ವಿನೇಶ್ ಅನರ್ಹತೆಯನ್ನು ಸಂಭ್ರಮಿಸಿದವರು ದೇಶಭಕ್ತರೇ?: ಬ್ರಿಜ್ ಭೂಷಣ್ ಗೆ ಬಜರಂಗ್ ಪೂನಿಯಾ ತಿರುಗೇಟು
ಹೊಸದಿಲ್ಲಿ: ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಅನರ್ಹಗೊಂಡಿರುವುದು ಬ್ರಿಜ್ ಭೂಷಣ್ ಗೆ ಹರ್ಷ ಉಂಟು ಮಾಡಿದೆ. ವಿನೇಶ್ ಅನರ್ಹತೆಯನ್ನು ಸಂಭ್ರಮಿಸಿದವರು ದೇಶಭಕ್ತರೇ? ಎಂದು ಬಜರಂಗ್ ಪೂನಿಯಾ ಪ್ರಶ್ನಿಸಿದ್ದಾರೆ.
ನಿನ್ನೆ ಕುಸ್ತಿಪಟು ವಿನೇಶ್ ಫೋಗಟ್ ಕಾಂಗ್ರೆಸ್ ಸೇರ್ಪಡೆ ಬಳಿಕ ಪ್ರತಿಕ್ರಿಯಿಸಿದ್ದ ಕುಸ್ತಿ ಫೆಡರೇಶನ್ ನ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್, ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ನಿಂದ ಅನರ್ಹರಾಗಿರುವುದು ಸರಿಯಾಗಿದೆ, ಆಕೆ ಇದಕ್ಕೆ ಅರ್ಹರು, ದೇವರು ಅವಳನ್ನು ಶಿಕ್ಷಿಸಿದ್ದರಿಂದ ಆಕೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು.
ಇದಕ್ಕೆ India Today ಜೊತೆಗಿನ ಸಂದರ್ಶನದಲ್ಲಿ ತಿರುಗೇಟು ನೀಡಿದ ಬಜರಂಗ್ ಪುನಿಯಾ, ಇದು ದೇಶದ ಬಗೆಗಿನ ಬ್ರಿಜ್ ಭೂಷಣ್ ಸಿಂಗ್ ಅವರ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ. ಇದು ವಿನೇಶ್ ಅವರ ಪದಕವಲ್ಲ. ಇದು 140 ಕೋಟಿ ಭಾರತೀಯರ ಪದಕವಾಗಿತ್ತು. ಆದರೆ ಅವರು ಪದಕ ಕಳೆದುಕೊಂಡಿದ್ದಕ್ಕೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಸಂತೋಷಪಡುತ್ತಿದ್ದಾರೆ ಎಂದು ಹೇಳಿದ್ದಾರೆ.
ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪದಕವನ್ನು ಕಳೆದುಕೊಂಡಿರುವುದು ರಾಷ್ಟ್ರಕ್ಕೆ ದುಃಖದ ವಿಷಯವಾಗಿತ್ತು, ಆದರೆ ಬಿಜೆಪಿಯ ಐಟಿ ಸೆಲ್ ಅವರನ್ನು ಅಪಹಾಸ್ಯ ಮಾಡಲು, ಕೀಳಾಗಿ ಕಾಣಲು ಅಭಿಯಾನವನ್ನು ನಡೆಸಿದೆ ಎಂದು ಪುನಿಯಾ ಆರೋಪಿಸಿದ್ದಾರೆ.
ವಿನೇಶ್ ಅನರ್ಹತೆಯನ್ನು ಸಂಭ್ರಮಿಸಿದವರು ದೇಶಭಕ್ತರೇ? ನಾವು ಬಾಲ್ಯದಿಂದಲೂ ದೇಶಕ್ಕಾಗಿ ಹೋರಾಡುತ್ತಿದ್ದೇವೆ, ಆದ್ರೆ ಅವರು ನಮಗೆ ದೇಶಭಕ್ತಿಯನ್ನು ಕಲಿಸಲು ಬರುತ್ತಾರೆ, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.