ಬಾರ್ಡರ್- ಗಾವಸ್ಕರ್ ಟ್ರೋಫಿ: ದಾಖಲೆಗಳ ಮೇಲೆ ಕೊಹ್ಲಿ ಕಣ್ಣು!
ಹೊಸದಿಲ್ಲಿ: ನ್ಯೂಝಿಲೆಂಡ್ ವಿರುದ್ಧ ತವರಿನಲ್ಲಿ ಹೀನಾಯ ಸೋತ ಬಳಿಕ, ಭಾರತ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ. ಆಸ್ಟ್ರೇಲಿಯಾ ವಿರುದ್ಧ ಈ ತಿಂಗಳ 22ರಿಂದ ಪರ್ತ್ ನಲ್ಲಿ ಆರಂಭವಾಗುವ ಬಾರ್ಡರ್- ಗಾವಸ್ಕರ್ ಟ್ರೋಫಿ ಸರಣಿ ಹಿರಿಯ ಆಟಗಾರರ ಪಾಲಿಗೆ, ಅದರಲ್ಲೂ ಪ್ರಮುಖವಾಗಿ ವಿರಾಟ್ ಕೊಹ್ಲಿಯವರಿಗೆ ಮಹತ್ವದ್ದಾಗಿದೆ.
ಇತ್ತೀಚಿನ ದಿನಗಳಲ್ಲಿ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿರುವ ಕೊಹ್ಲಿ, ಸಿಡಿದೆದ್ದಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸುವ ಅವಕಾಶ ಹೊಂದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಉತ್ತಮ ಸಾಧನೆಯ ದಾಖಲೆ ಹೊಂದಿರುವ ಕೊಹ್ಲಿ ತಮ್ಮ ಅನ್ಯುನ್ನತ ಫಾರ್ಮ್ ಕಂಡುಕೊಳ್ಳಲು ಮತ್ತು ತಮ್ಮ ಸುಧೀರ್ಘ ಪರಂಪರೆಯನ್ನು ಮುಂದುವರಿಸಲು ಆಸ್ಟ್ರೇಲಿಯಾ ವಿರುದ್ಧದ ಸರಣಿ ಉತ್ತಮ ವೇದಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹಲವು ದಾಖಲೆಗಳನ್ನು ಸೃಷ್ಟಿಸುವ ಅವಕಾಶ ಕೊಹ್ಲಿ ಪಾಲಿಗೆ ಒದಗಿ ಬಂದಿದೆ. ಆಸ್ಟ್ರೇಲಿಯಾದಲ್ಲಿ 1809 ರನ್ ಗಳಿಸಿರುವ ಸಚಿನ್ ತೆಂಡೂಲ್ಕರ್ ಅವರ ಸಾಧನೆಯನ್ನು ಹಿಂದಿಕ್ಕಲು ಅವಕಾಶವಿದೆ. ಆಸ್ಟ್ರೇಲಿಯಾದಲ್ಲಿ 13 ಟೆಸ್ಟ್ ನಿಂದ 54.08 ಸರಾಸರಿಯಲ್ಲಿ 1353 ರನ್ ಗಳಿಸಿರುವ ಕೊಹ್ಲಿಗೆ ಗರಿಷ್ಠ ರನ್ ಸಾಧಕ ಎಂಬ ಕೀರ್ತಿಗೆ ಪಾತ್ರರಾಗಲು 458 ರನ್ ಬೇಕು.
ಆಸ್ಟ್ರೇಲಿಯಾ ವಿರುದ್ಧ ಗರಿಷ್ಠ ಶತಕ ಸಾಧಿಸಿದ ಪ್ರವಾಸಿ ತಂಡದ ಬ್ಯಾಟ್ಸ್ ಮನ್ ಎನಿಸಿಕೊಳ್ಳಲು ಕೊಹ್ಲಿ ಸರಣಿಯಲ್ಲಿ ನಾಲ್ಕು ಶತಕಗಳನ್ನು ಸಿಡಿಸಬೇಕಿದೆ. ಇಂಗ್ಲೆಂಡ್ನ ಜ್ಯಾಕ್ ಹೊಬ್ಸ್ ಒಂಬತ್ತು ಶತಕಗಳನ್ನು ಗಳಿಸಿದ್ದು, ವ್ಯಾಲಿ ಹಮ್ಮೊಂಡ್ ಏಳು ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 6 ಶತಕಗಳನ್ನು ಸಿಡಿಸಿದ್ದಾರೆ.
ಅಡಿಲೇಡ್ ಓವಲ್ ಮೈದಾನ ಕೊಹ್ಲಿಗೆ ಅತ್ಯಂತ ಪ್ರಶಸ್ತ ತಾಣ ಎನಿಸಿದ್ದು, ಇಲ್ಲಿ 63.62 ಸರಾಸರಿಯಲ್ಲಿ ನಾಲ್ಕು ಟೆಸ್ಟ್ ಗಳಿಂದ 509 ರನ್ ಗಳನ್ನು ಅವರು ಕಲೆ ಹಾಕಿದ್ದಾರೆ. ಈ ಬಾರಿ ಈ ಮೈದಾನದಲ್ಲಿ 102 ರನ್ ಗಳನ್ನು ಗಳಿಸಿದರೆ, ಈ ಆಕರ್ಷಕ ಮೈದಾನದಲ್ಲಿ ಗರಿಷ್ಠ ರನ್ ಗಳಿಸಿದ ಪ್ರವಾಸಿ ತಂಡದ ಆಟಗಾರ ಎಂಬ ಹೆಗ್ಗಳಿಕೆ ಇವರದ್ದಾಗಲಿದೆ. ಪ್ರಸ್ತುತ 610 ರನ್ ಗಳೊಂದಿಗೆ ಬ್ರಿಯಾನ್ ಲಾರಾ ಅಗ್ರಸ್ಥಾನದಲ್ಲಿದ್ದಾರೆ.
ಟೆಸ್ಟ್ ಕ್ರಿಕೆಟ್ ಹೊರತುಪಡಿಸಿ ಎಲ್ಲ ಬಗೆಯ ಕ್ರಿಕೆಟ್ ನಲ್ಲಿ ಗರಿಷ್ಠ 50ಕ್ಕಿಂತ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ ಎನಿಸಿದ್ದಾರೆ. 11 ಶತಕ ಹಾಗೂ 19 ಅರ್ಧಶತಕ ಸೇರಿ 30 ಬಾರಿ ಕೊಹ್ಲಿ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಈ ಮೂಲಕ ವಿವಿಯನ್ ರಿಚರ್ಡ್ (42) ಮತ್ತು ಡೆಸ್ಮಂಡ್ ಹೇನ್ಸ್ (34) ಬಳಿಕ ಮೂರನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ರನ್ ಸಿಡಿಸಿರುವ ಆಟಗಾರರ ಪೈಕಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದು, ಈ ತಂಡದ ವಿರುದ್ಧ 3426 ರನ್ ಕಲೆ ಹಾಕಿರುವ ಅವರು 3300 ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ಅವರಿಗಿಂತ 126 ಹೆಚ್ಚು ರನ್ ಗಳಿಸಿದ್ದಾರೆ. ಇನ್ನು 574 ರನ್ ಗಳಿಸಿದರೆ, ಆಸ್ಟ್ರೇಲಿಯಾ ವಿರುದ್ಧ 4000 ರನ್ ಗಳಿಸಿದ ಮೊಟ್ಟಮೊದಲ ಬ್ಯಾಟ್ಸ್ ಮನ್ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.