ದ್ರಾವಿಡ್ ಗೆ ʼಭಾರತ ರತ್ನʼ ನೀಡಿ | ಕೇಂದ್ರ ಸರಕಾರಕ್ಕೆ ಸುನೀಲ್ ಗವಾಸ್ಕರ್ ಮನವಿ

Update: 2024-07-07 16:11 GMT

ರಾಹುಲ್ ದ್ರಾವಿಡ್ - Photo: PTI

ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ರನ್ನು ಭಾರತ ಸರಕಾರವು “ಭಾರತ ರತ್ನ’’ ಪ್ರಶಸ್ತಿಯಿಂದ ಗೌರವಿಸಬೇಕು ಎಂದು ಭಾರತೀಯ ಕ್ರಿಕೆಟ್ ದಂತಕತೆ ಸುನೀಲ್ ಗವಾಸ್ಕರ್ ಹೇಳಿದ್ದಾರೆ.

ಅಮೆರಿಕ ಮತ್ತು ವೆಸ್ಟ್ ಇಂಡೀಸ್ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ನೊಂದಿಗೆ ರಾಹುಲ್ ರ ಎರಡೂವರೆ ವರ್ಷಗಳ ಕೋಚಿಂಗ್ ಅವಧಿ ಮುಕ್ತಾಯಗೊಂಡಿದೆ. ಈ ವಿಶ್ವಕಪ್ ಅನ್ನು ಭಾರತ ಗೆಲ್ಲುವುದರೊಂದಿಗೆ ದ್ರಾವಿಡ್ ತನ್ನ ಹುದ್ದೆಯಿಂದ ಸಂತೃಪ್ತಿಯೊಂದಿಗೆ ನಿರ್ಗಮಿಸಿದ್ದಾರೆ.

ಅವರ ಪ್ರಧಾನ ಕೋಚ್ ಅವಧಿಯಲ್ಲಿ ಭಾರತೀಯ ಕ್ರಿಕೆಟ್ ತಂಡವು 2023ರಲ್ಲಿ ಪುರುಷರ ಏಕದಿನ ವಿಶ್ವಕಪ್‌ ನಲ್ಲಿ ಮತ್ತು 2023ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ರನ್ನರ್ಸ್-ಅಪ್ ಆಗಿದೆ. ಅದೂ ಅಲ್ಲದೆ, ಅದೇ ವರ್ಷ ನಡೆದ ಏಶ್ಯಾ ಕಪ್‌ ನಲ್ಲಿ ಪ್ರಶಸ್ತಿ ಜಯಿಸಿದೆ.

ರಾಹುಲ್ ದ್ರಾವಿಡ್ ಅಂತರ್ರಾಷ್ಟ್ರೀಯ ಕ್ರಿಕೆಟ್ ನಲ್ಲಿ 24,177 ರನ್ ಗಳನ್ನು ಕಲೆಹಾಕಿದ್ದಾರೆ. ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ಮುಖ್ಯಸ್ಥರಾಗಿದ್ದರು. 2018ರಲ್ಲಿ, ಪ್ರಧಾನ ಕೋಚ್ ಆಗಿ ಅವರು ತರಬೇತಿ ನೀಡಿರುವ 19 ವರ್ಷಕ್ಕಿಂತ ಕೆಳಗಿನವರ ಭಾರತೀಯ ತಂಡವು ಪ್ರಶಸ್ತಿ ಜಯಿಸಿತ್ತು.

“ಭಾರತ ಸರಕಾರವು ಅವರನ್ನು ಭಾರತ ರತ್ನ ಪ್ರಶಸ್ತಿಯಿಂದ ಗೌರವಿಸಿದರೆ ಅದು ಅವರಿಗೆ ಸಲ್ಲುವ ಸೂಕ್ತ ಗೌರವವಾಗುತ್ತದೆ. ಈ ಗೌರವಕ್ಕೆ ಅವರು ಸಂಪೂರ್ಣವಾಗಿ ಅರ್ಹರಾಗಿದ್ದಾರೆ. ಅವರು ಆಟಗಾರರಾಗಿ ಮತ್ತು ತಂಡದ ನಾಯಕರಾಗಿ ವಿದೇಶಗಳಲ್ಲಿ ಭಾರತಕ್ಕೆ ಗೆಲುವು ತಂದು ಕೊಟ್ಟಿದ್ದಾರೆ. ವೆಸ್ಟ್ ಇಂಡೀಸ್ ನಲ್ಲಿ ಗೆಲ್ಲುವುದು ಅಸಾಧ್ಯ ಎಂಬ ಕಾಲದಲ್ಲಿ ಅವರು ಆ ದೇಶದಲ್ಲಿ ಭಾರತಕ್ಕೆ ಸರಣಿ ಗೆಲುವನ್ನು ತಂದಿದ್ದಾರೆ. ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿಗಳನ್ನು ಗೆದ್ದಿರುವ ಕೇವಲ ಮೂರು ಭಾರತೀಯ ನಾಯಕರ ಪೈಕಿ ಅವರೊಬ್ಬರಾಗಿದ್ದಾರೆ. ಈ ಹಿಂದೆ, ಅವರು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಿ ಅತ್ಯುತ್ತಮ ಕ್ರಿಕೆಟ್ ಪ್ರತಿಭೆಗಳನ್ನು ಹೊರತಂದಿದ್ದಾರೆ. ಬಳಿಕ ಭಾರತೀಯ ಹಿರಿಯರ ಕ್ರಿಕೆಟ್ ತಂಡದ ಕೋಚ್ ಆಗಿ ಉತ್ತಮ ನಿರ್ವಹಣೆ ನೀಡಿದ್ದಾರೆ’’ ಎಂದು ‘ಮಿಡ್-ಡೇ’ ಪತ್ರಿಕೆಯ ತನ್ನ ರವಿವಾರದ ಅಂಕಣದಲ್ಲಿ ಗವಾಸ್ಕರ್ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News