ಮೆಲ್ಬೋರ್ನ್ ಟೆಸ್ಟ್‌ಗೆ ಆಸ್ಟ್ರೇಲಿಯ ತಂಡ ಪ್ರಕಟ, ವೇಗಿ ಮೋರಿಸ್ ಹೊರಕ್ಕೆ
ಮೆಲ್ಬೋರ್ನ್: ಪಾಕಿಸ್ತಾನದ ವಿರುದ್ಧ ಮೆಲ್ಬೋರ್ನ್‌ನಲ್ಲಿ ಡಿಸೆಂಬರ್ 26ರಂದು ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯ ತಂಡವು ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದ್ದು, ಸೋಮವಾರ ವೇಗದ ಬೌಲರ್ ಲ್ಯಾನ್ಸ್ ಮೋರಿಸ್‌ರನ್ನು ಕೈಬಿಟ್ಟು ತಂಡದ ಗಾತ್ರವನ್ ಕಿರಿದಾಗಿಸಿದೆ.
ಪರ್ತ್‌ನಲ್ಲಿ ನಾಲ್ಕು ದಿನಗಳೊಳಗೆ ಆತಿಥೇಯ ತಂಡ ಪಾಕಿಸ್ತಾನವನ್ನು ಮೊದಲ ಟೆಸ್ಟ್‌ನಲ್ಲಿ 360 ರನ್‌ನಿಂದ ಮಣಿಸಿತ್ತು. ಆಫ್ ಸ್ಪಿನ್ನರ್ ನಾಥನ್ ಲಿಯೊನ್ ತನ್ನ 500ನೇ ವಿಕೆಟನ್ನು ಪಡೆದು ಗಮನ ಸೆಳೆದಿದ್ದರು.
ಮೊದಲ ಟೆಸ್ಟ್ ಪಂದ್ಯದಲ್ಲಿ 164 ರನ್ ಸಿಡಿಸಿದ್ದ ಡೇವಿಡ್ ವಾರ್ನರ್ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ತನ್ನ ಸ್ಥಾನ ಉಳಿಸಿಕೊಂಡಿದ್ದು 3 ಪಂದ್ಯಗಳ ಈ ಸರಣಿಯಲ್ಲಿ ವಾರ್ನರ್ ವಿದಾಯ ಹೇಳುವ ಸಾಧ್ಯತೆಯಿದೆ.
ಸಿಡ್ನಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯವು ನನ್ನ ಕೊನೆಯ ಪಂದ್ಯವಾಗಿರಲಿದೆ ಎಂದು 37ರ ಹರೆಯದ ವಾರ್ನರ್ ಈಗಾಗಲೇ ಸುಳಿವು ನೀಡಿದ್ದಾರೆ. ರನ್ ಬರ ಎದುರಿಸುತ್ತಿದ್ದ ವಾರ್ನರ್ ನಿವೃತ್ತಿಯಾಗಬೇಕಾದ ಒತ್ತಡದಲ್ಲಿದ್ದಾರೆ. ವಾರ್ನರ್ ವೀರೋಚಿತ ವಿದಾಯಕ್ಕೆ ಅರ್ಹರಲ್ಲ ಎಂದು ಮಾಜಿ ವೇಗದ ಬೌಲರ್ ಮಿಚೆಲ್ ಜಾನ್ಸನ್ ಇತ್ತೀಚೆಗೆ ಟೀಕಿಸುವ ಮೂಲಕ ವಾರ್ನರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಬಿಗ್ ಬಾಶ್ ಲೀಗ್‌ನಲ್ಲಿ ಆಡುವ ಅನುವು ಮಾಡಿಕೊಡಲು ಮೊರಿಸ್‌ರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ. ವೇಗದ ಬೌಲರ್‌ಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹೇಝಲ್‌ವುಡ್ ಲಭ್ಯವಿರಲಿದ್ದು, ಸ್ಕಾಟ್ ಬೋಲ್ಯಾಂಡ್ ಬದಲಿ ಆಟಗಾರನಾಗುವ ಸಾಧ್ಯತೆಯಿದೆ.
ಆಸ್ಟ್ರೇಲಿಯ ತಂಡ
ಡೇವಿಡ್ ವಾರ್ನರ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕಾರೆ, ಪ್ಯಾಟ್ ಕಮಿನ್ಸ್(ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯೊನ್, ಜೋಶ್ ಹೇಝಲ್‌ವುಡ್, ಸ್ಕಾಟ್ ಬೋಲ್ಯಾಂಡ್ ಹಾಗೂ ಕ್ಯಾಮರೂನ್ ಗ್ರೀನ್.