ಎರಡು ದಶಕಗಳ ಬಳಿಕ ಮತ್ತೆ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ಎದುರಾಳಿ!

Update: 2023-11-16 17:04 GMT

Photo : livemint.com

ಕೋಲ್ಕತಾ: ವಿಶ್ವಕಪ್ ಕ್ರಿಕೆಟ್‌ನ ಎರಡನೇ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದ ಆಸ್ಟ್ರೇಲಿಯಾ ತಂಡ ಫೈನಲ್ ಪ್ರವೇಶ ಮಾಡಿದೆ. ನ.19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಆತಿಥೇಯ ಭಾರತ ತಂಡವನ್ನು ಎದುರಿಸಲಿದೆ. ಆ ಮೂಲಕ ಎರಡು ದಶಕಗಳ ಬಳಿಕ ವಿಶ್ವಕಪ್ ಫೈನಲ್‌ನಲ್ಲಿ ಭಾರತ – ಆಸ್ಟ್ರೇಲಿಯಾ ಸೆಣಸಲಿದೆ.

7 ಬಾರಿ ವಿಶ್ವಕಪ್ ಫೈನಲ್ ಗೆ ತಲುಪಿರುವ ಆಸ್ಟ್ರೇಲಿಯಾ ತಂಡ, 5 ಬಾರಿ ಜಯಗಳಿಸಿದೆ. 3 ಬಾರಿ ಫೈನಲ್ ತಲುಪಿರುವ ಭಾರತ 2 ಬಾರಿ ವಿಶ್ವಕಪ್‌ ಎತ್ತಿ ಹಿಡಿದಿದೆ.

ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ನಡೆದ 2003ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ಎದುರಿಸಿತ್ತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ್ದ ಸೌರವ್ ಗಂಗೂಲಿ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿ ಕೈಸುಟ್ಟುಕೊಂಡಿತ್ತು. ಭಾರತೀಯ ಬೌಲರ್ ಗಳನ್ನು ದಂಡಿಸಿದ್ದ ರಿಕಿ ಪಾಂಟಿಂಗ್ ಬಳಗ 360 ರನ್ ಗಳ ಗುರಿ ನೀಡಿತ್ತು. ರಿಕಿ ಪಾಂಟಿಂಗ್ 121 ಎಸೆತಗಳಲ್ಲಿ 140 ರನ್ ಗಳಿಸಿ ಅಜೇಯರಾಗಿ ಕ್ರೀಸ್‌ನಲ್ಲಿದ್ದರು. ಈ ಪಂದ್ಯದಲ್ಲಿ 39.2 ಓವರ್ ಗಳಲ್ಲಿ 234 ರನ್ ಗಳಿಗೆ ಆಲೌಟ್ ಆಗಿ, 125 ರನ್ ಗಳಿಂದ ಭಾರತ ತಂಡ ಸೋತಿತ್ತು.

ಭಾರತದ ಪರ ವೀರೇಂದ್ರ ಸೆಹ್ವಾಗ್‌ 84 ರನ್‌ ಗಳಿಸಿ ರನೌಟ್‌ ಆದಾಗ ಪಂದ್ಯ ಭಾರತದ ಕೈತಪ್ಪಿ ಹೋಗಿತ್ತು. ತಾರಾ ಬ್ಯಾಟರ್‌ ಆಗಿದ್ದ ಸಚಿನ್‌ ತೆಂಡೂಲ್ಕರ್‌ ಕೇವಲ 4 ರನ್ ಗಳಿಸಿದ್ದರು. ನಾಯಕ ಸೌರವ್‌ ಗಂಗೂಲಿ 24 ರನ್‌ ಗಳಿಸಿ ಬ್ರೆಟ್‌ ಲೀ ಗೆ ವಿಕೆಟ್‌ ಒಪ್ಪಿಸಿದ್ದರು. ಗೋಡೆಯಂತೆ ಕ್ರೀಸ್‌ ಗೆ ಅಂಟಿಕೊಂಡು ಆಟವಾಡಿದ್ದ ರಾಹುಲ್‌ ದ್ರಾವಿಡ್‌ 47 ರನ್‌ ಗಳಿಸಿ ಔಟ್‌ ಆಗಿದ್ದರು. ಯುವರಾಜ್‌ ಸಿಂಗ್‌ 24, ದಿನೇಶ್‌ ಮೋಂಗ್ಯಾ 12 ರನ್‌ ಗಳಿಸಿದ್ದು ಬಿಟ್ಟರೆ, ಬೇರೆ ಯಾವ ಬ್ಯಾಟರ್‌ಗಳು ಎರಡಂಕಿಯ ರನ್‌ ಗಳಿಸಿರಲಿಲ್ಲ. ಈ ಪಂದ್ಯದಲ್ಲಿ ಭಾರತದ ಸ್ಪಿನ್ನರ್‌ ಹರ್‌ಭಜನ್‌ ಸಿಂಗ್‌ ಮಾತ್ರ 2 ವಿಕೆಟ್‌ ಪಡೆದಿದ್ದರು. 10 ಓವರ್‌ ಗಳಲ್ಲಿ 87 ರನ್‌ ನೀಡಿದ್ದ ಜಾವ್‌ಗಲ್‌ ಶ್ರೀನಾಥ್‌ ಫೈನಲ್‌ ಪಂದ್ಯದ ದುಬಾರಿ ಬೌಲರ್‌ ಆಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News