ಡೈಮಂಡ್ ಲೀಗ್ ಫೈನಲ್ ಗೆ ಅರ್ಹತೆ ಪಡೆದ ಅವಿನಾಶ್ ಸಾಬ್ಳೆ

Update: 2023-09-02 15:46 GMT

Photo : instagram/avinash__sable

ಬೀಜಿಂಗ್: ಚೀನಾದ ಕ್ಸಿಯಾಮೆನ್ನಲ್ಲಿ ಶನಿವಾರ ನಡೆದ ಡೈಮಂಡ್ ಲೀಗ್ ಕ್ರೀಡಾಕೂಟದಲ್ಲಿ ಅವಿನಾಶ್ ಸಾಬ್ಳೆ ಪುರುಷರ 3,000 ಮೀ. ಸ್ಟೀಪಲ್ಚೇಸ್ನಲ್ಲಿ 5ನೇ ಸ್ಥಾನ ಪಡೆದರು.

ಈ ಫಲಿತಾಂಶದ ಮೂಲಕ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ವಿಜೇತ ಸಾಬ್ಳೆ ಸೆಪ್ಟಂಬರ್ 16 ಹಾಗೂ 17ರಂದು ಅಮೆರಿಕದಲ್ಲಿ ನಡೆಯುವ ಡೈಮಂಡ್ ಲೀಗ್ ಫೈನಲ್ಗೆ ಅರ್ಹತೆ ಪಡೆದಿದ್ದಾರೆ.

ಕಳೆದ ವಾರ ಬುಡಾಪೆಸ್ಟ್ನಲ್ಲಿ ನಡೆದ ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ಹೀಟ್ಸ್ ನಲ್ಲಿ ತೇರ್ಗಡೆಯಾಗುವಲ್ಲಿ ವಿಫಲರಾಗಿದ್ದ 28ರ ಹರೆಯದ ಸಾಬ್ಳೆ ಇಂದು ಉತ್ತಮ ಪ್ರದರ್ಶನ ನೀಡಿದರು. ಸಾಬ್ಳೆ 8:16.27 ಸೆಕೆಂಡ್ನಲ್ಲಿ ಗುರಿ ತಲುಪಿದರು. ತನ್ನ ರಾಷ್ಟ್ರೀಯ ದಾಖಲೆಗಿಂತ 5 ಸೆಕೆಂಡ್ ಹಿಂದುಳಿದರು. ಕೀನ್ಯದ ಅಬ್ರಹಾಮ್ ಕಿಬಿವೊಟ್ಗಿಂತ ಸ್ವಲ್ಪ ಹಿಂದುಳಿದರು. ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಕಿಬಿವೊಟ್ 8:15.87 ಸೆಕೆಂಡ್ನಲ್ಲಿ ಗುರಿ ತಲುಪಿದರು.

ಹಾಲಿ ವಿಶ್ವ ಹಾಗೂ ಒಲಿಂಪಿಕ್ಸ್ ಚಾಂಪಿಯನ್ ಮೊರೊಕ್ಕೊದ ಸೌಫಿಯಾನ್ ಬಕ್ಕಾಲಿ (8:10.31 ಸೆ.)ರೇಸ್ನಲ್ಲಿ ಮೊದಲ ಸ್ಥಾನ ಪಡೆದರು.

5ನೇ ಸ್ಥಾನ ಪಡೆದಿರುವ ಸಾಬ್ಳೆ ನಾಲ್ಕು ಅಂಕ ಗಿಟ್ಟಿಸಿಕೊಂಡರು. ಪುರುಷರ 3,000 ಮೀ. ಸ್ಟೀಪಲ್ ಚೇಸ್ನ ಆರನೇ ಸ್ಪರ್ಧೆಯ ಅಂತ್ಯಕ್ಕೆ ಒಟ್ಟು 11 ಅಂಕ ಗಳಿಸಿದರು. 6ನೇ ಸ್ಥಾನ ಪಡೆದ ಸಾಬ್ಳೆ ಡೈಮಂಡ್ ಲೀಗ್ ಫೈನಲ್ಗೆ ಲಗ್ಗೆ ಇಟ್ಟರು. ಇಲ್ಲಿ ಅಗ್ರ-10 ಅತ್ಲೀಟ್ಗಳು ಸ್ಪರ್ಧಿಸುತ್ತಾರೆ.

ಜಾವೆಲಿನ್ ಎಸೆತದಲ್ಲಿ ಹಾಲಿ ವಿಶ್ವ, ಒಲಿಂಪಿಕ್ಸ್ ಹಾಗೂ ಡೈಮಂಡ್ ಲೀಗ್ ಚಾಂಪಿಯನ್ ಆಗಿರುವ ನೀರಜ್ ಚೋಪ್ರಾರೊಂದಿಗೆ ಸಾಬ್ಳೆ ಸೇರ್ಪಡೆಯಾದರು.

ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ವಿಜೇತ ಲಾಂಗ್ಜಂಪರ್ ಎಂ.ಶ್ರೀಶಂಕರ್ ಈ ವರ್ಷದ ಡೈಮಂಡ್ ಲೀಗ್ ಫೈನಲ್ಗೆ ಅರ್ಹತೆ ಪಡೆದ ಭಾರತದ ಅತ್ಲೀಟ್ಗಳ ಪಟ್ಟಿಯಲ್ಲಿದ್ದಾರೆ.

ಪುರುಷರ ಟ್ರಿಪಲ್ ಜಂಪ್ನಲ್ಲಿ ಪ್ರವೀಣ್ ಚಿತ್ರವೆಲ್ ಹಾಗೂ ಅಬ್ದುಲ್ಲಾ ಅಬೂಬಕರ್ ಕ್ರಮವಾಗಿ 5ನೇ ಹಾಗೂ ಆರನೇ ಸ್ಥಾನ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News