ಮೈಕ್ ಟೈಸನ್ vs ಜೇಕ್ ಪಾಲ್ | ಐತಿಹಾಸಿಕ ಪಂದ್ಯದಲ್ಲಿ ಎದುರಾಗಲಿರುವ ಬಾಕ್ಸಿಂಗ್ ದಂತಕಥೆ ಮತ್ತು ಯೂಟ್ಯೂಬ್ ಸ್ಟಾರ್
ಹೊಸದಿಲ್ಲಿ: ವಿಶೇಷ ಬೆಳವಣಿಗೆಯೊಂದರಲ್ಲಿ ಬಾಕ್ಸಿಂಗ್ ದಂತಕಥೆ 58 ವರ್ಷದ ಮೈಕ್ ಟೈಸನ್ ಅವರು ಯೂಟ್ಯೂಬರ್-ಬಾಕ್ಸರ್ ಜೇಕ್ ಪಾಲ್ ವಿರುದ್ಧ ಬಾಕ್ಸಿಂಗ್ ಗೆ ಸಜ್ಜಾಗಿದ್ದಾರೆ.
ಸುಮಾರು 20 ವರ್ಷಗಳಲ್ಲಿ ಟೈಸನ್‌ರ ಮೊದಲ ವೃತ್ತಿಪರ ಪಂದ್ಯವಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ. ಡಲ್ಲಾಸ್ ಕೌಬಾಯ್ಸ್‌ನ AT&T ಸ್ಟೇಡಿಯಂ ಶುಕ್ರವಾರ ರಾತ್ರಿ ಈ ರೋಚಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.
ಈ ಐತಿಹಾಸಿಕ ಬಾಕ್ಸಿಂಗ್ ಅನ್ನು ನೆಟ್‌ಫ್ಲಿಕ್ಸ್ ಪ್ರಸಾರ ಮಾಡಲಿದೆ. 28 ಕೋಟಿ ಚಂದಾದಾರರು ಹೆಚ್ಚುವರಿ ಶುಲ್ಕವಿಲ್ಲದೇ ಬಾಕ್ಸಿಂಗ್ ಪಂದ್ಯವನ್ನು ವೀಕ್ಷಿಸುವ ಅವಕಾಶ ಪಡೆಯಲಿದ್ದಾರೆ.
ಮರಳಿ ರಿಂಗ್ ಗೆ ಟೈಸನ್ :
ಟೈಸನ್ ಕೊನೆಯದಾಗಿ 2005 ರಲ್ಲಿ ವೃತ್ತಿಪರವಾಗಿ ರಿಂಗ್ ಗೆ ಇಳಿದಿದ್ದರು. 2020 ರಲ್ಲಿ ರಾಯ್ ಜೋನ್ಸ್ ಜೂನಿಯರ್ ವಿರುದ್ಧದ ಪ್ರದರ್ಶನ ಪಂದ್ಯಕ್ಕಾಗಿ ಮತ್ತೆ ರಿಂಗ್‌ಗೆ ಕಾಲಿಟ್ಟಿದ್ದರು. ಹೊಟ್ಟೆ ಹುಣ್ಣು ಸಮಸ್ಯೆಯ ನಂತರ ಸುಮಾರು 11.7 ಕೆಜಿ ತೂಕ ಕಳೆದುಕೊಂಡ ಅವರು ಮತ್ತೆ ವೃತ್ತಿಪರ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.
ಈ ವಯಸ್ಸಿನಲ್ಲಿ ಮತ್ತೆ ಬಾಕ್ಸಿಂಗ್ ರಿಂಗ್ ಗೆ ಇಳಿಯುವ ಟೈಸನ್ ಅವರ ನಿರ್ಧಾರಕ್ಕೆ ಹಲವರು ಆರೋಗ್ಯದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಟೆಕ್ಸಾಸ್ ರಾಜ್ಯದ ಅಧಿಕಾರಿಗಳು ಪಂಚ್‌ಗಳ ಪ್ರಭಾವವನ್ನು ಕಡಿಮೆ ಮಾಡಲು, ಎಂಟು-ಸುತ್ತಿನ ಎರಡು ನಿಮಿಷಗಳ ಸುತ್ತುಗಳ ಪಂದ್ಯವನ್ನು ಭಾರವಾದ ಕೈಗವಸುಗಳೊಂದಿಗೆ ಆಡಲು ಅವಕಾಶ ನೀಡಿದ್ದಾರೆ.
10-1 ದಾಖಲೆ ಹೊಂದಿರುವ 27ರ ಹರೆಯದ ಪೌಲ್, ತನಗಿಂತ 30 ವರ್ಷ ಹಿರಿಯ ಎದುರಾಳಿ ವಿರುದ್ಧ ಹೋರಾಡುವ ಕುರಿತೂ ಪ್ರಶ್ನೆಗಳನ್ನು ಎದ್ದಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಪೌಲ್, ಟೈಸನ್ ವಿರುದ್ದದ ಪಂದ್ಯವು ವೃತ್ತಿಪರವಾಗಿರಬೇಕು. ಬಾಕ್ಸಿಂಗ್‌ನ ದಂತಕಥೆಯ ವಿರುದ್ಧ ಹೋರಾಡುವ ಅವಕಾಶವನ್ನು ನಾನು ಕಳೆದುಕೊಳ್ಳುವುದಿಲ್ಲ" ಎಂದು ಒತ್ತಿ ಹೇಳಿದ್ದಾರೆ.
ಬಾಕ್ಸಿಂಗ್‌ಗೆ ಹೊಸ ಯುಗವೇ?
ಐತಿಹಾಸಿಕ ಎನ್‌ಎಫ್‌ಎಲ್ ಸ್ಟೇಡಿಯಂನಲ್ಲಿ ನಡೆಯುವ ಈ ಹೋರಾಟವು 60,000 ಜನಸಮೂಹವನ್ನು ಸೆಳೆಯುವ ನಿರೀಕ್ಷೆಯಿದೆ. ನೆಟ್‌ಫ್ಲಿಕ್ಸ್ ಮೂಲಕ ಲಕ್ಷಾಂತರ ಜನರು ವೀಕ್ಷಿಸಲಿದ್ದಾರೆ.
ಪಾಲ್ ಈ ಹೋರಾಟದಿಂದ ಸುಮಾರು 330 ಕೋಟಿ ರೂ.ಗಳಿಸುವ ನಿರೀಕ್ಷೆಯಿದೆ. ಆದರೆ ಟೈಸನ್ ಹಣಕ್ಕಾಗಿ ಇದನ್ನು ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಟೈಸನ್ ರಿಗೆ ಸುಮಾರು 160 ಕೋಟಿ ರೂ. ಸಿಗಲಿದೆ. ಹಳೆಯ ಟೈಸನ್ ಮ್ಯಾಜಿಕ್ ಮೇಲುಗೈ ಸಾಧಿಸುತ್ತದೆಯೇ ಅಥವಾ ಜೇಕ್ ಪಾಲ್ ಮತ್ತೊಂದು ಗೆಲುವನ್ನು ಸಾಧಿಸಬಹುದೇ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.