ಟೆಸ್ಟ್ ಕ್ರಿಕೆಟ್ ನಲ್ಲಿ ಕಳಪೆ ಪ್ರದರ್ಶನ : ಟೀಂ ಇಂಡಿಯಾಗೆ ಬ್ಯಾಟಿಂಗ್ ಕೋಚ್ ನೇಮಕ ಮಾಡಲು ಮುಂದಾದ ಬಿಸಿಸಿಐ
ಹೊಸದಿಲ್ಲಿ: ಟೀಂ ಇಂಡಿಯಾ ಪುರುಷರ ತಂಡಕ್ಕೆ ಹೊಸ ತರಬೇತುದಾರರನ್ನು ವಿಶೇಷವಾಗಿ ಬ್ಯಾಟಿಂಗ್ ಕೋಚ್ ನ್ನು ನೇಮಿಸಿಕೊಳ್ಳಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂದಾಗಿದೆ. ಈ ಕುರಿತು ಯಾವುದೇ ಔಪಚಾರಿಕ ಹೇಳಿಕೆ ಬಿಡುಗಡೆ ಮಾಡಿಲ್ಲದಿದ್ದರೂ, ಟೀಂ ಇಂಡಿಯಾ ಕೋಚ್ ಗಳ ಸಾಮರ್ಥ್ಯ ಹೆಚ್ಚಿಸುವ ಕುರಿತು ಬಿಸಿಸಿಐ ಒಳಗೆ ಚರ್ಚೆಗಳಾಗಿದೆ ಎಂದು ವರದಿಯಾಗಿದೆ.
ಮಾಜಿ ದೇಶೀಯ ಕ್ರಿಕೆಟ್ ದಿಗ್ಗಜ ಆಟಗಾರನನ್ನು ಕೋಚ್ ಹುದ್ದೆಗೆ ಪರಿಗಣಿಸಲಾಗುತ್ತದೆ ಎಂದು ಮೂಲಗಳು ಸೂಚಿಸುತ್ತವೆ, ಆದರೆ, ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಟೀಂ ಇಂಡಿಯಾಗೆ ಪ್ರಸ್ತುತ ಮುಖ್ಯ ಕೋಚ್ ಗೌತಮ್ ಗಂಭೀರ್, ಬೌಲಿಂಗ್ ಕೋಚ್ ಮೋರ್ನೆ ಮೊರ್ಕೆಲ್, ಸಹಾಯಕ ಕೋಚ್ ಆಗಿ ಅಭಿಷೇಕ್ ನಾಯರ್, ರಿಯಾನ್ ಟೆನ್ ಡೋಸ್ಚೇಟ್ ಮತ್ತು ಫೀಲ್ಡಿಂಗ್ ಕೋಚ್ ಆಗಿ ಟಿ. ದಿಲೀಪ್ ಅವರಿದ್ದಾರೆ.
10 ವರ್ಷಗಳ ಬಳಿಕ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ಕಳೆದುಕೊಂಡಿತ್ತು. ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ, ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ನಿರಾಶಾದಾಯಕ ಪ್ರದರ್ಶನ ಟೀಕೆಗೆ ಕಾರಣವಾಗಿತ್ತು.