ಏಶ್ಯನ್ ಗೇಮ್ಸ್| ಕುದುರೆ ಸವಾರಿ ವೈಯಕ್ತಿಕ ಡ್ರೆಸ್ಸೇಜ್: ಅನೂಶ್ ಅಗರ್ವಾಲಗೆ ಕಂಚು
ಹಾಂಗ್‍ಝೌ (ಚೀನಾ): ಚೀನಾದ ಹಾಂಗ್‍ಝೌನಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ ನಲ್ಲಿ ಗುರುವಾರ ಭಾರತದ ಅನೂಶ್ ಅಗರ್ವಾಲ ಕುದುರೆ ಸವಾರಿ ವೈಯಕ್ತಿಕ ಡ್ರೆಸ್ಸೇಜ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಅಮೋಘ ಪ್ರದರ್ಶನ ನೀಡಿದ ಅವರು, ತನ್ನ ‘ಎಟ್ರೊ’ ಹೆಸರಿನ ಕುದುರೆಯ ಮೇಲೆ ಸವಾರಿ ಮಾಡಿ 73.030 ಅಂಕಗಳನ್ನು ಗಳಿಸಿದರು. ಇದರೊಂದಿಗೆ ಅವರು ಕಂಚಿನ ಪದಕ ಗೆದ್ದರು. ಇದು ಕುದುರೆ ಸವಾರಿಯಲ್ಲಿ ಭಾರತದ ಮೊದಲ ವೈಯಕ್ತಿಕ ಪದಕವಾಗಿದೆ.
ಇದು ಈ ಏಶ್ಯನ್ ಗೇಮ್ಸ್‍ನಲ್ಲಿ ಅವರ ಎರಡನೇ ಪದಕವಾಗಿದೆ. ಮಂಗಳವಾರ ನಡೆದ ಕುದುರೆ ಸವಾರಿ ತಂಡ ಡ್ರೆಸ್ಸೇಜ್ ವಿಭಾಗದಲ್ಲಿ ಅವರನ್ನೊಳಗೊಂಡ ಭಾರತ ತಂಡವು ಚಿನ್ನದ ಪದಕ ಗೆದ್ದಿತ್ತು.
ಮಲೇಶ್ಯದ ಬಿನ್ ಮುಹಮ್ಮದ್ ಫಾರ್ತಿಲ್ ಮುಹಮ್ಮದ್ ಖಾಬಿಲ್ ಅಂಬಕ್ 75.780 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದರು. ಹಾಂಕಾಂಗ್‍ನ ಜಾಕೆಲಿನ್ ವಿಂಗ್ ಯಿಂಗ್ ಸಿಯು 73.450 ಅಂಕಗಳೊಂದಿಗೆ ಬೆಳ್ಳಿ ಗೆದ್ದರು.
ಬುಧವಾರ ನಡೆದ ಅರ್ಹತಾ ಸುತ್ತಿನಲ್ಲಿ ಪ್ರಥಮ ಸ್ಥಾನದಲ್ಲಿದ್ದ ಹೃದಯ್ ವಿಪುಲ್ ಛೇಡ ಫೈನಲ್‍ನಲ್ಲಿ ಸ್ಪರ್ಧೆಯಿಂದ ಹೊರಬಿದ್ದರು.