ಏಶ್ಯನ್ ಗೇಮ್ಸ್ : ಫಿಲಿಪೈನ್ಸ್ ನ ಸ್ಕೇಟಿಂಗ್ ಪಟುವಿಗೆ 9 ವಯಸ್ಸು!
ಹ್ಯಾಂಗ್ ಝೌ: ಆಕೆ ಬಹುಶಃ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರಬೇಕಿತ್ತು. ಆದರೆ, ಒಂಬತ್ತು ವರ್ಷದ ಮೇಝೆಲ್ ಪ್ಯಾರಿಸ್ ಅಲೆಗಾಡೊ ಸೋಮವಾರ ಫಿಲಿಪೈನ್ಸ್ ತಂಡದ ಪರವಾಗಿ ಸ್ಕೇಟಿಂಗ್ ಪಂದ್ಯದಲ್ಲಿ ಭಾಗವಹಿಸುವ ಮೂಲಕ ದಾಖಲೆ ನಿರ್ಮಿಸಿದ್ದಾಳೆ. ಹ್ಯಾಂಗ್ ಝೌನಲ್ಲಿ ನಡೆಯುತ್ತಿರುವ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಅತ್ಯಂತ ಕಿರಿಯ ಕ್ರೀಡಾಪಟುವಾಗಿರುವ ಮೇಝೆಲ್, ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಲು ಅರ್ಹತೆ ಗಳಿಸಿದ್ದಲ್ಲದೆ, ಎಂಟು ಮಂದಿ ಸ್ಪರ್ಧಾಳುಗಳ ಪೈಕಿ ಏಳನೆಯವಳಾಗಿ ತನ್ನ ಗುರಿಯನ್ನು ಪೂರೈಸುವ ಮೂಲಕ ಕ್ರೀಡಾಭಿಮಾನಿಗಳ ಹುಬ್ಬೇರುವಂತೆ ಮಾಡಿದ್ದಾಳೆ. ಈ ಸ್ಪರ್ಧೆಯಲ್ಲಿ 15 ವರ್ಷದ ಜಪಾನ್ ಸ್ಪರ್ಧಾಳು ಹಿನಾನ್ ಕುಸಾಕಿ ಚಿನ್ನದ ಪದಕವನ್ನು ಜಯಿಸಿದರು ಎಂದು ndtv.com ವರದಿ ಮಾಡಿದೆ.
ಕ್ಯಾಲಿಫೋರ್ನಿಯಾ ಮೂಲದ ಮೇಝೆಲ್ ಮಾರ್ಚ್ ತಿಂಗಳಲ್ಲಿ ಒಂಬತ್ತನೆ ವಯಸ್ಸು ಪೂರೈಸಿದ್ದು, ಆಕೆ ತನ್ನ ಸಹೋದರ ಸಂಬಂಧಿಯೊಬ್ಬರ ಮನೆಯಲ್ಲಿದ್ದಾಗ ತನ್ನ ಸಹೋದರ ಸ್ಕೇಟಿಂಗ್ ಮಾಡುತ್ತಿದ್ದುದನ್ನು ಕಂಡು ಅದರೆಡೆಗೆ ಆಕರ್ಷಿತಳಾದೆ ಎಂದು ಹೇಳಿಕೊಂಡಿದ್ದಾಳೆ.
“ನಾನೂ ಪ್ರಯತ್ನಿಸಲೆ, ನಾನೂ ಪ್ರಯತ್ನಿಸಲೆ ಎಂದು ಕೇಳುತ್ತಿದ್ದೆ. ನಾನು ಸ್ಕೇಟಿಂಗ್ ಬೋರ್ಡ್ ಮೇಲೆ ಕಾಲಿಡುತ್ತಿದ್ದಂತೆಯೇ ಅದನ್ನು ಇಷ್ಟಪಡಲು ಪ್ರಾರಂಭಿಸಿದೆ” ಎಂದು ಮೇಝೆಲ್ ತಿಳಿಸಿದ್ದಾಳೆ.
“ನಿಮ್ಮ ಸಹೋದರ ಈಗಲೂ ಸ್ಕೇಟಿಂಗ್ ಮಾಡುತ್ತಾನಾ?” ಎಂಬ ಪ್ರಶ್ನೆಗೆ ಉತ್ತರಿಸಿರುವ ಆಕೆ, “ಇಲ್ಲ. ನಾನೀಗ ಆತನಿಗಿಂತ ಚೆನ್ನಾಗಿ ಸ್ಕೇಟಿಂಗ್ ಮಾಡುತ್ತೇನೆ ಎಂಬ ಕಾರಣಕ್ಕೆ ಆತ ಅದನ್ನು ನಿಲ್ಲಿಸಿದ್ದಾನೆ” ಎಂದು ಉತ್ತರಿಸಿದ್ದಾಳೆ.