ಶುಕ್ರವಾರ ದಿಲ್ಲಿ ರಣಜಿ ಟ್ರೋಫಿ ತಂಡ ಆಯ್ಕೆ: ರಿಷಭ್ ಪಂತ್ ನಾಯಕನಾಗುವ ಸಾಧ್ಯತೆ

Update: 2025-01-16 15:06 GMT

ರಿಷಭ್ ಪಂತ್ | PC : PTI  

ಹೊಸದಿಲ್ಲಿ: ಸೌರಾಷ್ಟ್ರದ ವಿರುದ್ಧದ ಮುಂಬರುವ ರಣಜಿ ಟ್ರೋಫಿ ಪಂದ್ಯಕ್ಕಾಗಿ ದಿಲ್ಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಶುಕ್ರವಾರ ದಿಲ್ಲಿ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಿದ್ದು, ರಿಷಭ್ ಪಂತ್ ಈ ಪಂದ್ಯದ ಮೂಲಕ ಪುನರಾಗಮನ ಮಾಡಲಿದ್ದಾರೆ.

ಗೆಲ್ಲಲೇಬೇಕಾದ ಪಂದ್ಯದಲ್ಲಿ ಪಂತ್ ಅವರು ತಂಡವನ್ನು ನಾಯಕನಾಗಿ ಮುನ್ನಡೆಸುವ ಸಾಧ್ಯತೆಯಿದೆ. ಪ್ರಥಮ ದರ್ಜೆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭಾಗವಹಿಸುವ ಕುರಿತು ಡಿಡಿಸಿಎಗೆ ಇನ್ನೂ ಸ್ಪಷ್ಟತೆ ಇಲ್ಲ.

ನಾಳೆ ಮಧ್ಯಾಹ್ನ ಆಯ್ಕೆ ಸಮಿತಿಯ ಸಭೆ ನಡೆಯಲಿದ್ದು, ಸೌರಾಷ್ಟ್ರದ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ರಿಷಭ್ ಪಂತ್ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ಹಿರಿಯ ಡಿಡಿಸಿಎ ಅಧಿಕಾರಿಯೊಬ್ಬರು ಹೇಳಿದ್ದಾರೆ.

38 ಸಂಭಾವ್ಯರುಗಳ ರಣಜಿ ಶಿಬಿರವು ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಗುರುಶರಣ್ ಸಿಂಗ್ ನೇತೃತ್ವದ ಆಯ್ಕೆ ಸಮಿತಿಯು ಮುಂದಿನ ಪಂದ್ಯಕ್ಕೆ ತಂಡವನ್ನು ಆಯ್ಕೆ ಮಾಡಲಿದೆ. ಪಂತ್, ಕೊಹ್ಲಿ ಹಾಗೂ ಹರ್ಷಿತ್ ರಾಣಾ ಮೂವರು ಹೆಚ್ಚುವರಿ ಆಟಗಾರರಾಗಿ ನೇಮಿಸಲ್ಪಡುವ ಸಾಧ್ಯತೆಯಿದೆ. ಮೂವರು ಭಾಗವಹಿಸುವುದು ಅವರ ಲಭ್ಯತೆಯನ್ನು ಅವಲಂಬಿಸಿದೆ.

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ತಂಡಕ್ಕೆ ಆಯ್ಕೆಯಾಗಿರುವ ರಾಣಾ ಅಲಭ್ಯರಾಗಿದ್ದು, ಭಾರತದ ಸ್ಟಾರ್ ಬ್ಯಾಟರ್ ಕೊಹ್ಲಿ ಬಗ್ಗೆ ಇನ್ನೂ ಮಾಹಿತಿ ಲಭಿಸಿಲ್ಲ. ತಾನು ರಣಜಿ ಪಂದ್ಯದಲ್ಲಿ ಪಾಲ್ಗೊಳ್ಳುವುದಾಗಿ ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿಗೆ ಪಂತ್ ಅವರು ಖಚಿತಪಡಿಸಿದ್ದಾರೆ.

ದಿಲ್ಲಿ ತಂಡವು ತನ್ನ ಡಿ ಗುಂಪಿನಲ್ಲಿ 5 ಪಂದ್ಯಗಳಲ್ಲಿ 14 ಅಂಕ ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ. ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಲು ಸೌರಾಷ್ಟ್ರ ಹಾಗೂ ರೈಲ್ವೇಸ್ ತಂಡಗಳ ವಿರುದ್ದದ ಉಳಿದೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ. ಡಿ ಗುಂಪಿನಲ್ಲಿ ಸದ್ಯ ತಮಿಳುನಾಡು ತಂಡ 19 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದೆ. ಚಂಡಿಗಡ ತಂಡ 2ನೇ ಸ್ಥಾನದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News