಪಂದ್ಯವನ್ನು ಸುಲಭವಾಗಿ ಗೆಲ್ಲುವ ಸಾಧ್ಯತೆಯಿತ್ತು.

ಆದರೆ, ಫಝಲ್ಹಕ್ ಮುಂದಿನ ಎರಡು ಎಸೆತಗಳನ್ನು ರಕ್ಷಣಾತ್ಮಕವಾಗಿ ಆಡಲು ಹೋಗಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಅಂತಿಮವಾಗಿ ಅಫ್ಘಾನಿಸ್ತಾನವು 37.4 ಒವರ್ಗಳಲ್ಲಿ 289 ರನ್ಗಳಿಗೆ ಆಲೌಟ್ ಆಯಿತು.

ನೆಟ್ ರನ್ ರೇಟ್ ಲೆಕ್ಕಾಚಾರಗಳ ಮಾಹಿತಿ ನಮಗೆ ಕೊಡಲಿಲ್ಲ: ಪ್ರಧಾನ ಕೋಚ್

ಅಗತ್ಯ ನೆಟ್ ರನ್ ರೇಟ್ನ ಸರಿಯಾದ ಲೆಕ್ಕಾಚಾರಗಳ ಮಾಹಿತಿಯನ್ನು ಪಂದ್ಯದ ಅಧಿಕಾರಿಗಳು ನಮಗೆ ಕೊಡಲಿಲ್ಲ ಎಂದು ಪಂದ್ಯದ ಬಳಿಕ ಅಫ್ಘಾನಿಸ್ತಾನ ತಂಡದ ಪ್ರಧಾನ ಕೋಚ್ ಜೊನಾತನ್ ಟ್ರಾಟ್ ಹೇಳಿದರು.

“ಆ ಎಲ್ಲಾ ಲೆಕ್ಕಾಚಾರಗಳನ್ನು ಅವರು ನಮಗೆ ಹೇಳಿರಲಿಲ್ಲ. ಅವರು ನಮಗೆ ಹೇಳಿದ್ದು ಇಷ್ಟೆ- ನಾವು 37.1 ಓವರ್ಗಳಲ್ಲಿ ಜಯ ಗಳಿಸಬೇಕು. 295 ಅಥವಾ 297 ರನ್ಗಳನ್ನು ನಾವು ಎಷ್ಟು ಓವರ್ಗಳಲ್ಲಿ ಮಾಡಬಹುದು ಎಂಬುದನ್ನು ಅವರು ಹೇಳಿರಲಿಲ್ಲ. ನಾವು 38.1 ಓವರ್ಗಳಲ್ಲೂ ಗೆಲ್ಲಬಹುದು ಎನ್ನುವುದನ್ನು ಅವರು ನಮಗೆ ಹೇಳಿರಲಿಲ್ಲ’’ ಎಂದು ಟ್ರಾಟ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News