ಫೆಬ್ರವರಿ 12ರಿಂದ ಬೆಂಗಳೂರು ಓಪನ್ ಟೆನಿಸ್ ಟೂರ್ನಿ ಆರಂಭ
ಬೆಂಗಳೂರು: ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದಿದ್ದ ಡೇವಿಸ್ ಕಪ್ ಪಂದ್ಯದಲ್ಲಿ ಅಮೋಘ ಜಯ ಗಳಿಸಿದ್ದ ಭಾರತ ತಂಡದಲ್ಲಿ ಆಡಿದ್ದ ನಾಲ್ವರು ಆಟಗಾರರು ಫೆಬ್ರವರಿ 12ರಿಂದ 18ರ ತನಕ ನಡೆಯಲಿರುವ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.
ರಾಮಕುಮಾರ್ ರಾಮನಾಥನ್, ಸಾಕೇತ್ ಮೈನೇನಿ, ಶ್ರೀರಾಮ್ ಬಾಲಾಜಿ ಹಾಗೂ ನಿಕಿ ಪೂಣಚ್ಚ ಅವರು ಈ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ರಾಮಕುಮಾರ್ ಅವರು ಸಾಕೇತ್ ಜೊತೆಗೂಡಿ ಆಡಲಿದ್ದಾರೆ. ಈ ಜೋಡಿಯು 2022ರಲ್ಲಿ ಪ್ರಶಸ್ತಿ ಜಯಿಸಿತ್ತು. ವಿಶ್ವ ರ್ಯಾಂಕಿಂಗ್ ನಲ್ಲಿ 78ನೇ ಸ್ಥಾನದಲ್ಲಿರುವ ಬಾಲಾಜಿ ಅವರು ಜರ್ಮನಿಯ ಆ್ಯಂಡ್ರೆ ಬೆಗೆಮನ್(ರ್ಯಾಂಕಿಂಗ್ 201)ಜೊತೆಗೆ ಆಡುವರು. 16 ತಂಡಗಳ ಡ್ರಾನಲ್ಲಿ ಈ ಜೋಡಿ 279ರಲ್ಲಿ ಜಂಟಿ ರ್ಯಾಂಕ್ ಪಡೆದಿದೆ.
ಮೈನೇನಿ(107) ಹಾಗೂ ರಾಮಕುಮಾರ್(210)ಜಂಟಿ 317ನೇ ರ್ಯಾಂಕ್ನಲ್ಲಿದ್ದಾರೆ. ಫ್ರಾನ್ಸ್ ನ ಡ್ಯಾನ್ ಆ್ಯಡೆಡ್(91) ಹಾಗೂ ಕೊರಿಯಾದ ಯುನ್ ಸಾಂಗ್ ಚುಂಗ್(167)ಜಂಟಿ 258ನೇ ರ್ಯಾಂಕ್ನಲ್ಲಿದ್ದು, ಟೂರ್ನಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ನಿಕಿ ಪೂಣಚ್ಚ(147ನೇ ರ್ಯಾಂಕ್)ಅವರು ಇತ್ತೀಚೆಗೆ ಇಸ್ಲಾಮಾಬಾದ್ನಲ್ಲಿ ನಡೆದಿದ್ದ ಡೇವಿಸ್ ಕಪ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದರು. ಮುಹಮ್ಮದ್ ಶುಐಬ್ ವಿರುದ್ಧ ಅವರು ಆಡಿದ್ದರು. ನಿಕಿ ಪೂಣಚ್ಚ ಈ ಟೂರ್ನಿಯಲ್ಲಿ ಋತ್ವಿಕ್ ಚೌಧರಿ ಬೊಲಿಪಳ್ಳಿ ಅವರೊಂದಿಗೆ ಕಣಕ್ಕಿಳಿಯುವರು.
ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ನಡೆಯಲಿರುವ ಈ ಟೂರ್ನಿಯ ಸಿಂಗಲ್ಸ್ ನಲ್ಲಿ ಸುಮಿತ್ ನಾಗಲ್ ಮುಖ್ಯ ಆಕರ್ಷಣೆಯಾಗಿದ್ದಾರೆ. ಅವರು ಕಳೆದ ತಿಂಗಳು ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿ ಜಯ ಸಾಧಿಸಿದ್ದರು.