ಲಾಸ್ ಏಂಜಲೀಸ್ ಕಾಡ್ಗಿಚ್ಚು ಸಂತ್ರಸ್ತರಿಗೆ ಆಸ್ಟ್ರೇಲಿಯನ್ ಓಪನ್ ಬಹುಮಾನ ಮೊತ್ತ ದೇಣಿಗೆ ನೀಡಿದ ಟೇಲರ್ ಫ್ರಿಟ್ಝ್
ಮೆಲ್ಬರ್ನ್: ಅಮೆರಿಕದ ಟೆನಿಸ್ ಆಟಗಾರ ಟೇಲರ್ ಫ್ರಿಟ್ಝ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿನ ತನ್ನ ಮೊದಲ ಸುತ್ತಿನ ಬಹುಮಾನ ಮೊತ್ತವನ್ನು ಲಾಸ್ ಏಂಜಲೀಸ್ ಕಾಡ್ಗಿಚ್ಚಿನ ಸಂತ್ರಸ್ತರ ನೆರವಿಗೆ ನೀಡುವುದಾಗಿ ಪ್ರಕಟಿಸಿದ್ದಾರೆ.
27ರ ಹರೆಯದ ಟೇಲರ್ ಫ್ರಿಟ್ಝ್ ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿದ್ದು, ಮೆಲ್ಬರ್ನ್‌ನಲ್ಲಿ ಚಿಲಿಯ ಕ್ವಾಲಿಫೈಯರ್ ಕ್ರಿಸ್ಟಿಯನ್ ಗರಿನ್‌ರನ್ನು 6-2,6-1, 6-0 ನೇರ ಸೆಟ್‌ಗಳ ಅಂತರದಿಂದ ಸೋಲಿಸಿ ಮೂರನೇ ಸುತ್ತಿಗೆ ತಲುಪಿದ ನಂತರ ಈ ನಿರ್ಧಾರ ಮಾಡಿದ್ದಾರೆ.
ಕೇವಲ 82 ನಿಮಿಷದಲ್ಲಿ ಚಿಲಿ ಆಟಗಾರನನ್ನು ಮಣಿಸಿದ ಫ್ರಿಟ್ಝ್ ಅವರು ಮುಂದಿನ ಸುತ್ತಿನಲ್ಲಿ ಗಯೆಲ್ ಮೊನ್‌ಫಿಲ್ಸ್ ರನ್ನು ಎದುರಿಸಲಿದ್ದಾರೆ.
ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೊದಲ ಸುತ್ತಿನ ಬಹುಮಾನ ಮೊತ್ತ 132,000 ಆಸ್ಟ್ರೇಲಿಯನ್ ಡಾಲರ್(82,000 ಯುಎಸ್ ಡಾಲರ್)ಆಗಿರುತ್ತದೆ. ಫ್ರಿಟ್ಝ್ ಈ ಹಿಂದೆ ಲಾಸ್ ಏಂಜಲೀಸ್‌ನಲ್ಲಿ ವಾಸವಾಗಿದ್ದರು. ಕಾಡ್ಗಿಚ್ಚಿನಿಂದ ಸಂತ್ರಸ್ತರಾದವರ ಬಗ್ಗೆ ಕಳವಳ ವ್ಯಕ್ತಪಡಿಸಿದ ಫ್ರಿಟ್ಝ್ ಅವರು ಪರಿಹಾರ ನಿಧಿಗೆ ಇತರರು ದೇಣಿಗೆ ನೀಡುವುದಕ್ಕೆ ಪ್ರೇರೇಪಿಸಿದ್ದಾರೆ.
ನನ್ನ ಮೊದಲ ಸುತ್ತಿನ ಬಹುಮಾನ ಹಣವನ್ನು ಲಾಸ್ ಏಂಜಲೀಸ್ ಕಾಡ್ಗಿಚ್ಚು ಪರಿಹಾರ ನಿಧಿಗೆ ದಾನ ಮಾಡಲಿದ್ದೇನೆ. ದಕ್ಷಿಣ ಕ್ಯಾಲಿಫೋರ್ನಿಯಾ ನನ್ನ ಮನೆ. ಲಾಸ್ ಏಂಜಲೀಸ್ ದೀರ್ಘಕಾಲದ ತನಕ ನನ್ನ ಮನೆಯಾಗಿತ್ತು. ನನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದೇನೆ. ದೇಣಿಗೆ ನೀಡಲು ಬಯಸುವವರಿಗೆ ನಾನು ಪ್ರೋತ್ಸಾಹಿಸುತ್ತೇನೆ. ಏಕೆಂದರೆ ಬಹಳಷ್ಟು ಜನರಿಗೆ ಇದು ನಿಜವಾಗಿಯೂ ಅಗತ್ಯವಾಗಿರುತ್ತದೆ ಎಂದು ವಿಶ್ವದ ನಂ.4ನೇ ಆಟಗಾರ ಫ್ರಿಟ್ಝ್ ಹೇಳಿದ್ದಾರೆ.
ಲಾಸ್ ಏಂಜಲೀಸ್ ಕಾಡ್ಗಿಚ್ಚಿನಿಂದಾಗಿ 24 ಜನರು ಸಾವನ್ನಪ್ಪಿದ್ದು, ನಗರದ ದೊಡ್ಡ ಪ್ರದೇಶವೇ ನಾಶವಾಗಿದೆ. ಕೊಕೊ ಗೌಫ್, ಮ್ಯಾಡಿಸನ್ ಕೀಸ್ ಹಾಗೂಜೆಸ್ಸಿಕಾ ಪೆಗುಲಾ ಸೇರಿದಂತೆ ಇತರ ಟೆನಿಸ್ ಆಟಗಾರರು ಅಗ್ನಿಶಾಮಕ ದಳದವರ ದಣಿವರಿಯದ ಪ್ರಯತ್ನಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಲಾಸ್ ಏಂಜಲೀಸ್ ಪ್ರದೇಶದಲ್ಲಿ ವಾಸವಾಗಿದ್ದ ಮ್ಯಾಡಿಸನ್ ಅವರು ನಗರದ ಅಗ್ನಿ ಶಾಮಕ ವಿಭಾಗಕ್ಕೆ 20,000 ಡಾಲರ್ ದೇಣಿಗೆ ನೀಡಿದ್ದಾರೆ.
ಕಾಡ್ಗಿಚ್ಚು ನನ್ನ ಮನೆಯಿಂದ ಮೂರು ಬ್ಲಾಕ್‌ಗಳ ದೂರದಲ್ಲಿದೆ ಎಂದು ಜಪಾನ್ ದೇಶವನ್ನು ಪ್ರತಿನಿಧಿಸುತ್ತಿರುವ, ಆದರೆ ಲಾಸ್ ಏಂಜಲೀಸ್‌ನಲ್ಲಿ ವಾಸಿಸುವ ನವೋಮಿ ಒಸಾಕಾ ಸೋಮವಾರ ಹೇಳಿದ್ದು, ಇದು ಪರಿಸ್ಥಿತಿಯ ಭೀಕರತೆಯನ್ನು ಎತ್ತಿ ತೋರಿಸುತ್ತಿದೆ.