ಹರಿಣಗಳ ಮುಂದೆ ಬೆದರುತ್ತಿರುವ ಕಾಂಗರೂಗಳು
ಲಕ್ನೋ : ಇಲ್ಲಿನ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 312 ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 73 ರನ್ ಗಳಿಸಿರುವಾಗಲೇ ಪ್ರಮುಖ 6 ವಿಕೆಟ್ ಕಳೆದುಕೊಂಡಿದೆ. ವಿಶ್ವ ಕಪ್ ಟೂರ್ನಿಯಲ್ಲಿ ಉತ್ತಮ ಸ್ಥಿರ ಪ್ರದರ್ಶನ ನೀಡುತ್ತಿರುವ ದಕ್ಷಿಣ ಆಫ್ರಿಕಾದ ಮುಂದೆ ಆಸ್ಟ್ರೇಲಿಯಾ ರನ್ ಗಳಿಸಲು ಪ್ರಯಾಸ ಪಡುತ್ತಿದೆ. ಪ್ರಮುಖ ಬ್ಯಾಟರ್ ಗಳು ಪೆವಿಲಿಯನ್ ಪರೇಡ್ ನಡೆಸಿದ್ದಾರೆ.
ಮಿಷೆಲ್ ಮಾರ್ಷ್, ಡೇವಿಡ್ ವಾರ್ನರ್ ಕ್ರಮವಾಗಿ 7, 13 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದಿರುವುದು ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಹಿನ್ನಡೆ ನೀಡಿತು. ಮೂರನೇ ಕ್ರಮಾಂಕದ ಆಟಗಾರ ಸ್ಟೀವ್ ಸ್ಮಿತ್ 19 ರನ್ ಗಳಿಸಿದ್ದಾಗ ಕಾಗಿಸೋ ರಬಡ ಅವರ ಎಲ್ ಬಿ ಡಬ್ಲ್ಯೂ ಬಲೆಗೆ ಬಿದ್ದರು. ಜೋಶ್ ಇಂಗ್ಲಿಸ್ ಕಾಗಿಸೋ ಕೂಡ ರಬಡ ಅವರಿಗೆ ಬೌಲ್ಡ್ ಆದರು. ಗ್ಲೆನ್ ಮ್ಯಾಕ್ಸ್ ವೆಲ್ ಕೇಶವ್ ಮಹರಾಜ್ ಗೆ ಕಾಟ್ ಆಂಡ್ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಪರೇಡ್ ಗೆ ಸಾಥ್ ನೀಡಿದರು. ಮಾರ್ಕೂಸ್ ಸ್ಟೊಯಿನಸ್ ಅವರೂ ರಬಡಾ ಗೆ ವಿಕೆಟ್ ಒಪ್ಪಿಸಿದರು. ಈಗ ಮಾರ್ನೂಸ್ ಲಾಬುಶೇನ್, ಮಿಷೆಲ್ ಸ್ಟಾರ್ಕ್ ಕ್ರೀಸ್ನಲ್ಲಿದ್ದಾರೆ. ಆಸ್ಟ್ರೇಲಿಯಾಕ್ಕೆ 31.4 ಓವರ್ ಗಳಲ್ಲಿ ಗೆಲ್ಲಲು 240 ರನ್ ಗಳ ಅವಶ್ಯಕತೆಯಿದೆ.
ದಕ್ಷಿಣ ಆಫ್ರಿಕಾದ ಬೌಲಿಂಗ್ ಬಲ ಆಸ್ಟ್ರೇಲಿಯಾದ ನಿದ್ದೆಗೆಡಿಸುತ್ತಿದೆ. ಮೇಡನ್ ಓವರ್ ಗಳು ಬೀಳುತ್ತಿರುವುದೇ ಇದಕ್ಕೆ ಸಾಕ್ಷಿ. ಕಾಗಿಸೋ ರಬಾಡ 5 ಓವರ್ ಗೆ 15 ರನ್ ನೀಡಿ ಒಂದು ಮೇಡನ್ ಒವರ್ ಮಾಡುವ ಮೂಲಕ 3 ವಿಕೆಟ್ ಪಡೆದರು. ಲುಂಗಿ ಗಿಡಿ 5 ಓವರ್ ಗಳಲ್ಲಿ 2 ಮೇಡನ್ ಓವರ್ ಹಾಕುವ ಮೂಲಕ ಕೇವಲ 9 ರನ್ ನೀಡಿ ಒಂದು ವಿಕೆಟ್ನ ಕಬಳಿಸಿದ್ದಾರೆ. ಮಾರ್ಕೋ ಜಾನ್ಸನ್ 4 ಓವರ್ ಗಳಲ್ಲಿ 31 ರನ್ ನೀಡಿ ಒಂದು ವಿಕೆಟ್ ಪಡೆದಿದ್ದಾರೆ. ಕೇಶವ್ ಮಹರಾಜ್ ಒಂದು ವಿಕೆಟ್ ಪಡೆದರು.
ಮೊದಲು ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಗೆ ಇಳಿದ ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿ ಕಾಕ್ ಅವರ 8 ಬೌಂಡರಿ ಹಾಗೂ 5 ಸಿಕ್ಸರ್ ಗಳ ನೆರವಿನಿಂದ 106 ಎಸೆತಗಳಲ್ಲಿ 109 ರನ್ ಗಳಿಸಿ, ತಂಡದ ಮೊತ್ತವನ್ನು ಹೆಚ್ಚಿಸಿದರು. ಐಡೆನ್ ಮ್ಯಾಕ್ರಂ 44 ಎಸೆತಗಳಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ಮೂಲಕ 56 ರನ್ ಗಳಿಸಿದರು. ಕಳಪೆ ಫೀಲ್ಡಿಂಗ್ ಪ್ರದರ್ಶಿಸಿದ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾಗೆ ರನ್ ಗಳಿಕೆಗೆ ಅವಕಾಶ ಹೆಚ್ಚಿಸಿತು.
ಆಸ್ಟ್ರೇಲಿಯಾ ಪರ ಮಿಷೆಲ್ ಸ್ಟಾರ್ಕ್,ಗ್ಲೆನ್ ಮ್ಯಾಕ್ಸ್ ವೆಲ್ 2 ವಿಕೆಟ್ ಕಬಳಿಸಿದರು. ಜೋಶ್ ಹೇಝಲ್ ವುಡ್,ಪ್ಯಾಟ್ ಕಮಿನ್ಸ್, ಆಡಂ ಝಂಬಾ ತಲಾ ಒಂದೊಂದು ವಿಕೆಟ್ ಪಡೆದರು.