ಸಬಲೆಂಕಾಗೆ ಶಾಕ್ ನೀಡಿ ಸೆಮಿ ಫೈನಲ್ ತಲುಪಿದ ಆಂಡ್ರೀವಾ

Update: 2024-06-06 16:53 GMT

ಮಿರ್ರಾ ಆಂಡ್ರೀವಾ | PC : NDTV 

ಪ್ಯಾರಿಸ್: ಎರಡನೇ ಶ್ರೇಯಾಂಕದ ಅರಿನಾ ಸಬಲೆಂಕಾರನ್ನು ಸೋಲಿಸಿ ಶಾಕ್ ನೀಡಿರುವ ರಶ್ಯದ 17ರ ಹರೆಯದ ಆಟಗಾರ್ತಿ ಮಿರ್ರಾ ಆಂಡ್ರೀವಾ ಫ್ರೆಂಚ್ ಓಪನ್ ನಲ್ಲಿ ಸೆಮಿ ಫೈನಲ್ ಗೆ ಪ್ರವೇಶಿಸಿದ್ದಾರೆ.

ಬುಧವಾರ ತಡರಾತ್ರಿ 2 ಗಂಟೆ, 29 ನಿಮಿಷಗಳ ಕಾಲ ನಡೆದ ಅಂತಿಮ-8ರ ಹಣಾಹಣಿಯಲ್ಲಿ ವಿಶ್ವದ ನಂ.38ನೇ ಆಟಗಾರ್ತಿ ಆಂಡ್ರೀವಾ ಅವರು ಬೆಲಾರುಸ್ ಆಟಗಾರ್ತಿ ಸಬಲೆಂಕಾರನ್ನು 6-7(5), 6-4, 6-4 ಸೆಟ್ ಗಳ ಅಂತರದಿಂದ ಮಣಿಸಿದರು. ಆಂಡ್ರೀವಾ ಇದೇ ಮೊದಲ ಬಾರಿ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಡಿದ್ದರು.

ಮಾಜಿ ವಿಂಬಲ್ಡನ್ ಚಾಂಪಿಯನ್ ಕೊಂಚಿಟಾ ಮಾರ್ಟಿನೆಝ್ ನಿಂದ ತರಬೇತಿ ಪಡೆದಿರುವ ಆಂಡ್ರೀವಾ ಶ್ರೇಷ್ಠ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದಾರೆ.

ಗ್ರ್ಯಾನ್ಸ್ಲಾಮ್ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರ್ತಿಯರ ಪೈಕಿ ಒಬ್ಬರಾಗಿರುವ ವಿಶ್ವದ ನಂ.2ನೇ ಆಟಗಾರ್ತಿ ಸಬಲೆಂಕಾ ಅವರು ಪಂದ್ಯದ ವೇಳೆ ಆರೋಗ್ಯ ಸಮಸ್ಯೆಯನ್ನು ಎದುರಿಸಿದರು. ಟೆನಿಸ್ ಕೋರ್ಟ್ನೊಳಗೆ ವೈದ್ಯರಿಂದ ಉಪಚಾರ ಪಡೆದರು.

ಆಂಡ್ರೀವಾ ಸೆಮಿ ಫೈನಲ್ ಪಂದ್ಯದಲ್ಲಿ ಇಟಲಿಯ ಜಾಸ್ಮಿನ್ ಪಯೋಲಿನಿ ಅವರನ್ನು ಎದುರಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News