2023ರ ಐಪಿಎಲ್ ನಿಂದ ಬಿಸಿಸಿಐ ಗಳಿಸಿದ ಲಾಭ 5,120 ಕೋಟಿ ರೂ.

Update: 2024-08-20 16:09 GMT

PC : X 

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2023ರ ಆವೃತ್ತಿಯಿಂದ 5,120 ಕೋಟಿ ರೂಪಾಯಿಗೂ ಹೆಚ್ಚು ಲಾಭವನ್ನು ಸಂಪಾದಿಸಿದೆ ಎಂದು ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ. ಇದು ಬಿಸಿಸಿಐಯು 2022ರ ಐಪಿಎಲ್ ನಿಂದ ಗಳಿಸಿದ 2,367 ಕೋಟಿ ರೂಪಾಯಿ ಲಾಭಕ್ಕಿಂತ 116 ಶೇಕಡ ಜಾಸ್ತಿಯಾಗಿದೆ.

ವರದಿಯ ಪ್ರಕಾರ, 2023ರ ಐಪಿಎಲ್ ನಿಂದ ಬಿಸಿಸಿಐಯ ಒಟ್ಟು ಆದಾಯ 11,769 ಕೋಟಿ ರೂ. ಆಗಿತ್ತು. ಅದು ಹಿಂದಿನ ವರ್ಷಕ್ಕಿಂತ 78 ಶೇಕಡ ಹೆಚ್ಚಳವಾಗಿತ್ತು. ವೆಚ್ಚವೂ 66 ಶೇಕಡದಷ್ಟು ಹೆಚ್ಚಳವಾಗಿ 6,648 ಕೋಟಿ ರೂ. ತಲುಪಿತ್ತು.

ನೂತನ ಮಾಧ್ಯಮ ಹಕ್ಕುಗಳು ಮತ್ತು ಪ್ರಾಯೋಜಕತ್ವ ಒಪ್ಪಂದಗಳು ಆದಾಯ ಹೆಚ್ಚಳಕ್ಕೆ ಮುಖ್ಯ ಕಾರಣಗಳು ಎಂದು ವರದಿ ತಿಳಿಸಿದೆ. ಬಿಸಿಸಿಐಯು ಮಾಧ್ಯಮ ಹಕ್ಕುಗಳಿಂದ 2023-27ರ ಅವಧಿಯಲ್ಲಿ 48,390 ಕೋಟಿ ರೂ. ಪಡೆಯುತ್ತದೆ.

2023-27ರ ಅವಧಿಯ ಐಪಿಎಲ್ ಟಿವಿ ಹಕ್ಕುಗಳನ್ನು 2021ರಲ್ಲಿ ಡಿಸ್ನಿ ಸ್ಟಾರ್ 23,575 ಕೋಟಿ ರೂ.ಗೆ ಪಡೆದುಕೊಂಡಿತ್ತು. ಡಿಜಿಟಲ್ ಹಕ್ಕುಗಳನ್ನು ಜಿಯೋ ಸಿನೇಮ 23,758 ಕೋಟಿ ರೂ.ಗೆ ವಹಿಸಿಕೊಂಡಿತ್ತು. ಐಪಿಎಲ್ ಹೆಸರಿನ ಹಕ್ಕುಗಳನ್ನು ಟಾಟಾ ಸನ್ಸ್ 2,500 ಕೋಟಿ ರೂ.ಗೆ ಖರೀದಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News