ಏಶ್ಯನ್ ಗೇಮ್ಸ್: ಟಿ-20 ಪಂದ್ಯದಲ್ಲಿ 314 ರನ್ ಗಳಿಸಿ ದಾಖಲೆ ಬರೆದ ನೇಪಾಳ
ಹ್ಯಾಂಗ್ ಝೌ: ಚೀನಾದ ಹ್ಯಾಂಗ್ ಝೌನಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ ಕ್ರೀಡಾಕೂಟದ ಟಿ-20 ಪಂದ್ಯದಲ್ಲಿ ನೇಪಾಳ ಪುರುಷರ ಕ್ರಿಕೆಟ್ ತಂಡವು ಮೂರು ವಿಕೆಟ್ ಕಳೆದುಕೊಂಡು 314 ರನ್ ಗಳಿಸುವ ಮೂಲಕ ಟಿ-20 ಮಾದರಿಯ ಕ್ರಿಕೆಟ್ ನಲ್ಲಿ ವಿಶ್ವ ದಾಖಲೆ ಬರೆದಿದೆ. ಈ ಪಂದ್ಯವು ಒಂದು ಅತಿ ವೇಗದ ಅರ್ಧ ಶತಕ ಹಾಗೂ ಒಂದು ಅತಿ ವೇಗದ ಶತಕ ಸಾಧನೆಗೂ ಸಾಕ್ಷಿಯಾಯಿತು. ಈ ಪಂದ್ಯವು ನೇಪಾಳ ಹಾಗೂ ಮಂಗೋಲಿಯಾ ತಂಡದ ನಡುವೆ ನಡೆಯಿತು. ಇದಕ್ಕೂ ಮುನ್ನ 2019ರಲ್ಲಿ ಐರ್ಲೆಂಡ್ ತಂಡದ ವಿರುದ್ಧ ಅಫ‍್ಘಾನಿಸ್ತಾನ ತಂಡವು ಮೂರು ವಿಕೆಟ್ ಕಳೆದುಕೊಂಡು 278 ರನ್ ಗಳಿಸಿದ್ದುದೆ ಇದುವರೆಗಿನ ವಿಶ್ವ ದಾಖಲೆ ಮೊತ್ತವಾಗಿತ್ತು.
ಈ ದಾಖಲೆ ಮಾತ್ರವಲ್ಲದೆ ನೇಪಾಳದ ಬ್ಯಾಟರ್ ಗಳು ತಮ್ಮ ಇನಿಂಗ್ಸ್ ನಲ್ಲಿ ಒಟ್ಟು 26 ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ಯಾವುದೇ ಮಾದರಿಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯ ಶ್ರೇಯವನ್ನೂ ತಮ್ಮ ಮುಡಿಗೇರಿಸಿಕೊಂಡರು. ಇದರಿಂದ 2019ರಲ್ಲಿ ಮೂರು ವಿಕೆಟ್ ಕಳೆದುಕೊಂಡು 278 ರನ್ ಗಳಿಸಿದ್ದ ಅಫ್ಘಾನಿಸ್ತಾನ ತಂಡವು ಆ ಪಂದ್ಯದಲ್ಲಿ ಸಿಡಿಸಿದ್ದ 22 ಸಿಕ್ಸರ್ ಗಳ ದಾಖಲೆಯನ್ನೂ ಪುಡಿಗಟ್ಟಿದರು.
ನೇಪಾಳ ತಂಡದ ಆಲ್ ರೌಂಡರ್ ದಿಪೇಂದ್ರ ಸಿಂಗ್ ಐರೀ ಕೇವಲ 9 ಬಾಲ್ ಗಳಲ್ಲಿ ಅರ್ಧ ಶತಕ ಪೂರೈಸಿದರು. ಆ ಮೂಲಕ ಇದುವರೆಗೆ ಟಿ-20 ಮಾದರಿ ಕ್ರಿಕೆಟ್ ನಲ್ಲಿ ಕೇವಲ 12 ಬಾಲ್ ನಲ್ಲಿ ಅರ್ಧ ಶತಕ ಸಿಡಿಸಿದ್ದ ಭಾರತೀಯ ಆಟಗಾರ ಯುವರಾಜ್ ಸಿಂಗ್ ಸಾಧನೆಯನ್ನು ಅಳಿಸಿ ಹಾಕಿದರು. ಹಾಗೆಯೇ ಕುಶಾಲ್ ಮಲ್ಲಾ ಕೇವಲ 34 ಬಾಲ್ ಗಳಲ್ಲಿ ತಮ್ಮ ಶತಕ ಪೂರೈಸಿದರು. ಆ ಮೂಲಕ ರೋಹಿತ್ ಶರ್ಮ ಹಾಗೂ ಮಿಲ್ಲರ್ ಹೆಸರಿನಲ್ಲಿದ್ದ 35 ಬಾಲ್ ಗಳಲ್ಲಿ ಶತಕ ಸಿಡಿಸಿದ ದಾಖಲೆಯನ್ನು ಹಿಂದಿಕ್ಕಿದರು.
ದಿಪೇಂದ್ರ ಸಿಂಗ್ ಐರೀ ಹಾಗೂ ಕುಶಾಲ್ ಮಲ್ಲಾ ಕ್ರಮವಾಗಿ 10 ಬಾಲ್ ಗಳಲ್ಲಿ ಅಜೇಯ 52 ರನ್ ಹಾಗೂ 50 ಬಾಲ್ ಗಳಲ್ಲಿ 137 ರನ್ ಗಳಿಸಿದರು.
ವಾರ್ತಾಭಾರತಿ ಓದುಗರಿಗೆ ಶುಭಸುದ್ದಿ: ನಿಮ್ಮ ನೆಚ್ಚಿನ VB ಈಗ ವಾಟ್ಸ್ ಆ್ಯಪ್ ಚಾನೆಲ್ ನಲ್ಲೂ ಲಭ್ಯ
ಇಲ್ಲಿ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್‌ಡೇಟ್ ಪಡೆಯಿರಿ