ಹೈದರಾಬಾದ್ ಕ್ರೀಡಾಂಗಣ ಸಿಬ್ಬಂದಿಯ ಮನ ಗೆದ್ದ ಬಾಬರ್ ಆಝಮ್
ಪಾಕಿಸ್ತಾನ ತಂಡಕ್ಕೆ ಹೈದರಾಬಾದ್ ನಲ್ಲಿ ದೊರೆತ ಸ್ವಾಗತವು ತಂಡದ ಮನಗೆದ್ದಿದೆ. ನಿಝಾಮರ ನಗರದಲ್ಲಿ ಪಾಕಿಸ್ತಾನ ತಂಡ ಸುಮಧುರ ಕ್ಷಣಗಳನ್ನು ಕಳೆದಿದೆ.
ಹೈದರಾಬಾದ್: ಪಾಕಿಸ್ತಾನ ತಂಡಕ್ಕೆ ಹೈದರಾಬಾದ್ ನಲ್ಲಿ ದೊರೆತ ಸ್ವಾಗತವು ತಂಡದ ಮನಗೆದ್ದಿದೆ. ನಿಝಾಮರ ನಗರದಲ್ಲಿ ಪಾಕಿಸ್ತಾನ ತಂಡ ಸುಮಧುರ ಕ್ಷಣಗಳನ್ನು ಕಳೆದಿದೆ.
ವಿಶ್ವಕಪ್ ಕ್ರಿಕೆಟ್ ಕ್ರೀಡಾಕೂಟದ ಅಂಗವಾಗಿ ಅಕ್ಟೋಬರ್ 14ರಂದು ಅಹಮದಾಬಾದ್ ನಲ್ಲಿ ನಡೆಯಲಿರುವ ಭಾರತ ತಂಡದ ಎದುರಿನ ಪಂದ್ಯಕ್ಕೆ ಹೈದರಾಬಾದ್ ನಿಂದ ನಿರ್ಗಮಿಸುವ ಮುಂಚೆ ಪಾಕಿಸ್ತಾನ ತಂಡವು, ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದ ಸಿಬ್ಬಂದಿಗಳಿಗೆ ಅಚ್ಚರಿಯ ಉಡುಗೊರೆ ನೀಡುವ ಮೂಲಕ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಮ್ ಅವರೆಲ್ಲರ ಹೃದಯ ಗೆದ್ದಿದ್ದಾರೆ.
ಹೈದರಾಬಾದ್ ಕ್ರೀಡಾಂಗಣದ ಸಿಬ್ಬಂದಿಗಳು ನೀಡಿದ ಆತಿಥ್ಯಕ್ಕೆ ಧನ್ಯವಾದ ಸಲ್ಲಿಸಿರುವ ಬಾಬರ್ ಆಝಮ್, ಅವರಿಗೆಲ್ಲ ತಮ್ಮ ಹಸ್ತಾಕ್ಷರವಿರುವ ಜರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ndtv.com ವರದಿ ಮಾಡಿದೆ.
ಬೃಹತ್ ಮೊತ್ತಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಪಾಕಿಸ್ತಾನ ತಂಡವು ಪರಾಭವಗೊಳಿಸಿದ ನಂತರ, ಬಾಬರ್ ಆಝಮ್ ಅವರು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದ ಸಿಬ್ಬಂದಿಗಳಿಗೆ ತಮ್ಮ ಹಸ್ತಾಕ್ಷವಿರುವ ಜರ್ಸಿಯನ್ನು ಹಸ್ತಾಂತರಿಸಿದರು. ಪಂದ್ಯ ಮುಗಿದ ನಂತರ ಪಾಕಿಸ್ತಾನ ವಿಕೆಟ್ ಕೀಪರ್ ಬ್ಯಾಟರ್ ಮುಹಮ್ಮದ್ ರಿಝ್ವಾನ್ ಕೂಡಾ ಹೈದರಾಬಾದ್ ನಲ್ಲಿ ತಮ್ಮ ತಂಡಕ್ಕೆ ಸಿಕ್ಕ ಆತಿಥ್ಯವನ್ನು ಶ್ಲಾಘಿಸಿದರು. ತವರಿನ ಪಿಚ್ ನಂತಹ ಅನುಭವ ನೀಡಿದ ಪಿಚ್ ಅನ್ನು ಹೈದರಾಬಾದ್ ನಲ್ಲಿ ಸಿದ್ಧಪಡಿಸಿದ್ದ ಪಿಚ್ ಕ್ಯುರೇಟರ್ ಅವರಿಗೂ ಅವರು ಧನ್ಯವಾದ ಸಲ್ಲಿಸಿದರು.
ಅಕ್ಟೋಬರ್ 14ರಂದು ಭಾರತ ತಂಡದ ವಿರುದ್ಧ ಅಹಮದಾಬಾದ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ತಂಡವು ಹೈದರಾಬಾದ್ ನಿಂದ ನಿರ್ಗಮಿಸಿದೆ.