ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಪಂದ್ಯ: ಶ್ರೀರಾಮ್ ಬಾಲಾಜಿ-ಮಿಗುಯೆಲ್ ಏಂಜೆಲ್ ಎರಡನೇ ಸುತ್ತಿಗೆ
Update: 2025-01-16 15:13 GMT
ಮೆಲ್ಬರ್ನ್ : ರಾಬಿನ್ ಹಾಸ್ ಹಾಗೂ ಅಲೆಕ್ಸಾಂಡರ್ ನೆಡೋವಿಯೆಸೊವ್ ವಿರುದ್ಧ ನೇರ ಸೆಟ್‌ಗಳಿಂದ ಜಯ ಸಾಧಿಸಿ ಪ್ರಾಬಲ್ಯ ಮೆರೆದ ಭಾರತದ ಎನ್.ಶ್ರೀರಾಮ್ ಬಾಲಾಜಿ ಹಾಗೂ ಮಿಗುಯೆಲ್ ಏಂಜೆಲ್ ರೆಯೆಸ್-ವಾರೆಲಾ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ದ್ವಿತೀಯ ಸುತ್ತಿಗೆ ತೇರ್ಗಡೆಯಾದರು.
ಗುರುವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತ-ಮೆಕ್ಸಿಕೊ ಜೋಡಿಯು ಡಚ್-ಕಝಕ್ ಜೋಡಿಯ ಪ್ರತಿರೋಧವನ್ನು ಹತ್ತಿಕ್ಕಿ ಕೇವಲ 60 ನಿಮಿಷಗಳಲ್ಲಿ 6-4, 6-3 ಸೆಟ್‌ಗಳ ಅಂತರದಿಂದ ಜಯಶಾಲಿಯಾಯಿತು.
ಪುರುಷರ ಡಬಲ್ಸ್ ಸ್ಪರ್ಧಾವಳಿಯಲ್ಲಿ ಸೋತು ನಿರ್ಗಮಿಸಿರುವ ರಿಥ್ವಿಕ್ ಬೊಲ್ಲಿಪಲ್ಲಿ ಭಾರತೀಯರಾದ ರೋಹನ್ ಬೋಪಣ್ಣ ಹಾಗೂ ಯೂಕಿ ಭಾಂಬ್ರಿ ಅವರನ್ನು ಸೇರಿಕೊಂಡರು.
ಅಮೆರಿಕದ ರಯಾನ್ ಸೆಗರ್ಮನ್‌ರೊಂದಿಗೆ ಆಡಿದ ರಿಥ್ವಿಕ್ ಅವರು ಆರನೇ ಶ್ರೇಯಾಂಕದ ಫಿನ್ ಲ್ಯಾಂಡ್‌ನ ಹ್ಯಾರಿ ಹೆಲಿಯೊವಾರ ಹಾಗೂ ಬ್ರಿಟನ್‌ನ ಹೆನ್ರಿ ಪ್ಯಾಟನ್ ಎದುರು 6-7, 1-6 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.