ಮೊದಲ ಟೆಸ್ಟ್ ಮೇಲೆ ನಿಯಂತ್ರಣ ಸಾಧಿಸಿದ ಆಸ್ಟ್ರೇಲಿಯ ; ಆತಿಥೇಯ ತಂಡಕ್ಕೆ 300 ರನ್ ಗಳ ಮುನ್ನಡೆ
ಪರ್ತ್: ಇಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರ ಆಸ್ಟ್ರೇಲಿಯ ತನ್ನ ಮುನ್ನಡೆಯನ್ನು 300 ರನ್ ಗಳಿಗೆ ಹೆಚ್ಚಿಸಿಕೊಂಡಿದೆ. ಅದು ದಿನದಾಟದ ಕೊನೆಗೆ ತನ್ನ ದ್ವಿತೀಯ ಇನಿಂಗ್ಸ್ ನಲ್ಲಿ ಎರಡು ವಿಕೆಟ್ ಗಳ ನಷ್ಟಕ್ಕೆ 84 ರನ್ ಗಳನ್ನು ಗಳಿಸಿದೆ.
ಉಸ್ಮಾನ್ ಖ್ವಾಜಾ 34ರಲ್ಲಿ ಮತ್ತು ಸ್ಟೀವ್ ಸ್ಮಿತ್ 43ರಲ್ಲಿ ಕ್ರೀಸ್ ನಲ್ಲಿದ್ದಾರೆ. ಅವರು ಮುರಿಯದ ಮೂರನೇ ವಿಕೆಟ್ ಗೆ 79 ರನ್ ಗಳ ಜೊತೆಯಾಟವಾಡಿದ್ದಾರೆ.
‘‘ನಾವೀಗ 300 ರನ್ ಗಳ ಮುನ್ನಡೆ ಹೊಂದಿದ್ದೇವೆ. ನಮ್ಮಲ್ಲಿ ಟ್ರಾವಿಸ್ ಹೆಡ್ ಮತ್ತು ಮಿಚ್ ಮಾರ್ಶ್ ಇನ್ನು ಆಡುವವರಿದ್ದಾರೆ. ಅವರಿಬ್ಬರು ಕ್ಷಿಪ್ರ ಗತಿಯಲ್ಲಿ ರನ್ ಗಳಿಸಬಹುದಾಗಿದೆ’’ ಎಂದು ಆಸ್ಟ್ರೇಲಿಯದ ವೇಗಿ ಜೋಶ್ ಹ್ಯಾಝಲ್ವುಡ್ ಹೇಳಿದ್ದಾರೆ. ಆ ಮೂಲಕ ಆಸ್ಟ್ರೇಲಿಯ ರವಿವಾರ ಇನಿಂಗ್ಸ್ ಡಿಕ್ಲೇರ್ ಮಾಡುವ ಸೂಚನೆಯನ್ನು ನೀಡಿದ್ದಾರೆ.
ನತಾನ್ ಲಯೋನ್ ಈಗ 500 ವಿಕೆಟ್ ಗಳ ಕ್ಲಬ್ ನಿಂದ ಕೇವಲ ಒಂದು ವಿಕೆಟ್ ದೂರದಲ್ಲಿದ್ದಾರೆ.
ಆಸ್ಟ್ರೇಲಿಯದ ದ್ವಿತೀಯ ಇನಿಂಗ್ಸ್ ನ ಆರಂಭ ಅಸ್ಥಿರತೆಯಿಂದ ಕೂಡಿತ್ತು. ಮೊದಲ ಇನಿಂಗ್ಸ್ ನಲ್ಲಿ ಶತಕ ಬಾರಿಸಿರುವ ಡೇವಿಡ್ ವಾರ್ನರ್ ಶೂನ್ಯಕ್ಕೆ ವಾಪಸಾದರು. ಅಗ್ರ ಕ್ರಮಾಂಕವು ಕುಸಿಯಿತು. ಒಂದು ಹಂತದಲ್ಲಿ ಆಸ್ಟ್ರೇಲಿಯವು 5 ರನ್ ಗಳನ್ನು ಗಳಿಸುವಷ್ಟರಲ್ಲಿ 2 ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಆದರೆ, ಖ್ವಾಜಾ ಮತ್ತು ಸ್ಮಿತ್ ಇನಿಂಗ್ಸ್ ಗೆ ಆಸರೆಯೊದಗಿಸಿದರು.
ಇದಕ್ಕೂ ಮೊದಲು, ಆಸ್ಟ್ರೇಲಿಯದ ತೀಕ್ಷ್ಣ ಬೌಲಿಂಗ್ ದಾಳಿಗೆ ಪಾಕಿಸ್ತಾನದ ಬ್ಯಾಟಿಂಗ್ ಕುಸಿಯಿತು. ಲಯಾನ್ 66 ರನ್ ಗಳನ್ನು ನೀಡಿ 3 ವಿಕೆಟ್ ಗಳನ್ನು ಉರುಳಿಸಿದರು.
ಶನಿವಾರ ಪಾಕಿಸ್ತಾನ ತನ್ನ ಮೊದಲ ಇನಿಂಗ್ಸನ್ನು 2 ವಿಕೆಟ್ ಗಳ ನಷ್ಟಕ್ಕೆ 132 ಇದ್ದಲ್ಲಿಂದ ಮುಂದುವರಿಸಿತು. ಆದರೆ, ಆಸ್ಟ್ರೇಲಿಯದ ಉನ್ನತ ದರ್ಜೆಯ ಬೌಲಿಂಗ್ ನ ಎದುರು ತಲೆಬಾಗಿತು. ಚೊಚ್ಚಲ ಟೆಸ್ಟ್ ಆಡುತ್ತಿರುವ ಖುರ್ರಮ್ ಶಹಝಾದ್ (7) ಬೇಗನೇ ನಿರ್ ಗಮಿಸಿದರು. ತನ್ನ 50ನೇ ಟೆಸ್ಟ್ ಆಡುತ್ತಿರುವ ಬಾಬರ್ ಅಝಮ್ 21 ರನ್ ಗಳನ್ನು ಗಳಿಸಿ ನೀಡಿ ಮಿಚೆಲ್ ಮಾರ್ಶ್ ಗೆ ವಿಕೆಟ್ ಒಪ್ಪಿಸಿ ನಿರ್ ಗಮಿಸಿದರು.
ಇಮಾಮ್ ಉಲ್-ಹಕ್ (62) ಮತ್ತು ಸರ್ಫರಾಝ್ ಅಹ್ಮದ್ (3) ಬೆನ್ನು ಬೆನ್ನಿಗೆ ನಿರ್ ಗಮಿಸುವುದರೊಂದಿಗೆ ಪಾಕಿಸ್ತಾನ ತಂಡವು ಮಿನಿ ಕುಸಿತಕ್ಕೆ ಒಳಗಾಯಿತು. ಅಂತಿಮವಾಗಿ ಪಾಕಿಸ್ತಾನವು ತನ್ನ ಮೊದಲ ಇನಿಂಗ್ಸನ್ನು 271 ರನ್ ಗಳಿಗೆ ಮುಕ್ತಾಯಗೊಳಿಸಿತು.
ಟಾಸ್ ಗೆದ್ದಿರುವ ಆಸ್ಟ್ರೇಲಿಯವು ಮೊದಲು ಬ್ಯಾಟಿಂಗ್ ಮಾಡಿತ್ತು. ಅದು ಮೊದಲ ಇನಿಂಗ್ಸ್ ನಲ್ಲಿ 487 ರನ್ ಗಳಿಸಿತ್ತು. ತನ್ನ ಕೊನೆಯ ಟೆಸ್ಟ್ ಆಡುತ್ತಿರುವ ಡೇವಿಡ್ ವಾರ್ನರ್ 164 ರನ್ ಸಿಡಿಸಿದ್ದಾರೆ.