ಕಿವೀಸ್ ನೆಲದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಬಾಂಗ್ಲಾದೇಶ

Update: 2023-12-27 18:10 GMT

Photo: twitter.com/ICC

ನೇಪಿಯರ್ (ನ್ಯೂಝಿಲ್ಯಾಂಡ್) : ಆತಿಥೇಯ ನ್ಯೂಝಿಲ್ಯಾಂಡ್ ವಿರುದ್ಧದ ಟ್ವೆಂಟಿ20 ಸರಣಿಯ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಪ್ರವಾಸಿ ಬಾಂಗ್ಲಾದೇಶವು ಬುಧವಾರ ಇತಿಹಾಸ ಸೃಷ್ಟಿಸಿದೆ.

ನೇಪಿಯರ್ನ ಮ್ಯಾಕ್ಲೀನ್ ಪಾರ್ಕ್ನಲ್ಲಿ ನಡೆದ ಪಂದ್ಯವನ್ನು ಬಾಂಗ್ಲಾದೇಶವು ಐದು ವಿಕೆಟ್ಗಳಿಂದ ಗೆದ್ದಿದೆ.

ಇದರೊಂದಿಗೆ ಪ್ರವಾಸಿ ತಂಡವು ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಗಳಿಸಿದೆ.

ಇದು ನ್ಯೂಝಿಲ್ಯಾಂಡ್ ನೆಲದಲ್ಲಿ ಬಾಂಗ್ಲಾದೇಶದ ಮೊದಲ ಟ್ವೆಂಟಿ20 ವಿಜಯವಾಗಿದೆ.

ಇದೇ ಮೈದಾನದಲ್ಲಿ, ನಾಲ್ಕು ದಿನಗಳ ಹಿಂದೆ ಬಾಂಗ್ಲಾದೇಶವು ಏಕದಿನ ಪಂದ್ಯವನ್ನು ಗೆದ್ದಿತ್ತು ಹಾಗೂ ಅದು ಕೂಡ ನ್ಯೂಝಿಲ್ಯಾಂಡ್ನಲ್ಲಿ ಬಾಂಗ್ಲಾದೇಶದ ಮೊದಲ ಏಕದಿನ ಕ್ರಿಕೆಟ್ ವಿಜಯವಾಗಿತ್ತು.

ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ನಜ್ಮುಲ್ ಹುಸೈನ್ ಶಾಂಟೊ ಎದುರಾಳಿ ತಂಡವನ್ನು ಮೊದಲು ಬ್ಯಾಟಿಂಗ್ಗೆ ಇಳಿಸಿದರು. ನ್ಯೂಝಿಲ್ಯಾಂಡ್ನ ಆರಂಭ ವಿನಾಶಕಾರಿಯಾಗಿತ್ತು. ಅದರ ಸ್ಕೋರ್ ಒಂದು ರನ್ ಆಗಿರುವಾಗ ಮೂರು ವಿಕೆಟ್ಗಳು ಉರುಳಿದವು. 20 ರನ್ಗಳನ್ನು ಗಳಿಸುವಷ್ಟರಲ್ಲಿ ಅದು ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತ್ತು.

ಮಧ್ಯಮ ಕ್ರಮಾಂಕದಲ್ಲಿ ಜೇಮ್ಸ್ ನೀಶಮ್ 29 ಎಸೆತಗಳಲ್ಲಿ 48 ರನ್ಗಳನ್ನು ಬಾರಿಸಿ ತಂಡಕ್ಕೆ ಸ್ಥಿರತೆ ನೀಡಿದರು. ನಾಯಕ ಮಿಚೆಲ್ ಸ್ಯಾಂಟನರ್ 22 ಎಸೆತಗಳಲ್ಲಿ 23 ರನ್ ಗಳಿಸಿ ತಂಡಕ್ಕೆ ಅಮೂಲ್ಯ ದೇಣಿಗೆ ನೀಡಿದರು. ಅಂತಿಮವಾಗಿ, ಅದಕ್ಕೆ 20 ಓವರ್ಗಳಲ್ಲಿ ಒಂಭತ್ತು ವಿಕೆಟ್ಗಳನ್ನು ಕಳೆದುಕೊಂಡು ಕೇವಲ 134 ರನ್ಗಳನ್ನು ಗಳಿಸಲು ಸಾಧ್ಯವಾಯಿತು.

ಮೆಹದಿ ಹಸನ್ 4 ಓವರ್ಗಳಲ್ಲಿ ಕೇವಲ 14 ರನ್ಗಳನ್ನು ನೀಡಿ 2 ವಿಕೆಟ್ಗಳನ್ನು ಉರುಳಿಸಿದರೆ, ಶರೀಫುಲ್ ಇಸ್ಲಾಮ್ 4 ಓವರ್ಗಳಲ್ಲಿ 26 ರನ್ಗಳನ್ನು ಕೊಟ್ಟು 3 ವಿಕೆಟ್ಗಳನ್ನು ಪಡೆದರು. ಮುಸ್ತಾಫಿಝುರ್ ರೆಹಮಾನ್ 15 ರನ್ಗಳನ್ನು ನೀಡಿ 2 ವಿಕೆಟ್ಗಳನ್ನು ಪಡೆದರು.

ಬಳಿಕ, ಬಾಂಗ್ಲಾದೇಶದ ಆರಂಭಿಕರಾದ ರೋನಿ ತಾಲೂಕ್ದಾರ್ ಮತ್ತು ಶಾಂಟೊ ಅವರ ವಿಕೆಟ್ಗಳನ್ನು ಬೇಗನೆ ಉರುಳಿಸುವ ಮೂಲಕ ಕಿವೀಸ್ ಬೌಲರ್ಗಳು ತಮ್ಮ ಅಭಿಮಾನಿಗಳಿಗೆ ಕೊಂಚ ಭರವಸೆಯನ್ನು ನೀಡಿದರು.

ಆಗ ಹಿರಿಯ ಆಟಗಾರ ಲಿಟನ್ ದಾಸ್, ಸೌಮ್ಯ ಸರ್ಕಾರ್ (15 ಎಸೆತಗಳಲ್ಲಿ 22 ರನ್) ಹಾಗೂ ಬಳಿಕ ತೌಹೀದ್ ಹೃದಯ್ (18 ಎಸೆತಗಳಲ್ಲಿ 19 ರನ್) ಜೊತೆಗೂಡಿ ಬಾಂಗ್ಲಾದೇಶದ ಮೊತ್ತವನ್ನು 13 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 96 ರನ್ಗೆ ಏರಿಸುವಲ್ಲಿ ಯಶಸ್ವಿಯಾದರು.

ಬಳಿಕ, ಇನೊಂದು ರನ್ ಸೇರಿಸುವಷ್ಟರಲ್ಲಿ ಬಾಂಗ್ಲಾದೇಶವು ಇನ್ನೊಂದು ವಿಕೆಟ್ ಕಳೆದುಕೊಂಡಿತು. ಲಿಟನ್ ದಾಸ್ 42 ರನ್ ಗಳಿಸಿ ಅಜೇಯವಾಗಿ ಉಳಿದರು. ಅವರು ಎರಡು ಬಾರಿ ಔಟಾಗುವುದರಿಂದ ಸ್ವಲ್ಪದರಲ್ಲೇ ಪಾರಾದರು. ಮೆಹದಿ ಹಸನ್, ದಾಸ್ ಜೊತೆಗೆ 40 ರನ್ಗಳ ಭಾಗೀದಾರಿಕೆ ನಿಭಾಯಿಸಿದರು. ಅಂತಿಮವಾಗಿ ವಿಜಯೀ ರನ್ಗಳನ್ನು ಹಸನ್ ಬಾರಿಸಿದರು. ಇನ್ನೂ 8 ಎಸೆತಗಳು ಬಾಕಿಯಿರುವಂತೆಯೇ ಬಾಂಗ್ಲಾದೇಶವು 5 ವಿಕೆಟ್ಗಳ ನಷ್ಟಕ್ಕೆ 137 ರನ್ ಗಳಿಸಿ ಐತಿಹಾಸಿಕ ಗೆಲುವನ್ನು ದಾಖಲಿಸಿತು.

ಮೆಹದಿ ಹಸನ್ 16 ಎಸೆತಗಳಲ್ಲಿ 19 ರನ್ಗಳನ್ನು ಗಳಿಸಿ ಅಜೇಯರಾಗಿ ಉಳಿದರು. ಮೆಹದಿ ಹಸನ್ರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು. ಎರಡನೇ ಮತ್ತು ಮೂರನೇ ಟ್ವೆಂಟಿ20 ಅಂತರ್ರಾಷ್ಟ್ರೀಯ ಪಂದ್ಯಗಳು ಇದೇ ನೇಪಿಯರ್ ಮೈದಾನದಲ್ಲಿ ಶುಕ್ರವಾರ ಮತ್ತು ರವಿವಾರ ನಡೆಯಲಿವೆ.

ಟ್ವೆಂಟಿ20 ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂಭತ್ತನೇ ಸ್ಥಾನದಲ್ಲಿರುವ ಬಾಂಗ್ಲಾದೇಶವು ಮೂರನೇ ಸ್ಥಾನದಲ್ಲಿರುವ ನ್ಯೂಝಿಲ್ಯಾಂಡನ್ನು ಉರುಳಿಸುವಲ್ಲಿ ಯಶಸ್ವಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News