ಏಷ್ಯಾ ಕಪ್ ಫುಟ್ಬಾಲ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸೋಲು
ಬೆಂಗಳೂರು: ಏಷ್ಯಾಕಪ್-2024ರ ಆರಂಭಿಕ ಪಂದ್ಯದಲ್ಲಿ ಭಾರತ ಫುಟ್ಬಾಲ್ ತಂಡ, ವಿಶ್ವ ರ್ಯಾಂಕಿಂಗ್ ನಲ್ಲಿ ತಮಗಿಂತ 77 ಸ್ಥಾನ ಮುಂದಿರುವ ಆಸ್ಟ್ರೇಲಿಯಾ ವಿರುದ್ಧ 0-2 ಗೋಲುಗಳ ಅಂತರದಿಂದ ಪರಾಭವಗೊಂಡಿದೆ. ಆದರೆ ಅಲ್ ರಿಯಾನ್ ನ ಅಹ್ಮದ್ ಬಿನ್ ಅಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡದ ಚೇತೋಹಾರಿ ಪ್ರದರ್ಶನ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಡೆನ್ಮಾರ್ಕ್ ವಿರುದ್ಧ ಜಯ ಸಾಧಿಸಿದ ಮತ್ತು ಹಾಲಿ ಚಾಂಪಿಯನ್ ಅರ್ಜೆಂಟೀನಾಗೆ 2022ರ ವಿಶ್ವಕಪ್ ನಲ್ಲಿ ಕಠಿಣ ಸ್ಪರ್ಧೆ ನೀಡಿದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ 50 ನಿಮಿಷ ಕಾಲ ಸಮಬಲ ಸಾಧಿಸಿತ್ತು. ಇದು ಕಳೆದ ಒಂದು ದಶಕದಲ್ಲಿ ಭಾರತೀಯ ಫುಟ್ಬಾಲ್ ನ ಸಾಧನೆಯನ್ನು ಬಿಂಬಿಸುತ್ತದೆ. 2011ರ ಏಷ್ಯನ್ ಕಪ್ ಅಭಿಯಾನದಲ್ಲಿ ಇಂಥದ್ದೇ ಪಂದ್ಯದಲ್ಲಿ ಭಾರತ ಮಧ್ಯಂತರದ ವೇಳೆಗೇ 3 ಗೋಲುಗಳನ್ನು ಬಿಟ್ಟುಕೊಟ್ಟಿತ್ತು. 4 ಗೋಲುಗಳಿಂದ ಆಸ್ಟ್ರೇಲಿಯಾ ಜಯ ಸಾಧಿಸಿತ್ತು.
ಆದರೆ ಮೊದಲ 45 ನಿಮಿಷಗಳಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿತು. ಭಾರತದ ರಕ್ಷಣಾ ಆಟಗಾರರ ವಿರುದ್ಧ ಆಸ್ಟ್ರೇಲಿಯಾ ಪಂದ್ಯವಿಡೀ ಪ್ರಾಬಲ್ಯ ಮೆರೆದರೂ, ಭಾರತೀಯ ಆಟಗಾರರು ಎರಡು ಗೋಲುಗಳನ್ನಷ್ಟೇ ಬಿಟ್ಟುಕೊಟ್ಟರು. 16ನೇ ನಿಮಿಷದಲ್ಲಿ ಭಾರತ ಗೋಲು ಗಳಿಸುವ ಅವಕಾಶ ಪಡೆಯಿತು. ಸುನೀಲ್ ಚೇಟ್ರಿ ಫ್ರೀ ಹೆಡರ್ ಅನ್ನು ಗುರಿಯತ್ತ ಹೊಡೆದರೂ, ಆಸೀಸ್ ಕೀಪರ್ ಮ್ಯಾಟ್ ರ್ಯಾನ್ ಇದನ್ನು ತಡೆಯುವಲ್ಲಿ ಯಶಸ್ವಿಯಾದರು. ಆದರೆ ದ್ವಿತೀಯಾರ್ಧದಲ್ಲಿ ಭಾರತ ತಂಡದ ನಾಯಕ ಗುರುಪ್ರೀತ್ ಸಿಂಗ್ ಸಂಧು ಮಾಡಿದ ತಪ್ಪು ಜಾಕ್ಸನ್ ಇರ್ವಿನ್ಗೆ ಮೊದಲ ಗೋಲು ಹೊಡೆಯಲು ಅವಕಾಶ ಮಾಡಿಕೊಟ್ಟಿತು.
ಬಳಿಕ ಜೋರ್ಡನ್ ಬಾಸ್ 73ನೇ ನಿಮಿಷದಲ್ಲಿ ಎರಡನೇ ಗೋಲು ಬಾರಿಸಿ, ಪಂದ್ಯ ಕೊನೆಗೊಳಿಸಿದರು.